VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 28, 2010

ಸಿಟ್-ಮೋದಿ ಮುಖಾಮುಖಿ; ಕೊನೆಗೂ ವಿಶೇಷ ತನಿಖಾ ತಂಡದೆದುರು ಹಾಜರಾದ ಮುಖ್ಯಮಂತ್ರಿ ನರೇಂದ್ರ ಮೋದಿ


ಗಾಂಧಿನಗರ, ಮಾ.೨೭: ಗುಜರಾತ್‌ನ ಮುಖ್ಯಮಂತ್ರಿ ನರೇಂದ್ರ ಮೋದಿ ಇಂದು ಸುಪ್ರೀಂ ಕೋರ್ಟ್ ನೇಮಿಸಿರುವ ವಿಶೇಷ ತನಿಖಾ ತಂಡದ(ಎಸ್‌ಐಟಿ) ಮುಂದೆ ಹಾಜರಾಗಿದ್ದಾರೆ. ೨೦೦೨ರಲ್ಲಿ ಗುಜರಾತ್‌ನಲ್ಲಿ ನಡೆದ ಹತ್ಯಾಕಾಂಡದಲ್ಲಿ ತನ್ನ ಪಾತ್ರದ ಕುರಿತಂತೆ ನರೇಂದ್ರ ಮೋದಿ ಎದುರಿಸಿದ ಮೊತ್ತ ಮೊದಲ ವಿಚಾರಣೆ ಇದು. ಇದರೊಂದಿಗೆ ಸಾಮೂಹಿಕ ಮಾರಣ ಹೋಮದ ಕ್ರಿಮಿನಲ್ ಪ್ರಕರಣವೊಂದರ ವಿಚಾರಣೆಗೆ ಒಳಗಾಗುತ್ತಿರುವ ಒಂದು ರಾಜ್ಯದ ಮೊತ್ತ ಮೊದಲ ಮುಖ್ಯಮಂತ್ರಿಯೆಂಬ ಅಪಕೀರ್ತಿಗೂ ಮೋದಿ ಒಳಗಾಗಿದ್ದಾರೆ.

೫೯ರ ಹರೆಯದ ಹಿರಿಯ ಬಿಜೆಪಿ ನಾಯಕ ನರೇಂದ್ರ ಮೋದಿ ಇಂದು ಮಧ್ಯಾಹ್ನದ ವೇಳೆಗೆ ಇಲ್ಲಿನ ವಿಧಾನಸಭಾ ಕಾರ್ಯಾಲಯದ ಕಟ್ಟಡದಲ್ಲಿರುವ ವಿಶೇಷ ತನಿಖಾ ತಂಡದ(ಸಿಟ್) ಕಚೇರಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ಮೋದಿಯವರು ಎಲ್ಲಿ ವಿಚಾರಣೆಗೆ ಹಾಜರಾಗಲಿದ್ದಾರೆ ಎಂಬ ಕುತೂಹಲಕ್ಕೆ ಈಗ ತೆರೆ ಬಿದ್ದಿತು. ಅಪ್ಪಟ ಬಿಳಿ ಕುರ್ತಾ ಹಾಗೂ ಪೈಜಾಮ ತೊಟ್ಟಿದ್ದ ಮೋದಿ, ಕಾರಿನಲ್ಲಿ ಸಿಟ್ ಕಚೇರಿಯ ಬಳಿ ಬಂದಿಳಿದೊಡನೆ ಅಲ್ಲಿ ನೆರೆದಿದ್ದ ಅಲ್ಲಿ ಕಾಯುತ್ತಿದ್ದ ಮಾಧ್ಯಮದ ಮಂದಿಯತ್ತ ಕೈಮುಗಿದು ಅಭಿವಂದಿಸಿದರು.

ಮೋದಿ ವಿಚಾರಣೆಗೆ ಹಾಜರಾದ ವೇಳೆ ಸಿಟ್‌ನ ಮುಖ್ಯಸ್ಥ ಆರ್.ಕೆ. ರಾಘವನ್ ಉಪಸ್ಥಿತರಿರಲಿಲ್ಲ. ಇನ್ನೋರ್ವ ಸಿಟ್ ಸದಸ್ಯ ಎ.ಕೆ. ಮಲ್ಹೋತ್ರ, ಸುಮಾರು ೫ಗಂಟೆಗಳ ಕಾಲ ಮೋದಿಯ ವಿಚಾರಣೆ ನಡೆಸಿದರು.

೨೦೦೨ರಲ್ಲಿ ನಡೆದ ಗುಲ್ಬರ್ಗ್ ಸೊಸೈಟಿ ಗಲಭೆ ಪ್ರಕರಣದಲ್ಲಿ ಇತರ ೬೯ ಮಂದಿಯೊಂದಿಗೆ ಸಾವನ್ನಪ್ಪಿದ್ದ ಕಾಂಗ್ರೆಸ್‌ನ ಮಾಜಿ ಸಂಸದ ಇಹ್ಸಾನ್ ಜಾಫ್ರಿಯವರ ವಿಧವೆ ಝಕಿಯಾ ಜಾಫ್ರಿ ಸಲ್ಲಿಸಿರುವ ದೂರಿಗೆ ಸಂಬಂಧಿಸಿ ವಿವರ ನೀಡುವಂತೆ ಮೋದಿಯವರಿಗೆ ಸಿಟ್ ಸಮನ್ ಜಾರಿಗೊಳಿಸಿತ್ತು.

೨೦೦೨ರ ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ವಿಚಾರಣಾ ತಂಡದಿಂದ ತನಿಖೆಗೆ ಒಳಗಾಗುತ್ತಿರುವವರು ರಾಜ್ಯದ ಹಾಲಿ ಮುಖ್ಯಮಂತ್ರಿಯಾಗಿರುವ ಹಿನ್ನೆಲೆಯಲ್ಲಿ ಇಂದಿನ ಬೆಳವಣಿಗೆ ಹೆಚ್ಚಿನ ಮಹತ್ವವನ್ನು ಪಡೆದಿದೆ.

೨೦೦೨ರ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಳು ಆಪಾದನೆಗಳನ್ನು ಹೊರಿಸಿ ತನ್ನನ್ನು ಗುರಿಯಾಗಿಸಿದೆ ಎಂದು ಈ ಹಿಂದೆ ಮಾರ್ಚ್ ೨೧ರಂದು ಮೋದಿ ಸಿಟ್ ಮುಂದೆ ವಿಚಾರಣೆಗೆ ಹಾಜರಾಗಲು ತಿರಸ್ಕರಿಸಿದ್ದ ಹಿನ್ನೆಲೆಯಲ್ಲಿ ಇಂದಿನ ಘಟನೆ ಒಂದು ನಾಟಕೀಯ ಬೆಳವಣಿಗೆಯಾಗಿ ಗೋಚರಿಸಿದೆ.

ಕಳೆದ ವರ್ಷದ ಎಪ್ರಿಲ್ ೨೭ರಂದು ಸಂತ್ರಸ್ತೆ ಝಕಿಯಾ ನೀಡಿರುವ ದೂರಿನ ವಿಚಾರಣೆ ನಡೆಸುವಂತೆ ಸರ್ವೋಚ್ಚ ನ್ಯಾಯಾಲಯ ವಿಶೇಷ ತನಿಖಾ ತಂಡ(ಸಿಟ್)ಗೆ ಆದೇಶ ನೀಡಿತ್ತು.

೨೦೦೭ರ ನವೆಂಬರ್ ೩ರಂದು ಗುಜರಾತ್‌ನ ಉಚ್ಚ ನ್ಯಾಯಾಲಯವು ಝಕಿಯಾರ ದೂರಿನ ಕುರಿತು ಯಾವುದೇ ನಿರ್ದೆಶನ ನೀಡಲು ನಿರಾಕರಿಸಿ ಪರಿಹಾರಕ್ಕಾಗಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಕೋರಲು ತಿಳಿಸಿದ ಬಳಿಕ ಆಕೆ ಸರ್ವೋಚ್ಚ ನ್ಯಾಯಾಲಯದ ಮೊರೆ ಹೊಕ್ಕಿದ್ದರು.

೨೦೦೨ರ ಫೆಬ್ರವರಿ ಹಾಗೂ ಮೇ ತಿಂಗಳ ನಡುವೆ ಮುಗ್ಧ ಜನರ ಪ್ರಾಣ ಹಾಗೂ ಆಸ್ತಿಗಳನ್ನು ರಕ್ಷಿಸುವಲ್ಲಿ ರಾಜ್ಯ ಸರಕಾರವು ‘ಬೃಹತ್ ಹಾಗೂ ಉದ್ದೇಶಪೂರ್ವಕ ವೈಫಲ್ಯ’ವನ್ನು ಹೊಂದಿದೆ ಎಂದು ಹತರಾದ ಕಾಂಗ್ರೆಸ್ ಮುಖಂಡನ ವಿಧವೆ ಝಕಿಯಾ ತನ್ನ ದೂರಿನಲ್ಲಿ ವಿವರಿಸಿದ್ದರು.

ಝಕಿಯಾ ಜೆಫ್ರಿ ನೀಡಿರುವ ದೂರಿನ ಕುರಿತಾದ ಸಿಟ್‌ನ ವಿಚಾರಣೆಯನ್ನು ಸ್ಥಗಿತಗೊಳಿಸಬೇಕೆಂದು ಕೋರಿ ಕಳೆದ ವರ್ಷದ ಜುಲೈ ತಿಂಗಳಿನಲ್ಲಿ ಬಿಜೆಪಿಯ ಮಾಜಿ ಶಾಸಕ ಕಾಲೂ ಮಳಿವಾದ್(ದೂರಿನಲ್ಲಿ ಉಲ್ಲೇಖಿಸಲಾಗಿರುವ ೬೩ ಮಂದಿಯ ಪೈಕಿ ಒಬ್ಬರು) ಗುಜರಾತ್‌ನ ಉಚ್ಚ ನ್ಯಾಯಾಲಯವನ್ನು ಸಂಪರ್ಕಿಸಿದ್ದ ಸಂದರ್ಭದಲ್ಲಿ ಸಿಟ್ ಕಾನೂನು ತೊಡಕನ್ನು ಎದುರಿಸಿತ್ತು.

ಸಿಟ್ ಸರ್ವೋಚ್ಚ ನ್ಯಾಯಾಲಯದ ಮೇಲುಸ್ತುವಾರಿಯಲ್ಲಿ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳುವ ಮೂಲಕ ಉಚ್ಚ ನ್ಯಾಯಾಲಯವು ಈ ನಿಟ್ಟಿನಲ್ಲಿ ಯಾವುದೇ ಪರಿಹಾರ ನೀಡಲು ಸಾಧ್ಯವಿಲ್ಲವೆಂದು ತಿಳಿಸಿ ಅದನ್ನು ತಳ್ಳಿಹಾಕಿತ್ತು. ಮಳಿವಾದ್ ಈಗ ಉಚ್ಚನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸವೋಚ್ಚ ನ್ಯಾಯಾಲಯವನ್ನು ಸಂಪರ್ಕಿಸಿದ್ದಾರೆ.

ಝಿಕಿಯಾರ ದೂರಿನ ತನಿಖೆ ನಡೆಸುತ್ತಿರುವ ಸಿಟ್ ಈಗಾಗಲೇ ಮಾಜಿ ಗೃಹರಾಜ್ಯ ಸಚಿವ ಗೋವರ್ದನ್ ಜಡಾಫಿಯಾ, ಬಿಜೆಪಿ ಮುಖಂಡ ಐ.ಕೆ. ಜಡೇಜಾ, ಲುನವಾಡದ ಮಾಜಿ ಶಾಸಕ ಕಾಲೂ ಮಳಿವಾದ್, ಹಾಲಿ ಶಾಸಕ ಮೆಹ್ಸಾನ ಅನಿಲ್ ಪಟೇಲ್, ಮಾಜಿ ಐಪಿ‌ಎಸ್ ಅಧಿಕಾರಿ ಆರ್.ಬಿ. ಶ್ರೀಕುಮಾರ್, ಸಾಮಾಜಿಕ ಕಾರ್ಯಕರ್ತೆ ಟೀಸ್ಟಾ ಸೆಟಲ್ವಾದ್, ಮೋಲೀಸ್ ನಿರೀಕ್ಷಕ ಶಿವಾನಂದ ಝಾ, ಕೆಲವು ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ರಾಜಕೀಯ ಮುಖಂಡರು ಸೇರಿದಂತೆ ಹಲವು ವ್ಯಕ್ತಿಗಳ ಹೇಳಿಕೆಗಳನ್ನು ದಾಖಲಿಸಿದೆ.

ಝಕೀಯಾರ ದೂರು

ಮೋದಿ ಹಾಗೂ ಅವರ ಸಂಪುಟ ಸಹೋದ್ಯೋಗಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ಹಿರಿಯ ಅಧಿಕಾರಶಾಹಿಗಳು ಸೇರಿದಂತೆ ಇತರ ೬೨ ಮಂದಿ ಗುಜರಾತ್ ಗಲಭೆಗೆ ಸಹಕಾರ ಹಾಗೂ ಪ್ರಚೋದನೆ ನೀಡಿದ್ದರು. ಹತ್ಯಾಕಾಂಡವನ್ನು ತಡೆಯಲು ಯಾವುದೇ ಕ್ರಮ ಕೈಗೊಳ್ಳದಂತೆ ಮೋದಿ ಅಧಿಕಾರಿಗಳಿಗೆ ನಿರ್ದೇಶಿಸಿದ್ದರು.

ಪ್ರಶ್ನೆಗಳು ಹಲವು

ಸಿಟ್ ಮೂಲಗಳ ಪ್ರಕಾರ ಮೋದಿ ವಿಚಾರಣೆಗಾಗಿ ಸಿಟ್ ೬೮ ಪ್ರಶ್ನೆಗಳನ್ನು ತಯಾರಿಸಿದ್ದು, ಮೊದಲ ಅವಧಿಯಲ್ಲಿ ಮೋದಿ ೬೨ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಈ ಪೈಕಿ ಕೆಲವು ಪ್ರಮುಖ ಪ್ರಶ್ನೆಗಳು ಇಲ್ಲಿವೆ.

*ಫೆಬ್ರವರಿ ೨೭ರಂದು ಮೋದಿ ತನ್ನ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಗಲಭೆಕೋರರ ವಿರುದ್ಧ ಕ್ರಮ ಕೈಗೊಳ್ಳದಂತೆ ಸೂಚನೆ ನೀಡಿದ್ದರೆ ?

*ಗಲಭೆಯ ವೇಳೆ ಅಹ್ಮದಾಬಾದ್‌ನ ಪೊಲೀಸ್ ನಿಯಂತ್ರಣ ಕೊಠಡಿಯಲ್ಲಿ ಇದ್ದು ಅದನ್ನು ನಿಯಂತ್ರಿಸುವಂತೆ ತನ್ನ ಮಂತ್ರಿಗಳಿಗೆ ಮೋದಿ ಆದೇಶಿಸಿದ್ದರೆ ?

*ಗುಲ್ಬರ್ಗ ಸೊಸೈಟಿಯ ಮೇಲೆ ದುಷ್ಕರ್ಮಿಗಳು ಎರಗಿದಾಗ ಎಹ್ಸಾನ್ ಜಾಫ್ರಿಯವರಿಂದ ಮುಖ್ಯಮಂತ್ರಿ ಕಚೇರಿಗೆ ಸಹಾಯ ಕೋರಿ ಫೋನ್ ಬಂದಿತ್ತೆ ?

ಮೋದಿ ಎದುರಿಸುತ್ತಿರುವ ಆರೋಪಗಳು

*ಹತ್ಯಾಕಾಂಡದ ಸಂದರ್ಭದಲ್ಲಿ ಪೊಲೀಸರಿಗೆ ಮೂಕಪ್ರೇಕ್ಷಕರಾಗಿ ಹಿಂದೂಗಳಿಗೆ ‘ಕ್ರೋಧ’ ವ್ಯಕ್ತಪಡಿಸಲು ಅವಕಾಶ ನೀಡಲು ಆದೇಶಿಸಿರುವುದು.

*ಗಲಭೆಯ ಅವಧಿಯಲ್ಲಿ ಫೆಬ್ರವರಿ ೨೭ ಹಾಗೂ ೨೮ರ ಮಧ್ಯರಾತ್ರಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಹಿಂದೂ ಗುಂಪುಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಸೂಚನೆ ನೀಡಿರುವುದು.

*ಗೋಧ್ರಾ ದುರಂತದ ಮೃತದೇಹಗಳನ್ನು ಅಹ್ಮದಾಬಾದ್‌ಗೆ ತರಿಸಿ ಕೋಮು ಸಂಘರ್ಷವನ್ನು ಹಬ್ಬಿಸಲು ಕುಮ್ಮಕ್ಕು ನೀಡಿರುವುದು.

*ಗಲಭೆ ವ್ಯಾಪಕಗೊಂಡಿದ್ದ ಪ್ರದೇಶಗಳಲ್ಲಿ ಪರಿಣಾಮಕಾರಿ ನಿಯಂತ್ರಣ ಕಾರ್ಯದಲ್ಲಿ ನಿರತರಾಗಿದ್ದ ಪ್ರಾಮಾಣಿಕ ಅಧಿಕಾರಿಗಳನ್ನು ಉದ್ದೇಶಪೂರ್ವಕವಾಗಿ ಕಿತ್ತೊಗೆದಿರುವುದು.

“ಮೋದಿಯವರು ಇಂತಹ ಪೇಚಿಗೆ ಸಿಲುಕಿಕೊಂಡಿರುವುದು ತೀರಾ ದುರದೃಷ್ಟದ ವಿಚಾರವಾಗಿದೆ. ಇದು ಅಪೇಕ್ಷಣೀಯವಲ್ಲ. ಆದರೆ ದುರದೃಷ್ಟವಶಾತ್ ಇದು ಸಂಭವಿಸಿದೆ. ಸಿಟ್‌ನ ಸಮನ್‌ನಲ್ಲಿರುವ ಸಿಂಧುತ್ವದ ಬಗ್ಗೆಯೇ ಪ್ರಶ್ನಿಸುವ ಮೂಲಕ ಮೋದಿ ಸುಪ್ರೀಂ ಕೋರ್ಟಿನ ನಿರ್ಧಾರವನ್ನೇ ಪ್ರಶ್ನಿಸಿದ್ದಾರೆ. ಅವರು ಏನು ಮಾಡುತ್ತಿದ್ದಾರೆಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಯಾರೊಬ್ಬನೂ ಕಾನೂನಿಗಿಂತ ಮೇಲಲ್ಲ ಎಂಬುದನ್ನು ಸಾಬೀತು ಪಡಿಸಿವೆ.ಕಾನೂನಿನ ನಿಯಮವು ಎಲ್ಲರಿಗೂ ಸಮಾನವಾಗಿದೆ’ ”
-ಕೇಂದ್ರ ಕಾನೂನು ಸಚಿವ ಡಾ.ಎಂ.ವೀರಪ್ಪ ಮೊ‌ಐಲಿ

ನ್ಯಾಯವನ್ನು ನಿರಾಕರಿಸುವ ಹಲವು ಪ್ರಯತ್ನಗಳ ಹೊರತಾಗಿಯೂ ಮುಖ್ಯಮಂತ್ರಿಯೊಬ್ಬರು ಒತ್ತಾಯಪೂರ್ವಕವಾಗಿ ವಿಚಾರಣಾ ತಂಡವೊಂದರ ಮುಂದೆ ಹಾಜರಾಗುತ್ತಿರುವ ಇಂದಿನ ದಿನವು ಪ್ರಜಾಪ್ರಭುತ್ವ ಹಾಗೂ ಕಾನೂನು ನಡಾವಳಿಗೆ ಸಂಬಂಧಿಸಿದಂತೆ ಅತ್ಯಂತ ಮಹತ್ವದ ದಿನವಾಗಿದೆ
-ಟೀಸ್ಟಾ ಸೆಟಲ್ವಾದ್, ಸಾಮಾಜಿಕ ಕಾರ್ಯಕರ್ತೆ

“ಅವರು ಕಾನೂನಿನ ನಿಯಮಗಳಿಗೆ ಬದ್ಧರಾಗಿರುತ್ತಾರೆ ಎಂದು ಯಾವಾಗಲೂ ಹೇಳುತ್ತಿದ್ದೆವು. ಬಿಜೆಪಿ ಅಥವಾ ಮೋದಿಯವರಿಗೆ ಸಂಬಂಧಿಸಿದಂತೆ ಯಾವುದೇ ಹಿನ್ನಡೆಯ ಪ್ರಶ್ನೆಯೇ ಇಲ್ಲ. ಮೋದಿಯವರು ವಿಚಾರಣೆಗೆ ಸಹಕರಿಸಲಿದ್ದಾರೆ”
-ಗುಜರಾತ್ ಸರಕಾರದ ವಕ್ತಾರ ಜೈನಾರಾಯಣ್ ವ್ಯಾಸ್

No comments: