VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 18, 2010

ಖಾಸಗಿ ವಿವಿ ವಿಧೇಯಕ ಹಿಂಪಡೆಯಲು ಪ್ರತಿಪಕ್ಷಗಳ ಆಗ್ರಹ: ವಿಧಾನಸಭೆಯಲ್ಲಿ ಗದ್ದಲ, ಕಲಾಪ ಮುಂದೂಡಿಕೆ

ಬೆಂಗಳೂರು, ಮಾ.೧೭: ರಾಜ್ಯದಲ್ಲಿ ‘ಅಝೀಂ ಪ್ರೇಮ್‌ಜಿ’ ಹಾಗೂ ‘ಅಲಿಯನ್ಸ್’ ಖಾಸಗಿ ವಿಶ್ವ ವಿದ್ಯಾಲಯ ಸ್ಥಾಪಿಸುವ ವಿಧೇಯಕ ಹಿಂಪಡೆಯಲು ಪ್ರತಿಪಕ್ಷಗಳು ಆಗ್ರಹಿಸಿದ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ, ಗದ್ದಲ, ಕಾವೇರಿದ ವಾತಾವರಣ ಸೃಷ್ಟಿಯಾಗಿತ್ತು. ಇದರಿಂದ ಸಭಾಧ್ಯಕ್ಷರು ಸದನವನ್ನು ಕೆಲ ಕಾಲ ಮುಂದೂಡಿದ ಪ್ರಸಂಗವು ನಡೆಯಿತು.

ಬುಧವಾರ ವಿಧಾನಸಭೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿ‌ಎಸ್ ಸದಸ್ಯರು, ರಾಜ್ಯದಲ್ಲಿ ಖಾಸಗಿ ವಿಶ್ವ ವಿದ್ಯಾಲಯದ ಸ್ಥಾಪಿಸುವ ‘ಅಜೀಂ ಪ್ರೇಂಜಿ ವಿಶ್ವ ವಿದ್ಯಾಲಯ ವಿಧೇಯಕ-೨೦೧೦’ ಮತ್ತು ‘ಅಲಿಯನ್ಸ್ ವಿಶ್ವವಿದ್ಯಾಲಯ ವಿಧೇಯಕ-೨೦೧೦’ನ್ನು ಸರಕಾರ ಅಂಗೀಕರಿಸಿರುವ ಕ್ರಮವನ್ನು ತೀವ್ರವಾಗಿ ಖಂಡಿಸಿದವು. ಅಲ್ಲದೆ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂದಿನ ಬಾವಿಗೆ ಇಳಿದು ಧರಣಿ ನಡೆಸಿದರು.

ಪ್ರತಿಪಕ್ಷಗಳ ವಿರೋಧದ ಮಧ್ಯೆ ಎರಡೂ ವಿಧೇಯಕಗಳನ್ನು ಅಂಗೀಕರಿಸಲಾಗಿದೆ. ಈ ಸಂಬಂಧ ಯಾವುದೇ ರೀತಿಯ ಚರ್ಚೆಗೆ ಅವಕಾಶ ಮಾಡಿಕೊಟ್ಟಿಲ್ಲ. ಇದು ಸರಕಾರದ ಉದ್ಧಟತನದ ಕ್ರಮವಾಗಿದೆ. ರಾಜ್ಯದಲ್ಲಿ ಖಾಸಗಿ ವಿವಿ ಸ್ಥಾಪಿಸುವ ಸಂಬಂಧ ಸದನ ಸಮಿತಿ ರಚನೆ ಮಾಡಿ. ವಿವಿ ಸ್ಥಾಪನೆಯ ಸಾಧಕ-ಬಾಧಕಗಳನ್ನು ಪರಿಶೀಲಿಸಿ ಸದನ ಸಮಿತಿ ವರದಿ ತರಿಸಿಕೊಂಡು ಅನಂತರ ವಿಧೇಯಕ ಜಾರಿ ತನ್ನಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರಕಾರಕ್ಕೆ ಮನವಿ ಮಾಡಿದರು.

ಇದಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್ ಹಾಗೂ ಜೆಡಿ‌ಎಸ್‌ನ ಬಂಡೆಪ್ಪ ಕಾಂಶಂಪೂರ್, ಸರಕಾರ ತರಾತುರಿಯಲ್ಲಿ ವಿಧೇಯಕ ತರುತ್ತಿರುವುದರ ಹಿಂದೆ ಹುನ್ನಾರ ಅಡಗಿದೆ. ಈ ಬಗ್ಗೆ ಪುನರ್ ಪರಿಶೀಲನೆ ಅಗತ್ಯವಿದೆ. ಆದುದರಿಂದ ಸದನ ಸಮಿತಿ ರಚಿಸಿ ವರದಿ ತರಿಸಿಕೊಳ್ಳಿ ಎಂದು ಕೋರಿದರು. ಶುಕ್ರವಾರ ಈ ಮಸೂದೆ ವಿರೋಧಿಸಿ ಧರಣಿ ಆರಂಭಿಸಿದ್ದ ಪ್ರತಿಪಕ್ಷಗಳ ಸದಸ್ಯರು ಬುಧವಾರವೂ ಧರಣಿ ಮುಂದುವರಿಸಿದರು.

ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಸದನದಲ್ಲಿ ಎರಡೂ ಮಸೂದೆಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆದಿದ್ದು, ಅನಂತರ ಅಂಗೀಕಾರ ಮಾಡಲಾಗಿದೆ. ಈ ಬಗ್ಗೆ ತಕರಾರು ಮಾಡುವುದು ಬೇಡ. ಅಜೀಂ ಪೇಮ್‌ಜಿ ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಗೆ ಮುಂದಾಗಿದ್ದಾರೆ. ವಿದೇಶಿ ವಿವಿಗಳನ್ನು ಸ್ಥಾಪಿಸಲು ಹೊರಟ್ಟಿದ್ದೇವೆ. ಈ ಸಂದರ್ಭದಲ್ಲಿ ಪ್ರತಿಪಕ್ಷಗಳ ಸದಸ್ಯರು ಸದನದ ಬಾವಿಗೆ ಇಳಿದು ಧರಣಿ ಮಾಡಿ ಕಲಾಪಕ್ಕೆ ಅಡ್ಡಿ ಮಾಡುವ ಕ್ರಮ ಸರಿಯಲ್ಲ. ಕಲಾಪವನ್ನು ಸುಗಮವಾಗಿ ನಡೆಸಲು ಅನುವು ಮಾಡಿಕೊಡಬೇಕಾಗಿ ಪ್ರತಿಪಕ್ಷಗಳ ಸದಸ್ಯರುಗಳಿಗೆ ಮನವಿ ಮಾಡಿದರು.

ವಿಧಾನಸಭೆ ವಿರೋಧ ಪಕ್ಷಗಳ ಮುಖಂಡ ಸಿದ್ದರಾಮಯ್ಯ ಮಾತನಾಡಿ, ಲೋಕಸಭೆಯಲ್ಲಿ ಮಹಿಳಾ ಮಿಸಲಾತಿ ಮಸೂದೆಗೆ ಪ್ರತಿಪಕ್ಷಗಳು ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ವಿಧೇಯಕ ಮಂಡನೆಯನ್ನು ಮುಂದೂಡಿದೆ. ಸರಕಾರ ಪ್ರತಿಷ್ಠೆಯಾಗಿ ತೆಗೆದುಕೊಳ್ಳದೆ ಮೂರು ತಿಂಗಳು ಮುಂದಕ್ಕೆ ಹಾಕಿ, ಸದನ ಸಮಿತಿ ನೇಮಕ ಮಾಡಿ ವರದಿ ತರಿಸಿಕೊಳ್ಳಿ ಎಂದು ಆಡಳಿತ ಪಕ್ಷಕ್ಕೆ ಸಲಹೆ ಮಾಡಿದರು.

ಇದಕ್ಕೆ ಸರಕಾರ ಒಪ್ಪದ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಧರಣಿ ಮುಂದುವರಿಸಿದ್ದರಿಂದ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಕಲಾಪವನ್ನು ಕೆಲ ಕಾಲ ಮುಂದೂಡಿದರು.

ಸರಕಾರದ ಭರವಸೆ: ರಾಜ್ಯದಲ್ಲಿ ‘ಅಝೀಂ ಪ್ರೇಂಜಿ’ ಮತ್ತು ‘ಅಲಿಯನ್ಸ್’ ಖಾಸಗಿ ವಿಶ್ವವಿದ್ಯಾಲಯ ಸ್ಥಾಪಿಸುವ ಮಸೂದೆಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ಸದಸ್ಯರು ಅಭಿಪ್ರಾಯಗಳನ್ನು ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾ ಗುವುದು ಎಂದು ಸರಕಾರದ ಭರವಸೆಯ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳ ಸದಸ್ಯರು ಧರಣಿಯನ್ನು ಹಿಂಪಡೆದುಕೊಂಡರು.

ಈ ಬಗ್ಗೆ ಸರಕಾರದ ಪರವಾಗಿ ಸದನದಲ್ಲಿ ಉತ್ತರ ನೀಡಿದ ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ, ವಿಧೇಯಕಗಳ ಕುರಿತು ಸಮಗ್ರವಾಗಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳ ಲಾಗುವುದು ಎಂದು ಹೇಳಿದರು. ಇದಕ್ಕೂ ಮುನ್ನ ಸಭಾಧ್ಯಕ್ಷ ಬೋಪಯ್ಯ ತಮ್ಮ ಕೊಠಡಿಯಲ್ಲಿ ಪ್ರತಿಪಕ್ಷಗಳು ಮತ್ತು ಆಡಳಿತ ಪಕ್ಷಗಳ ಸದಸ್ಯರೊಂದಿಗೆ ಸಂಧಾನ ಸಭೆ ನಡೆಸಿದರು. ಕಲಾಪ ನಡೆಸಲು ಅನುವು ಮಾಡಿಕೊಡುವಂತೆ ಸಭಾಧ್ಯಕ್ಷರ ಕೋರಿಕೆಗೆ ಪ್ರತಿಪಕ್ಷಗಳು ಒಪ್ಪಿಗೆ ನೀಡಿದವು.

No comments: