
ಮುಂಬೈ ಮೂಲದ ರೂಪದರ್ಶಿ ಹಾಗೂ ನಟಿ ನಟಾಶಾ ಸಿಕ್ಕ್ಕ ಚಿತ್ರವಿಚಿತ್ರ ಸಮಸ್ಯೆಗಳ ಸುಳಿಗೆ ಸಿಲುಕಿದ್ದಾರೆ. ಇದಕ್ಕೆ ಕಾರಣನಾದ ಆಕೆಯ ಮಾಜಿ ಸ್ನೇಹಿತನೊಬ್ಬನ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಮುಂಬೈನ ಸೈಬರ್ ಪೊಲೀಸರ ಮೊರೆ ಹೋಗಿದ್ದಾರೆ. ಕಾರಣ ಏನು ಅಂತ ಕೇಳಿದರೆ, ತಮ್ಮ ಬಗ್ಗೆ ಅಸಭ್ಯ, ಅಶ್ಲೀಲ ಹಾಗೂ ತಮ್ಮ ಹೆಸರಿಗೆ ಕಳಂಕ ತರುವಂತಹ ಇ ಮೇಲ್ ಗಳನ್ನು ಹಲವಾರು ಸಂಸ್ಥೆಗಳಿಗೆ ರವಾನಿಸುವ ಮೂಲಕ ಅವನು ತಮ್ಮ ಮಾನ ಹರಾಜು ಹಾಕುತ್ತಿದ್ದಾನೆ ಎಂದು ನಟಾಶಾ ದೂರು ಪತ್ರದಲ್ಲಿ ಬರೆದಿದ್ದಾರೆ.
ನಟಾಶಾ ಅವರ ಪತ್ರಿಕಾ ಪ್ರಚಾರಕ ಹಾಗೂ ವಕ್ತಾರ ಫ್ಲಿನ್ ರೆಮೆಡಿಯೋಸ್ ಅವರ ಪ್ರಕಾರ, ಎರಡು ವರ್ಷಗಳ ಹಿಂದೆ ನಟಾಶಾ ಅವರಿಗೆ ದೆಹಲಿ ಮೂಲದ ಯುವಕನೊಂದಿಗೆ ನಿಶ್ಚಿತಾರ್ಥವಾಗಿತ್ತು. ಯುವಕನ ವರ್ತನೆ ಸರಿಯಿಲ್ಲ ಎಂಬ ಕಾರಣಕ್ಕೆ ನಟಾಶಾ ನಿಶ್ಚಿತಾರ್ಥ ಅರ್ಧದಲ್ಲೆ ಮುರಿದುಬಿದಿತ್ತು. ಇದರಿಂದ ಕುಪಿತನಾದ ಆ ಯುವಕ ನಟಾಶಾ ವಿರುದ್ಧ ಸೇಡು ತೀರಿಸಿಕೊಳ್ಳಲು ಇಲ್ಲ ಸಲ್ಲದ ಸುದ್ದಿಯನ್ನು ಇಮೇಲ್ ಗಳ ಮೂಲಕ ಕಂಡಕಂಡವರಿಗೆ ರವಾನಿಸುತ್ತಿದ್ದಾನೆ ಎನ್ನುವುದು ನಟಾಶಾ ಆರೋಪದ ಹಿನ್ನಲೆ.
ನಟಾಶಾ ಬಗ್ಗೆ ಅಸಭ್ಯ ವಾಗಿ ಬ್ಲಾಗ್ ನಲ್ಲೂ ಬರೆದಿದ್ದು ಈಕೆ ಹಲವರಿಗೆ ವಂಚಿಸಿದ್ದಾರೆ ಎಂಬ ಸುಳ್ಳುಗಳ ಸರಮಾಲೆಯನ್ನೆ ಹೆಣೆದಿದ್ದಾನೆ ಎಂದು ಆರೋಪಿಸಲಾಗಿದೆ. ಯೋಗೇಂದ್ರ ಪ್ರತಾಪ್ ಸಿಂಗ್ ಎಂಬ ಸುಳ್ಳು ಹೆಸರಿನಲ್ಲಿ ಬರೆದಿರುವ ಈತ ಕಾಪಿರೈಟ್ ಕಾಯಿದೆ ಉಲ್ಲಂಘಿಸಿರುವ ಬಗ್ಗೆಯೂ ದೂರು ದಾಖಲಾಗಿದೆ.ನಟಾಶಾ ಹೆಸರಿಗೆ ಮಸಿ ಬಳಿಯುತ್ತಿರುವ ಈ ಅನಾಮಧೇಯ ವ್ಯಕ್ತಿಯನ್ನು ಪತ್ತೆ ಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ. ಇ-ಮೇಲ್ ಗಳನ್ನು ಕಳುಹಿಸುತ್ತಿರುವ ಐಪಿ ವಿಳಾಸವನ್ನು ಪತ್ತೆಹಚ್ಚಲಾಗಿದ್ದು ಈತನ ಬಂಧನಕ್ಕೆ ತೀವ್ರ ಪ್ರಯತ್ನ ನಡೆದಿದೆ. ಐಪಿ ವಿಳಾಸ ಬೆನ್ನುಹತ್ತಿ ಹೋದರೆ ಚೇಷ್ಟೆ ಮಾಡುವವರನ್ನು ಸುಲಭವಾಗಿ ಪತ್ತೆಹಚ್ಚುವುದು ಸೈಬರ್ ಕ್ರೈಂ ಅಪರಾಧ ಇಲಾಖೆಗೆ ಕಷ್ಟವಾಗುವುದಿಲ್ಲ.
ನಟಾಶಾ ಅವರ ಬೆಂಬಲಕ್ಕೆ ನಿಂತಿರುವ ಫ್ಯೂಚರಿಸ್ಟಿಕ್ ಮೀಡಿಯಾ ನೆಟ್ ವರ್ಕ್ ಸಂಸ್ಥೆಯನ್ನು ನಡೆಸುತ್ತಿರುವ ಫ್ಲಿನ್ ರೆಮೆಡಿಯೋಸ್ ಗೂ ಹಲವಾರು ಅಸಭ್ಯ ಇ ಮೇಲ್ ಗಳು ಹಾಗೂ ಬೆದರಿಕೆ ಕರೆಗಳು ಬರುತ್ತಿವೆಯಂತೆ. ಇದನ್ನು ಯಾರು ಮಾಡುತ್ತಿದ್ದಾರೆ ಎಂಬುದನ್ನು ಪೊಲೀಸರು ಪತ್ತೆ ಹಚ್ಚಬೇಕಾಗಿದೆ. ಅಸಭ್ಯ ಹಾಗೂ ಅಶ್ಲೀಲ ಇಮೇಲ್ ಗಳ ಮೂಲಕ ನಟಾಶಾ ಮಾನ ಹರಾಜು ಹಾಕುತ್ತಿರುವ ಕಾಣದ ಕೈಗಳಿಗೆ ಕೋಳ ಬೀಳುತ್ತದಾ ಅಥವಾ ನಟಾಶಾ ಆರೋಪದಲ್ಲೇ ಏನಾದರೂ ಹುಳುಕುಗಳು ಇವೆಯಾ ಎಂಬುದನ್ನು ತನಿಖೆ ಮತ್ತು ವಿಚಾರಣೆಯೇ ನಿರ್ಧರಿಸಬೇಕು
No comments:
Post a Comment