
ಶಿಕಾಗೋ, ಮಾ. ೨೭: ವಿಶ್ವದ ಮೋಸ್ಟ್ ವಾಂಟೆಡ್ ಉಗ್ರ, ಅಲ್ ಕಾಯಿದಾ ಸಂಘಟನೆಯ ಮುಖ್ಯಸ್ಥ ಉಸಾಮಾ ಬಿನ್ ಲಾದನ್ ಆರೋಗ್ಯದಿಂದಿದ್ದಾನೆ ಮತ್ತು ತನ್ನ ಕೈಕೆಳಗಿನ ನಾಯಕರಿಗೆ ನಿರಂತರವಾಗಿ ಆದೇಶಗಳನ್ನು ಕೊಡುತ್ತಿದ್ದಾನೆ.
ಉಗ್ರ ಸಂಘಟನೆಗೆ ಹಣ ಒದಗಿಸಿದ ಆಪಾದನೆಯ ಮೇಲೆ ಎಫ್‌ಬಿಐ ಅಧಿಕಾರಿಗಳಿಂದ ಬಂಧಿಸಲ್ಪಟ್ಟ ಪಾಕ್ ಮೂಲದ ಟ್ಯಾಕ್ಸಿ ಚಾಲಕ ರಾಜಾ ಲಹ್ರಾಸಿಬ್ ಖಾನ್ ಈ ವಿಚಾರವನ್ನು ಬಹಿರಂಗಪಡಿಸಿದ್ದಾನೆ. ಎಫ್‌ಬಿಐ ಅಧಿಕಾರಿಗಳು ಆತನ ವಿರುದ್ಧ ದಾಖಲಿಸಿರುವ ೩೫ ಪುಟಗಳ ಅಫಿದಾವಿತ್ ದೂರಿನಲ್ಲಿ ಆತ ತನಿಖೆಯ ವೇಳೆ ಕೊಟ್ಟಿರುವ ಈ ಮಾಹಿತಿಗಳನ್ನು ಉಲ್ಲೇಖಿಸಲಾಗಿದೆ.
ಹುಜಿಯ ಮುಖ್ಯಸ್ಥ ಹಾಗೂ ಅಲ್-ಕಾಯಿದಾ ಸಂಘಟನೆಯ ಓರ್ವ ನಾಯಕನಾಗಿರುವ ಇಲ್ಯಾಸ್ ಕಶ್ಮೀರಿಯ ಜತೆ ಈತ ಹೊಂದಿರುವ ನಂಟನ್ನು ಎಫ್‌ಬಿಐ ಅಧಿಕಾರಿಗಳು ಬಯಲುಗೊಳಿಸಿದ್ದಾರೆ. ಅಧಿಕಾರಿಯೋರ್ವರು ವೇಷಮರೆಸಿಕೊಂಡು ಆತನೊಂದಿಗೆ ನಡೆಸಿದ ಸಂಭಾಷಣೆಯನ್ನು ರಹಸ್ಯವಾಗಿ ಮುದ್ರಿಸಿಕೊಳ್ಳಲಾಗಿದ್ದು ಇದರಲ್ಲಿ ಲಾದನ್ ಜೀವಂತವಿದ್ದು ಈಗಲೂ ಸಕ್ರಿಯವಾಗಿರುವ ಬಗ್ಗೆ ಮಾಹಿತಿಗಳು ಲಭಿಸಿವೆ.
ಈ ವರ್ಷ ಫೆ. ೨೩ರಂದು ಎಫ್‌ಬಿಐ ಅಧಿಕಾರಿಯೋರ್ವರು ೫೬ರ ಹರೆಯದ ಟ್ಯಾಕ್ಸಿ ಚಾಲಕ ರಾಜಾ ಲಹ್ರಾಸಿಬ್ ಖಾನ್ ಜತೆಗಿನ ಸಂಭಾಷಣೆಯನ್ನು ರಹಸ್ಯವಾಗಿ ಮುದ್ರಿಸಿಕೊಂಡಿದ್ದರು. ‘ಬಿನ್ ಲಾದನ್ ಜೀವಂತವಿದ್ದು ಆತ ತನ್ನ ಸಹಚರರಿಗೆ ಆದೇಶಗಳನ್ನು ಕೊಡುತ್ತಿದ್ದಾನೆ ಎಂಬ ವಿಷಯವನ್ನು ಇಲ್ಯಾಸ್ ತನಗೆ ತಿಳಿಸಿರುವುದಾಗಿ’ ಖಾನ್ ಈ ಸಂಭಾಷಣೆಯಲ್ಲಿ ಹೇಳಿದ್ದಾನೆ. ಇಲ್ಯಾಸ್‌ನನ್ನು ಖಾನ್ ‘ಲಾಲಾ’ ಎಂದು ಕರೆಯುತ್ತಾನೆ.
‘ಲಾದನ್ ಅನಾರೋಗ್ಯದಿಂದ ಇದ್ದಾನೆ ಎಂದು ನಾನು ತಿಳಿದಿದ್ದೆ. ಆದರೆ ಆತ ಆರೋಗ್ಯದಿಂದ ಇದ್ದಾನೆ ಎಂದು ನನಗೆ ಲಾಲಾ (ಇಲ್ಯಾಸ್ ಕಶ್ಮೀರಿ) ಹೇಳಿದ್ದಾನೆ. ಮಾತ್ರವಲ್ಲ ಲಾದನ್ ತನ್ನ ಸಹಚರರಿಗೆ ಆದೇಶಗಳನ್ನು ಕೂಡ ಕೊಡುತ್ತಿದ್ದಾನೆ ಎಂದಾತ ನನಗೆ ತಿಳಿಸಿದ್ದಾನೆ’ ಎಂದು ಖಾನ್ ಸಂಭಾಷಣೆಯಲ್ಲಿ ಹೇಳಿದ್ದಾನೆ.
ಈ ಸಂಭಾಷಣೆ ನಡೆದ ಬಳಿಕ ಮಾ.೧೭ರಂದು ಖಾನ್ ಮತ್ತು ಇನ್ನೋರ್ವ ‘ಬಿ’ ಎಂಬ ವ್ಯಕ್ತಿಯನ್ನು ಎಫ್‌ಬಿಐ ಅಧಿಕಾರಿ ರೆಸ್ಟೋರೆಂಟ್ ಒಂದರಲ್ಲಿ ಭೇಟಿಯಾದರು. ಆ ಸಂದರ್ಭದಲ್ಲಿ ಕೂಡ ಖಾನ್, ಅಲ್ ಕಾಯಿದಾ ಸಂಘಟನೆಗಾಗಿ ಇಲ್ಯಾಸ್ ಕಶ್ಮೀರಿ ದುಡಿಯುತ್ತಿರುವುದನ್ನು ತಾನು ಬಲ್ಲೆ ಎಂದಿದ್ದಾನೆ. ಅಲ್ಲದೇ ದೊಡ್ಡ ಲಾಲಾ (ಲಾದನ್) ಹೇಗಿದ್ದಾನೆ ಎಂಬುದನ್ನೂ ಆತನಲ್ಲಿ ತಾನು ವಿಚಾರಿಸಿದೆ ಎಂದು ಹೇಳಿದ್ದಾನೆ.
No comments:
Post a Comment