ಬೆಂಗಳೂರು, ಮಾ.೨೬: ನಕಲಿ ಜಾತಿ ಪ್ರಮಾಣ ಪತ್ರ ಮತ್ತು ಇತರ ದಾಖಲಾತಿಗಳನ್ನು ಸೃಷ್ಟಿಸಿ ದಲಿತರಿಗೆ ದೊರೆಯಬೇಕಾಗಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಆಟೋಗಳನ್ನು ದುರುಪಯೋಗ ಪಡಿಸಿಕೊಂಡ ಆರೋಪಿಯೊಬ್ಬರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮತಯಾಚನೆಯಲ್ಲಿ ತೊಡಗಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮದಿಂದ ಸಫಾಯಿ ಕರ್ಮಾಚಾರಿಗಳ ಪುನರ್ವಸತಿಗಾಗಿ ೨೫೦೦ ಆಟೋಗಳನ್ನು ಪರಿಶಿಷ್ಟ ಜಾತಿಯವರಿಗೆ ನೀಡಲು ಉದ್ದೇಶಿಸಲಾಗಿತ್ತು. ಅದರಲ್ಲಿ ಶೇ.೭೦ರಷ್ಟು ಆಟೋಗಳನ್ನು ಸಿ.ಕೆ.ರೆಕವರಿ ಏಜೆನ್ಸಿಯ ಮಾಲಕ ಚಂದರ್ ಉರುಫ್ ಸೆಂದಿಲ್ ನಾಥನ್ ನಕಲಿ ಜಾತಿ ಪ್ರಮಾಣ ಪತ್ರ ಮತ್ತು ಇತರ ನಕಲಿ ದಾಖಲೆಗಳ ಮೂಲಕ ದುರುಪಯೋಗ ಪಡಿಸಿಕೊಂಡಿದ್ದಾರೆ. ಈ ಕುರಿತು ಸಿಓಡಿ ತನಿಖೆಯೂ ನಡೆದಿದೆ.
ಅದೇ ಚಂದರ್ ಉರುಫ್ ಸೆಂದಿಲ್‌ನಾಥನ್ ಈಗ ರಾಮಸ್ವಾಮಿ ಪಾಳ್ಯ ೬೪ನೆ ವಾರ್ಡ್‌ನ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣಾ ಕಣದಲ್ಲಿದ್ದಾರೆ. ತಮ್ಮ ಮತಯಾಚನೆ ಪತ್ರದಲ್ಲಿ ಶಾಸಕ ರೋಷನ್‌ಬೇಗ್ ಸೇರಿ ಇತರ ಎಲ್ಲ ಪ್ರಮುಖ ಕಾಂಗ್ರೆಸ್ ನಾಯಕರ ಭಾವಚಿತ್ರಗಳನ್ನು ಹಾಕಿಕೊಂಡು ಮತಯಾಚನೆಗೆ ಮಾಡುತ್ತಿದ್ದಾರೆ.
೨೦೦೪ರಲ್ಲಿ ಬೆಂಗಳೂರು ನಗರ ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮದ ಕೇಂದ್ರ ಕಚೇರಿ ೧೧೨ ಪ್ರಕರಣಗಳ ಪರಿಶೀಲನೆ ನಡೆಸಿದಾಗ ೩೦ ಆಟೋಗಳು ಮಾತ್ರ ಫಲಾನುಭವಿಗಳಿಗೆ ತಲುಪಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
೧೪ ಆಟೋಗಳು ಬೇರೆ ಜಾತಿಯವರ ಹೆಸರಿಗೆ ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ಸೃಷ್ಟಿಸಿ ಮಧ್ಯವರ್ತಿಗಳು ಪಡೆದಿದ್ದಾರೆ. ಒಂದೇ ಫಲಾನುಭವಿ ಹೆಸರಿಗೆ ಎರಡೆರಡು ಆಟೋ ಬಿಡುಗಡೆಯಾಗಿವೆ. ಈ ರೀತಿ ೧೨ ಆಟೋಗಳು ದುರುಪಯೋಗವಾಗಿವೆ. ಒಂದು ಫಲಾನುಭವಿಗೆ ಮತ್ತೊಂದು ಮಧ್ಯವರ್ತಿಗಳಿಗೆ ಆಟೋಗಳ ಹಂಚಿಕೆಯಾಗಿವೆ. ಉಳಿದಂತೆ ೫೬ ಪ್ರಕರಣಗಳಲ್ಲಿ ತಿಳಿಯದೆ ಆಟೋಗಳು ಬಿಡುಗಡೆಯಾಗಿದ್ದು, ಇವು ಪೂರ್ತಿಯಾಗಿ ಮಧ್ಯವರ್ತಿಗಳ ಪಾಲಾಗಿವೆ ಎಂದು ಸರಕಾರ ತನ್ನ ಪ್ರಾಥಮಿಕ ತನಿಖೆಯಲ್ಲಿ ತಿಳಿಸಿದೆ.
ಒಟ್ಟಾರೆ ೨೫೦೦ ಆಟೋಗಳಲ್ಲಿ ಶೇ.೭೦ ಮಧ್ಯವರ್ತಿಗಳು ಪಾಲಾಗಿರುವುದು ತಿಳಿದು ಬಂದಿದೆ. ಈ ಅಕ್ರಮಗಳಲ್ಲಿ ಸಿ.ಕೆ.ಎಸ್ ರೆಕವರಿ ಏಜೆನ್ಸಿ ಮತ್ತು ಇದರ ಮಾಲಕ ಚಂದರ್ ಅಲಿಯಾಸ್ ಸೆಂದಿಲ್ ನಾಥ್‌ನ ಪ್ರಮುಖ ಆರೋಪಿಯಾಗಿದ್ದಾರೆ ಎಂದು ಒಳಾಡಳಿತ ಮತ್ತು ಸಾರಿಗೆ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಅರ್.ಎ.ಕುಲಕರ್ಣಿ ೨೦೦೫ ಮೇ ೧೨ರಂದು ತಮ್ಮ ಪತ್ರದಲ್ಲಿ ತಿಳಿಸಿ, ಸಿಓಡಿ ತನಿಖೆಗೆ ಆದೇಶಿಸಿದ್ದಾರೆ.
ಈ ಭಾರೀ ಹಗರಣದ ಕುರಿತು ಬಹುಜನ ಸಮಾಜ ಪಕ್ಷದ ಪ್ರಧಾನ ಕಾರ್ಯದರ್ಶಿ ಸರಕಾರಕ್ಕೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಫಾಯಿ ಕರ್ಮಚಾರಿ ಪುನರ್‌ವಸತಿಯ ಮಾನಿಟರಿಂಗ್ ಸಮಿತಿಯಲ್ಲಿ ಸದಸ್ಯರಾಗಿದ್ದ ಅಶೋಕ್ ಸಾಲಪ್ಪನವರ ಸದಸ್ಯತ್ವವನ್ನು ರದ್ದು ಮಾಡಲಾಗಿತ್ತು ಮತ್ತು ಈ ಅಕ್ರಮಗಳಲ್ಲಿ ಭಾಗಿಯಾಗಿರುವ ಅಧಿಕಾರಿಗಳು, ಮಧ್ಯವರ್ತಿಗಳು, ಆಟೋ ಕನ್ಸ್‌ಲ್ಟೆನ್ಸಿ ಏಜೆನ್ಸಿಗಳು, ರೆಕವರಿ ಏಜೆನ್ಸಿಗಳ ಪಾತ್ರದ ಕುರಿತು ಸಿಓಡಿ ತನಿಖೆ ನಡೆಸುವಂತೆ ಸರಕಾರ, ಸಂಖ್ಯೆ: ಒಇ ೧೬೮ ಸಿಓಡಿ ೦೪, ಬೆಂಗಳೂರು. ದಿನಾಂಕ ೧೦.೦೫.೨೦೦೫ರಂದು ಆದೇಶಿಸಿತ್ತು. ತನಿಖೆಯನ್ನು ಮೂರು ತಿಂಗಳ ಒಳಗೆ ಪೂರ್ಣಗೊಳಿಸುವಂತೆ ಆ ಸಂದರ್ಭದಲ್ಲಿ ಅಧೀನ ಕಾರ್ಯದರ್ಶಿ ತಾಕೀತು ಮಾಡಿದ್ದರು.
ಸುಮಾರು ೨೫೦೦ ಆಟೋಗಳಲ್ಲಿ ಶೇ.೭೦ರಷ್ಟು ದುರುಪಯೋಗವಾಗಿರುವ ಕೋಟ್ಯಂತರ ರೂಪಾಯಿ ಅವ್ಯವಹಾರದಲ್ಲಿ ಎನ್.ಚಂದರ್ ಎಂಬಾತನೆ ಪ್ರಮುಖ ಆರೋಪಿ ಎಂದು ಗೃಹ ಇಲಾಖೆ ನಿರ್ಣಯಿಸಿದೆ. ಇದೇ ವ್ಯಕ್ತಿಗೆ ಕಾಂಗ್ರೆಸ್ ಮೀಸಲು ವಾರ್ಡ್‌ನಲ್ಲಿ ಸ್ಪರ್ಧಿಸಲು ಬಿ.ಫಾರಂ ನೀಡಿದೆ. ಪಾಲಿಕೆ ಸದಸ್ಯತ್ವದಂತಹ ಮಹತ್ವದ ಸ್ಥಾನಕ್ಕೆ ಸ್ಪರ್ಧಿಸಿರುವ ಚಂದರ್ ಚಾರಿತ್ರದ ಬಗ್ಗೆ ವಾರ್ಡ್‌ನಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ.
Subscribe to:
Post Comments (Atom)
No comments:
Post a Comment