VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 28, 2010

ಪುತ್ಥೋಳಿ ಕೊಲೆ ಆರೋಪಿಗಳಿಗೆ ಶಿಕ್ಷೆ

ಪುತ್ಥೋಳಿ ಕೊಲೆ ಆರೋಪಿಗಳಿಗೆ ಶಿಕ್ಷೆ
13 ವರ್ಷದ ಬಳಿಕ ಮಹತ್ವದ ತೀರ್ಪು ಅಪರಾಧಿಗಳ ಬಂಧನ



ಪುತ್ತೂರು: 13 ವರ್ಷಗಳ ಹಿಂದೆ ರಾಜ್ಯಮಟ್ಟದಲ್ಲಿ ಸುದ್ದಿಯಾಗಿದ್ದ ಫೈನಾನ್ಸ್ ಉದ್ಯಮಿ ಪುತ್ಥೋಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪ ಎದುರಿಸುತ್ತಿದ್ದ ಎ.ಆರ್. ಚಂದ್ರ ಎಡಪತ್ಯ ದಂಪತಿ ಅಪರಾಧಿಗಳೆಂದು ಸಾಬೀತಾಗಿದ್ದು, ಶಿಕ್ಷೆಯ ಪ್ರಮಾಣ ಎಪ್ರಿಲ್ 8ರಂದು ಘೋಷಣೆಯಾಗಲಿದೆ.

ಪ್ರತಿಭಟನೆ, ಹೋರಾಟದಿಂದಾಗಿ ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿದ್ದ ಉಪ್ಪಿನಂಗಡಿ ಸಮೀಪದ ಕೆಮ್ಮಾರದ ಹರಿಶ್ಚಂದ್ರ ರೈ ಯಾನೆ ಪುತ್ಥೋಳಿ ಕೊಲೆ ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಿರುವ ಪುತ್ತೂರಿನ ತ್ವರಿತಗತಿ ನ್ಯಾಯಾಲಯ ಶನಿವಾರ ಎಡಪತ್ಯ ಚಂದ್ರ ಮತ್ತು ಅವರ ಪತ್ನಿ ವೀಣಾರನ್ನು ಅಪರಾಧಿಗಳೆಂದು ತೀರ್ಮಾನಿಸಿದೆ.

ಪ್ರಕರಣಕ್ಕೆ ಸಂಬಂಧಿಸಿ 30ಕ್ಕೂ ಹೆಚ್ಚು ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಲಾಗಿದ್ದು, ಅಂತಿಮವಾಗಿ ನ್ಯಾಯಾಲಯ ಎಡಪತ್ಯ ಚಂದ್ರ ಮತ್ತು ವೀಣಾರ ಮೇಲಿನ ಆರೋಪ ಸಾಬೀತಾಗಿರುವುದಾಗಿ ತೀರ್ಮಾನಿಸಿ ಅವರನ್ನು ಅಪರಾಧಿಗಳೆಂದು ಘೋಷಿಸಿದೆ.

ಪುತ್ಥೋಳಿ ಮತ್ತು ವೀಣಾರ ನಡುವೆ ಕಾಲೇಜು ಜೀವನದಲ್ಲಿ ಪ್ರೇಮ ಸಂಬಂಧವಿತ್ತು. ವೀಣಾರನ್ನು ಎಡಪತ್ಯ ಚಂದ್ರರು ವಿವಾಹವಾದ ಬಳಿಕ ಕಡಿದು ಹೋಗಿದ್ದ ಆ ಸಂಬಂಧ ಕೆಲವು ಸಮಯದ ಬಳಿಕ ಮತ್ತೆ ಮುಂದುವರಿದಿತ್ತು. ಈ ಹಿನ್ನೆಲೆಯಲ್ಲಿ ಎಡಪತ್ಯ ಚಂದ್ರರು ತನ್ನ ಪತ್ನಿ ವೀಣಾರನ್ನು ಬಳಸಿಕೊಂಡು ಕೊಲೆ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

ಪ್ರಕರಣದ ವಿವರ: ಉಪ್ಪಿನಂಗಡಿಯ ಕೆಮ್ಮಾರ ನಿವಾಸಿಯಾಗಿದ್ದ ಫೈನಾನ್ಸ್ ಉದ್ಯಮಿ ಹರಿಶ್ಚಂದ್ರ ಯಾನೆ ಪುತ್ಥೋಳಿ 1997ರ ಮೇ 19ರಂದು ರಾತ್ರಿ ಬೆಂಗಳೂರಿನಿಂದ ಮಂಗಳೂರಿಗೆ ಬಸ್ಸಿನಲ್ಲಿ ಹೊರಟು ಬಂದಿದ್ದರು. ಮಂಗಳೂರಿಗೆ ಬಂದಿಳಿದ ಅವರು ಮೇ 20ರಂದು ಮಂಗಳೂರಿನ ಡಾನ್ಬಾಸ್ಕೋ ಹಾಲ್ ಬಳಿಯಿಂದ ನಿಗೂಢ ರೀತಿಯಲ್ಲಿ ಕಾಣೆಯಾಗಿದ್ದರು. ಈ ಘಟನೆಯ ಕುರಿತು ಪುತ್ಥೋಳಿಯವರ ತಾಯಿ ಸುಂದರಿ ರೈ ಮೇ 25ರಂದು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು.

ಬೆಂಗಳೂರಿನ ಲಿಯೋನಾ ಲೀಸಿಂಗ್ ಲಿಮಿಟೆಡ್ ಹಣಕಾಸು ಸಂಸ್ಥೆಯ ಪಾಲು ದಾರನಾಗಿದ್ದುಕೊಂಡು ಬೆಂಗಳೂರಿನಲ್ಲೇ ಹೆಚ್ಚು ದಿನ ಉಳಿದುಕೊಳ್ಳುತ್ತಿದ್ದ ಪುತ್ಥೋಳಿ ಯವರು 1997ರ ಮೇ 19ರಂದು ವೀಣಾ ರವರ ಕರೆಯ ಮೇರೆಗೆ ಬೆಂಗಳೂರಿನಿಂದ ಹೊರಟು ಬಂದಿದ್ದರೆಂಬ ಮಾಹಿತಿ ಲಭ್ಯವಾ ಗಿತ್ತು.

ಪ್ರಕರಣ ದಾಖಲಿಸಿಕೊಂಡ ಪೊಲೀಸ ರು ಆರೋಪಿಗಳನ್ನು ಬಂಧಿಸುವಲ್ಲಿ ವಿಫಲಗೊಂಡಾಗ ಮತ್ತು ತನಿಖೆಯ ಹಾದಿ ತಪ್ಪಿದಾಗ ಉಪ್ಪಿನಂಗಡಿಯ ಗಾಂಪಾ ಗೆಳೆಯರು ಪ್ರತಿಭಟನೆಗಿಳಿದಿದ್ದರು. ಉಪ್ಪಿನಂಗಡಿ ಬಂದ್ ಮಾಡಿ ಆರೋಪಿಗಳ ಪತ್ತೆಗೆ ಆಗ್ರಹಿಸಿದ್ದರು. ಮಾತ್ರವಲ್ಲದೆ ಸ್ಥಳೀಯ ಪೊಲೀಸರಲ್ಲಿ ಅವಿಶ್ವಾಸ ವ್ಯಕ್ತಪಡಿಸಿ ಪ್ರಕರಣವನ್ನು ಅಪರಾಧ ಪತ್ತೆದಳಕ್ಕೆ ಒಪ್ಪಿಸುವಂತೆ ಒತ್ತಾಯಿಸಿದ್ದರು. ಇದರ ಪರಿಣಾ ಮವಾಗಿ ಪ್ರಕರಣದ ತನಿಖೆ ಅಪರಾಧ ಪತ್ತೆದಳಕ್ಕೆ ವರ್ಗಾವಣೆಗೊಂಡಿತ್ತು.

ಈ ನಡುವೆ ಪುತ್ಥೋಳಿಯ ತಾಯಿ ಸುಂದರಿ ರೈ ಮತ್ತು ಪೊಲೀಸರಿಗೆ ಬಂದ ಅನಾಮಧೇಯ ಪತ್ರವೊಂದು ಪ್ರಕರಣದ ರಹಸ್ಯ ಬಯಲಾಗಲು ಕಾರಣವಾಯಿತು. ಈ ಹಿನ್ನೆಲೆಯಲ್ಲಿ ಎಡಪತ್ಯ ಚಂದ್ರರವರಿಗೆ ಸೇರಿದ ಸುಳ್ಯ ತಾಲೂಕಿನ ಎಡಪ ತ್ಯದ ತೋಟದಲ್ಲಿ ಶೋಧಿಸಿದಾಗ ಪುತ್ಥೋಳಿಯ ವರನ್ನು ಕೊಲೆಗೈದು ಹೊಂಡ ತೆಗೆದು ಸುಟ್ಟು ಹಾಕಿದ ಕುರುಹು ಕಂಡು ಬಂತು. ಹೊಂಡವನ್ನು ಅಗೆದು ಶೋಧಿಸಿದಾಗ ಪುತ್ಥೋಳಿಯವರ ವಾಚ್ನ ಅವಶೇಷ ಮತ್ತು ಎಲುಬು ತುಂಡುಗಳು ಪತ್ತೆಯಾಗಿದ್ದವು.

ಈ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ಪೊಲೀಸರು ಕೊಲೆ ಕೇಸು ದಾಖಲಿಸಿಕೊಂಡಿದ್ದರು. ಪ್ರಕರಣದ ವಿಚಾರಣೆಯನ್ನು ಅಪರಾಧ ಪತ್ತೆದಳದವರು ನಡೆಸಿದ್ದರು. ಆದರೂ ತನಿಖೆಯಲ್ಲಿ ಪ್ರಗತಿ ಕಾಣದ ಹಿನ್ನೆಲೆಯಲ್ಲಿ ಗಾಂಪಾ ಗೆಳೆಯರು ಆ ವೇಳೆ ಶಾಸಕರಾಗಿದ್ದ ಡಿ.ವಿ. ಸದಾನಂದ ಗೌಡರ ಮೇಲೆ ಶೀಘ್ರ ತನಿಖೆಗಾಗಿ ಒತ್ತಡ ಹಾಕಿದ್ದರು. ಸದಾನಂದ ಗೌಡರು ವಿಧಾನಸಭೆಯಲ್ಲಿ ಪ್ರಸ್ತಾಪಿಸಿ ಪ್ರಕರಣವನ್ನು ಸಿಓಡಿ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿದ್ದರು. ಆ ವೇಳೆ ಕಾನೂನು ಸಚಿವರಾಗಿದ್ದ ಎಂ.ಸಿ. ನಾಣಯ್ಯ ಪ್ರಕರಣವನ್ನು ಸಿಓಡಿ ತನಿಖೆಗೆ ಒಪ್ಪಿಸಿದ್ದರು. ಸಿಓಡಿ ಪೊಲೀಸರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋ ಪಣಾ ಪಟ್ಟಿ ಸಲ್ಲಿಸಿದ್ದರು.

ಅಪರಾಧಿಗಳ ಬಂಧನ: ಪುತ್ತೂರಿನ ತ್ವರಿತ ನ್ಯಾಯಾಲಯ ಪುತ್ಥೋಳಿ ಕೊಲೆ ಪ್ರಕರಣದಲ್ಲಿ ಎಡಪತ್ಯ ಚಂದ್ರ ಮತ್ತು ಅವರ ಪತ್ನಿ ವೀಣಾರನ್ನು ಅಪರಾಧಿಗಳೆಂದು ಘೋಷಿಸಿದ ಹಿನ್ನೆಲೆಯಲ್ಲಿ ಸಿಓಡಿ ಪೊಲೀಸರು ಅವರನ್ನು ನ್ಯಾಯಾಲಯ ಆವರಣದಿಂದ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಮಹತ್ವದ ತೀರ್ಪು

ಪುತ್ಥೋಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪ ಎದುರಿಸುತ್ತಿದ್ದ ಎಡಪತ್ಯ ಚಂದ್ರರು ಪ್ರಸ್ತುತ ಎಪಿಎಂಸಿ ನಿರ್ದೆಶಕರಾಗಿ, ಸವಣೂರಿನ ಭಾರತೀಯ ಭಾವೈಕ್ಯತಾ ಪ್ರತಿಷ್ಠಾನದ ಅಧ್ಯಕ್ಷರಾಗಿ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಿರೀಕ್ಷಣಾ ಜಾಮೀನು ಪಡೆದಿದ್ದ ಅವರು ಮತ್ತು ಅವರ ಪತ್ನಿ ವೀಣಾರವರು ಬಂಧನಕ್ಕೊಳಗಾಗಿರಲೇ ಇಲ್ಲ. ಆದರೆ ಈಗ ನ್ಯಾಯಾಲಯ ನೀಡಿರುವ ಮಹತ್ವದ ತೀಮರ್ಾನದಿಂದಾಗಿ ಪ್ರಕರಣಕ್ಕೆ ಸಂಬಂಧಿಸಿ 13 ವರ್ಷದ ಬಳಿಕ ಅವರು ಬಂಧನಕ್ಕೊಳಗಾಗಿದ್ದಾರೆ.

`ಗಾಂಪಾ' ಹೋರಾಟಕ್ಕೆ ಸಂದ ಜಯ

ಉಪ್ಪಿನಂಗಡಿ ಹರೀಶ್ ರೈ ಯಾನೆ ಪುತ್ಥೋಳಿ ಯವರ ಕೊಲೆ ಪ್ರಕರಣದ ಬಗ್ಗೆ ತ್ವರಿತಗತಿ ನ್ಯಾಯಾ ಲಯವು ನೀಡಿದ ತೀರ್ಪು ಗಾಂಪಾ ಗೆಳೆಯರ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಗಾಂಪಾ ಗೆಳೆಯರ ಬಳಗದ ಕಾರ್ಯದರ್ಶಿ ಅಶ್ರಫ್ ಬಸ್ತಿಕಾರ್ ಅವರು ತಿಳಿಸಿದ್ದಾರೆ.

ಸಂಶಯಾಸ್ಪದ ಸಾವು

ಸುಳ್ಯ ತಾಲೂಕಿನ ಎಡಪತ್ಯದಲ್ಲಿರುವ ಚಂದ್ರರ ತೋಟದಲ್ಲಿ ಹೊಂಡ ತೆಗೆದು ಪುತ್ಥೋಳಿಯ ಶವವನ್ನು ಸುಟ್ಟು ಹಾಕಿ ಪ್ರಕರಣವನ್ನು ಮುಚ್ಚಿ ಹಾಕಲು ಸಹಕರಿಸಿದ್ದ ಪುತ್ತೂರು ಪಾಲ್ತಾಡು ಗ್ರಾಮದ ಅಂಕತ್ತಡ್ಕದ ಕೇಪು ದಿಢೀರ್ ಆಗಿ ಸಾವಿಗೀಡಾಗಿದ್ದರು.

ವೀಣಾರವರ ಕರೆಯ ಮೇರೆಗೆ ಪುತ್ಥೋಳಿ ಬೆಂಗಳೂರಿನಿಂದ ಹೊರಟು ಬರುವಾಗ ಅವರ ಜೊತೆಗಿದ್ದ ಕೋಡಿಂಬಾಡಿ ಮಠಂತಬೆಟ್ಟು ಎಂಬಲ್ಲಿನ ದಿವಾಕರ ರೈ ಕೂಡ ಈ ಘಟನೆ ನಡೆದ ಕೆಲ ಸಮಯದ ಬಳಿಕ ಸಾವಿಗೀಡಾಗಿದ್ದರು. ಅವರು ಜಾಂಡೀಸ್ ರೋಗಕ್ಕೊಳಗಾಗಿ ಮೃತಪಟ್ಟಿದ್ದರು ಎಂದು ಆ ವೇಳೆ ಸುದ್ದಿಯಾಗಿದ್ದರೂ ಬೇರೆಯೇ ಗುಸುಗುಸು ಸುದ್ದಿ ಕೂಡ ಹರಡಿತ್ತು.

ಎಡಪತ್ಯದ ತೋಟದಲ್ಲಿ ಪುತ್ಥೋಳಿಯ ಶವವನ್ನು ಹೊಂಡ ತೆಗೆದು ಸುಟ್ಟು ಹಾಕಿದ್ದು ನಾನೇ ಎಂದು ಪಾನಮತ್ತನಾಗಿ ಹೇಳಿಕೊಂಡು ಪ್ರಕರಣದ ರಹಸ್ಯವನ್ನು ಬಯಲು ಮಾಡಿದ್ದ ಕೇಪು ಕೂಡಾ ಸಂಶಯಾಸ್ಪದ ರೀತಿಯಲ್ಲೇ ಸಾವು ಕಂಡಿದ್ದರಂತೆ. ಈ ಎರಡು ಸಾವಿನ ಹಿಂದೆಯೂ ಸಂಶಯದ ಹುತ್ತ ಸೃಷ್ಟಿಯಾಗಿತ್ತು.
-jayakirana

No comments: