ಬೆಂಗಳೂರು, ಮಾ.೨೬: ಬಹಿರಂಗ ಪ್ರಚಾರದ ಅವಧಿ ಮುಗಿದ ನಂತರವೂ ಪತ್ರಿಕಾಗೋಷ್ಠಿ ನಡೆಸಿದ ಮುಖ್ಯಮಂತ್ರಿ ಮತ್ತು ಬಿಜೆಪಿ ಮುಖಂಡರ ವಿರುದ್ಧ ಕಾಂಗ್ರೆಸ್ ನೀತಿ ಸಂಹಿತೆ ಉಲ್ಲಂಘನೆಯಡಿ ದೂರು ನೀಡಿದೆ. ಈ ಮಧ್ಯೆ ನಕಲಿ ಮತದಾರರ ಸೃಷ್ಟಿಯ ಆರೋಪದಡಿ ಬಿಜೆಪಿ ಸಚಿವರು ಕಾಂಗ್ರೆಸ್ ಶಾಸಕನ ವಿರುದ್ಧ ದೂರು ನೀಡಿದ್ದಾರೆ.
ಮಾರ್ಚ್ ೨೬ರಂದು ಬೆಳಗ್ಗೆ ೭ಗಂಟೆಗೆ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು, ಅನಂತರ ಯಾವುದೇ ರೀತಿಯ ಚುನಾವಣಾ ಪ್ರಚಾರ ಕೈಗೊಳ್ಳುವಂತಿಲ್ಲ ಎಂದು ಆಯೋಗ ನಿನ್ನೆಯೇ ಸ್ಪಷ್ಟನೆ ನೀಡಿತ್ತು. ಮಧ್ಯಾಹ್ನ ೧೨ ಗಂಟೆಗೆ ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್, ನಗರಾಧ್ಯಕ್ಷ ಬಿ.ಎನ್.ವಿಜಯಕುಮಾರ್, ವಕ್ತಾರರಾದ ಆಯನೂರು ಮಂಜುನಾಥ್, ಸಿ.ಟಿ.ರವಿ ಪತ್ರಿಕಾಗೋಷ್ಠಿ ನಡೆಸಿದರು. ಯಡಿಯೂರಪ್ಪ, ಈಶ್ವರಪ್ಪ, ಅನಂತಕುಮಾರ ಅವರಂತೂ ಬಿಬಿಎಂಪಿ ಮಟ್ಟಿಗೆ ಭರವಸೆಗಳ ಮಹಾಪೂರವನ್ನೇ ಹರಿಸಿದರು.
ಇದು ಕಾಂಗ್ರೆಸ್‌ನ ಕಣ್ಣು ಕೆಂಪಗಾಗಿಸಿದೆ. ಚುನಾವಣಾ ಆಯೋಗ ತಮಗೆ ಪತ್ರಿಕಾಗೋಷ್ಠಿ ಸೇರಿದಂತೆ ಯಾವುದೇ ರೀತಿಯ ಪ್ರಚಾರ ನಡೆಸುವಂತಿಲ್ಲ ಎಂದು ತಿಳಿಸಿದೆ. ದೂರವಾಣಿ ಮೂಲಕ ವಿಚಾರಣೆ ನಡೆಸಿದಾಗಲೂ ಇದೇ ರೀತಿಯ ಉತ್ತರ ನೀಡಲಾಗಿದೆ. ಆದರೂ, ಮುಖ್ಯಮಂತ್ರಿಯವರಿಗೆ ಪತ್ರಿಕಾಗೋಷ್ಠಿ ನಡೆಸಲು ಅವಕಾಶ ನೀಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಸರಕಾರ ಆಡಳಿತ ಯಂತ್ರವನ್ನು ದುರುಪಯೋಗ ಪಡಿಸಿಕೊಳ್ಳುವುದಕ್ಕೆ ಇದು ಸ್ಪಷ್ಟ ನಿದರ್ಶನ. ಪತ್ರಿಕಾಗೋಷ್ಠಿ ನಡೆಸುವ ಮೂಲಕ ಮುಖ್ಯಮಂತ್ರಿ ಪ್ರಜಾಪ್ರತಿನಿಧಿ ಕಾಯ್ದೆ ಸೆಕ್ಷನ್ ೧೨೬(೩)ರ ಉಲ್ಲಂಘನೆ ಮಾಡಿದ್ದಾರೆ. ಈ ಕಾರಣಕ್ಕಾಗಿ ಮುಖ್ಯಮಂತ್ರಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ದೇಶಪಾಂಡೆ ಆಯೋಗಕ್ಕೆ ದೂರು ನೀಡಿ ಒತ್ತಾಯಿಸಿದ್ದಾರೆ. ನೋಟಿಸ್ ನೀಡುವ ಭರವಸೆಯನ್ನು ಆಯೋಗ ತಮಗೆ ನೀಡಿದೆ ಎಂದು ಅವರು ಹೇಳಿದರು.
ಬಿಜೆಪಿ ಅಭ್ಯರ್ಥಿಗಳ ಬೆಂಬಲಿಗರು ಮತದಾರರ ಗುರುತಿನ ಚೀಟಿಗಳನ್ನು ಪಡೆದುಕೊಂಡು ಹಣ ಮತ್ತು ಇತರ ವಸ್ತುಗಳನ್ನು ಹಂಚುತ್ತಿದ್ದಾರೆ. ದುರ್ಬಲ ಮತ್ತು ಅಲ್ಪಸಂಖ್ಯಾತರು ಮತಗಟ್ಟೆಯಿಂದ ದೂರವಿರುವಂತೆ ಬಿಜೆಪಿ ಬೆಂಬಲಿಗರು ಬೆದರಿಕೆ ಹಾಕುತ್ತಿದ್ದಾರೆ.
ಇದರಿಂದಾಗಿ ನಿಷ್ಪಕ್ಷಪಾತ ಮತ್ತು ನಿರ್ಬೀತ ಚುನಾವಣೆ ನಡೆಯಲು ಸಾಧ್ಯವಿಲ್ಲ. ಈ ಎಲ್ಲ ಕ್ರಮಗಳನ್ನು ಪೊಲೀಸರು ಮೂಕ ಪ್ರೇಕ್ಷಕರಾಗಿ ಕ್ಷಿಸುತ್ತಿದ್ದಾರೆ. ಕೂಡಲೇ ಆಯೋಗ ಪೊಲೀಸರಿಗೆ ಸ್ಪಷ್ಟ ಸೂಚನೆ ನೀಡಿ ನಿಷ್ಪಕ್ಷಪಾತ ಚುನಾವಣೆಗೆ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ದೂರಿನಲ್ಲಿ ಆಗ್ರಹಿಸಿದೆ.
ಸಚಿವರ ದೂರು: ಮಹಾಲಕ್ಷ್ಮಿ ಬಡಾವಣೆ ಶಾಸಕ ನೆ.ಲ.ನರೇಂದ್ರಬಾಬು ತಮ್ಮ ಸಹೋದರನ ಗೆಲುವುಗಾಗಿ ನಕಲಿ ಮತದಾರರ ಸೃಷ್ಟಿಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ಸಾರಿಗೆ ಸಚಿವ ಆರ್.ಅಶೋಕ್ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ಶಾಸಕರ ೩೦x೫೦ ಅಳತೆಯ ೨೦ ಚದುರ ಮನೆಯಲ್ಲಿ ಸುಮಾರು ೪೦ ಮಂದಿ ಮತದಾರರಿದ್ದಾರೆ. ಶಾಸಕರ ಅತ್ತಿಗೆ ನೆಲಮಂಗಲದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದರೂ ಬೆಂಗಳೂರಿನಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರಿದೆ. ೬೭ನೆ ವಾರ್ಡ್‌ನಲ್ಲಿ ಶಾಸಕರ ಸಹೋದರ ನೆ.ಲ.ರವಿಶಂಕರ್ ಸ್ಪರ್ಧಿಸಿದ್ದು ಅವರ ಗೆಲುವಿಗಾಗಿ ಈ ದಂಧೆಯಲ್ಲಿ ತೊಡಗಿದ್ದಾರೆ ಎಂದು ಸಚಿವರು ದೂರಿದ್ದಾರೆ.
Subscribe to:
Post Comments (Atom)
No comments:
Post a Comment