VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 3, 2010

ಪತ್ರಿಕಾ ಕಚೇರಿಗಳ ಮೇಲೆ ಪೆಟ್ರೋಲ್‌ ಬಾಂಬ್‌

ಜಯಕಿರಣ, ಕನ್ನಡಪ್ರಭ ಕಚೇರಿಗಳಿಗೆ ದುಷ್ಕರ್ಮಿಗಳ ದಾಳಿ




ಮಂಗಳೂರು: ಜಯಕಿರಣ ಮತ್ತು ಕನ್ನಡಪ್ರಭ ಪತ್ರಿಕಾ ಕಚೇರಿ ಗಳಿಗೆ ಏಕಾಏಕಿ ದಾಳಿ ನಡೆಸಿದ ದುಷ್ಕರ್ಮಿಗಳು ಕಂಪ್ಯೂಟರ್‌ ಸಹಿತ ಹಲವಾರು ಪೀಠೋಪಕರಣಗಳನ್ನು ಧ್ವಂಸ ಮಾಡಿ, ಪೆಟ್ರೋಲ್‌ ಬಾಂಬ್‌ ಎಸೆದು ಹೋದ ಅತ್ಯಂತ ಆಘಾತ ಕಾರಿ ಘಟನೆ ನಿನ್ನೆ ರಾತ್ರಿ ನಡೆದಿದೆ.
ರಾತ್ರಿ ಸುಮಾರು 9.15ರ ವೇಳೆಗೆ ಬೈಕಿನಲ್ಲಿ ಬಂದ ಏಳೆಂಟು ಮಂದಿ ದುಷ್ಕರ್ಮಿಗಳು ಸ್ಟೀಲ್‌ ರಾಡ್‌, ಮತ್ತಿತರ ಆಯುಧಗಳೊಂದಿಗೆ ಕಚೇರಿಯ ಒಳನುಗ್ಗಿ ಹಲವಾರು ಕಂಪ್ಯೂಟರ್‌ಗಳು, ಪ್ರಿಂಟರ್‌, ಕ್ಯಾಬಿನ್‌ ಗಾಜು, ಹೂವಿನ ಕುಂಡವನ್ನು ಧ್ವಂಸ ಮಾಡಿ ಓಡಿ ಹೋಗಿದ್ದಾರೆ. ಧಾಳಿಯ ಪರಿಣಾಮ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.
ಕಚೇರಿ ಒಳಗೆ ನುಗ್ಗಿದ ದುಷ್ಕರ್ಮಿ ಗಳಲ್ಲಿ ಕೆಲವು ಮಂದಿ ಮುಖಕ್ಕೆ ಕರವಸ್ತ್ರ ಕಟ್ಟಿಕೊಂಡಿದ್ದರೆ, ಮತ್ತೆ ಕೆಲವರು ಹೆಲ್ಮೆಟ್‌ ಧರಿಸಿದ್ದು, ಒಂದು ಶಬ್ದವನ್ನೂ ಮಾತನಾಡದೆ ಕಚೇರಿ ಯಲ್ಲಿ ಸಿಕ್ಕಿದೆಲ್ಲವನ್ನು ಧ್ವಂಸ ಮಾಡಿ ದ್ದಾರೆ. ಕೈಗೆ ಸಿಕ್ಕ ವಸ್ತುಗಳನೆಲ್ಲ ರಾತ್ರಿ ಪಾಳಿಯಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿ ಗಳ ಮೇಲೆ ಎಸೆದಿದ್ದಾರೆ. ಪತ್ರಕರ್ತರು ಪ್ರತಿರೋಧ ತೋರಿದ್ದರಿಂದ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿ ದ್ದಾರೆ. ಕಚೇರಿಗೆ ದಾಳಿ ಮಾಡಿದ ದುಷ್ಕರ್ಮಿಗಳು ನಾಲ್ಕೈದು ಬೈಕ್‌ಗಳಲ್ಲಿ ಬಂದಿರುವುದಾಗಿ ಕೆಲವು ಪ್ರತ್ಯಕ್ಷದರ್ಶಿ ಗಳು ತಿಳಿಸಿದ್ದಾರೆ.
ಸುಮಾರು 25-30ರ ಹರೆಯದ ಯುವಕರಾಗಿದ್ದ ದುಷ್ಕರ್ಮಿಗಳೆಲ್ಲರೂ ಸ್ಟೀಲ್‌ ರಾಡ್‌ ಹಿಡಿದುಕೊಂಡು ಕಂಪ್ಯೂಟರ್‌ ಮತ್ತು ಪೀಠೋಪಕರಣ ಗಳನ್ನು ಪುಡಿಗೈದಿದ್ದಾರೆ. ಧ್ವಂಸ ಮಾಡುವ ಭರದಲ್ಲಿ ವಾಟರ್‌ ಪ್ಯೂರಿ ಫೈಯರ್‌ನ್ನು ಒಡೆದು ಹಾಕಿದ ಪರಿಣಾಮವಾಗಿ ದುಷ್ಕರ್ಮಿಗಳು ಎಸೆದ ಪೆಟ್ರೋಲ್‌ ಬಾಂಬ್‌ ಸಿಡಿಯದೆ ಠುಸ್‌ ಆಗಿದ್ದು, ಹೆಚ್ಚಿನ ಅನಾಹುತ ತಪ್ಪಿದೆ. ಜಯಕಿರಣ ಪತ್ರಿಕೆಯ ಕಚೇರಿ ಮೇಲೆ ನಡೆದ ದಾಳಿ ಬಗ್ಗೆ ಉರ್ವ ಪೊಲೀಸ್‌ ಠಾಣೆಗೆ ದೂರು ನೀಡಲಾ ಗಿದ್ದು, ಪೊಲೀಸರು ತನಿಖೆ ಕೈಗೆತ್ತಿ ಕೊಂಡಿದ್ದಾರೆ.
ಭಾರತ ದಂಡ ಸಂಹಿತೆ ಸೆಕ್ಷನ್‌ 143, 147, 148, 448, 427, 149 ಹಾಗೂ ಕರ್ನಾಟಕ ಆಸ್ತಿ ಹಾನಿ ತಡೆ ಕಾಯ್ದೆ 1981ರ ಸೆಕ್ಷನ್‌ 2(ಎ) ಹಾಗೂ (ಬಿ) ಅನುಸಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಜಯಕಿರಣ ಪತ್ರಿಕಾ ಕಚೇರಿಗೆ ಭೇಟಿ ನೀಡಿದ ಎಸ್ಪಿ ಸುಬ್ರಹ್ಮಣ್ಯೇಶ್ವರ ರಾವ್‌ ಅವರು, ದುಷ್ಕರ್ಮಿಗಳನ್ನು ಶೀಘ್ರವೇ ಬಂಧಿಸಿ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇದಕ್ಕೂ ಮೊದಲು ಮಂಗಳೂರಿ ನಲ್ಲಿರುವ ಕನ್ನಡಪ್ರಭ ಕಚೇರಿ ಮೇಲೆ ಕೂಡ ದುಷ್ಕರ್ಮಿಗಳು ದಾಳಿ ಮಾಡಿದ್ದು, ಅಲ್ಲಿ ಕೂಡ ಪೆಟ್ರೋಲ್‌ ಬಾಂಬ್‌ ಎಸೆದು ಪರಾರಿಯಾಗಿದ್ದಾರೆ. ಕನ್ನಡಪ್ರಭ ಕಚೇರಿ ಮೇಲೆ ಪೆಟ್ರೋಲ್‌ ಬಾಂಬ್‌ ಎಸೆದ ಪರಿಣಾಮ ಸೋಫಾ ವೊಂದು ಸುಟ್ಟು ಹೋಗಿದೆ. ಶಿವಮೊಗ್ಗ ಸೇರಿದಂತೆ ಹಲವಾರು ಕಡೆಗಳಲ್ಲಿ ಕನ್ನಡಪ್ರಭ ಸಹಿತ ಇತರ ಕೆಲವು ಪತ್ರಿಕಾ ಕಚೇರಿಗಳ ಮೇಲೆ ದುಷ್ಕರ್ಮಿಗಳು ದಾಳಿ ಮಾಡುತ್ತಿದ್ದಾರೆ.
ಮಂಗಳೂರಿನಲ್ಲಿ ಕೂಡ ನಿನ್ನೆ ಪತ್ರಿಕಾ ಕಚೇರಿಗಳನ್ನು ಗುರಿಯನ್ನಾಗಿರಿ ಸಿಕೊಂಡು ದಾಳಿ ಮಾಡಲಾಗಿದ್ದು, ಇದು ಒಂದೇ ತಂಡದ ಕೃತ್ಯವಿರಬಹು ದೆಂದು ಶಂಕಿಸಲಾಗಿದೆ. ಕಳೆದೆರಡು ದಿನಗಳಿಂದ ರಾಜ್ಯದ ವಿವಿಧೆಡೆಗಳಲ್ಲಿ ನಡೆಯುತ್ತಿರುವ ಪತ್ರಿಕಾ ಕಚೇರಿಗಳ ಮೇಲಿನ ದಾಳಿ ಮಂಗಳೂರಿನಲ್ಲಿ ಕೂಡಾ ಮುಂದುವರಿದಿದ್ದು, ನಗರದಲ್ಲಿ ಅಶಾಂತಿಯನ್ನು ಸೃಷ್ಟಿ ಸಲು ದುಷ್ಕರ್ಮಿಗಳು ಈ ರೀತಿಯ ಕೃತ್ಯ ಮಾಡುತ್ತಿದ್ದಾರೆನ್ನಲಾಗಿದೆ.


ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಖಂಡನೆ
ಜಯಕಿರಣ ಹಾಗೂ ಕನ್ನಡ ಪ್ರಭ ಪತ್ರಿಕೆಗಳ ಮೇಲೆ ನಡೆದ ದಾಳಿಯನ್ನು ದ.ಕ. ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘವು ತೀವ್ರ ವಾಗಿ ಖಂಡಿಸಿದೆ. ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಳ್ಳು ವಂತೆ ಪತ್ರಕರ್ತರ ಸಂಘವು ಆಗ್ರಹಿಸಿದೆ. ಜಯಕಿರಣ ಪತ್ರಿಕಾ ಕಚೇರಿಗೆ ಭೇಟಿ ನೀಡಿದ ಪ್ರೆಸ್‌ ಕ್ಲಬ್‌ ಅಧ್ಯಕ್ಷ ಆನಂದ ಶೆಟ್ಟಿ, ಮಾಜಿ ಮೇಯರ್‌ ಗಣೇಶ್‌ ಹೊಸಬೆಟ್ಟು, ಕಾರ್ಪೋರೇಟರ್‌ಗಳಾದ ನವೀನ್‌ಚಂದ್ರ, ಅಶ್ವಿನ್‌ ಕುಮಾರ್‌, ದಿವಾಕರ್‌, ಬಿಜೆಪಿ ಮುಂದಾಳು ಫ್ರಾಂಕ್ಲಿನ್‌ ಮೊಂತೇರೋ, ಕಾಂಗ್ರೆಸ್‌ ಮುಖಂಡ ಟಿ.ಕೆ. ಸುಧೀರ್‌ ಮೊದಲಾದವರು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.


ಶ್ರೀರಾಮ ಸೇನೆ, ಬಜರಂಗದಳ ಖಂಡನೆ
ಜಯಕಿರಣ ಕಚೇರಿಯಲ್ಲಿ ದುಷ್ಕರ್ಮಿಗಳು ನಡೆಸಿದ ದಾಂಧಲೆ ಯನ್ನು ಶ್ರೀರಾಮ ಸೇನೆ ಮತ್ತು ಬಜರಂಗದಳ ತೀವ್ರವಾಗಿ ಖಂಡಿಸಿದೆ. ದುಷ್ಕರ್ಮಿಗಳನ್ನು ಪೊಲೀ ಸರು ಕೂಡಲೇ ಬಂಧಿಸ ಬೇಕೆಂದು ಒತ್ತಾಯಿಸಿದ್ದು, ಇಂತಹ ಕೃತ್ಯಗಳು ಮರು ಕಳಿಸದಂತೆ ಪೊಲೀಸರು ನಿಗಾವಹಿ ಸಬೇಕಾಗಿದೆ ಎಂದು ಅದು ತಿಳಿಸಿದೆ.


ಮುನೀರ್‌ ಕಾಟಿಪಳ್ಳ ಖಂಡನೆ
ಪತ್ರಿಕೆಗಳ ಮೇಲೆ ದಾಳಿ ಮಾಡಿ ಧ್ವನಿ ಅಡಗಿಸಬಹುದು ಎಂಬ ಕಲ್ಪನೆ ಸರಿಯಲ್ಲ. ಪತ್ರಿಕೆ ಯಾವುದೇ ವಿರೋಧವಿದ್ದರೂ ಇದನ್ನು ವೈಚಾರಿಕ ನೆಲೆಯಲ್ಲಿ, ಪ್ರಜಾ ಪ್ರಭುತ್ವದ ಹಾದಿಯಲ್ಲಿ ಕಾನೂನಿನ ಮೂಲಕ ಹೋರಾಡಬೇಕು. ಈ ರೀತಿ ದಾಳಿ ನಡೆಸಿ ಗುಂಡಾವರ್ತನೆ ನಡೆಸಿ ಬಾಯಿ ಮುಚ್ಚಿಸಬಹುದು ಎಂದು ಕೊಳ್ಳುವುದು ಸರಿಯಲ್ಲ. ಈ ಕೃತ್ಯ ಯಾರೇ ಮಾಡಿರಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ನಾಗರಿಕ ಸಮಾಜ ಕೂಡ ಯಾವುದೇ ಭಿನ್ನಾಭಿಪ್ರಾಯ ಇಲ್ಲದಂತೆ ಈ ಕೃತ್ಯವನ್ನು ಖಂಡಿಸಬೇಕು ಎಂದು ಡಿವೈಎಫ್‌ಐ ನಾಯಕ ಮುನೀರ್‌ ಕಾಟಿಪಳ್ಳ ತಿಳಿಸಿದ್ದಾರೆ.


ಶಾಸಕ ಯು.ಟಿ.ಖಾದರ್‌ ಖಂಡನೆ
ಶಾಸಕ ಯು.ಟಿ.ಖಾದರ್‌ ಘಟನೆಯನ್ನು ಖಂಡಿಸಿದ್ದು, ಪತ್ರಿಕೆಗಳ ಮೇಲೆ ದಾಳಿ ನಡೆಸಿರುವುದು ನಾಗರಿಕ ಸಮಾಜಕ್ಕೆ ಶೋಭೆ ತರುವಂತಹದ್ದಲ್ಲ. ಗೂಂಡಾವರ್ತನೆಯಯ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಸರಿಯಲ್ಲ. ಯಾರೇ ಈ ದುಷ್ಕತ್ಯ ನಡೆಸಿದ್ದರೂ ಅವರ ವಿರುದ್ಧ ಕಠೀಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಮಾಜಿ ಮೇಯರ್‌ ಅಶ್ರಫ್‌ ಘಟನೆಯನ್ನು ಖಂಡಿಸಿದ್ದು, ಕಾನೂನು ಕೈಗೆತ್ತಿಕೊಳ್ಳುವುದು ಸರಿಯಾದ ಕ್ರಮವಲ್ಲ. ಇದನ್ನು ಎಲ್ಲರೂ ಖಂಡಿಸಬೇಕು ಹಾಗೂ ಇಂತಹ ಕೃತ್ಯದಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಗುರುಪುರ ವಜ್ರ ದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಮತ್ತು ಕೇಮಾರು ಸಾಂದೀಪನಿ ಸಾಧನಾಶ್ರಮದ ಈಶ ವಿಠಲ ದಾಸ ಸ್ವಾಮೀಜಿ ಘಟನೆಯನ್ನು ಖಂಡಿಸಿದ್ದು, ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.


ಸಂಸದ, ಸಚಿವರ ಖಂಡನೆ
ಸಂಸದ ನಳಿನ್‌ಕುಮಾರ್‌ ಕಟೀಲ್‌, ಸಚಿವ ಕೃಷ್ಣ ಪಾಲೇಮಾರ್‌, ಮಾಜಿ ಶಾಸಕ ವಿಜಯ್‌ಕುಮಾರ್‌ ಶೆಟ್ಟಿ ಘಟನೆಯನ್ನು ಖಂಡಿಸಿದ್ದಾರೆ. ಏನೇ ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಪ್ರಜಾಪ್ರುತ್ವದ ಹಾದಿಯಲ್ಲಿ ಸರಿಮಾಡಿಕೊಳ್ಳಬಹುದಾಗಿದ್ದು, ಈ ರೀತಿ ಕಾನೂನು ಕೈಗೆತ್ತಿಕೊಳ್ಳುವುದು ಸರಿಯಲ್ಲ. ದುಷ್ಕತ್ಯ ನಡೆಸಿದವರ ವಿರುದ್ಧ ಕಠೀಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.


ಸೆಕ್ಷನ್‌ ಜಾರಿ
ಮಂಗಳೂರಿನಲ್ಲಿ ಪತ್ರಿಕಾ ಕಚೇರಿಗಳ ಮೇಲಿನ ದಾಳಿಯ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ನಿನ್ನೆ ರಾತ್ರಿ 12 ಗಂಟೆಯಿಂದ ಆರಂಭಗೊಂಡು ಮುಂದಿನ 48 ಗಂಟೆಗಳ ಕಾಲ ಈ ನಿಷೇಧಾಜ್ಞೆ ಜಾರಿಯಲ್ಲಿರುವುದಾಗಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸುಬ್ರಹ್ಮಣ್ಯೇಶ್ವರ ರಾವ್‌ ಅವರು ತಿಳಿಸಿದ್ದಾರೆ.


ಜಾತ್ಯತೀತ ನಿಲುವಿನ ಪತ್ರಿಕೆ
ಜಾತ್ಯತೀತ ನಿಲುವನ್ನು ಹೊಂದಿರುವ ಜಯಕಿರಣ ಯಾವಾ ಗಲೂ ಜನಪರ ನಿಲುವನ್ನು ಹೊಂದಿದ್ದು, ಯಾವುದೇ ಜಾತಿ ಅಥವಾ ಧರ್ಮದ ವಿರೋಧಿ ನಿಲು ವನ್ನು ಹೊಂದಿಲ್ಲ. ಎಂತಹ ಸಂದಿಗ್ದ ಪರಿಸ್ಥಿತಿ ಬಂದರೂ ತನ್ನ ಜಾತ್ಯತೀತ ನಿಲುವನ್ನು ಉಳಿಸಿ ಕೊಂಡಿದೆ. ಆದರೆ ಪತ್ರಿಕೆಯ ಜಾತ್ಯತೀತ ನಿಲುವನ್ನು ಸಹಿಸದ ಕೆಲವು ಮಂದಿ ಕಿಡಿಗೇಡಿ ಗಳು ಕಚೇರಿಗೆ ದಾಳಿ ಮಾಡು ವಂತಹ ದುಷ್ಕತ್ಯವನ್ನು ನಡೆಸಿದ್ದಾರೆ.

ಕನ್ನಡ ಪ್ರಭ ಉಡುಪಿ ಕಚೇರಿಗೆ ದಾಳಿ
ಉಡುಪಿ: ಕನ್ನಡ ಪ್ರಭ ದಿನ ಪತ್ರಿಕೆಯ ಉಡುಪಿ ಕಚೇರಿಗೆ ನಿನ್ನೆ ರಾತ್ರಿ ಮುಸುಕುಧಾರಿ ದುಷ್ಕರ್ಮಿಗಳು ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ಕಚೇರಿಯ ಕಾವಲು ಕಾಯುತ್ತಿದ್ದ ಪೊಲೀಸರ ಮೇಲೆಯೂ ಹಲ್ಲೆ ನಡೆಸಲಾಗಿದೆ.
ಮುಸುಕು ಧರಿಸಿ ಬಂದ ತಂಡ ಕಚೇರಿಯ ಮೇಲೆ ಪೆಟ್ರೋಲ್‌ ದಾಳಿ ನಡೆಸಿದ್ದು, ದಾಳಿಯನ್ನು ತಡೆಯಲು ಹೋದ ಡಿಆರ್‌ ಪೊಲೀಸ್‌ರ ಮೇಲೆ ಹಲ್ಲೆ ನಡೆಸಿದ್ದು, ಪಿಸಿ ಗಣೇಶ್‌ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಂಪಾದಕೀಯ
ಪತ್ರಿಕಾ ಸ್ವಾತಂತ್ರ್ಯವನ್ನು ನೂಲಿನಿಂದ ಕಟ್ಟಿ ಹಾಕುವ ವ್ಯರ್ಥ ಪ್ರಯತ್ನವೊಂದು ನಿನ್ನೆ ರಾತ್ರಿ ನಡೆದುಹೋಗಿದೆ. ಹೇಡಿಗಳಂತೆ ಮುಖ ಮುಚ್ಚಿಕೊಂಡು ಬಂದ ಅರೆಕಾಲಿಕ ಭಯೋತ್ಪಾದಕರು ಜಯಕಿರಣ ಹಾಗೂ ಕನ್ನಡಪ್ರಭ ಪತ್ರಿಕೆಗಳ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿಯ ಉದ್ದೇಶ ಸಾಧನೆ ಏನೆನ್ನುವುದು ಸ್ವತ: ದಾಳಿ ನಡೆಸಿದ ಹೇತ್ಲಾಂಡಿಗಳಿಗೇ ಸರಿಯಾಗಿ ಗೊತ್ತಿರಲಿಕ್ಕಿಲ್ಲ. ತಾವು ನಡೆಸಿದ ಐದು ನಿಮಿಷದ ಗೌಜಿ ಗದ್ದಲದಿಂದಲೇ ಲೋಕದ ಪತ್ರಿಕೆಗಳನ್ನೆಲ್ಲಾ ತಾವು ನಂಬಿರುವ ಕೊಳಚೆ ದಾರಿಯಲ್ಲೇ ನಡೆಸುತ್ತೇವೆ ಎನ್ನುವುದು ಇವರ ಭ್ರಮೆ.
ಪತ್ರಿಕೆಯೊಂದರಲ್ಲಿ ಪ್ರಕಟವಾದ ಲೇಖನವೊಂದರ ಬಗ್ಗೆ ವಿವಾದಗಳೆದ್ದರೆ ಅಥವಾ ಅಭಿಪ್ರಾಯ ಭೇದವಿದ್ದರೆ, ಅದರ ಸತ್ಯಾ ಸತ್ಯತೆಯನ್ನು ಪರೀಕ್ಷಿಸಲು ಅಥವಾ ಕ್ರಮಕೈಗೊಳ್ಳಲು ಸಾಂವಿಧಾನಿಕ ಕ್ರಮಗಳಿವೆ. ಆದರೆ ಇಂಥ ಶಿಷ್ಟ ವಿಚಾರಗಳನ್ನು ವಿಧ್ವಂಸಕ ಕೃತ್ಯಕ್ಕೆ ಮುಂದಾಗುವ ಮತಿಭ್ರಮಿತರಿಗೆ ತಿಳಿ ಹೇಳುವುದು ಕೋಣನ ಮುಂದೆ ಕಿನ್ನರಿ ಬಾರಿಸಿದಂತಾಗುತ್ತದೆ. ಆದರೆ ಪ್ರಸಕ್ತ ಪರಿಸ್ಥಿತಿಯನ್ನು ಅವಲೋಕಿಸಿದಾಗ ಕಿನ್ನರಿ ಬಾರಿಸುವುದಕ್ಕಿಂತ ಕೋಣನ ಕೊಂಬು ಮುರಿಯುವುದರಲ್ಲೇ ಸಮಾಜ ಹಿತವಿದೆ ಎನ್ನುವ ವಾದಕ್ಕೆ ಬಲ ಬರುತ್ತಿದೆ. ಜಿಲ್ಲೆಯ ಪೊಲೀಸರು ಪ್ರಯತ್ನಪಟ್ಟರೆ ಇದೊಂದು ದೊಡ್ಡ ಕೆಲಸವೂ ಅಲ್ಲ. ಪತ್ರಕರ್ತರ ಮೇಲೆ ಪೆಟ್ರೋಲ್‌ ಬಾಂಬ್‌ ಎಸೆದು ಅವರ ವಿಚಾರಧಾರೆಯನ್ನು ಸುಟ್ಟು ಹಾಕುತ್ತೇವೆ ಎನ್ನುವುದು ಎಂಥ ಹುಚ್ಚಾಟ? ನಿನ್ನೆ ನಡೆದ ಘಟನೆಯಿಂದ ಪತ್ರಕರ್ತ ಸಮೂಹದ ನೈತಿಕ ಸ್ಥೈರ್ಯ ಹಾಗೂ ವಿಚಾರ ಪ್ರತಿಪಾದನೆಯ ಉಮೇದು ಹೆಚ್ಚುತ್ತದೆಯೇ ಹೊರತು ಖಂಡಿತಾ ಕುಗ್ಗುವುದಿಲ್ಲ. ಪತ್ರಕರ್ತರ ವೈಚಾರಿಕತೆ ಅಡಗಿರುವುದು ಅವರ ಬುದ್ಧಿಯಲ್ಲಿಯೇ ಹೊರತು ಒಡೆದು ಪುಡಿ ಮಾಡಿದ ಕಂಪ್ಯೂಟರ್‌ಗಳಲ್ಲಿ ಅಲ್ಲ ಎನ್ನುವುದನ್ನು ಈ ಮೊಣಕಾಲು ಬುದ್ಧಿಯ ಪಾತಕಿಗಳು ಅರ್ಥ ಮಾಡಿಕೊಳ್ಳಬೇಕು.
ಪ್ರತಿಯೊಂದು ಪತ್ರಿಕೆಗೂ ಪತ್ರಿಕಾ ಧರ್ಮ ಪಾಲನೆಯ ಜೊತೆಗೆ ಅದರದ್ದೇ ಆದ ನಿಲುವುಗಳಿರುತ್ತದೆ. ಈ ನಿಟ್ಟಿನಲ್ಲಿ `ಜಯಕಿರಣ' ಪತ್ರಿಕೆಯ ನಿಲುವಿನ ಬಗ್ಗೆ ಹೇಳುವುದಾದರೆ ಪತ್ರಿಕೆ ಆರಂಭವಾದ ದಿನದಿಂದಲೂ ನಾವು ಜಾತ್ಯತೀತ ಮನೋಭಾವದವರೆನ್ನುವುದನ್ನು ಸಾಬೀತು ಪಡಿಸಿದ್ದೇವೆ. ಆದ್ದರಿಂದ ಯಾವುದೇ ಒಂದು ನಿರ್ದಿಷ್ಠ ಜಾತಿಯ ಕಡೆಗಾಗಲೀ ಅಥವಾ ವಿಚಾರಧಾರೆಯ ಕಡೆಗಾಗಲೀ ಬಲವಂತವಾಗಿ ಪತ್ರಿಕೆಯನ್ನು ವಾಲಿಸುವ ಪ್ರಯತ್ನವೇನಾದರೂ ನಡೆಯುವುದಾದರೆ ಅದನ್ನು ಕೈಬಿಡುವುದೇ ಒಳ್ಳೆಯದು ಎನ್ನುವುದು ನಮ್ಮ ಪ್ರಾಮಾಣಿಕ ಸಲಹೆ. ಏಕೆಂದರೆ ನಮ್ಮ ನಿಲುವು ಅಚಲ. ಜೊತೆಗೆ ಸಹಸ್ರಾರು ಓದುಗರ ಬೆಂಬಲ ನಮಗೆ ಶ್ರೀ ರಕ್ಷೆಯಾಗಿದೆ. ದಾಳಿ ನಡೆದ ನಂತರ ನಾವು ಸ್ವೀಕರಿಸಿದ ಓದುಗರ ಬೆಂಬಲದ ಕರೆಗಳೇ ಇದಕ್ಕೆ ಸಾಕ್ಷಿ ನುಡಿಯುತ್ತದೆ. ಇನ್ನು ಉಳಿದಿರುವುದು ಈ ವಿಧ್ವಂಸಕ ಕೃತ್ಯ ನಡೆಸಿದ ಕ್ರಿಮಿಗಳ ಬಂಧನ ಪ್ರಕ್ರಿಯೆ ಮಾತ್ರ. ಶೀಘ್ರದಲ್ಲೇ ಅದೂ ನಡೆಯುತ್ತದೆನ್ನುವ ವಿಶ್ವಾಸ ಪತ್ರಕರ್ತ ಸಮೂಹಕ್ಕಿದೆ.


ಜಯಕಿರಣ

No comments: