VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Apr 6, 2010

ಛತ್ತೀಸಗಢದಲ್ಲಿ ನಕ್ಸಲರಿಂದ 70 ಪೊಲೀಸರ ಮಾರಣಹೋಮ

ಮಾವೋವಾದಿಗಳನ್ನು ಪುಕ್ಕಲರು ಎಂದು ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಜರೆದ ಬೆನ್ನಿಗೆ ಛತ್ತೀಸ್‌ಗಢದಲ್ಲಿನ ದಂತೇವಾಡದ ಸಿಆರ್‌ಪಿಎಫ್ ಭದ್ರತಾ ಸಿಬ್ಬಂದಿಗಳ ಮೇಲೆ ಗುಂಡಿನ ಮಳೆಗರೆದಿರುವ ನಕ್ಸಲರು 70 ಪೊಲೀಸರ ಮಾರಣಹೋಮ ನಡೆಸಿದ್ದಾರೆ.

ದಂತೇವಾಡದ ನಕ್ಸಲ್ ಬಾಧಿತ ಮುಕ್ರಾನಾ ಅರಣ್ಯ ಪ್ರದೇಶದಲ್ಲಿನ ರಸ್ತೆ ತೆರೆಯುವ ಕರ್ತವ್ಯ ಮುಗಿಸಿ ವಾಪಸ್ ಬರುವ ಹೊತ್ತಿಗೆ ಬೆಳಿಗ್ಗೆ ಆರರಿಂದ ಏಳು ಗಂಟೆಯ ನಡುವೆ ಸಿಆರ್‌ಪಿಎಫ್ ಪಡೆಯ ಮೇಲೆ ದಾಳಿ ನಡೆಸಲಾಗಿದೆ.

ಸುಮಾರು 300ರಷ್ಟಿದ್ದ ನಕ್ಸಲರು ಸಿಆರ್‌ಪಿಎಫ್ ತಂಡದ ಮೇಲೆ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ 73 ಸಿಬ್ಬಂದಿಗಳು ವಾಹನದಲ್ಲಿದ್ದರು. ಅವರಲ್ಲಿ 70 ಮಂದಿ ಸಾವನ್ನಪ್ಪಿರುವುದು ಖಚಿತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಟ್ಟಗುಡ್ಡ ಪ್ರದೇಶದಲ್ಲಿ ಮರಗಳ ಎಡೆಯಲ್ಲಿ ಅಡಗಿ ಕುಳಿತಿದ್ದ ನಕ್ಸಲರು ಮೊದಲು ಸಿಆರ್‌ಪಿಎಫ್ ಜವಾನರ ವಾಹನವನ್ನು ತಡೆಯಲು ನೆಲಬಾಂಬುಗಳನ್ನು ಸ್ಫೋಟಿಸಿದ್ದರು. ಬಳಿಕ ಇದ್ದಕ್ಕಿದ್ದಂತೆ ಗುಂಡಿನ ಮಳೆಗರೆದರು. ಈ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಗಳು ಕೂಡ ಪ್ರತಿ ದಾಳಿ ನಡೆಸಿದ್ದಾರೆ. ಆದರೆ ಭಾರೀ ಸಂಖ್ಯೆಯಲ್ಲಿದ್ದ ನಕ್ಸಲರು ಸಿಆರ್‌ಪಿಎಫ್ ಸಿಬ್ಬಂದಿಗಳನ್ನು ಕೊಂದು ಹಾಕಿದರು ಎಂದು ವರದಿಗಳು ಹೇಳಿವೆ.

ತಕ್ಷಣವೇ ನಾವು ಹೆಲಿಕಾಫ್ಟರುಗಳ ಮೂಲಕ ಸ್ಥಳಕ್ಕೆ ಧಾವಿಸಿದ್ದೇವೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗಳಿಗೆ ದಾಖಲಿಸಿದ್ದೇವೆ ಎಂದು ಛತ್ತೀಸಗಢ ಪೊಲೀಸ್ ಮಹಾ ನಿರ್ದೇಶಕ ವಿಶ್ವ ರಂಜನ್ ತಿಳಿಸಿದ್ದಾರೆ.

ಸಿಆರ್‌ಪಿಎಫ್ ಸಿಬ್ಬಂದಿಗಳು ತೆರಳುತ್ತಿದ್ದ ವಾಹನವನ್ನು ನಕ್ಸಲೀಯರು ಸ್ಫೋಟಿಸಿದ್ದರಿಂದಾಗಿ ದುರ್ಘಟನೆ ಸಂಭವಿಸಿದೆ ಎಂದು ದಂತೇವಾಡ ಪೊಲೀಸ್ ವರಿಷ್ಠಾಧಿಕಾರಿ ಅಮರೇಶ್ ಮಿಶ್ರಾ ತಿಳಿಸಿದ್ದಾರೆ.

ಜಿಲ್ಲೆಯ ಚಿಂತಾಲ್ನಾರ್ - ತಾರ್ಮೆತ್ಲಾ ಗ್ರಾಮದ ನಡುವೆ ಇಂದು ಮುಂಜಾನೆ ಈ ಘಟನೆ ನಡೆದಿದೆ. ಸಿಆರ್‌ಪಿಎಫ್, ಜಿಲ್ಲಾ ಪಡೆಗಳು ಮತ್ತು ವಿಶೇಷ ಪೊಲೀಸರ ಜಂಟಿ ತಂಡದ ಮೇಲೆ ಮಾವೋವಾದಿಗಳು ದಾಳಿ ನಡೆಸಿದ್ದಾರೆ ಎಂದು ಅವರು ವಿವರಣೆ ನೀಡಿದ್ದಾರೆ.

ಕಳೆದ ಮೂರು ದಿನಗಳಿಂದ ತಾರ್ಮೇತ್ಲಾ ಅರಣ್ಯ ಪ್ರದೇಶದಲ್ಲಿ ಈ ಜಂಟಿ ತಂಡವು ಕೂಂಬಿಂಗ್ ಕಾರ್ಯಾಚರಣೆಗಾಗಿ ಶಿಬಿರ ನಡೆಸುತ್ತಿತ್ತು. ಇದೀಗ ಅದರ ಮೇಲೆಯೇ ನಕ್ಸಲರು ಕ್ರೂರವಾದ ದಾಳಿ ನಡೆಸಿದ್ದಾರೆ.

ಚಿದಂಬರಂ ತೀವ್ರ ಆಘಾತ...
ಘಟನೆಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ಗೃಹ ಸಚಿವ ಪಿ. ಚಿದಂಬರಂ, ಇದು ಸಿಪಿಎಂ ಮಾವೋವಾದಿಗಳ ಅನಾಗರಿಕ ಸ್ವಭಾವವನ್ನು ಪ್ರದರ್ಶಿಸಿದೆ ಎಂದು ದುರ್ಘಟನೆಯನ್ನು ಖಂಡಿಸಿದ್ದಾರೆ.

ನಕ್ಸಲರು ಹೆಣೆದಿರುವ ಬಲೆಗೆ ಸಿಬ್ಬಂದಿಗಳು ಬಿದ್ದಿದ್ದಾರೆ. ಘಟನೆಯಿಂದ ತೀವ್ರ ಆಘಾತವಾಗಿದೆ ಎಂದು ಅವರು ತಿಳಿಸಿದ್ದಾರೆ.

ಎರಡು ದಿನಗಳ ಹಿಂದಷ್ಟೇ ಪಶ್ಚಿಮ ಬಂಗಾಲಕ್ಕೆ ಭೇಟಿ ನೀಡಿದ್ದ ಚಿದಂಬರಂ, ನಕ್ಸಲರು ಅಂಜು ಬುರುಕರು ಎಂದು ಲೇವಡಿ ಮಾಡಿದ್ದರು. ಅಲ್ಲದೆ ಹಿಂಸಾಚಾರ ಮತ್ತು ಮಾತುಕತೆ ಒಟ್ಟಿಗೆ ಸಾಗಲು ಸಾಧ್ಯವಿಲ್ಲ, ಮೊದಲು ಹಿಂಸಾಚಾರವನ್ನು ಕೈ ಬಿಡಿ. ನಂತರ ಮಾತುಕತೆಗೆ ಬನ್ನಿ ಎಂದು ಆಹ್ವಾನ ನೀಡಿದ್ದರು.

No comments: