VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Showing posts with label ಕೃಪೆ: ವೆಬ್ ದುನಿಯಾ. Show all posts
Showing posts with label ಕೃಪೆ: ವೆಬ್ ದುನಿಯಾ. Show all posts

May 30, 2010

ಚಿದಂಬರಂ ವರ್ತನೆ ಸರಿಯಿಲ್ಲ: ಮತ್ತೆ ಗುಡುಗಿದ ಪೂಜಾರಿ


ನಕ್ಸಲರ ಅಟ್ಟಹಾಸದ ಸಂದರ್ಭ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಅವರ ವರ್ತನೆ ಸರಿಯಿಲ್ಲ ಎಂದು ಎರಡು ದಿನಗಳ ಹಿಂದೆ ಕಿಡಿ ಕಾರಿದ್ದ ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರು ಮತ್ತೆ ಚಿದಂಬರಂ ಟೀಕಿಸುವ ಮೂಲಕ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಮಂಗಳೂರಿನಲ್ಲಿ ಮಾತನಾಡುತ್ತಾ, ಚಿದಂಬರಂ ವಿರುದ್ಧ ತಾನು ನೀಡಿದ ಹೇಳಿಕೆಯನ್ನು ಬಲವಾಗಿ ಸಮರ್ಥಿಸಿಕೊಂಡರು. ಸಚಿವ ಸ್ಥಾನದಲ್ಲಿರುವಾಗ ಹೊಣೆಗಾರಿಕೆ ಹೊತ್ತುಕೊಂಡು ಕಾರ್ಯ ನಿರ್ವಹಿಸಬೇಕು. ಅದು ಬಿಟ್ಟು ನನಗೆ ಲಿಮಿಟೇಶನ್ ಇದೆ ಎಂದು ಹೇಳುವ ಮೂಲಕ ಕೇಂದ್ರ ಗೃಹ ಸಚಿವ ಚಿದಂಬರಂ ಪ್ರಧಾನ ಮಂತ್ರಿ ಮೇಲೆ ಗೂಬೆ ಕೂರಿಸುವ ಯತ್ನ ಮಾಡುತ್ತಿದ್ದಾರೆ. ಇದು ಸರಿಯಲ್ಲ. ಸಚಿವರಾಗಿ ಅಧಿಕಾರದಲ್ಲಿರುವಾಗ ಸ್ವತಃ ಆಕ್ಟ್ ಮಾಡಬೇಕು ಎಂದು ಪೂಜಾರಿ ನುಡಿದರು.

ದೇಶಾದ್ಯಂತ ನಕ್ಸಲರು ಬಡವರನ್ನು ಹೀನಾಯ ರೀತಿಯಲ್ಲಿ ಸಾಯಿಸುತ್ತಿರುವುದು ಖಂಡನೀಯ. ನಕ್ಸಲರ ವಿರುದ್ಧ ಕೇಂದ್ರ ಮತ್ತು ರಾಜ್ಯ ಸರಕಾರ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು. ನಕ್ಸಲರ ದಮನಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಆಗದಿದ್ದರೆ ಚಿದಂಬರಂ ರಾಜೀನಾಮೆ ನೀಡುವುದು ಉತ್ತಮ ಎಂದು ಪೂಜಾರಿ ಉಡುಪಿಯಲ್ಲಿ ಆಗ್ರಹಿಸಿದ್ದರು.

ಮಂಗಳೂರು ಬಜ್ಪೆ ವಿಮಾನ ನಿಲ್ದಾಣದಲ್ಲಿ ನಡೆದ ದುರಂತರದಲ್ಲಿ ಮೃತಪಟ್ಟವರಿಗೆ ಕೇಂದ್ರ ಸರಕಾರ ಘೋಷಿಸಿರುವ ಪರಿಹಾರ ಮೊತ್ತ ಹೆಚ್ಚಿಸಬೇಕು ಎಂದು ಪೂಜಾರಿ ಈ ಸಂದರ್ಭ ಆಗ್ರಹಿಸಿದರು. ಕೇಂದ್ರ ಈಗಾಗಲೇ ಎರಡು ಲಕ್ಷ ರೂ. ಮೊತ್ತ ಘೋಷಿಸಿದ್ದು, ಅದನ್ನು ಇನ್ನಷ್ಟು ಹೆಚ್ಚಿಸಬೇಕು ಎಂದು ಸೋನಿಯಾ ಗಾಂಧಿ ಹಾಗೂ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿದ್ದೇನೆ. ಈ ಕುರಿತು ಸಂಸದ ಆಸ್ಕರ್ ಫರ್ನಾಂಡಿಸ್ ಕೂಡ ಕೇಂದ್ರದ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದರು.

ವಿಮಾನಯಾನ ಅಂತಾರಾಷ್ಟ್ತ್ರೀಯ ಒಪ್ಪಂದ ಪ್ರಕಾರ ಪ್ರತಿಯೊಬ್ಬ ಪ್ರಯಾಣಿಕರಿಗೂ 1,65,000 ಡಾಲರ್ ಅಂದರೆ ಸುಮಾರು 76 ಲಕ್ಷ ರೂ. ಪರಿಹಾರ ನೀಡಬೇಕು. ಅದರಂತೆ ಗರಿಷ್ಠ ಮೊತ್ತದ ಪರಿಹಾರ ನೀಡಬೇಕು ಎಂದು ಅವರು ಹೇಳಿದರು.

ಮಾವೋ ಟೆರರ್: ಅಪ್ಪಿಕೊಂಡೇ ಪರಲೋಕ ಸೇರಿದ ಅವಳಿಗಳು!


ನಕ್ಸಲರ ರಕ್ತಪಿಪಾಸುತನಕ್ಕೆ ಬಲಿಯಾದವರು ಮುಗ್ಧ ಜನರು. ಸಾವಿನ ಸಂಖ್ಯೆಯು 115 ದಾಟಿರುವಂತೆಯೇ ಮನ ಕಲಕುವ ಕಥೆಗಳು, ಮಾವೋವಾದಿಗಳ ಹಿಂಸಾ ಪೀಡಿತ ಮನಸ್ಥಿತಿಯ ಕುರಿತ ಆಕ್ರೋಶದ ಭಾವನೆ ಎಲ್ಲೆಡೆ ವ್ಯಕ್ತವಾಗುತ್ತಿವೆ. ಮನ ಕಲಕುವ ಗಾಥೆ ಈ ಅವಳಿ ಪುಟಾಣಿಗಳದ್ದು.

ಏಳು ವರ್ಷ ಪ್ರಾಯದ ಶಿರಿನ್ ಮತ್ತು ಶರ್ಮಿನ್ ಪರಸ್ಪರರನ್ನು ಹೋಲುವ ಅವಳಿಗಳು. ರಜಾದಿನಗಳನ್ನು ಜೊತೆಯಾಗಿ ಆನಂದಿಸಲೆಂದು ಮೊತ್ತ ಮೊದಲ ಬಾರಿಗೆ ರೈಲೇರಿದ್ದ ಈ ಎರಡನೇ ತರಗತಿಯ ಅವಳಿಗಳು, ಮುಂಬಯಿಯ ಎಲಿಫೆಂಟಾ ಗುಹೆ ನೋಡಲು ಹೊರಟಿದ್ದರು. ಮಾವೋವಾದಿಗಳು ಯಾರು ಅಥವಾ ತಾವು ರಜಾದಿನಗಳ ಆನಂದ ಅನುಭವಿಸಲು ಹೊರಟಿರುವ ರೈಲನ್ನೇಕೆ ಅವರು ಗುರಿಯಾಗಿಸಬೇಕು ಎಂಬುದೇನೂ ಅವರಿಗೆ ಅರಿವಿರಲಿಲ್ಲ.

ಎಲಿಫೆಂಟಾ ಕೇವ್ಸ್‌ಗೆ ಹೋಗಿ ಜೊತೆಯಾಗಿ ಫೋಟೋ ತೆಗೆಸಬೇಕು, ಅಲ್ಲಿ ಸಂತೋಷದಿಂದ ಸುತ್ತಾಡಬೇಕು, ಆನಂದ ಪಡೆಯಬೇಕು ಎಂಬೆಲ್ಲಾ ಕನಸುಗಳನ್ನು ಕಾಣುತ್ತಲೇ ಒಬ್ಬರ ತೆಕ್ಕೆಯಲ್ಲಿ ಮತ್ತೊಬ್ಬರು ರೈಲಿನಲ್ಲಿ ಸುಖ ನಿದ್ರೆಗೆ ಜಾರಿದ್ದರು.

ಜ್ಞಾನೇಶ್ವರಿ ಎಕ್ಸ್‌ಪ್ರೆಸ್ ರೈಲಿನ ಎಸ್-4 ಕೋಚ್‌ನಲ್ಲಿ ಸಿಆರ್‌ಪಿಎಫ್ ಯೋಧರು ಈ ಪುಟಾಣಿಗಳು ಪರಸ್ಪರ ತಬ್ಬಿಕೊಂಡೇ ಚಿರನಿದ್ರೆಗೆ ಜಾರಿದ್ದ ದೃಶ್ಯವನ್ನು ಕಂಡು ದುಃಖ ತಡೆದುಕೊಳ್ಳಲಾಗಲಿಲ್ಲ! ತಮ್ಮ ಕಂದಮ್ಮಗಳಿಗೆ ರಜಾದಿನದ ಆನಂದ ಒದಗಿಸಲೆಂದು ತಾವು ದುಡಿದ ಹಣವನ್ನೆಲ್ಲಾ ಒಟ್ಟುಗೂಡಿಸಿ, ಮಕ್ಕಳೊಂದಿಗೆ ಹೊರಟಿದ್ದ ಈ ಮಕ್ಕಳ ತಂದೆ-ತಾಯಿ ಸಯ್ಯದ್ ಜಾವೇದ್ ಆಲಂ (35) ಮತ್ತು ಸಬಿಹಾ (30) ಕೂಡ ಬದುಕುಳಿಯಲಿಲ್ಲ.

ಮೊದಲು ಅವರ ಶವಗಳು ಪತ್ತೆಯಾದ ಬಳಿಕ ರೈಲಿನ ಈ ಬಂಡಿಯನ್ನು ತುಂಡರಿಸಿ ಮತ್ತಷ್ಟು ಒಳಗೆ ನೋಡಿದಾಗ, ಪುಟಾಣಿ ಕೈಗಳು, ಹಾಲು ಗಲ್ಲ ಕಂಡಿತ್ತು ಈ ಸಿಆರ್‌ಪಿಎಫ್ ಸೈನಿಕರಿಗೆ. ತಕ್ಷಣವೇ ಹೊರತೆಗೆಯುವ ಕೆಲಸವನ್ನು ಚುರುಕುಗೊಳಿಸಿದರು, ಎಲ್ಲಾದರೂ ಈ ಮಕ್ಕಳನ್ನು ಉಳಿಸಬಹುದೇ ಎಂಬ ನಿರೀಕ್ಷೆಯಲ್ಲಿ. ಗ್ಯಾಸ್ ಕಟ್ಟರ್ ಹಿಡಿದು ಮುಂದುವರಿದಾಗ, ಕಬ್ಬಿಣದ ತಗಡು ತುಂಡರಿಸಿ ನೋಡಿದಾಗ, ದೃಶ್ಯ ನೋಡಿ ಆಘಾತಗೊಂಡರು. ಈ ಪುಟಾಣಿಗಳು ಪರಸ್ಪರರನ್ನು ಬಿಗಿದಪ್ಪಿಕೊಂಡಿದ್ದರು. ಒಬ್ಬಳ ತಲೆ ಮತ್ತೊಬ್ಬಳ ಎದೆಯಲ್ಲಿ ಹುದುಗಿತ್ತು. ಅವರಿಬ್ಬರೂ ನಿದ್ರಿಸುತ್ತಿದ್ದಂತೆಯೇ ತೋರುತ್ತಿತ್ತು, ಆದರೆ ಮುಖದಲ್ಲಿ ರಕ್ತ! ಈ ಮೃತದೇಹಗಳನ್ನು ಹೊರಗೆತೆಯಲು ಜವಾನರು ಈ ಮಕ್ಕಳನ್ನು ಬೇರ್ಪಡಿಸಲೇಬೇಕಿತ್ತು. ಎಂಥಾ ಹೃದಯ ವಿದ್ರಾವಕ ಕ್ಷಣಗಳಾಗಿತ್ತವು!

ನಕ್ಸಲ್ ಹಿಂಸಾ ವಾದಕ್ಕೆ, ರಕ್ತ ಪಿಪಾಸುತನಕ್ಕೆ ಧಿಕ್ಕಾರವಿರಲಿ!

ಚಿನ್ನದ ಬೆಲೆ ಗಗನಕ್ಕೆ, 10 ಗ್ರಾಂ ಬೆಲೆ 18,790 ರೂ!

ಮದುವೆ ಸೀಸನ್‌ನಿಂದಾಗಿ ಸ್ಟಾಕಿಸ್ಟುಗಳು ಮತ್ತು ಆಭರಣ ವ್ಯಾಪಾರಿಗಳಿಂದ ಭರ್ಜರಿ ಖರೀದಿಯಿಂದ ಉತ್ತೇಜನ ಪಡೆದ ಚಿನ್ನದ ದರವು ಶನಿವಾರ ಬುಲಿಯನ್ ಮಾರುಕಟ್ಟೆಯಲ್ಲಿ ಗ್ರಾಂಗೆ 115 ರೂ. ಮೇಲಕ್ಕೇರಿ, ಹತ್ತು ಗ್ರಾಂಗೆ 18.790 ರೂ. ತಲುಪಿತು.

ವಿದೇಶೀ ಮಾರುಕಟ್ಟೆಯಲ್ಲಿ ಔನ್ಸ್‌ಗೆ 2.30 ಡಾಲರ್ ಹೆಚ್ಚಿಸಿಕೊಂಡ ಚಿನ್ನವು 1214.30 ಡಾಲರ್‌ಗೆ ಏರಿತು.

ಸ್ಟ್ಯಾಂಡರ್ಡ್ ಚಿನ್ನ ಮತ್ತು ಆಭರಣ ಚಿನ್ನದ ದರವು ತಲಾ 115 ರೂ. ಏರಿಕೆ ಕಂಡು ಹತ್ತು ಗ್ರಾಂಗೆ ಅನುಕ್ರಮವಾಗಿ 18,790 ರೂ. ಮತ್ತು 18,640 ರೂ.ಗೆ ಏರಿತು. ಸವರಿನ್ ಚಿನ್ನದ ದರವು ಕೂಡ 50 ರೂ. ಏರಿಕೆ ಕಂಡು ಎಂಟು ಗ್ರಾಂಗೆ 14,600 ರೂ. ತಲುಪಿತು.

ಮದುವೆ ಸೀಸನ್‌ನಿಂದಾಗಿ ತೀವ್ರ ಮೇಲಕ್ಕೇರಿದ್ದ ಚಿನ್ನದ ದರವು ಬುಧವಾರ ಹತ್ತು ಗ್ರಾಂಗೆ 18,810 ರೂ. ತಲುಪಿತ್ತು.

ವೃದ್ಧೆಯ ಕೊರಳ ಕೊಯ್ದ ದುರಳರು

ಬೆಂಗಳೂರು, ಮೇ.30: ಇತ್ತೀಚೆಗೆ ಕೋಣನಕುಂಟೆ ಬಳಿ ಒಂಟಿ ಮಹಿಳೆ ಕೊಲೆಯಾದ ಬೆನ್ನಲ್ಲೇ ನಗರದಲ್ಲಿ ಮತ್ತೆ ಒಂಟಿ ಮಹಿಳೆಯೊಬ್ಬರ ಹತ್ಯೆ ನಡೆದಿದೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ 70 ವಯಸ್ಸಿನ ವೃದ್ಧೆ ಜಯಲಕ್ಷ್ಮೀ ಎಂಬುವವರ ಕೊರಳ ಕುಯ್ದು ಹತ್ಯೆ ಮಾಡಿ, ಚಿನ್ನದ ಸರ ಎಗರಿಸಿಕೊಂಡು ಹೋಗಿದ್ದಾರೆ.

ಘಟನೆ ವಿವರ: ಜಯಲಕ್ಷ್ಮಿ ಅವರ ಟೆಕ್ಕಿ ಮಗ ಮತ್ತು ಸೊಸೆ ಮನೆಯಲ್ಲಿ ಇಲ್ಲದ ಸಮಯದಲ್ಲಿ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಮಗ ಮತ್ತು ಸೊಸೆ ಬೆಳಗ್ಗೆ 11ಕ್ಕೆ ಕನಕಪುರ ರಸ್ತೆಯಲ್ಲಿ ಇರುವ ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್‌ಗೆ ಹೋಗಿದ್ದರು. ಮನೆಯಲ್ಲಿ ಜಯಲಕ್ಷ್ಮೀ ಒಬ್ಬರೇ ಇದ್ದರು. ಮಗ ಮತ್ತು ಸೊಸೆ ರಾತ್ರಿ ಮನೆಗೆ ಬಂದಾಗ ಇಬ್ಬರು ಮನೆಯೊಳಗಿಂದ ಹೊರಕ್ಕೆ ಓಡಿ ಹೋಗುತ್ತಿದ್ದನ್ನು ಕಂಡು ಸಹಾಯಕ್ಕೆ ನೆರೆಮನೆ ಅವರನ್ನು ಕೂಗಿದ್ದಾರೆ.

ದುಷ್ಕರ್ಮಿಗಳಲ್ಲಿ ಒಬ್ಬ ಓಡಿ ಹೋಗುವಾಗ ಸಿಕ್ಕಿ ಬಿದ್ದಿದ್ದು, ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಆರೋಪಿಯನ್ನು ಚೋಟು ಎಂದು ಗುರುತಿಸಲಾಗಿದೆ. ಪಕ್ಕದ ಅಪಾರ್ಟ್‌ಮೆಂಟ್‌ನಲ್ಲಿ ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಿರುವವರ ಕೃತ್ಯ ಇದು ಎಂದು ಶಂಕಿಸಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಕೆಲವರಿಗೆ ನಮ್ಮ ಅಭಿವೃದ್ದಿ ಸಹಿಸಲು ಆಗುತ್ತಿಲ್ಲ: ಸಿ.ಟಿ.ರವಿ

ಅಭಿವೃದ್ದಿ ಮೂಲಕ ಜನರ ಮನಸ್ಸು ಗೆಲ್ಲುವ ತಮ್ಮ ವಿಶ್ವಾಸದ ರಾಜಕಾರಣವನ್ನು ಕ್ಷೇತ್ರದ ಕೆಲವರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ ಎಂದು ಶಾಸಕ ಸಿ.ಟಿ.ರವಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಡೆದಾಳುವ ನೀತಿ ಅನುಸರಿಸುತ್ತಿದ್ದವರಿಗೆ ತಮ್ಮ ವಿಶ್ವಾಸದ ರಾಜಕಾರಣ ನುಂಗಲಾರದ ತುತ್ತಾಗಿದೆ. ಬೀರೂರು ಕ್ಷೇತ್ರದಲ್ಲಿ 30 ವರ್ಷಗಳಿಂದ ಹೊಡೆದಾಟದ ರಾಜಕಾರಣವೇ ಇತ್ತು. ಆ ಕ್ಷೇತ್ರದ ಅನೇಕ ಪ್ರದೇಶಗಳು ತಮ್ಮ ಕ್ಷೇತ್ರ ವ್ಯಾಪ್ತಿಗೆ ಸೇರಿದ ಬಳಿಕ ಹೊಡೆದಾಟದ ರಾಜಕಾರಣ ಕೊನೆಗೊಂಡಿದೆ ಎಂದು ಜೆಡಿಎಸ್ ಮುಖಂಡರ ಟೀಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಸಖರಾಯಪಟ್ಟಣ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಹೊಡೆದಾಡಿಕೊಂಡು ಪೊಲೀಸ್ ಠಾಣೆ, ಕೋರ್ಟ್ ಮೆಟ್ಟಿಲೇರಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಅನೇಕ ಕಾರ್ಯಕರ್ತರು ಮನೆ ಹಾಳು ಮಾಡಿಕೊಂಡಿರುವ ನಿದರ್ಶನಗಳಿವೆ. ತಾವು ಶಾಸಕರಾದ ಎರಡೇ ವರ್ಷಗಳಲ್ಲಿ ದ್ವೇಷದ ರಾಜಕಾರಣ ತಪ್ಪಿ ಒಳ್ಳೆಯ ವಾತಾವರಣ ಮೂಡಿದೆ ಎಂದರು.

ಶಾಸಕರ ಉಪಟಳ, ಭ್ರಷ್ಟಾಚಾರ ಹೆಚ್ಚಿದೆ ಎನ್ನುವವರು ನಿರ್ದಿಷ್ಟ ದೂರು ಸಲ್ಲಿಸಿದರೆ ಯಾವುದೇ ತನಿಖೆಗೆ ಪಕ್ಷದ ಹಾಗೂ ತಮ್ಮ ಸಹಕಾರ ಇದ್ದೇ ಇರುತ್ತದೆ. ಅನಗತ್ಯವಾಗಿ ತಪ್ಪು ಮಾಹಿತಿ ನೀಡುವ ಕೆಲಸ ಮಾಡಬಾರದು ಎಂದು ಜೆಡಿಎಸ್ ಮುಖಂಡರಿಗೆ ಕಿವಿಮಾತು ಹೇಳಿದರು.

ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್ ಜತೆ ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿಲ್ಲ. ಕೇವಲ ತಂತ್ರಗಾರಿಕೆ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ತಾಲೂಕು ಕ್ಷೇತ್ರದಿಂದ ರ್ಸ್ಪಸಿದ್ದವರಲ್ಲಿ ಉತ್ತಮರೆಂಬ ಕಾರಣಕ್ಕೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಲ್. ಮೂರ್ತಿಯನ್ನು ಬಿಜೆಪಿ ಬೆಂಬಲಿಸಿತ್ತು. ಬ್ಯಾಂಕ್ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಹೊಂದಾಣಿಕೆ ಆಗಿತ್ತು. ತರೀಕೆರೆ ಮತ್ತು ಶೃಂಗೇರಿ ತಾಲೂಕುಗಳಲ್ಲಿ ಈ ಹೊಂದಾಣಿಕೆ ನಡುವೆ ತಮ್ಮ ಪಕ್ಷದ ಅಭ್ಯರ್ಥಿಗಳು ಗೆದ್ದಿದ್ದರೆ, ಕಡೂರು ತಾಲೂಕಿನಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಬೆಳ್ಳಿ ಪ್ರಕಾಶ್ ಒಂದು ಮತದ ಅಂತರದಿಂದ ಸೋತಿದ್ದಾರೆ. ಸ್ವ ಸಾಮರ್ಥ್ಯದಿಂದ ಬೆಳೆದಿರುವ ತಮ್ಮ ಪಕ್ಷಕ್ಕೆ ಪರಾವಲಂಬಿ ರಾಜಕಾರಣದಲ್ಲಿ ನಂಬಿಕೆ ಇಲ್ಲ ಎಂದರು.

ಪ್ರವಾದಿಗೆ ಅಗೌರವ, ಬಾಂಗ್ಲಾದಲ್ಲಿ ಫೇಸ್‌ಬುಕ್‌ಗೇ ನಿಷೇಧ!

ಪಾಕಿಸ್ತಾನದ ನಂತರ ಇದೀಗ ಬಾಂಗ್ಲಾ ದೇಶ ಸಾರ್ವಜನಿಕ ಸಂಪರ್ಕ ತಾಣವಾದ ಫೇಸ್‌ಬುಕ್ ಅನ್ನು ರಾಷ್ಟ್ರಾದ್ಯಂತ ನಿಷೇಧಿಸಿದೆ. ಪ್ರವಾದಿ ಮಹಮ್ಮದ್ ಪೈಗಂಬರ್ ಹಾಗೂ ದೇಶದ ನಾಯಕರನ್ನು ಅಗೌರವವಾಗಿ ಅಸಹ್ಯಕರ ರೀತಿಯಲ್ಲಿ ವ್ಯಂಗ್ಯ ವ್ಯಕ್ತಿ ಚಿತ್ರ ಬಿಡಿಸಿದ ಕಾರಣಕ್ಕಾಗಿ ಈ ಸಾರ್ವಜನಿಕ ಸಂಪರ್ಕ ತಾಣವನ್ನೇ ಬ್ಲಾಕ್ ಮಾಡಲಾಗಿದೆ.

ಆದರೂ ಇನ್ನೂ ಯಾವುದೇ ಅಧಿಕೃತ ಹೇಳಿಕೆಗಳನ್ನು ನೀಡದಿದ್ದರೂ, ಬಾಂಗ್ಲಾ ದೇಶದ ಪತ್ರಿಕೆಗಳು ಉನ್ನತ ಮೂಲಗಳ ಹೇಳಿಕೆಗಳನ್ನು ದಾಖಲಿಸಿದ್ದು, ತಮ್ಮ ಪತ್ರಿಕೆಗಳಲ್ಲಿ ಪ್ರಕಟಿಸಿವೆ.

ಅಧಾರ್ಮಿಕವಾದ, ಹಾಗೂ ಅಶ್ಲೀಲಕರ ಚಿತ್ರಗಳ ಲಿಂಕ್‌ಗಳನ್ನು ಈ ಸಂಪರ್ಕ ತಾಣಗಳಲ್ಲಿ ಇತ್ತೀಚೆಗೆ ಪೋಸ್ಟ್ ಮಾಡುತ್ತಿರುವುದು ಹೆಚ್ಚಾಗಿದೆ. ಹೀಗಾಗಿ ತಾತ್ಕಾಲಿಕವಾಗಿ ಫೇಸ್‌ಬುಕ್‌ನನ್ನೇ ಬಾಂಗ್ಲಾದೇಶದೊಳಗೆ ಬ್ಲಾಕ್ ಮಾಡಲಾಗಿದೆ. ಆದರೆ, ಈ ಬಗ್ಗೆ ಇನ್ನೂ ಸರ್ಕಾರ ಅಧಿಕೃತವಾಗಿ ಮುಂದಿನ ಹೆಜ್ಜೆಯಿಟ್ಟಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.

ಆಂಟಿ ಇಸ್ಲಾಮಿಕ್ ಚಟುವಟಿಕೆಗಳೂ ಕೂಡಾ ಈ ಸಂಪರ್ಕ ತಾಣದಲ್ಲಿ ಹೆಚ್ಚಾಗುತ್ತಿದ್ದು, ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಹೇಯ ಕೃತ್ಯಗಳನ್ನು ಮಾಡಲಾಗುತ್ತಿದೆ. ಇವೆಲ್ಲವೂ ಸೈಬರ್ ಕ್ರೈಂ ಆಗಿದ್ದು, ಇಂತಹ ಕೆಲಸ ಮಾಡುವ ಮಂದಿ ಶಿಕ್ಷಾರ್ಹರಾಗಿತ್ತಾರೆ. ಕೇವಲ ಪ್ರವಾದಿ ಮಹಮ್ಮದ್ ಮಾತ್ರವಲ್ಲದೆ, ದೇಶದ ಪ್ರತಿಷ್ಠಿತ ನಾಯಕರನ್ನೂ ಹೇಯವಾಗಿ ಚಿತ್ರಿಸಲಾಗುತ್ತಿದ್ದು, ಇವೆಲ್ಲವಕ್ಕೂ ಕಡಿವಾಣ ಹಾಕಲು ದೇಶದೊಳಗೆ ಈ ವೆಬ್‌ಸೈಟನ್ನೇ ಬ್ಲಾಕ್ ಮಾಡಲಾಗಿದ್ದು, ಇದನ್ನು ತೆರೆಯಲು ಸಾಧ್ಯವಾಗುತ್ತಿಲ್ಲ.

ಆದರೆ ಢಾಕಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಫೇಸ್‌ಬುಕ್ ಸಂಪರ್ಕ ತಾಣವನ್ನು ನಿಷೇಧಿಸಿರುವುದಕ್ಕೆ ಭಾರೀ ಪ್ರತಿಭಟನೆ ನಡೆಸುತ್ತಿದ್ದು, ಸರ್ಕಾರ, ಫೇಸ್‌ಬುಕ್‌ನಲ್ಲಿರುವ ಎಲ್ಲರ ವಿರುದ್ಧ ಗಧಾ ಪ್ರಹಾರ ನಡೆಸಬಾರದು. ಉತ್ತಮ ಅಭ್ಯಾಸಕ್ಕಾಗಿ ಫೇಸ್‌ಬುಕ್ ಬಳಸುವವರಿಗೂ ಈ ತೈಣವನ್ನೇ ಬ್ಲಾಕ್ ಮಾಡುವ ಮೂಲಕ ಶಿಕ್ಷೆ ನೀಡಲಾಗಿದೆ. ದಯವಿಟ್ಟು, ಇಂತಹ ಕೃತ್ಯ ನಡೆಸುವವರ ಮೇಲೆ ಕ್ರಮ ಕೈಗೊಂಡು ಅಥವರ ಪ್ರೊಫೈಲ್‌ಗಳಿಗೆ ಮಾತ್ರ ಕ್ರಮ ಕೈಗೊಳ್ಳಿ ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ಕೇಂದ್ರದ ನೆರವು ಸಿಕ್ಕರೆ ರಾಜ್ಯದ ಪ್ರಗತಿ: ಖರ್ಗೆ

ಹಣಕಾಸು ಸಚಿವ ಪ್ರಣಬ್ ಮುಖರ್ಜಿ ನೆರವಿದ್ದರೆ ರಾಜ್ಯಕ್ಕೆ ನಾನು ಎಷ್ಟು ಬೇಕಾದರೂ ಸೌಲಭ್ಯ ನೀಡಬಲ್ಲೆ. ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಪ್ಯಾಕೇಜ್ ನೀಡುವ ಅಗತ್ಯ ಇದೆ ಎಂದು ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಪ್ರಣಬ್‌ರನ್ನು ವೇದಿಕೆ ಮೇಲೆ ಮನವಿ ಮಾಡಿದ ಸನ್ನಿವೇಶ ಗುಲ್ಬರ್ಗದಲ್ಲಿ ನಡೆಯಿತು.

ಗುಲ್ಬರ್ಗದಲ್ಲಿ ನಡೆದ ಇಎಸ್ಐಸಿ ವೈದ್ಯಕೀಯ ಶಿಕ್ಷಣ ಸಂಕೀರ್ಣಣದ ಅಡಿಗಲ್ಲು ಸಮಾರಂಭದಲ್ಲಿ ಮಾತನಾಡಿದ ಅವರು, ಈ ಭಾಗ ಹಿಂದುಳಿದ ಪ್ರದೇಶವಾಗಿದೆ. ಅನ್ಯ ರಾಜ್ಯಗಳಲ್ಲಿ ಹಿಂದುಳಿದ ಪ್ರದೇಶಗಳಿಗೆ ವಿಶೇಷ ಪ್ಯಾಕೇಜ್ ನೀಡಲಾಗಿದೆ. ಅಂಥ ಪ್ಯಾಕೇಜನ್ನು ಇಲ್ಲಿಯೂ ನೀಡಬೇಕು ಎಂದು ಅವರು ಹಣಕಾಸು ಸಚಿವರಿಗೆ ಮನವಿ ಮಾಡಿದರು.

ಅಸಂಘಟಿತ ಕಾರ್ಮಿಕರ ಉದ್ದಾರಕ್ಕೆ ಐದು ಸಾವಿರ ಕೋಟಿ ರೂ. ಬೇಕು ಎಂದು ನಾನು ಮನವಿ ಮಾಡಿದ್ದೆ. ಸಧ್ಯಕ್ಕೆ ಅವರು ಒಂದು ಸಾವಿರ ಕೋಟಿ ರೂ.ವನ್ನು ಬಜೆಟ್ಟಿನಲ್ಲಿ ಒದಗಿಸಿದ್ದಾರೆ. ಬೀಡಿ ಕಾರ್ಮಿಕರಿಗೆ ಅಗತ್ಯವಾಗಿರುವ 400 ಕೋಟಿ ರೂ.ವನ್ನು ನೀಡುವಂತೆ ಕೋರಿದಾಗ ತಕ್ಷಣವೇ ಬಿಡುಗಡೆ ಮಾಡಿದ್ದಾರೆ. ಹೀಗೆ ಅನೇಕ ರೀತಿಯಲ್ಲಿ ಅವರು ನನ್ನ ಖಾತೆಗೆ ಸಹಾಯ ಮಾಡುತ್ತಿದ್ದಾರೆ. ಇನ್ನೂ ಹಲವು ಸಮಸ್ಯೆಗಳು ನನ್ನ ಬಳಿ ಇವೆ. ಅವುಗಳನ್ನು ತೆಗೆದುಕೊಂಡು ತಮ್ಮ ಬಳಿ ಬರುವೆ ಎಂದು ಅವರು ಇದೇ ಸಂದರ್ಭದಲ್ಲಿ ಖರ್ಗೆ ತಿಳಿಸಿದರು.

ಅಮೆರಿಕದಲ್ಲೂ ಮಕ್ಕಳು ಇಂಗ್ಲೀಷಿನಲ್ಲಿ ಡುಮ್ಕಿ!

ಭಾರತದಂತಹ ಬಹುಭಾಷಾ ರಾಷ್ಟ್ರಗಳಲ್ಲಿ ಇಂಗ್ಲೀಷಿನಲ್ಲಿ ಮಕ್ಕಳು ಡುಮ್ಕಿ ಹೊಡೆಯುವುದು ವಿಶೇಷವೇನಲ್ಲ. ಯಾಕೆಂದರೆ ಎಷ್ಟಾದರೂ, ಭಾರತೀಯರಿಗೆ ಇಂಗ್ಲೀಷ್ ಭಾಷೆ ಪರದೇಶದ ಭಾಷೆಯೇ. ಆದರೆ ಅಮೆರಿಕಾದಲ್ಲೂ ಮಕ್ಕಳು ಇಂಗ್ಲೀಷ್ ಪರೀಕ್ಷೆಯಲ್ಲಿ ಡುಮ್ಕಿ ಹೊಡೆಯುತ್ತಾರೆಂದರೆ ನಂಬುತ್ತೀರಾ?

ಹೌದು. ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಅಮೆರಿಕದ ಪ್ರತಿಷ್ಠಿತ ಕ್ಯಾಲಿಫೋರ್ನಿಯಾ ಪ್ರೌಢಶಾಲೆಯ ಶೇ.60ರಷ್ಟು ಮಕ್ಕಳು ಇಂಗ್ಲೀಷ್ ಭಾಷೆಯಲ್ಲೇ ಡುಮ್ಕಿ ಹೊಡೆದಿದ್ದಾರೆ. ವಿಶೇಷವೆಂದರೆ, ಈ ಮಕ್ಕಳುಇಂಗ್ಲೀಷ್ ಮಾತನಾಡಬಲ್ಲರು, ವ್ಯವಹರಿಸಬಲ್ಲರು. ಆದರೆ ಪರೀಕ್ಷೆಯಲ್ಲಿ ಮಾತ್ರ ಫೇಲ್!

ಅಮೆರಿಕದ ಮಕ್ಕಳು ಇಂಗ್ಲೀಷ್ ಅನ್ನು ಕಳೆದ ಆರು ವರ್ಷಗಳಿಂದ ಸತತವಾಗಿ ವ್ಯಾಸಂಗ ಮಾಡಿದ್ದರೂ ಕೂಡಾ ಇಂಗ್ಲೀಷ್ ಪ್ರಾವೀಣ್ಯದ ಪರೀಕ್ಷೆಯಲ್ಲಿ ತೇರ್ಗಡೆಯಾಗಿಲ್ಲ. ಇಂಗ್ಲೀಷ್ ಕಲಿಕೆಯಲ್ಲಿ ಹಿನ್ನಡೆ ಆಗಿರುವ ಒಂದೇ ಒಂದು ಕಾರಣದಿಂದ ಶೇ.40ರಷ್ಟು ಶಾಲೆಯ ಮಕ್ಕಲು ತಮ್ಮ ಮುಂದಿನ ವಿದ್ಯಾಭ್ಯಾಸದಿಂದ ದೂರವೇ ಉಳಿದಿದ್ದಾರೆ ಎಂದು ಸಮೀಕ್ಷೆಯೊಂದು ವರದಿ ಮಾಡಿದೆ.

ಹಾಲಪ್ಪ ದೋಷಮುಕ್ತರಾಗಿ ಹೊರಬರಲಿದ್ದಾರೆ: ರಾಘವೇಂದ್ರ ಭವಿಷ್ಯ

ರಾಜಕೀಯ ಕುತಂತ್ರಕ್ಕೆ ಸಿಲುಕಿ ಬಲಿಪಶುವಾಗಿರುವ ಮಾಜಿ ಸಚಿವ ಹರತಾಳು ಹಾಲಪ್ಪ ಅವರು ಸತ್ಯ ನಿರೂಪಿಸಿ ಪ್ರಕರಣದಿಂದ ದೋಷಮುಕ್ತರಾಗಿ ಹೊರಬರಲಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ಭವಿಷ್ಯ ನುಡಿದಿದ್ದಾರೆ.

ದಂಡಾವತಿ ಯೋಜನೆ ಆಗದಂತೆ ತಡೆಯಲು ಪರ ರಾಜ್ಯದ ರಾಜಕಾರಣಿಗಳ ಮುಖಾಂತರ ತಡೆಯೊಡ್ಡುವ ಪ್ರಯತ್ನ ಹಾಗೂ ಹಾಲಪ್ಪ ಪ್ರಕರಣದ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಕುಟುಂಬದವರು ವಿಫಲರಾಗಲಿದ್ದಾರೆ. ಹಾಲಪ್ಪ ಕಳಂಕ ಮುಕ್ತರಾಗುವುದು ಹಾಗೂ ದಂಡಾವತಿ ಯೋಜನೆ ಅನುಷ್ಠಾನಗೊಳ್ಳುವುದು ಶತಸಿದ್ಧ ಎಂದರು.

ತಾಲೂಕಿನ 39 ಗ್ರಾ.ಪಂ.ಗಳಲ್ಲಿ 23 ಬಿಜೆಪಿ ವಶವಾಗಿದ್ದು, 250 ಸದಸ್ಯರು ಜಯಗಳಿಸಿದ್ದಾರೆ. ತಾಲೂಕನ್ನು ನಂಜುಂಡಪ್ಪ ವರದಿಯಿಂದ ಹೊರತರಲು ಪಕ್ಷ ಸಂಪೂರ್ಣವಾಗಿ ತೊಡಗಿಸಿಕೊಂಡಿದೆ. ಸರಕಾರದಿಂದ ಬರುವ ಎಲ್ಲ ಸವಲತ್ತುಗಳನ್ನು ಪ್ರಥಮ ಆದ್ಯತೆ ನೀಡಿ ತಾಲೂಕಿಗೆ ತರಲಾಗುತ್ತದೆ. ಇದಕ್ಕಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸಬೇಕೆಂದು ನೂತನ ಗ್ರಾ.ಪಂ.ಸದಸ್ಯರಿಗೆ ಕಿವಿ ಮಾತು ಹೇಳಿದರು.

ರಾಜ್ಯ ಸರಕಾರದಿಂದ ಅಭಿವೃದ್ದಿ ಅನುದಾನಗಳ ಸುರಿಮಳೆಯಾಗುತ್ತಿದ್ದು, ಅವುಗಳನ್ನು ಸಮರ್ಪಕವಾಗಿ ಜನತೆಗೆ ತಲುಪಿಸಿ ರಾಮರಾಜ್ಯ ನಿರ್ಮಾಣ ಮಾಡುವ ಹೊಣೆ ಸದಸ್ಯರ ಮೇಲಿದೆ ಎಂದರು.

ಹಾಲಪ್ಪ ದೋಷಮುಕ್ತರಾಗಿ ಹೊರಬರಲಿದ್ದಾರೆ: ರಾಘವೇಂದ್ರ ಭವಿಷ್ಯ

ರಾಜಕೀಯ ಕುತಂತ್ರಕ್ಕೆ ಸಿಲುಕಿ ಬಲಿಪಶುವಾಗಿರುವ ಮಾಜಿ ಸಚಿವ ಹರತಾಳು ಹಾಲಪ್ಪ ಅವರು ಸತ್ಯ ನಿರೂಪಿಸಿ ಪ್ರಕರಣದಿಂದ ದೋಷಮುಕ್ತರಾಗಿ ಹೊರಬರಲಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ಭವಿಷ್ಯ ನುಡಿದಿದ್ದಾರೆ.

ದಂಡಾವತಿ ಯೋಜನೆ ಆಗದಂತೆ ತಡೆಯಲು ಪರ ರಾಜ್ಯದ ರಾಜಕಾರಣಿಗಳ ಮುಖಾಂತರ ತಡೆಯೊಡ್ಡುವ ಪ್ರಯತ್ನ ಹಾಗೂ ಹಾಲಪ್ಪ ಪ್ರಕರಣದ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಕುಟುಂಬದವರು ವಿಫಲರಾಗಲಿದ್ದಾರೆ. ಹಾಲಪ್ಪ ಕಳಂಕ ಮುಕ್ತರಾಗುವುದು ಹಾಗೂ ದಂಡಾವತಿ ಯೋಜನೆ ಅನುಷ್ಠಾನಗೊಳ್ಳುವುದು ಶತಸಿದ್ಧ ಎಂದರು.

ತಾಲೂಕಿನ 39 ಗ್ರಾ.ಪಂ.ಗಳಲ್ಲಿ 23 ಬಿಜೆಪಿ ವಶವಾಗಿದ್ದು, 250 ಸದಸ್ಯರು ಜಯಗಳಿಸಿದ್ದಾರೆ. ತಾಲೂಕನ್ನು ನಂಜುಂಡಪ್ಪ ವರದಿಯಿಂದ ಹೊರತರಲು ಪಕ್ಷ ಸಂಪೂರ್ಣವಾಗಿ ತೊಡಗಿಸಿಕೊಂಡಿದೆ. ಸರಕಾರದಿಂದ ಬರುವ ಎಲ್ಲ ಸವಲತ್ತುಗಳನ್ನು ಪ್ರಥಮ ಆದ್ಯತೆ ನೀಡಿ ತಾಲೂಕಿಗೆ ತರಲಾಗುತ್ತದೆ. ಇದಕ್ಕಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸಬೇಕೆಂದು ನೂತನ ಗ್ರಾ.ಪಂ.ಸದಸ್ಯರಿಗೆ ಕಿವಿ ಮಾತು ಹೇಳಿದರು.

ರಾಜ್ಯ ಸರಕಾರದಿಂದ ಅಭಿವೃದ್ದಿ ಅನುದಾನಗಳ ಸುರಿಮಳೆಯಾಗುತ್ತಿದ್ದು, ಅವುಗಳನ್ನು ಸಮರ್ಪಕವಾಗಿ ಜನತೆಗೆ ತಲುಪಿಸಿ ರಾಮರಾಜ್ಯ ನಿರ್ಮಾಣ ಮಾಡುವ ಹೊಣೆ ಸದಸ್ಯರ ಮೇಲಿದೆ ಎಂದರು.

ಕಾಳಹಸ್ತಿ ಗೋಪುರ ಅವಶೇಷಗಳಡಿಯಲ್ಲಿ ಶವ ಪತ್ತೆ!

ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಪುರಾಣ ಪ್ರಸಿದ್ಧ 500 ವರ್ಷಗಳಿಗೂ ಹಳೆಯ ಶ್ರೀಕಾಳಹಸ್ತಿ ಶಿವ ದೇವಾಲಯದ ರಾಜ ಗೋಪುರ ಕುಸಿತದ ಘಟನೆಯಲ್ಲಿ ಓರ್ವ ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕುಸಿದು ಬಿದ್ದಿರುವ ಗೋಪುರದ ಅವಸೇಷಗಳಲ್ಲಿ ಹೊರತೆಗೆಯುತ್ತಿರುವ ಸಂದರ್ಭ 40 ವರ್ಷ ಹರೆಯದ ವ್ಯಕ್ತಿಯ ಶವ ಪತ್ತೆಯಾಗಿದೆ. ಗೋಪುರ ಕುಸಿದು ಮೂರು ದಿನಗಳ ನಂತರ ಅಂದರೆ ಶನಿವಾರ ಈ ಶವ ಹೊರತೆಗೆಯಲಾಗಿದೆ.

ಮೃತನನ್ನು ಇಲ್ಲಿನ ಚಿಕ್ಕ ಹೊಟೇಲೊಂದರಲ್ಲಿ ಕೆಲಸ ಮಾಡುತ್ತಿದ್ದ ರಾಜಾ ಎಂಬಾತನ ಶವ ಎಂದು ಗುರುತಿಸಲಾಗಿದ್ದು, ಇವರು ಈಂಧ್ರದ ನೆಲ್ಲೂರು ಜಿಲ್ಲೆಯ ಪೆಲ್ಲಕ್ಕೂರು ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ.

ಗೋಪುರ ಬಿರುಕು ಬಿಡುತ್ತಿದ್ದಂತೆಯೇ 50 ಮೀಟರ್ ಅಂತರದಲ್ಲಿ ಗುರುತು ಹಾಕಲಾಗಿದ್ದ ಅಪಾಯಕಾರಿ ಸ್ಥಳದಲ್ಲೇ ಈ ಶವ ಪತ್ತೆಯಾಗಿದೆ ಎಂದು ಚಿತ್ತೂ ರು ಜಿಲ್ಲಾ ಪೊಲೀಸ್ ಅಧೀಕ್ಷಕ ರಾಮಕೃಷ್ಣ ಹೇಳಿದ್ದಾರೆ.

ಗೋಪುರ ಬಿರುಕು ಬಿಡುತ್ತಿದ್ದಂತೆಯೇ ಸುತ್ತಮುತ್ತಲಿನ ಎಲ್ಲಾ ಅಂಗಡಿಗಲು ಹಾಗೂ ಹೊಟೇಲುಗಳನ್ನು ತೆರವುಗೊಳಿಸಲಾಗಿತ್ತು. ಆದರೆ ರಾಜಾ ಮಾತ್ರ ಅಲ್ಲೇ ವಾಸವಾಗಿದ್ದರೂ, ಅದು ತಮ್ಮ ಗಮನಕ್ಕೆ ಬಂದಿಲ್ಲ ಎಂದು ದೇಗುಲ ಆಡಳಿತ ಮಂಡಳಿ ತಿಳಿಸಿದೆ.

ಏಷ್ಯಾಕಪ್ ಕ್ರಿಕೆಟ್: ಜೂ.7ರಂದು ತಂಡದ ಆಯ್ಕೆ

ಶ್ರೀಲಂಕಾದಲ್ಲಿ ಮುಂದಿನ ತಿಂಗಳು ನಡೆಯಲಿರುವ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗೆ ಭಾರತ ತಂಡದ ಆಯ್ಕೆ ಜೂ.7ರಂದು ನವದೆಹಲಿಯಲ್ಲಿ ನಡೆಯಲಿದೆ.

ಬಿಸಿಸಿಐ ಮೂಲಗಳ ಪ್ರಕಾರ, ಕೃಷ್ಣಮಾಚಾರಿ ಶ್ರೀಕಾಂತ್ ನೇತೃತ್ವದ ಆಯ್ಕೆ ಸಮಿತಿ ಪೂರ್ಣ ಸಾಮರ್ಥ್ಯದ ಸಂಡವನ್ನು ಆಯ್ಕೆ ಮಾಡಲಿದೆ. ಈಗಾಗಲೇ ಜಿಂಬಾಬ್ವೆಯಲ್ಲಿ ನಡೆಯುತ್ತಿರುವ ತ್ರಿಕೋನ ಏಕದಿನ ಸರಣಿಗೆ ಭಾರತ ಎರಡನೇ ದರ್ಜೆ ತಂಡವನ್ನು ಕಳುಹಿಸಿದೆ.

ನಾಲ್ಕು ರಾಷ್ಟ್ರಗಳು ಪಾಲ್ಗೊಳ್ಳುವ ಏಷ್ಯಾ ಕಪ್ ಟೂರ್ನಿ ಜೂ.15ರಂದು ಆರಂಭವಾಗಲಿದೆ. ಆರಂಭಿಕ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನದ ಹಣಾಹಣಿ ನಡೆಯಲಿದೆ. ಭಾರತ ಜೂ.16ರಂದು ತನ್ನ ಮೊದಲ ಪಂದ್ಯವನ್ನು ಬಾಂಗ್ಲಾದ ಎದುರು ಆಡಲಿದೆ. ಟೂರ್ನಿಯ ಫೈನಲ್ ಜೂ.24ರಂದು ನಡೆಯಲಿದೆ.

ಏಷ್ಯಾಕಪ್ ವೇಳಾಪಟ್ಟಿ
ಜೂ.15: ಶ್ರೀಲಂಕಾ- ಪಾಕಿಸ್ತಾನ
ಜೂ.16: ಭಾರತ- ಬಾಂಗ್ಲಾ
ಜೂ.18: ಶ್ರೀಲಂಕಾ- ಬಾಂಗ್ಲಾ
ಜೂ.19: ಪಾಕಿಸ್ತಾನ- ಭಾರತ
ಜೂ.21: ಪಾಕಿಸ್ತಾನ- ಬಾಂಗ್ಲಾ
ಜೂ.22: ಭಾರತ- ಶ್ರೀಲಂಕಾ
ಜೂ.24: ಫೈನಲ್

ಟೀಂ ಇಂಡಿಯಾ ಪ್ರಾಯೋಜಕತ್ವಕ್ಕೆ ಸಹಾರಾ, ಏರ್‌ಟೆಲ್ ಸಮರ

ಮುಂದಿನ ಮೂರು ವರ್ಷಗಳಿಗೆ ಭಾರತ ಕ್ರಿಕೆಟ್ ತಂಡದ ಪ್ರಾಯೋಜಕತ್ವ ವಹಿಸಲು ಭಾರ್ತಿ ಏರ್‌ಟೆಲ್ ಹಾಗೂ ಸಹಾರಾ ಇಂಡಿಯಾ ಸಂಸ್ಥೆಗಳು ಪೈಪೋಟಿಯಲ್ಲಿವೆ.

ಬಿಸಿಸಿಐ ಮೂಲಗಳ ಪ್ರಕಾರ, ಈ ಎರಡೂ ಸಂಸ್ಥೆಗಳು ತಮ್ಮ ಅರ್ಹತಾ ಪತ್ರಗಳು ಹಾಗೂ ದಾಖಲೆಗಳನ್ನು ಈಗಾಗಲೇ ಮಂಡಳಿಗೆ ಸಲ್ಲಿಸಿವೆ.

ಸೋಮವಾರ ಈ ಹಿನ್ನೆಲೆಯಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದ್ದು, ಟೀಂ ಇಂಡಿಯಾದ ಮುಂದಿನ ನೂತನ ಪ್ರಾಯೋಜಕನ ಆಯ್ಕೆಯನ್ನು ನಡೆಸಲಾಗುತ್ತದೆ.

ಮೂಲಗಳ ಪ್ರಕಾರ, ಸಹಾರಾ ಸಂಸ್ಥೆ ಕೇವಲ ಟೀಂ ಇಂಡಿಯಾಕ್ಕಾಗಿ ಬಿಡ್ ಮಾಡಲಿದ್ದು, ಭಾರ್ತಿ ಏರ್‌ಟೆಲ್ ಟೀಂ ಇಂಡಿಯಾ (ಪ್ರತಿ ಪಂದ್ಯಕ್ಕೆ 2.5 ಕೋಟಿ ರೂಪಾಯಿಗಳು) ಹಾಗೂ ಇಂಡಿಯಾ ಎ ತಂಡ (ಪ್ರತಿ ಪಂದ್ಯಕ್ಕೆ 25 ಲಕ್ಷ ರೂ), ಅಂಡರ್ 19 ತಂಡ ( ಪ್ರತಿ ಪಂದ್ಯಕ್ಕೆ 25 ಲಕ್ಷ ರೂ) ಹಾಗೂ ಭಾರತ ಮಹಿಳಾ ತಂಡ (ಪ್ರತಿ ಪಂದ್ಯಕ್ಕೆ 10 ಲಕ್ಷ ರೂ)ಗಳ ಪ್ರಾಯೋಜಕತ್ವಕ್ಕಾಗಿ ಬಿಡ್ ಮಾಡಲಿದೆ.

ಆದರೆ ಭಾರ್ತಿ ಏರ್‌ಟೆಲ್ ಈ ಬಿಡ್‌ನಲ್ಲಿ ವಿಜಯಿಯಾದರೂ, ಐಸಿಸಿ ಪಂದ್ಯಗಳ ಸಂದರ್ಭ ತನ್ನ ಲೋಗೋಗಳನ್ನು ಪ್ರದರ್ಶಿಸುವಂತಿಲ್ಲ. ಯಾಕೆಂದರೆ ಈಗಾಗಲೇ 2015ರವರೆಗೆ ಐಸಿಸಿ ಪಂದ್ಯಗಳ ಪ್ರಾಯೋಜಕತ್ವವನ್ನು ಮತ್ತೊಂದು ಟೆಲಿಕಾಂ ದೈತ್ಯ ರಿಲಯನ್ಸ್ ವಹಿಸಿಕೊಂಡಿದೆ.

ಪಾಕ್ ನಾಯಕತ್ವಕ್ಕೆ ನಾನು ರೆಡಿ, ಎಲ್ಲಾ ಅಲ್ಲಾನ ಕೃಪೆ: ಮಲ್ಲಿಕ್

ಪಾಕಿಸ್ತಾನಿ ಕ್ರಿಕೆಟಿಗ, ಸಾನಿಯಾರ ಪತಿ ಶೊಯೆಬ್ ಮಲ್ಲಿಕ್ ಮೇಲೆ ಹೇರಿದ್ದ ಒಂದು ವರ್ಷದ ನಿಷೇಧವನ್ನು ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇದೀಗ ಹಿಂಪಡೆದಿರುವುದು ಮಲ್ಲಿಕ್ ಅವರಲ್ಲಿ ಸಂತಸ ಮೂಡಿಸಿದೆ.

ನಿಷೇಧ ವಾಪಾಸಾದ ಮೇಲೆ ಮಾಧ್ಯಮದೊಂದಿಗೆ ಮಾತನಾಡಿದ ಮಲ್ಲಿಕ್, ಇದು ಅಲ್ಲಾನ ಕೃಪೆ. ನನ್ನ ಮೇಲೆ ಇದ್ದ ಎಲ್ಲ ಆಧಾರರಹಿತವಾದ ಆರೋಪಗಳು ಇದೀಗ ಸಾಬೀತಾಗದೆ ಇರುವುದು ಹಾಗೂ ನನ್ನ ಮೇಲಿದ್ದ ನಿಷೇಧವನ್ನು ಹಿಂಪಡೆದಿರುವುದು ನನಗೆ ಖುಷಿ ತಂದಿದೆ ಎಂದು ಹೇಳಿದ್ದಾರೆ. ಜೊತೆಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ನನಗೆ ನಾಯಕತ್ವದ ಪಟ್ಟ ನೀಡಿದರೆ ನಾನು ಖುಷಿಯಿಂದ ಸ್ವೀಕರಿಸುತ್ತೇನೆ ಎಂದೂ ಅವರು ಹೇಳಿದ್ದಾರೆ.

ಅಶಿಸ್ತಿನ ಕಾರಣದಿಂದ ಪಾಕಿಸ್ತಾನ ಕ್ರಿಕೆಟ್ ನಿಯಂತ್ರಣ ಮಂಡಳಿ ಆಸ್ಟ್ರೇಲಿಯಾ ಪ್ರವಾಸದ ಸಂದರ್ಭ ಕಳೆದೊಂದು ವರ್ಷಗಳಿಂದ ಮಲ್ಲಿಕ್ ಅವರನ್ನು ತಂಡದಿಂದ ಹೊರಕ್ಕಿರಿಸಿತ್ತು.

ಈ ನಿರ್ಣಯವನ್ನು ಮಂಡಲಿ ತೆಗೆದುಕೊಂಡಿದ್ದು ನನಗೆ ಖುಷಿ ತಂದಿದೆ. ನಾನು ನನ್ನ ದೇಶದ ತಂಡದ ಪರವಾಗಿ ಆಡಲು ಇದೀಗ ರೆಡಿಯಾಗಿದ್ದೇನೆ. ನನ್ನ ದೇಶಕ್ಕಾಗಿ ಉತ್ತಮ ಸ್ಪರ್ಧೆ ಪ್ರದರ್ಶಿಸಲಿದ್ದೇನೆ. ಅಗತ್ಯವಿದ್ದರೆ, ಪಾಕ್ ಕ್ರಿಕೆಟ್ ತಂಡದ ನಾಯಕತ್ವ ವಹಿಸಿ ತಂಡ ಮುನ್ನಡೆಸಲು ಕೂಡಾ ನಾನು ಸಿದ್ಧ ಎಂದು ಮಲ್ಲಿಕ್ ಹೇಳಿದ್ದಾರೆ.

ಶ್ರೀಲಂಕಾದಲ್ಲಿ ನಡೆಯಲಿರುವ ಮುಂಬರುವ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡವನ್ನು ಇನ್ನೂ ಪಿಸಿಬಿ ಅಂತಿಮಗೊಳಿಸಿಲ್ಲ. ತಂಡದ ಆಟಗಾರರ ಸಂಬಾವ್ಯರ ಪಟ್ಟಿಯಲ್ಲಿ ಶೊಯೆಬ್ ಮಲ್ಲಿಕ್ ಹೆಸರೂ ಕೂಡಾ ಇದೆ ಎನ್ನಲಾಗಿದೆ.

ಮಂಗಳೂರು ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆ: ಪ್ರಫುಲ್ ಪಟೇಲ್

ಮಂಗಳೂರು ವಿಮಾನ ದುರಂತದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಇದೀಗ ತನ್ನ ವಿಮಾನ ನಿಲ್ದಾಣಗಳ ಪರಾಮರ್ಶೆಯಲ್ಲಿ ತೊಡಗಿದೆ. ಪರಿಣಾಮವಾಗಿ ಮಂಗಳೂರು ವಿಮಾನ ನಿಲ್ದಾಣದ ರನ್‌ವೇ ಉದ್ದವನ್ನು ಈಗಿರುವ 8,000 ಅಡಿಗಳಿಗಿಂದ 9,000 ಅಡಿಗಳಿಗೆ ಹೆಚ್ಚಿಸುವ ನಿರ್ಧಾರ ಹೊರಬಿದ್ದಿದೆ.

ನಾಗರಿಕ ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ಸ್ವತಃ ಈ ಹೇಳಿಕೆ ನೀಡಿದ್ದು, ಮಂಗಳೂರಿನ ವಿಮಾನ ನಿಲ್ದಾಣದ ರನ್ ವೇ ಉದ್ದವನ್ನು 9,000 ಅಡಿಗಳಿಗೆ ಹೆಚ್ಚಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಮಂಗಳೂರು ವಿಮಾನ ದುರಂತ ಅತ್ಯಂದ ಭೀಕರ ಘಟನೆಯಾಗಿದ್ದು, ಈ ಹಿನ್ನೆಲೆಯಲ್ಲಿ ಮುಂದೆ ವಿಮಾನ ನಿಲ್ದಾಣಗಳಿಗೆ ಅಗತ್ಯ ಸೌಲಭ್ಯಗಳನ್ನು ಹೆಚ್ಚಿಸುವ ಅಥವಾ ಇನ್ಯಾವುದೇ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರ ಸದಾ ಸಲಹೆಗಳನ್ನು ಸ್ವೀಕರಿಸಲಿದೆ ಎಂದಿದ್ದಾರೆ.

ನಾನು ವಿಮಾನ ನಿಲ್ದಾಣಗಳನ್ನು ತಾಂತ್ರಿಕವಾಗಿ ವಿಶ್ಲೇಷಿಸಬಲ್ಲ ತಜ್ಞನಲ್ಲವಾದರೂ, ಕೇವಲ ಮಂಗಳೂರು ವಿಮಾನ ನಿಲ್ದಾಣವಲ್ಲದೆ, ಭಾರತದ ಯಾವುದೇ ವಿಮಾನ ನಿಲ್ದಾಣಗಳಿಗೆ ಅಗತ್ಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲು ಸಿದ್ಧವಿದೆ ಎಂದರು.

ಈ ದುರಂತದಿಂದ ಇಲಾಖೆ ಬಹುದೊಡ್ಡ ಪಾಠ ಕಲಿತಿದೆ. ಸದ್ಯದಲ್ಲೇ ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಜೊತೆ ಮುಂದಿನ ಸುಧಾರಣೆಗಳ ಕುರಿತು ಸಭೆ ನಡೆಯಲಿದೆ ಎಂದು ಅವರು ತಿಳಿಸಿದರು.

ಇದೇ ಸಂದರ್ಭ ಭಾರತೀಯ ವಿಮಾನಯಾನವು ನಿಜಕ್ಕೂ ಸೇಫ್ ಆಗಿದ್ದು, ಶೇ.100ರಷ್ಟು ಸೇಫ್ ಅಥವಾ ಶೇ.ಸೊನ್ನೆಯಷ್ಟು ಎಂದು ಹೇಳಬಹುದು ಎಂದು ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ನುಡಿದರು.

ಜಗನ್‌ಗೆ ಅಂಕುಶ ಹಾಕಲು ಚಿರುಗೆ ಕಾಂಗ್ರೆಸ್ ಗಾಳ?

ಪ್ರಜಾ ರಾಜ್ಯಂ ಪಾರ್ಟಿ ಮುಖ್ಯಸ್ಥ, ತೆಲುಗು ಚಿತ್ರನಟ ಮೆಗಾಸ್ಟಾರ್ ಚಿರಂಜೀವಿ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆಹ್ವಾನದ ಮೇರೆಗೆ ಶನಿವಾರ ನವದೆಹಲಿಗೆ ಆಗಮಿಸಿದ್ದು, ಆಂಧ್ರಪ್ರದೇಶದಲ್ಲಿ ರಾಜ್ಯಸಭಾ ಚುನಾವಣೆಗಳಲ್ಲಿ ಮೈತ್ರಿಯ ಸಾಧ್ಯತೆಗಳು ದಟ್ಟವಾಗಿರುವಂತೆಯೇ, ಹೈಕಮಾಂಡ್ ಸೂಚನೆ ಧಿಕ್ಕರಿಸಿ ಆಂಧ್ರದಲ್ಲಿ ಪ್ರಕ್ಷುಬ್ಧತೆಗೆ ಕಾರಣವಾಗಿರುವ ವೈಎಸ್ಆರ್ ಪುತ್ರ ವೈ.ಜಗನ್ ಮೋಹನ್ ರೆಡ್ಡಿಯ ಅಹಂಕಾರ ಮುರಿಯುವ ಉದ್ದೇಶವೂ ಇದೆ ಎಂಬ ಸಂಗತಿಯೂ ಕೇಳಿಬರತೊಡಗಿದೆ.

ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ಪಿಆರ್‌ಪಿ ಇತ್ತೀಚೆಗೆ ಪ್ರಕಟಿಸಿತ್ತು. ಹೀಗಾಗಿ ಕಾಂಗ್ರೆಸ್ ಪಕ್ಷವು ಮೈತ್ರಿಗಾಗಿ ಚಿರಂಜೀವಿಯನ್ನು ದೆಹಲಿಗೆ ಕರೆಸಿಕೊಂಡಿದ್ದು, ಅವರು ಕಾನೂನು ಸಚಿವ ವೀರಪ್ಪ ಮೊಯಿಲಿ, ಕಾಂಗ್ರೆಸ್ ಅಧ್ಯಕ್ಷರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಮತ್ತಿತರ ಕಾಂಗ್ರೆಸ್ ಹಿರಿಯ ನಾಯಕರು ಹಾಗೂ ಆ ಬಳಿಕ ಪಕ್ಷಾಧ್ಯಕ್ಷೆ ಸೋನಿಯಾರನ್ನು ಭೇಟಿಯಾಗಲಿದ್ದಾರೆ.

ಕಾಂಗ್ರೆಸ್‌ನ ಐವರು ರಾಜ್ಯಸಭಾ ಸದಸ್ಯರಾದ ಕೇಂದ್ರ ಸಚಿವ ಜೈರಾಮ್ ರಮೇಶ್, ಜೆ.ಡಿ.ಸೀಲಂ, ವಿ.ಹನುಮಂತ ರಾವ್, ಗಿರೀಶ್ ಸಾಂಘಿ ಮತ್ತು ನೆಡುರುಮಲ್ಲಿ ಜನಾರ್ದನ ರೆಡ್ಡಿ ಹಾಗೂ ಸಿಪಿಎಂನ ಪೆನುಬಲ್ಲಿ ಮಧು ಎಂಬವರ ಅವಧಿ ಕೊನೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆರು ರಾಜ್ಯಸಭಾ ಸ್ಥಾನಗಳಿಗಾಗಿ ಆಂಧ್ರದಲ್ಲಿ ಜೂ.11ರಂದು ಚುನಾವಣೆ ನಡೆಯಲಿದೆ. ಅಸೆಂಬ್ಲಿಯಲ್ಲಿ 156 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್‌ಗೆ ಕನಿಷ್ಠ 3 ಸ್ಥಾನಗಳು ದೊರೆಯುತ್ತವೆ ಮತ್ತು 91 ಸದಸ್ಯರಿರುವ ತೆಲುಗು ದೇಶಂಗೆ 2 ಸ್ಥಾನಗಳು ದೊರೆಯಲಿವೆ. ಇದೀಗ ಪ್ರಜಾ ರಾಜ್ಯಂ ಬಳಿ 17 ಶಾಸಕರಿದ್ದು, ಅವರಲ್ಲಿ ಇಬ್ಬರು, ಚಿರಂಜೀವಿ ತೆಲಂಗಾಣ ಹೋರಾಟಕ್ಕೆ ಬೆಂಬಲ ನೀಡದೇ ಇರುವುದರಿಂದ ಬಂಡಾಯವೆದ್ದಿದ್ದಾರೆ. ರಾಜ್ಯಸಭೆಗೆ ಅವರ ಪಕ್ಷದ ಸದಸ್ಯರೊಬ್ಬರು ಆಯ್ಕೆಯಾಗಬೇಕಿದ್ದರೆ ಕನಿಷ್ಠ 42 ಶಾಸಕರ ಬೆಂಬಲ ಬೇಕಾಗುತ್ತದೆ.

ಇದೀಗ ಚಿರಂಜೀವಿಗೆ ಕಾಂಗ್ರೆಸ್ ಪಕ್ಷವು ಮಣೆ ಹಾಕಿರುವುದೇಕೆಂದರೆ, ತೆಲಂಗಾಣ ಹೋರಾಟದ ಪರವಾಗಿರುವ ಜಗನ್ ಬಣವು ಒಂದೊಮ್ಮೆ ತಮ್ಮ ಮಾತು ಕೇಳದೆ, ಪಕ್ಷವೇ ಒಡೆದುಹೋದರೆ ಎಂಬ ಆತಂಕದಿಂದ. ಆ ಸಂದರ್ಭದಲ್ಲಿ ರಾಜ್ಯ ಸರಕಾರದ ರಕ್ಷಣೆಯೊಂದಿಗೆ, ರಾಜ್ಯಸಭಾ ಚುನಾವಣೆಯಲ್ಲಿ ಜಯ ಗಳಿಸುವ ಇರಾದೆಯಿಂದ ಈ ತಂತ್ರ.

ವೈಎಸ್ಆರ್ ಸಾವಿನ ಸಂದರ್ಭ ಆತ್ಮಹತ್ಯೆ ಮಾಡಿಕೊಂಡಿದ್ದವರ ಕುಟುಂಬಿಕರಿಗೆ ಸಾಂತ್ವನ ಹೇಳಲು ಹೊರಟಿದ್ದ ಜಗನ್ ಅವರ ವಾರಂಗಲ್ ಭೇಟಿಯನ್ನು ಮುಂದೂಡುವಂತೆ ಹೈಕಮಾಂಡ್ ಸೂಚಿಸಿತ್ತು. ಅವರನ್ನು ಶುಕ್ರವಾರ ಗೃಹಬಂಧನದಲ್ಲಿರಿಸಲಾಗಿದ್ದು, ಬಂಧನ ಪ್ರತಿಭಟಿಸಿ ತಿರುಪತಿಯಲ್ಲಿ ನಿಂತಿದ್ದ ರೈಲಿಗೆ ಬೆಂಕಿ ಹಚ್ಚಲಾಗಿತ್ತು. ಬಳಿಕ ಜಗನ್ ಬೆಂಬಲಿಗರ ಕಲ್ಲುತೂರಾಟ ನಿಯಂತ್ರಿಸಲು ಲಾಠಿಪ್ರಹಾರವೂ ನಡೆದಿತ್ತು.

ಆಘಾತಕ್ಕೊಳಗಾದ ಟೀಮ್ ಇಂಡಿಯಾಕ್ಕೆ ಲಂಕಾ ಸವಾಲು!

ತ್ರಿಕೋನ ಸರಣಿಯಲ್ಲಿ ದುರ್ಬಲ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಸೋಲಿನ ಆಘಾತಕ್ಕೊಳಗಾಗಿರುವ ಸುರೇಶ್ ರೈನಾ ನೇತೃತ್ವದ ಟೀಮ್ ಇಂಡಿಯಾ ಭಾನುವಾರ ನಡೆಯಲಿರುವ ತನ್ನ ಎರಡನೇ ಪಂದ್ಯದಲ್ಲಿ ಹೊಸ ಲುಕ್‌ನಲ್ಲಿರುವ ಶ್ರೀಲಂಕಾ ತಂಡವನ್ನು ಎದುರಿಸಲಿದ್ದು, ಗೆಲುವಿನ ವಿಶ್ವಾಸವನ್ನಿರಿಸಿಕೊಂಡಿದೆ.

ಸರಣಿಗಾಗಿ ಶ್ರೀಲಂಕಾವು ಸಹ ತನ್ನ ದ್ವಿತೀಯ ದರ್ಜೆ ತಂಡವನ್ನು ಕಳುಹಿಸಿದ್ದು, ತಿಲಕರತ್ನೆ ದಿಲ್‌ಶಾನ್ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಅದೇ ವೇಳೆ ಶುಕ್ರವಾರದ ಪಂದ್ಯದಲ್ಲಿ ಆತಿಥೇಯ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಭಾರೀ ಮುಖಭಂಗಕ್ಕೊಳಗಾಗಿದ್ದ ಭಾರತ ತಂಡವು ಇಲ್ಲಿ ತಿರುಗಿಬೀಳುವ ವಿಶ್ವಾಸ ಹೊಂದಿದೆ.

ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಬ್ಯಾಟ್ಸ್‌ಮನ್‌ಗಳು ದಿಟ್ಟ ಹೋರಾಟ ನಡೆಸಿದ್ದರೂ ಬೌಲರುಗಳು ಹಿನ್ನಡೆಗೆ ಕಾರಣವಾಗಿದ್ದರು. ಕರ್ನಾಟಕದ ವಿನಯ್ ಕುಮಾರ್ ಸೇರಿದಂತೆ ಚೊಚ್ಚಲ ಪಂದ್ಯವನ್ನಾಡಿದ ಉಮೇಶ್ ಯಾದವ್ ಮತ್ತು ಅಶೋಕ್ ದಿಂಡಾ ಪರಿಣಾಮಕಾರಿ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು.

ಸೋಲಿನ ನಂತರ ಪ್ರತಿಕ್ರಿಯಿಸಿದ ನಾಯಕ ರೈನಾ, ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ಸುಧಾರಣೆ ಕಂಡುಬರಬೇಕಿದೆ ಎಂದು ಹೇಳಿದ್ದಾರೆ.

ಓಪನರುಗಳಾದ ದಿನೇಶ್ ಕಾರ್ತಿಕ್ ಮತ್ತು ಮುರಳಿ ವಿಜಯ್‌ರಿಂದಲೂ ನಿರೀಕ್ಷಿತ ಮಟ್ಟದ ಆರಂಭ ದೊರಕುತ್ತಿಲ್ಲ. ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ಫಾರ್ಮ್‌ಗೆ ಮರಳಿರುವುದು ಸ್ವಲ್ಪ ಮಟ್ಟಿಗೆ ಸಮಾಧಾನ ತಂದಿದೆ.

ಒಟ್ಟಿನಲ್ಲಿ ಭಾನುವಾರದ ಪಂದ್ಯದಲ್ಲಿ ರೈನಾ ನೇತೃತ್ವದ ಯುವ ಪಡೆಯಿಂದ ಲಂಕಾ ದಹನವಾಗಲಿದೆಯೇ ಎಂಬುದು ಕಾದುನೋಡಬೇಕಿದೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ

ತಂಡ ಇಂತಿದೆ:

ಭಾರತ: ಸುರೇಶ್ ರೈನಾ (ನಾಯಕ), ವಿರಾಟ್ ಕೊಹ್ಲಿ (ಉಪನಾಯಕ), ಮುರಳಿ ವಿಜಯ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ರೋಹಿತ್ ಶರ್ಮಾ, ಯೂಸುಫ್ ಪಠಾಣ್, ರವೀಂದ್ರ ಜಡೇಜಾ, ಆರ್. ಆಶ್ವಿನ್, ಉಮೇಶ್ ಯಾದವ್, ವಿನಯ್ ಕುಮಾರ್, ಅಶೋಕ್ ದಿಂಡಾ, ಪಂಕಜ್ ಸಿಂಗ್, ಅಮಿತ್ ಮಿಶ್ರಾ, ಪ್ರಗ್ಯಾನ್ ಓಜಾ ಮತ್ತು ನಮನ್ ಓಜಾ

ಶ್ರೀಲಂಕಾ: ತಿಲಕರತ್ನೆ ದಿಲ್‌ಶಾನ್ (ನಾಯಕ), ಆಂಗಲೋ ಮ್ಯಾಥ್ಯೂಸ್ (ಉಪನಾಯಕ), ಉಪುಲ್ ತರಂಗಾ, ತಿಲನ್ ಸಮರವೀರ, ದಿನೇಶ್ ಚಾಂದಿಮಾಲ್, ಲಹಿರು ತಿರಿಮನ್ನೆ, ಚಮರ ಕಪುಗೇಡರಾ, ಸೌರವ್ ರಣಧೀವ್, ನುವಾನ್ ಕುಲಶೇಖರ, ತಿಲಾನ್ ತುಷಾರಾ, ಅಜಂತಾ ಮೆಂಡೀಸ್, ಜೀವನ್ ಮೆಂಡೀಸ್, ದಿಲ್ಹಾರಾ ಫೆರ್ನಾಂಡೊ, ಚಮರ ಸಿಲ್ವಾ ಮತ್ತು ತಿಸಾರಾ ಪರೇರಾ.

ಮಮ್ಮುಟ್ಟಿಯನ್ನು ಕನ್ನಡಕ್ಕೆ ತರಿಸಿದ್ದು ಎಸ್ಎಂಎಸ್ ಕಥೆ

ಮಲಯಾಳಂನ ಜನಪ್ರಿಯ ನಟ ಮುಮ್ಮಟ್ಟಿ ಕನ್ನಡಕ್ಕೆ ಬರುವ ಸುದ್ದಿ ಕೇಳಿ ಸಂತಸಗೊಂಡ ಅದೆಷ್ಟೋ ಮಂದಿ ಈಗ ಈ ವಿಷಯ ಕೇಳಿದ್ರೆ ಮತ್ತಷ್ಟು ಕುತೂಹಲಗೊಂಡಾರು. ಬರೇ ಎರಡು ಸಾಲಿನ ಕಥೆಯನ್ನು ಮೊಬೈಲ್ ಎಸ್ಎಂಎಸ್ ಮೂಲಕ ಓದಿದ ತಕ್ಷಣ ಮಮ್ಮುಟ್ಟಿ ಒಪ್ಪಿಕೊಂಡುಬಿಟ್ಟರಂತೆ!

ಹೌದು, ಶಿಕಾರಿ ಚಿತ್ರ ತಂಡ ಮೊನ್ನೆ ಹಮ್ಮಿಕೊಂಡಿದ್ದ ಸಮಾರಂಭವೊಂದರಲ್ಲಿ ಇದನ್ನು ಹೇಳಿದ್ದು ಚಿತ್ರದ ನಿರ್ದೇಶಕ ಅಭಯ್ ಸಿಂಹ. ಚಿತ್ರದ ಕಥೆ ಬಗ್ಗೆ ಮಾತನಾಡಿದ ಅಭಯ್ ಸಿಂಹ, ಇದು ನಮ್ಮೊಳಗಿರುವ ಶಿಕಾರಿ. ಇರುವುದನ್ನು ಬಿಟ್ಟು ಇರದುದರೆಡೆಗೆ ಹುಡುಕುತ್ತಾ ಸಾಗುವುದೇ ಚಿತ್ರದ ಸಾರಾಂಶ. ಎಸ್ಎಂಎಸ್ ಓದಿ ಒಪ್ಪಿಕೊಂಡ ಮುಮ್ಮಟ್ಟಿಗೆ ನಾನು ಆಭಾರಿ ಎಂದಿದ್ದಾರವರು.

ಈ ಕಾರ್ಯಕ್ರಮದಲ್ಲಿ ಸನ್ಮಾನವನ್ನೂ ಸ್ವೀಕರಿಸಿ ಮಾತನಾಡಿದ ಈ ಬಹುಭಾಷಾ ಪ್ರತಿಭೆ ಮಮ್ಮುಟ್ಟಿ, 'ಕಲೆ ಹಾಗೂ ಕಲಾವಿದರಿಗೆ ಭಾಷೆಯ ಮಿತಿ ಇಲ್ಲ. ಅಭಿನಯಕ್ಕೆ ಸ್ಥಳ ವಿಶೇಷದ ಸೀಮಿತತೆ ಇಲ್ಲ. ಅಭಿನಯಕ್ಕೆ ಭಾಷೆಯ ಗಡಿಯಿಲ್ಲ. ನಮಗೆ ಅಭಿನಯ ಮುಖ್ಯ. ಅದನ್ನೇ ಮಾಡಲು ಕನ್ನಡದ ನೆಲಕ್ಕೆ ಬಂದಿದ್ದೇನೆ. ನನಗೆ ಕನ್ನಡ ಅಂದರೆ ಅತ್ಯಂತ ಪ್ರೀತಿ. ಬಹು ಸಮಯದಿಂದ ಬರುವ ಆಸೆ ಇತ್ತು. ಅವಕಾಶ ಸಿಕ್ಕಿರಲಿಲ್ಲ. ಅಭಯ್ ಹೇಳಿದ ಕಥೆ ಹಿಡಿಸಿತು. ಇಷ್ಟ ಆಯಿತು ಬಂದಿದ್ದೇನೆ. ನಿಜಕ್ಕೂ ಇದು ಕನ್ನಡದಲ್ಲಿ ಹೊಸ ಸಾಧನೆ ಮಾಡುವ ಚಿತ್ರವಾಗಲಿದೆ' ಎಂದರು.

ಚಿತ್ರದಲ್ಲಿ ಮೋಹನ್ ಹಾಗೂ ಆದಿತ್ಯ ಇದ್ದು, ನಟಿ ತಾರಾ ಸಹ ಅಭಿನಯಿಸುತ್ತಿದ್ದಾರೆ. ಕೆ. ಮಂಜು ನಿರ್ಮಾಣದ ಈ ಚಿತ್ರವನ್ನು ಅಭಯ್ ಸಿಂಹ ನಿರ್ದೇಶಿಸುತ್ತಿದ್ದಾರೆ.

ಚಿತ್ರದಲ್ಲಿ ಮುಮ್ಮಟ್ಟಿ ಜತೆ ಅಭಿನಯಿಸುತ್ತಿರುವುದಕ್ಕೆ ಮೋಹನ್ ಮತ್ತು ಆದಿತ್ಯಗೆ ತುಂಬಾ ಸಂತಸ ಇದೆಯಂತೆ. ಮೋಹನ್ ಮೊದಲ ದಿನ ಶೂಟಿಂಗ್‌ಗೆ ಬಂದಾಗಲಂತೂ ಮುಮ್ಮಟ್ಟಿ ಎದುರು ನಿಲ್ಲಲು ಮೋಹನ್‌ಗೆ ಭಯವಾಯಿತಂತೆ. ಆದರೆ ಅವರ ನಡವಳಿಕೆ ನೋಡಿ ಆತ್ಮೀಯತೆ ಹೆಚ್ಚಿತಂತೆ. ಇನ್ನು ಆದಿತ್ಯ ಪ್ರಕಾರ, ಇವರ ಜತೆ ಒಂದು ಸೀನ್ ಅಲ್ಲ, ಶಾಟ್ ಸಿಕ್ಕರೂ ಒಪ್ಪಿಕೊಳ್ಳುತ್ತಿದ್ದೆ. ಬಹುಭಾಷೆಯ ಜನಪ್ರಿಯ ನಟನ ಜತೆ ನಿಲ್ಲುವುದೇ ಒಂದು ಸಾಧನೆ. ಮೋಹನ್‌ಲಾಲ್ ಅವರೊಂದಿಗೆ ನಟಿಸಿದ್ದೆ. ಈಗ ಮುಮ್ಮುಟ್ಟಿ ಜತೆ ಅಭಿನಯಿಸುವ ಅವಕಾಶ ಸಿಕ್ಕಿದೆ. ನನ್ನಷ್ಟು ಅದೃಷ್ಟಶಾಲಿ ಇನ್ನೊಬ್ಬರಿಲ್ಲ ಅನ್ನುತ್ತಾರೆ.

ತುಳು ಭಾಷೆಗೆ ಸಾಂವಿಧಾನಿಕ ಮಾನ್ಯತೆ, ಕೇಂದ್ರಕ್ಕೆ ಮನವಿ

ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಸರ್ಕಾರ ಪ್ರಯತ್ನಿಸಲಿದೆ ಎಂದು ಗೃಹ ಸಚಿವ ವಿ.ಎಸ್.ಆಚಾರ್ಯ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಶನಿವಾರ ನಡೆದ ತುಳು ಸಾಹಿತ್ಯ ಅಕಾಡೆಮಿ ಹಮ್ಮಿಕೊಂಡಿದ್ದ ಅಕಾಡೆಮಿಯ ಗೌರವ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಬಹುಮಾನ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಆಚಾರ್ಯ, ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಲು ರಾಜ್ಯ ಸರ್ಕಾರ ಎಲ್ಲ ರೀತಿಯ ಪ್ರಯತ್ನ ಮಾಡಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಮನವಿ ಮಾಡಿ ಭಾಷೆಗೆ ಸಾಂವಿಧಾನಿಕ ಮಾನ್ಯತೆ ಒದಗಿಸಿಕೊಡುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಆಚಾರ್ಯ ಭರವಸೆ ನೀಡಿದರು.

ಇದೇ ವೇಳೆ ಮಂಗಳೂರಿನಲ್ಲಿ ನಿರ್ಮಾಣಗೊಳ್ಳಲಿರುವ ತುಳು ಭವನಕ್ಕೆ ಅಗತ್ಯ ಹಣಕಾಸು ನೆರವು ನೀಡಲಾಗುತ್ತದೆ. ಧರ್ಮಸ್ಥಳದಲ್ಲಿ ನಡೆದ ವಿಶ್ವ ತುಳು ಸಮ್ಮೇಳನದ ನಿರ್ಣಯಗಳನ್ನು ಜಾರಿಗೆ ತರಲು ಸರ್ಕಾರ ಎಲ್ಲ ರೀತಿಯಿಂದಲೂ ಸರ್ವ ಸನ್ನದ್ಧವಾಗಿದೆ ಎಂದು ಅವರು ತಿಳಿಸಿದರು.

ಇದೇ ಸಂದರ್ಭ ಮಾತನಾಡಿದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಈಗಾಗಲೇ ತುಳು ಭಾಷೆಯನ್ನು ಆರನೇ ತರಗತಿಯ ವಿದ್ಯಾರ್ಥಿಗಳಿಗೆ ಐಚ್ಛಿಕ ವಿಷಯವನ್ನಾಗಿ ಮಾಡಲಾಗಿದೆ. ಪಠ್ಯಪುಸ್ತಕ ಮುದ್ರಣ ಕಾರ್ಯವೂ ಈಗಾಗಲೇ ಭರದಿಂದ ಸಾಗಿದ್ದು, ಆದಷ್ಟು ಬೇಗ ಇದು ವಿದ್ಯಾರ್ಥಿಗಳ ಕೈಗೆ ಸಿಗಲಿದೆ ಎಂದರು.

ಇಂಗ್ಲೀಷ್ ಮತ್ತು ಅನ್ಯ ಭಾಷೆಯ ಪ್ರಭಾವದಿಂದ ನಮಗೆ ತಿಳಿಯದಂತೆಯೇ ನಮ್ಮ ಸಾಂಸ್ಕೃತಿಕ ವೈವಿಧ್ಯತೆಗೆ ಧಕ್ಕೆಯಾಗುತ್ತಿದೆ. ಭಾಷಾ ಪ್ರೇಮದಿಂದ ಮಾತ್ರ ಕನ್ನಡ ಅಥವಾ ತುಳು ಭಾಷೆ ಉಳಿಯಬಲ್ಲುದು ಎಂದು ಅವರು ತಿಳಿಸಿದರು.

ರೈಲು ದುರಂತದ ಹಿಂದೆ ರಾಜಕೀಯ ಪಿತೂರಿ: ಮಮತಾ ಆರೋಪ

ಜ್ಞಾನೇಶ್ವರಿ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿ ದುರಂತಕ್ಕೀಡಾದ ಭೀಕರ ಘಟನೆ ವ್ಯವಸ್ಥಿತವಾಗಿ ಮಾಡಿದ ಸಂಚು ಅಲ್ಲ ಎಂಬುದನ್ನು ತಳ್ಳಿಹಾಕಲಾರೆ ಎಂದು ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ, ದಾಳಿ ಹಿಂದೆ ರಾಜಕೀಯ ಪಿತೂರಿ ಇರುವುದಾಗಿ ಗಂಭೀರವಾಗಿ ಆರೋಪಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಅಪಘಾತದ ಹಿಂದೆ ವ್ಯವಸ್ಥಿತವಾದ ರಾಜಕೀಯ ಪಿತೂರಿ ಅಡಗಿದ್ದು, ಪಶ್ಚಿಮ ಬಂಗಾಳದಲ್ಲಿ ಮುಂಬರುವ ನಗರಪಾಲಿಕೆ ಚುನಾವಣೆಯ ಹಿನ್ನೆಲೆಯಲ್ಲಿ ಇದನ್ನು ಮಾಡಲಾಗಿದೆ ಎಂದು ಆರೋಪಿಸಿದರು.

ಆದರೆ ರೈಲ್ವೆ ಹಳಿ ಸ್ಫೋಟಿಸಿ ದುರಂತ ಸಂಭವಿಸಲು ಕಾರಣವಾದ ಬಗ್ಗೆ ಯಾವುದೇ ನಿರ್ದಿಷ್ಟ ಸಂಘಟನೆಯ ಹೆಸರನ್ನು ಹೇಳಲು ಮಮತಾ ಈ ಸಂದರ್ಭದಲ್ಲಿ ನಿರಾಕರಿಸಿದರು.

ಇಡೀ ಘಟನೆಯೇ ತುಂಬಾ ಅಪರಾಧಿತನದಿಂದ ಕೂಡಿದ್ದು, ಈ ದಾಳಿಯನ್ನು ನಡೆಸಿದ ದುರುಳರು ಯಾವುದೇ ಕರುಣೆ ತೋರಿಸದೇ ದುಷ್ಕೃತ್ಯ ಎಸಗಿ 115 ಮಂದಿ ಮುಗ್ದ ಪ್ರಯಾಣಿಕರ ಸಾವಿಗೆ ಕಾರಣರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಜ್ಞಾನೇಶ್ವರಿ ಎಕ್ಸ್‌ಪ್ರೆಸ್ ಹಳಿ ತಪ್ಪಿ ಸಂಭವಿಸಿದ ದುರಂತದ ಬಗ್ಗೆ ಸಿಬಿಐ ತನಿಖೆಗೆ ಒಪ್ಪಿಸಲು ಕೇಂದ್ರ ಸರ್ಕಾರ ಒಪ್ಪಿರುವುದಾಗಿ ಹೇಳಿದರು.

ಆದರೆ ಘಟನೆಯ ಹಿಂದೆ ಯಾವ ಸಂಘಟನೆ ಇದೆ ಎಂಬ ಮಾಹಿತಿ ನೀಡಲು ನಿರಾಕರಿಸಿದರು. ಪೂರ್ಣ ಪ್ರಮಾಣದ ತನಿಖೆ ಮುಗಿಯುವವರೆಗೆ ಯಾವ ಸಂಘಟನೆ ಈ ಘಟನೆಗೆ ಕಾರಣ ಎಂದು ಹೇಳಲಾರೆ ಎಂದು ಸ್ಪಷ್ಟಪಡಿಸಿದರು.