VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Apr 22, 2010

ಬೆಂಗಳೂರು ಔಟ್; ಮುಂಬೈ ಐಪಿಎಲ್ ಫೈನಲ್‌ಗೆ




ಮುಂಬೈ:ಆರಂಭದಲ್ಲಿ ಕೆಚ್ಚೆದೆಯ ಪ್ರದರ್ಶನ ನೀಡಿ ನಂತರ ಜೀಕುತ್ತಾ ಸೆಮಿಫೈನಲ್ ತಲುಪಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೆಮಿಫೈನಲ್‌ನಲ್ಲಿ ಸೋಲುಣ್ಣುವ ಮೂಲಕ ಐಪಿಎಲ್ ಮೂರನೇ ಆವೃತ್ತಿಯಿಂದ ಹೊರ ಬಿದ್ದಿದೆ. ಕೀರಾನ್ ಪೊಲಾರ್ಡ್ ಆಲ್-ರೌಂಡ್ ಪ್ರದರ್ಶನದ ನೆರವಿನಿಂದ ನಿನ್ನೆ ರಾತ್ರಿ ನಡೆದ ಫೈನಲ್‌ಗಾಗಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 35 ರನ್ನುಗಳ ಅಮೋಘ ಗೆಲುವು ಸಾಧಿಸಿದೆ.
ಮುಂಬೈಯ ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ರನ್ ಕೊರತೆ ಎದುರಿಸುತ್ತಿದ್ದ ಸಂದರ್ಭದಲ್ಲಿ ಸೌರಭ್ ತಿವಾರಿ (52) ಜತೆ ಸೇರಿದ ಪೊಲಾರ್ಡ್ 13 ಎಸೆತಗಳಿಂದ 33 ರನ್ ಚಚ್ಚಿ ಐದು ವಿಕೆಟ್ ನಷ್ಟಕ್ಕೆ ತಂಡ 184 ರನ್ ಪೇರಿಸುವಲ್ಲಿ ಸಹಕರಿಸಿದ್ದಲ್ಲದೆ, ನಂತರ ಕೇವಲ 17 ರನ್ನುಗಳಿಗೆ ಮೂರು ವಿಕೆಟ್ ಕಿತ್ತಿ ಬೆಂಗಳೂರನ್ನು 149/9ಕ್ಕೆ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಕಳೆದೆರಡು ಐಪಿಎಲ್ ಆವೃತ್ತಿಗಳಲ್ಲಿ ಸೆಮಿಫೈನಲ್ ತಲುಪಲು ವಿಫಲವಾಗಿದ್ದ ಮುಂಬೈ ಈ ಗೆಲುವಿನೊಂದಿಗೆ ಪ್ರಸಕ್ತ ವರ್ಷದ ಚಾಂಪಿಯನ್ಸ್ ಟ್ವೆಂಟಿ-20 ಲೀಗ್‌ಗೆ ಅರ್ಹತೆ ಪಡೆದ ಮೊದಲ ತಂಡ ಎಂಬ ಹೆಮ್ಮೆಗೂ ಪಾತ್ರವಾಗಿದೆ.
185 ರನ್ನುಗಳ ಗೆಲುವಿನ ಗುರಿ ಪಡೆದುಕೊಂಡಿದ್ದ ಕಳೆದ ವರ್ಷದ ರನ್ನರ್-ಅಪ್‌ ತಂಡ ಬೆಂಗಳೂರು ಯಾವ ಹಂತದಲ್ಲೂ ಪಂದ್ಯವನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಸಾಧ್ಯವಾಗದೆ ಸತತ ವಿಕೆಟುಗಳನ್ನು ಕಳೆದುಕೊಳ್ಳುತ್ತಾ ಬಂದಿತ್ತು. ಅತ್ಯುತ್ತಮ ಪಾಲುದಾರಿಕೆಯ ಆಟ ನೀಡಲು ಕೂಡ ಆಟಗಾರರು ವಿಫಲರಾದರು. ಈ ಪಂದ್ಯದಲ್ಲಿ ಬೆಂಗಳೂರು ಪರ ಬಂದ ಗರಿಷ್ಠ ಭಾಗೀದಾರಿಕೆ ರಾಹುಲ್ ದ್ರಾವಿಡ್ ಮತ್ತು ರಾಬಿನ್ ಉತ್ತಪ್ಪ ನಡುವೆ. ಅವರು ಮೂರನೇ ವಿಕೆಟಿಗೆ 20 ಎಸೆತಗಳಿಂದ 34 ರನ್ ಕಲೆ ಹಾಕಿದ್ದರು.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ
ಬೆಂಗಳೂರು ಪರ ಗರಿಷ್ಠ ರನ್ ಗಳಿಕೆದಾರ (31*) ರೋಸ್ ಟೇಲರ್. ಜಾಕ್ವಾಸ್ ಕ್ಯಾಲಿಸ್ (11), ರಾಹುಲ್ ದ್ರಾವಿಡ್ (23), ಕೆವಿನ್ ಪೀಟರ್ಸನ್ (19), ರಾಬಿನ್ ಉತ್ತಪ್ಪ (26) ತಮ್ಮ ಬ್ಯಾಟನ್ನು ಬೃಹತ್ ಮೊತ್ತವನ್ನು ಚೇಸಿಂಗ್ ಮಾಡುವತ್ತ ಎತ್ತಿ ಹಿಡಿದಿರಲಿಲ್ಲ.
ವಿರಾಟ್ ಕೋಹ್ಲಿ (9) ಮತ್ತು ಮನೀಷ್ ಪಾಂಡೆ (5) ತೀವ್ರ ನಿರಾಸೆ ಮೂಡಿಸಿದರು. ಉಳಿದಂತೆ ಪ್ರವೀಣ್ ಕುಮಾರ್ (1), ವಿನಯ್ ಕುಮಾರ್ (8), ಡೇಲ್ ಸ್ಟೈನ್ (5) ಮತ್ತು ನಾಯಕ ಅನಿಲ್ ಕುಂಬ್ಳೆ (1) ಒಂದಂಕಿಗೇ ಸೀಮಿತರಾಗಿದ್ದಾರೆ.
ಒಟ್ಟಾರೆ 20 ಓವರುಗಳಲ್ಲಿ 9 ವಿಕೆಟ್ ಕಳೆದುಕೊಂಡಿದ್ದ ಬೆಂಗಳೂರು 149 ರನ್ ಮಾಡುವ ಮೂಲಕ 35 ರನ್ನುಗಳ ಅಂತರದಿಂದ ಸೆಮಿಫೈನಲ್‌ನಲ್ಲಿ ಸೋಲುಂಡಿತು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ ಆರಂಭ ನಿಜಕ್ಕೂ ಉತ್ತಮವಾಗಿರಲಿಲ್ಲ. 15 ಓವರುಗಳ ತನಕವೂ ಜೀಕುತ್ತಲೇ ಸಾಗಿದ್ದ ತಂಡವು ನಂತರದ ಐದು ಓವರುಗಳಲ್ಲಿ ಸೆಟೆದು ನಿಂತಿತ್ತು.
ತಂಡಕ್ಕೆ ಪ್ರಮುಖ ಆಸರೆಯಾದವರು ಅಂಬಾಟಿ ರಾಯುಡು ಮತ್ತು ಸೌರಭ್ ತಿವಾರಿ. ರಾಯುಡು 38 ಎಸೆತಗಳಿಂದ 40 ಹಾಗೂ ತಿವಾರಿ 31 ಎಸೆತಗಳಿಂದ ಅಜೇಯ 52 ರನ್ ಗಳಿಸಿದ್ದರು. ಇವರಿಬ್ಬರ ನಡುವೆ ಐದನೇ ವಿಕೆಟಿಗೆ 8.1 ಓವರುಗಳಿಂದ 67 ರನ್ನುಗಳು ಹರಿದು ಬಂದಿದ್ದವು.
ರಾಯುಡು ಕಳಚಿಕೊಂಡ ನಂತರ ತಿವಾರಿ ಜತೆ ಸೇರಿದ್ದು ಪೊಲಾರ್ಡ್. ಆರನೇ ವಿಕೆಟಿಗೆ ಇವರಿಬ್ಬರು ಕೇವಲ 14 ಎಸೆತಗಳಲ್ಲಿ 40 ರನ್ ಕಲೆ ಹಾಕಿದ್ದರು.
ನಾಯಕ ಸಚಿನ್ ತೆಂಡೂಲ್ಕರ್ (9) ಹೆಚ್ಚಿನ ಪ್ರತಾಪ ತೋರಿಸಲು ಸಾಧ್ಯವಾಗಲಿಲ್ಲ. ಶಿಖರ್ ಧವನ್ (12) ಮತ್ತು ಜೀನ್ ಪೌಲ್ ಡ್ಯುಮಿನಿ (3) ಕೂಡ ಅಷ್ಟಕಷ್ಟೇ. ಅಭಿಷೇಕ್ ನಾಯರ್ 18 ಎಸೆತಗಳಿಂದ 22 ರನ್ ಮಾಡಿದ್ದರು.
ಬೆಂಗಳೂರಿಗಿದೆ ಕೊನೆಯ ಪಂದ್ಯ...
ಸೆಮಿಫೈನಲ್ ಸೋಲುಂಡಿರುವ ಬೆಂಗಳೂರು ಶನಿವಾರ ಮೂರನೇ ಸ್ಥಾನಕ್ಕಾಗಿ ಮತ್ತೊಂದು ತಂಡದ ವಿರುದ್ಧ ಹೋರಾಡಬೇಕಿದೆ. ಡೆಕ್ಕನ್ ಚಾರ್ಜರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ ನಡುವಿನ ಹೋರಾಟದಲ್ಲಿ ಸೋಲುವ ತಂಡವನ್ನು ಬೆಂಗಳೂರು ಮುಖಾಮುಖಿಯಾಗಲಿದೆ.
ಮುಂಬೈ ಮತ್ತು ಇಂದು ನಡೆಯುವ ಸೆಮಿಯಲ್ಲಿ ಗೆಲುವು ಪಡೆಯುವ ತಂಡಗಳು ಚಾಂಪಿಯನ್‌ಶಿಪ್‌ಗಾಗಿ ಭಾನುವಾರ ಹೋರಾಡಲಿವೆ.

No comments: