
ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಅಜೇಯ ಶತಕ ಬಾರಿಸುವ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಬ್ಯಾಟ್ಸ್‌ಮನ್ ಮಹೇಲಾ ಜಯವರ್ಧನೆ, ನಾವೀಗ ತಂಡದಲ್ಲಿ ಭಿನ್ನಾಭಿಪ್ರಾಯವಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದೇವೆ ಎಂದು ಹೇಳಿದ್ದಾರೆ.
ಹೌದು. ನಮ್ಮ ತಂಡದ ಬಗ್ಗೆ ಹಲವು ವಿವಾದಗಳು ಹುಟ್ಟಿಕೊಂಡಿದ್ದವು. ಆದರೆ ಒಂದು ತಂಡವಾಗಿ ಆಡಿದ ನಾವು ಇದಕ್ಕೆಲ್ಲಾ ಉತ್ತರ ನೀಡಿದ್ದೇವೆ. ಅಲ್ಲದೆ ತಂಡದ ಏಕತೆಯನ್ನು ಸಾಬೀತುಪಡಿಸಿದ್ದೇವೆ ಎಂದವರು ಹೇಳಿದರು.
ಇದು ನನ್ನ ಐಪಿಎಲ್‌ನ ಶ್ರೇಷ್ಠ ಇನ್ನಿಂಗ್ಸ್. ಈ ಫಲಿತಾಂಶಕ್ಕಾಗಿ ನಾವು ಕಠಿಣ ಪ್ರಯತ್ನವನ್ನೇ ನಡೆಸಿದ್ದೇವೆ ಎಂದವರು ಹೇಳಿದರು.
ಪಂದ್ಯ ಆರಂಭಕ್ಕೂ ಮೊದಲು ಸ್ನಾಯು ಸೆಳೆತಕ್ಕೊಳಗಾಗಿದ್ದ ಶಾನ್ ಮಾರ್ಶ್ ಬದಲಿ ಆಯ್ಕೆಯಾಗಿ ಆರಂಭಿಕನಾಗಿ ಕ್ರೀಸಿಗಿಳಿಯಲು ಜಯವರ್ಧನೆರಲ್ಲಿ ಕೋಚ್ ಟಾಮ್ ಮೂಡಿ ಸೂಚಿಸಿದ್ದರು.
ನಾನಿದಕ್ಕೆ ಸಂತೋಷದಿಂದ ಒಪ್ಪಿಗೆ ಸೂಚಿಸಿದೆ. ಕೆಲವು ಹೊತ್ತು ಕ್ರೀಸಿನಲ್ಲಿದ್ದರೆ ನಂತರ ಲಯ ವಾಪಾಸ್ ಪಡೆಯುವ ವಿಶ್ವಾಸ ನನ್ನಲಿತ್ತು ಎಂದು ಕಳೆದ ಕೆಲವು ಪಂದ್ಯಗಳಲ್ಲಿ ಕಳಪೆ ಫಾರ್ಮನಿಂದ ಬಳಲುತ್ತಿದ್ದ ಮಹೇಲಾ ನುಡಿದರು.
ನಮ್ಮ ತಪ್ಪಿನಿಂದಾಗಿ ಕೆಲವು ನಿಕಟ ಪಂದ್ಯಗಳನ್ನು ಕಳೆದುಕೊಂಡಿದ್ದವು. ಆದ್ದರಿಂದ ಇಲ್ಲಿ ಗೆಲುವು ದಾಖಲಿಸುವುದು ನಿರ್ಣಾಯಕವೆನಿಸಿತ್ತು. ಒಟ್ಟಿನಲ್ಲಿ ಈ ಜಯ ಸಂತಸ ತಂದಿದೆ ಎಂದವರು ಹೇಳಿದರು.
ಆರಂಭಿಕ ಆರು ಓವರುಗಳು ನಿರ್ಣಾಯಕವೆನಿಸಿತ್ತು. ಉತ್ತಮ ಜತೆಯಾಟ ಮುಂದುವರಿಸುವುದು ಅಗತ್ಯವಾಗಿತ್ತು. ನಂತರ ನನ್ನ ಮೇಲಿದ್ದ ಒತ್ತಡವನ್ನು ಪೂರ್ಣವಾಗಿ ನಾಯಕ ಕುಮಾರ ಸಂಗಕ್ಕರ ವಹಿಸಿದರು. ಇದರಿಂದಾಗಿ ಕ್ರೀಸಿನಲ್ಲಿ ನೆಲೆಯೂರಲು ನನಗೆ ಸಾಧ್ಯವಾಯಿತು. ಆನಂತರ ಕ್ರೀಸಿಗಿಳಿದ ಯುವರಾಜ್ ಸಿಂಗ್ ದೊಡ್ಡ ಶಾಟ್‌ಗಳನ್ನು ಬಾರಿಸುವ ಮೂಲಕ ಗೆಲುವನ್ನು ಸುಲಭಗೊಳಿಸಿದರು ಎಂದವರು ಹೇಳಿದರು.
ಯುವಿ ಕ್ರೀಸಿಗಿಳಿದಾಗ ಮತ್ತೊಂದು ತುದಿಯಲ್ಲಿ ನಿಲ್ಲುವುದು ನನ್ನ ಯೋಜನೆಯಾಗಿತ್ತು. ಅಲ್ಲದೆ ಅತ್ಯುತ್ತಮ ಆಟವಾಡಿದ ಯುವಿ ಫಾರ್ಮ್‌ಗೆ ಮರಳಿರುವುದು ಸಂತಸದ ವಿಚಾರ ಎಂದವರು ಹೇಳಿದರು.
ಅದೇ ವೇಳೆ ನಿಮಗೆ ಕಳೆದುಕೊಳ್ಳಲು ಏನು ಇಲ್ಲದಿದ್ದರ ಪರಿಣಾಮ ಸ್ವತಂತ್ರವಾಗಿ ಆಡಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಮಹೇಲಾ, ಈ ಯೋಚನೆ ಸರಿಯಲ್ಲ. ನಾವೀಗ ಎಲ್ಲವನ್ನೂ ಕಳೆದುಕೊಂಡಿದ್ದೆವು. ನಮ್ಮ ದುರದೃಷ್ಟದ ಬಗ್ಗೆ ಬೇಸರವಿದ್ದು ಇದಕ್ಕೆ ನಾವೇ ಹೊಣೆಗಾರರು. ಆದರೆ ಇದೇ ಆಟವನ್ನು ಮುಂದುವರಿಸುವ ಇರಾದೆ ನಮ್ಮದಾಗಿದ್ದು, ಸೋಲುವುದು ನಮಗಿಷ್ಟವಿಲ್ಲ ಎಂದವರು ಹೇಳಿದರು.
No comments:
Post a Comment