
ದೆಹಲಿಯ ಫಿರೋಜ್ ಷಾ ಕೋಟ್ಲಾ ಪಿಚ್ ಟ್ವೆಂಟಿ-20 ಪ್ರಕಾರದ ಆಟಕ್ಕೆ ಸೂಕ್ತವಲ್ಲ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಅನಿಲ್ ಕುಂಬ್ಳೆ ಹೇಳಿಕೊಂಡಿದ್ದು, ಇದರಿಂದಾಗಿ ಮೈದಾನ ಮತ್ತೊಮ್ಮೆ ವಿವಾದಕ್ಕೆ ಸಿಲುಕುವಂತಾಗಿದೆ.
ಪಂದ್ಯದ ದ್ವಿತೀಯಾರ್ಧದಲ್ಲಿ ವಿಕೆಟ್ ಬಹಳ ನಿಧಾನವಾಗಿ ವರ್ತಿಸುತ್ತಿತ್ತು. ಅಷ್ಟೇ ಅಲ್ಲದೆ ಚೆಂಡು ಪುಟಿದೇಳುತ್ತಿರಲಿಲ್ಲ. ಇದರಿಂದಾಗಿ ಶಾಟ್ ಆಯ್ಕೆಯು ಅತ್ಯಂತ ಕಷ್ಟಕರವಾಗಿತ್ತು ಎಂದು ಕುಂಬ್ಳೆ ಅಭಿಪ್ರಾಯಪಟ್ಟರು.
ಟಾಸ್ ಕೂಡಾ ಪಂದ್ಯ ಸೋಲಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತ್ತು ಎಂದವರು ಹೇಳಿದರು. ಇಂತಹ ವಿಕೆಟುಗಳಲ್ಲಿ 185ರ ಮೊತ್ತ ಬೆನ್ನತ್ತುವುದು ಸವಾಲಿನ ವಿಷಯ. ಅಲ್ಲದೆ ಚುಟುಕು ಪ್ರಕಾರಕ್ಕೆ ಈ ವಿಕೆಟ್ ಸೂಕ್ತವಲ್ಲ ಎಂದವರು ಹೇಳಿದರು.
ಮತ್ತೊಂದೆಡೆ ಟಾಸ್ ಗೆಲುವು ಅದೃಷ್ಟವಾಗಿ ಪರಿಣಮಿಸಿತ್ತು ಎಂದು ಡೆಲ್ಲಿ ಡೇರ್ ಡೆವಿಲ್ಸ್ ನಾಯಕ ಗೌತಮ್ ಗಂಭೀರ್ ಅಭಿಪ್ರಾಯಪಟ್ಟರು.
ಕೋಟ್ಲಾ ಮೈದಾನದಲ್ಲಿ ಸತತ ಮೂರನೇ ಬಾರಿಯೂ ಟಾಸ್ ಜಯಿಸಿರುವ ಗಂಭೀರ್ ನೇತೃತ್ವದ ಡೆಲ್ಲಿ ತಂಡವು ಮೂರು ಬಾರಿಯೂ ಭಯಭೇರಿ ಮೊಳಗಿಸಿತ್ತು.
ಅಪಾಯಕಾರಿ ಪಿಚ್‌ನಿಂದಾಗಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ಭಾರತ ಹಾಗೂ ಶ್ರೀಲಂಕಾ ನಡುವೆ ಕೋಟ್ಲಾ ಮೈದಾನದಲ್ಲಿ ನಡೆದಿದ್ದ ಏಕದಿನ ಪಂದ್ಯವು ರದ್ದಾಗಿತ್ತು. ನಂತರ ಪಿಚ್ ಪರೀಕ್ಷೀಲಿಸಿದ ಐಸಿಸಿ ಪಿಚ್ ಸಮಿತಿಯು ಒಂದು ವರ್ಷದ ನಿಷೇಧ ಹೇರಿತ್ತು.
No comments:
Post a Comment