


ಬಿ.ಸಿ.ರೋಡ್, ಎ.೬: ಬಂಟ್ವಾಳ ತಾಲೂಕಿನ ತುಂಬೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ತುಂಬೆ ವೆಂಟೆಡ್ ಡ್ಯಾಂನ ಅಪಾಯಕಾರಿ ನಿರ್ಮಾಣವನ್ನು ವಿರೋಧಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ಬಂಟ್ವಾಳ ಕ್ಷೇತ್ರ, ಸಂತ್ರಸ್ತ ರೈತರು ಹಾಗೂ ನಾಗರಿಕರ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನಾ ರ‍್ಯಾಲಿ ಮತ್ತು ಬಹಿರಂಗ ಸಭೆ ನಡೆಯಿತು.
ಬಿ.ಸಿ.ರೋಡ್ ಸರ್ಕಲ್‌ನಿಂದ ತುಂಬೆ ವೆಂಟೆಡ್ ಡ್ಯಾಂ ವರೆಗೆ ನಡೆದ ಪ್ರತಿಭಟನಾ ರ‍್ಯಾಲಿಯನ್ನು ಮಾಜಿ ಮಂಡಲ ಪ್ರಧಾನ ಮಹಾಬಲ ಭಟ್ ಉದ್ಘಾಟಿಸಿದರು.
ಬಳಿಕ ಡ್ಯಾಂ ಬಳಿ ನಡೆದ ಬಹಿರಂಗ ಸಭೆಯ ನ್ನುದ್ದೇಶಿಸಿ ಮಾತನಾಡಿದ ತುಂಬೆ ವೆಂಟೆಡ್ ಡ್ಯಾಂ ಸಂತ್ರಸ್ತರ ಹೋರಾಟ ಸಮಿತಿಯ ಕಾರ್ಯದರ್ಶಿ ಎಚ್.ಸುಬ್ರಹ್ಮಣ್ಯ ಭಟ್, ಮಂಗಳೂರಿಗೆ ನಿರಂತರ ೨೪ ಗಂಟೆ ನೀರು ಪೂರೈಸುವ ಉದ್ದೇಶದಿಂದ ೪೮ ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ವೆಂಟೆಡ್ ಡ್ಯಾಂನಿಂದಾಗಿ ಕಳ್ಳಿಗೆ, ಬಿ.ಮೂಡಾ, ತುಂಬೆ, ಸಜಿಪ ಮುನ್ನೂರು, ಪಾಣೆಮಂಗಳೂರು, ನರಿಕೊಂಬು, ಬಿ.ಕಸ್ಬಾ, ನಾವೂರು ಗ್ರಾಮಗಳು ಮುಳುಗಡೆಯ ಭೀತಿ ಎದುರಿಸುತ್ತಿವೆ. ೨೦೦೪ರಲ್ಲಿ ಈ ಯೋಜನೆಯ ರೂಪುರೇಷೆ ಸಿದ್ಧಗೊಂಡಿದ್ದರೂ ಇದರಿಂದ ಎಷ್ಟು ಭೂಪ್ರದೇಶ ಮುಳುಗಡೆಯಾಗಲಿವೆ ಎಂಬ ಮಾಹಿತಿ ನೀಡಲಾಗಿಲ್ಲ ಎಂದು ಅವರು ಆರೋಪಿಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ, ಬಂಟ್ವಾಳ ವಲಯಾಧ್ಯಕ್ಷ ಎಸ್. ಎಚ್.ಶಾಹುಲ್ ಹಮೀದ್, ಸುಳ್ಯ ಕ್ಷೇತ್ರಾಧ್ಯಕ್ಷ ಅಬ್ದುಲ್ ಕಲಾಂ, ಬಂಟ್ವಾಳ ಪುರಸಭಾ ಉಪಾಧ್ಯಕ್ಷ ಇಕ್ಬಾಲ್ ಗೂಡಿನಬಳಿ ನೂತನ ಡ್ಯಾಂ ನಿರ್ಮಾಣ ಕಾಮಗಾರಿ ಕೈಬಿಡಬೇಕು, ಈ ನಿರ್ಮಾಣ ದಿಂದ ಮುಳುಗಡೆಯಾಗುವ ಪ್ರದೇಶಗಳನ್ನು ಗುರುತಿಸಿ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಎಸ್‌ಡಿಪಿಐ ಬಂಟ್ವಾಳ ಕ್ಷೇತ್ರಾಧ್ಯಕ್ಷ ಎಸ್.ಪಿ.ಶಾಹುಲ್ ಹಮೀದ್ ಪ್ರತಿಭಟನೆ ಅಧ್ಯಕ್ಷತೆ ವಹಿಸಿದ್ದರು.
ಎನ್.ಕೆ.ಇದ್ದಿನಬ್ಬ ನಂದಾವರ, ಪ್ರಣ್ ಕುಮಾರ್, ಅಬ್ದುಲ್ ಹಮೀದ್ ಮಂಜೇಶ್ವರ, ಎಸ್‌ಡಿಪಿಐ ಜಿಲ್ಲಾ ಕಾರ್ಯ ದರ್ಶಿ ಅಬ್ದುಲ್ ನಾಸಿರ್, ಎಂ.ಎನ್. ಮುಸ್ತಫಾ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಸ್ಥಳಕ್ಕಾಗಮಿಸಿದ ಮನಪಾ ವಿಶೇಷ ಭೂಸ್ವಾ ಧೀನಾಧಿಕಾರಿ ಪ್ರಭುಲಿಂಗ ಕಾವಳಕಟ್ಟೆ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಈ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಕೊನೆ ಗೊಳಿಸಲಾಯಿತು. ಎರಡು ದಿನಗಳಲ್ಲಿ ಸಂತ್ರಸ್ತರಿಗೆ ಸೂಕ್ತ ಪರಿಹಾರ ಸಿಗದೇ ಇದ್ದಲ್ಲಿ ಪ್ರತಿಭಟನೆ ಮುಂದುವರಿಸುವುದಾಗಿ ಧರಣಿ ನಿರತರು ಎಚ್ಚರಿಸಿದರು.
ಪ್ರತಿಭಟನಾ ರ‍್ಯಾಲಿ ಯುದ್ದಕ್ಕೂ ಕೃಷಿಗೆ ಸಂಬಂಧಪಟ್ಟವುಗಳಾದ ದನ, ಕೋಣ, ಟ್ರಾಕ್ಟರ್, ಬಾಳೆಗಿಡ, ಅಡಿಕೆ ಗಿಡ, ಬೈಹುಲ್ಲು ಹೊತ್ತ ಪ್ರತಿಭಟ ನಕಾರರು ನೋಡುಗರ ಗಮನ ಸೆಳೆದರು.
No comments:
Post a Comment