ಮಂಗಳೂರು, ಎ.೬: ಎಸೆಸೆಲ್ಸಿ ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರಕ್ಕೆ ಹೊರಟ ಮುಸ್ಲಿಮ್ ವಿದ್ಯಾರ್ಥಿನಿಯರು ಧರಿಸಿದ ಬುರ್ಖಾವನ್ನು ಬಲವಂತವಾಗಿ ತೆಗೆಸಿದ ವಿಲಕ್ಷಣ ಘಟನೆ ನಗರದಲ್ಲಿಂದು ನಡೆದಿದೆ.
ನಗರದ ಗಣಪತಿ ಕಾಲೇಜಿನಲ್ಲಿ ಎಸೆಸೆಲ್ಸಿ ಪರೀಕ್ಷಾ ಕೇಂದ್ರವನ್ನು ತೆರೆಯಲಾಗಿದ್ದು, ವಿವಿಧ ಶಾಲೆಗಳ ವಿದ್ಯಾರ್ಥಿಗಳು ಇಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ. ಎ.೧ರ ಗುರುವಾರ ಪರೀಕ್ಷೆಗೆ ಹಾಜರಾಗಲು ಬಂದ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆ ಆಗಲಿಲ್ಲ. ಎ.೫ರ ಸೋಮವಾರ ವಿದ್ಯಾರ್ಥಿನಿ ಯರು ಪರೀಕ್ಷೆಗೆ ಹಾಜರಾಗಲು ಬಂದಾಗ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕಿ ವಿದ್ಯಾರ್ಥಿಗಳಲ್ಲಿ ಬುರ್ಖಾ ತೆಗೆಯುವಂತೆ ಒತ್ತಾಯಿಸಿದ್ದಾರೆ. ಉಪಾಯವಿಲ್ಲದೆ ವಿದ್ಯಾರ್ಥಿನಿಯರು ಬುರ್ಖಾ ತೆಗೆದು ಪರೀಕ್ಷೆಗೆ ಹಾಜರಾಗಿದ್ದಾರೆ.
ಹಾಗೇ ಮನೆಗೆ ತೆರಳಿ ವಿಷಯ ತಿಳಿಸಿದ್ದಾರೆ. ಅದರಂತೆ ಇಂದು ಬೆಳಗ್ಗೆ ವಿದ್ಯಾರ್ಥಿನಿಯರ ಹೆತ್ತವರು ಮತ್ತು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಪ್ರಮುಖರು ಪರೀಕ್ಷಾ ಕೇಂದ್ರಕ್ಕೆ ತೆರಳಿ ಮುಖ್ಯಸ್ಥರಲ್ಲಿ ಮಾತುಕತೆ ನಡೆಸಿದ್ದಾರೆ.
ಅಲ್ಲದೆ ಮುಂದೆ ಇಂಥ ಘಟನೆ ಮರುಕಳಿಸದಂತೆ ನೋಡಿಕೊಳ್ಳುವುದಾಗಿ ಶಿಕ್ಷಕರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪೋಷಕರು ಮನೆಗೆ ಹಿಂದಿರುಗಿದ್ದಾರೆ. ಆನಂತರ ಸ್ವಲ್ಪ ಹೊತ್ತಿನಲ್ಲೇ ವಿದ್ಯಾರ್ಥಿನಿಯರ ಬುರ್ಖಾವನ್ನು ಬಲವಂತವಾಗಿ ತೆಗೆಸಿ ಪರೀಕ್ಷಾ ಕೇಂದ್ರದೊಳಗೆ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನು ವಿದ್ಯಾರ್ಥಿಗಳ ಹೆತ್ತವರು ಗಂಭೀರ ವಾಗಿ ಪರಿಗಣಿಸಿದ್ದು, ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರಿಗೆ ದೂರು ನೀಡಲು ನಿರ್ಧರಿಸಿದ್ದಾರೆ.
ಈ ಹಿಂದೆ ಬಂಟ್ವಾಳ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳ ಸ್ಕಾರ್ಫ್ ತೆಗೆಸಿದ್ದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿರುವ ಮಧ್ಯೆಯೇ ಇದೀಗ ಎಸೆಸೆಲ್ಸಿ ವಿದ್ಯಾರ್ಥಿನಿಯರ ಬುರ್ಖಾ ತೆಗೆಸುವ ಮೂಲಕ ಅಂತಿಮ ಕ್ಷಣದಲ್ಲಿ ಅವರ ಮಾನಸಿಕ ಸ್ಥೆರ್ಯ ಕೆಡಿಸುವ ಪ್ರಯತ್ನಕ್ಕೆ ಹೆತ್ತವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Subscribe to:
Post Comments (Atom)
No comments:
Post a Comment