
ಮಿಂಚಿದ ಮೈಕೆಲ್ ಲಂಬ್
ಜೈಪುರ:43 ಎಸೆತಗಳಿಂದ 83 ರನ್ ದಾಖಲಿಸಿ ಕಿಂಗ್ಸ್ ಇಲೆವೆನ್ ಪಂಜಾಬ್ ಬೌಲರುಗಳನ್ನು ಚಚ್ಚಿ ಹಾಕಿದ ಮೈಕೆಲ್ ಲಂಬ್ ನೆರವಿನಿಂದ ಬುಧವಾರ ಜೈಪುರದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ಒಂಬತ್ತು ವಿಕೆಟುಗಳ ಅಮೋಘ ಜಯ ಸಾಧಿಸಿದೆ.
16 ಬೌಂಡರಿ ಹಾಗೂ ಎರಡು ಸಿಕ್ಸರುಗಳನ್ನು ದಾಖಲಿಸಿದ ಲಂಬ್ ಮತ್ತು ಇನ್ನೊಬ್ಬ ಆರಂಭಿಕ ಆಟಗಾರ ನಮಾನ್ ಓಜಾ (33 ಎಸೆತಗಳಿಂದ 44) ಒಟ್ಟು 57 ಎಸೆತಗಳಿಂದ 109 ರನ್ನುಗಳ ಪಾಲುದಾರಿಕೆ ನೀಡಿದ್ದರು. ಇದರ ಸಹಕಾರದಿಂದ ಇನ್ನೂ ಐದು ಓವರುಗಳು ಬಾಕಿ ಉಳಿದಿರುವಾಗಲೇ ಗುರಿ ದಾಟಿದ ರಾಜಸ್ತಾನ, ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಳ್ಳುವತ್ತ ದಿಟ್ಟ ಹೆಜ್ಜೆಯನ್ನಿಟ್ಟಿತು.
ಅದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ ಪರ ಮಹೇಲಾ ಜಯವರ್ದನೆ 33 ಎಸೆತಗಳಿಂದ 44 ಹಾಗೂ ಯುವರಾಜ್ ಸಿಂಗ್ ಮೂರು ಸಿಕ್ಸರುಗಳನ್ನೊಳಗೊಂಡ 28 ರನ್ ದಾಖಲಿಸಿದ್ದರು. ಆದರೆ ಕೊನೆಯ ಐದು ಓವರುಗಳಲ್ಲಿ ಪಂದ್ಯದ ಮೇಲಿನ ನಿಯಂತ್ರಣ ಕಳೆದುಕೊಂಡ ಪಂಜಾಬ್ ಎರಡು ವಿಕೆಟುಗಳನ್ನು ಕಳೆದುಕೊಂಡು ಕೇವಲ 27 ರನ್ ದಾಖಲಿಸಲಷ್ಟೇ ಸಾಧ್ಯವಾಯಿತು. ಇದರೊಂದಿಗೆ ಒಟ್ಟಾರೆ 20 ಓವರುಗಳಲ್ಲಿ ಆರು ವಿಕೆಟ್ ನಷ್ಟಕ್ಕೆ ಸಾಧಾರಣವೆನಿಸುವ 153 ರನ್ನುಗಳನ್ನಷ್ಟೇ ಕುಮಾರ ಸಂಗಕ್ಕರ ಬಳಗ ಪೇರಿಸಿತ್ತು.
ಪಂಜಾಬ್ ಬೌಲಿಂಗನ್ನು ಬೌಂಡರಿ ಹಾಗೂ ಸಿಕ್ಸರುಗಳ ಮೂಲಕ ಧೂಳೀಪಟ ಮಾಡುತ್ತಾ ಸಾಗಿದ ಲಂಬ್ ಕೇವಲ 3.5 ಓವರುಗಳಲ್ಲಿ ಅರ್ಧಶತಕ ದಾಖಲಿಸುವ ಮೂಲಕ ಐಪಿಎಲ್ ಮೂರನೇ ಆವೃತ್ತಿಯ ವೇಗದ ಅರ್ಧಶತಕ ಎಂಬ ದಾಖಲೆ ನಿರ್ಮಿಸಿದರು.
ಲಂಬ್ ಅತಿ ಹೆಚ್ಚು ದಂಡಿಸಿದ್ದು ಶ್ರೀಶಾಂತ್ ಮತ್ತು ರಮೇಶ್ ಪೊವಾರ್ ಅವರನ್ನು. ಇಬ್ಬರಿಗೂ ಸಾಕಷ್ಟು ಹೊಡೆತಗಳನ್ನು ನೀಡುವ ಚೆಂಡನ್ನು ಬೌಂಡರಿ ಗೆರೆ ದಾಟಿಸುತ್ತಿದ್ದರು.
ಲಂಬ್ ಅವರ ವಿಕೆಟನ್ನು ಕೊನೆಗೂ ಪಡೆದದ್ದು ರವಿ ಬೊಪಾರ. ನಂತರ ಬಂದ ಯೂಸುಫ್ ಪಠಾಣ್ 13 ಎಸೆತಗಳಿಂದ 21 ರನ್ ಗಳಿಸಿ ಅಜೇಯರಾಗುಳಿದಿದ್ದಾರೆ. ಓಜಾ ಕೂಡ 44 ಎಸೆತಗಳೊಂದಿಗೆ ನಾಟೌಟ್. 15 ಓವರುಗಳಲ್ಲಿ 1 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿದ ರಾಜಸ್ತಾನ ಬಹುಬೇಗನೆ ಜಯಗಳಿಸಿ ನಗುವಿನೊಂದಿಗೆ ಪೆವಿಲಿಯನ್‌ಗೆ ಮರಳಿತು.
ಪಂಜಾಬ್ ಪರ ಜಯವರ್ದನೆ ಮತ್ತು ಯುವರಾಜ್ ಹೊರತುಪಡಿಸಿ ಇರ್ಫಾನ್ ಪಠಾನ್ ಅಜೇಯ 24 ಮತ್ತು ಮನ್ವಿಂದರ್ ಬಿಸ್ಲಾ 20 ರನ್ ಗಳಿಸಿದ್ದರು.
ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಲಂಬ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದುಕೊಂಡಿದ್ದಾರೆ.
wd
No comments:
Post a Comment