ಹೊಸದಿಲ್ಲಿ, ಮೇ 28: ಕಳೆದ ವಾರ ಮಂಗಳೂರಿನಲ್ಲಿ ಅಪಘಾತಕ್ಕೀಡಾದ ನತದೃಷ್ಟ ಏರ್ ಇಂಡಿಯಾ ವಿಮಾನವನ್ನು ದುಬೈಯಲ್ಲಿ ಏರಿದ್ದ ಪ್ರಯಾಣಿಕರಲ್ಲಿ ಕನಿಷ್ಠ 10 ಮಂದಿ ನಕಲಿ ಪಾಸ್‌ಪೋರ್ಟ್‌ಗಳನ್ನು ಬಳಸಿ ದ್ದರೆಂದು ಭಾರತೀಯ ದೂತಾವಾಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸುಮಾರು 10 ಪಾಸ್ ಪೋರ್ಟ್‌ಗಳನ್ನು ತಿರುಚಲಾಗಿತ್ತೆಂಬ ಕುರಿತು ತಮಗೆ ಮಾಹಿತಿ ಲಭಿಸಿದೆ ಯೆಂದು ಯುಎಇಯ ಭಾರತೀಯ ರಾಯಭಾರಿ ಎಂ.ಕೆ. ಲೋಕೇಶ್ ರನ್ನುಲ್ಲೇಖಿಸಿ ವರದಿಯೊಂದು ಹೇಳಿದೆ.
ಅವರು ಈ ಕುರಿತು ಹೆಚ್ಚಿನ ವಿವರ ನೀಡಿಲ್ಲವಾದರೂ, ಈ ಬಗ್ಗೆ ಭಾರತದ ಪಾಸ್‌ಪೋರ್ಟ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆಂದು ತಿಳಿಸಿದ್ದಾರೆ.
ಪಾಸ್‌ಪೋರ್ಟ್‌ಗಳ ಮಾಹಿತಿ ಯನ್ನು ತಿರುಚಲಾಗಿದೆ. ಇದರಲ್ಲಿ ಅವ್ಯವಹಾರ ನಡೆದಿದ್ದು, ಸುಳ್ಳು ವಿಳಾಸ ಹಾಗೂ ಬಳಕೆದಾರರಿಗೆ ಹೊಂದಿಕೆ ಯಾಗದ ಭಾವಚಿತ್ರಗಳನ್ನು ಲಗತ್ತಿಸ ಲಾಗಿದೆಯೆಂದು ರಾಯಭಾರ ಕಚೇರಿಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಆದಾಗ್ಯೂ, ಈ ಬಗ್ಗೆ ತಮಗೆ ಅಧಿಕೃತ ದೂರುಗಳು ಬಂದಿಲ್ಲವೆಂದು ದುಬೈಯಲ್ಲಿರುವ ಭಾರತೀಯ ಕಾನ್ಸುಲ್ ಜನರಲ್ ಸಂಜಯ ವರ್ಮಾ ತಿಳಿಸಿದ್ದಾರೆ.
ಈ ನಕಲಿ ಪಾಸ್‌ಪೋರ್ಟ್‌ಗಳನ್ನು ಕಲ್ಲಿಕೋಟೆಯಲ್ಲಿ ವಿತರಿಸಲಾಗಿದೆ ಯೆಂದು ಮಾಧ್ಯಮ ವರದಿಗಳಿಂದ ತಮಗೆ ತಿಳಿದು ಬಂದಿದೆ. ದುಬೈಯಲ್ಲಿ ನೀಡಿರುವ ಪಾಸ್‌ಪೋರ್ಟ್‌ಗಳ ಪರಿಶೀಲನೆ ನಡೆಸುವುದಷ್ಟೇ ತಮ್ಮ ಕೆಲಸವಾಗಿದೆ. ಈ ಬಗ್ಗೆ ದೂರು ಬಂದಲ್ಲಿ ತಾವು ಸಂಬಂಧಿತ ಅಧಿಕಾರಿಗಳನ್ನು ಎಚ್ಚರಿಸುತ್ತೇವೆ. ಈ ಕುರಿತ ತನಿಖೆಗೆ ದೂತಾವಾಸ ನೆರವು ನೀಡುವುದಲ್ಲದೆ, ತಿರುಚಲಾಗಿರುವ ಪಾಸ್‌ಪೋರ್ಟ್‌ಗಳ ಅಸಲಿ ಒಡೆಯರಿಗೂ ಸಹಾಯ ಮಾಡುತ್ತೇವೆಂದು ಅವರು ಹೇಳಿದ್ದಾರೆ.
ಅಪಘಾತಕ್ಕೀಡಾದ ವಿಮಾನದಲ್ಲಿ ಪ್ರಯಾಣಿಸಿದ್ದವರ ಪ್ರಯಾಣ ದಾಖಲೆಗಳ ಕುರಿತಾಗಿ ತನಿಖೆ ಕೈಗೆತ್ತಿಕೊಳ್ಳಲಾಗಿದೆಯೆಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.
ವಿಮಾನಾಪಘಾತದಲ್ಲಿ ಮೃತಪಟ್ಟ ವನೊಬ್ಬನ ಹೆಸರಿನ ಮುಂದೆ ತನ್ನ ಪಾಸ್‌ಪೋರ್ಟ್ ಸಂಖ್ಯೆ, ಇತರ ವೈಯಕ್ತಿಕ ಮಾಹಿತಿ ಹಾಗೂ ವಿಳಾಸ ಗಳನ್ನು ನಮೂದಿಸಲಾಗಿದೆ ಯೆಂದು ದುಬೈ ನಿವಾಸಿಯೊಬ್ಬ ದೂರಿದ ಬಳಿಕ ತನಿಖೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಅಪಘಾತದ ಬಳಿಕ ಬಂಧುವೊಬ್ಬ ಕರೆ ಮಾಡಿ ವಿಚಾರಿಸಿದ ವೇಳೆ ಆತನಿಗೆ ಈ ಬಗ್ಗೆ ತಿಳಿದುಬಂತೆನ್ನಲಾಗಿದೆ.
ಪಾಸ್‌ಪೋರ್ಟ್ ವಂಚನೆ ಗಂಭೀರ ವಿಷಯವಾಗಿದೆ. ಬೇರೆಯವರ ಪಾಸ್ ಪೋರ್ಟ್‌ಗಳಿಗೆ ತಮ್ಮ ಭಾವಚಿತ್ರಗಳನ್ನು ಕೆಲವರು ಅಂಟಿಸುವ ವಿಚಾರ ಗಮನಕ್ಕೆ ಬಂದಿದೆ. ಈ ಬಗ್ಗೆ ಕೇರಳ ಸರಕಾರ ವಿಸ್ತೃತ ಪರಿಶೀಲನೆ ನಡೆಸಬೇಕೆಂದು ಸಾಗರೋತ್ತರ ವ್ಯವಹಾರ ಸಚಿವ ವಯಲಾರ್ ರವಿ ಹೇಳಿದ್ದಾರೆ. ಆದಾಗ್ಯೂ, ನಕಲಿ ಪಾಸ್‌ಪೋರ್ಟ್ ಬಳಸಲಾಗಿರುವ ಕುರಿತು ಯುಎಇ ಅಧಿಕಾರಿಗಳು ಸಂದೇಹ ವ್ಯಕ್ತಪಡಿಸಿದ್ದಾರೆ. ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಏರ್ ಇಂಡಿಯಾ ವಿಮಾನ ದುರಂತದಲ್ಲಿ 158 ಮಂದಿ ಸಾವಿಗೀಡಾಗಿದ್ದು, 8 ಮಂದಿ ಪವಾಡ ಸದೃಶವಾಗಿ ಪಾರಾಗಿದ್ದಾರೆ.
Subscribe to:
Post Comments (Atom)
No comments:
Post a Comment