ಕಳೆದ ವರ್ಷದ ವರುಣನ ಆರ್ಭಟಕ್ಕೆ ಉತ್ತರ ಕರ್ನಾಟಕ ಭಾಗ ಸಂಪೂರ್ಣವಾಗಿ ತತ್ತರಿಸಿ ಹೋಗಿತ್ತು. ಆ ಹಿನ್ನೆಲೆಯಲ್ಲಿ ನೆರೆ ಸಂತ್ರಸ್ತರಿಗೆ ಸಾವಿರಾರು ಮನೆಗಳನ್ನು ಕಟ್ಟಲಾಗಿದೆ ಎಂದು ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ದೂರಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಸರ್ಕಾರ ಈವರೆಗೆ ಕೇವಲ 113 ಮನೆಗಳನ್ನಷ್ಟೇ ಪೂರ್ಣಗೊಳಿಸಿದೆ ಎಂದು ತಿಳಿಸಿದ್ದಾರೆ.
ಅಲ್ಲದೇ ನೆರೆ ಪೀಡಿತ ಉತ್ತರ ಕರ್ನಾಟಕ ಜಿಲ್ಲೆಗಳ ಲಕ್ಷಾಂತರ ಸಂತ್ರಸ್ತರಿಗೆ ಸಮರ್ಪಕ ಪುನರ್ವಸತಿ ಕಲ್ಪಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಇದೇ ಸಂದರ್ಭದಲ್ಲಿ ಹರಿಹಾಯ್ದ ಅವರು, ಸಂತ್ರಸ್ತರ ನೆರವಿಗಾಗಿ ಸಾರ್ವಜನಿಕರಿಂದ 600 ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸಲಾಗಿದೆ. ಆದರೆ ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ವಿವರದಲ್ಲಿ ಕೇವಲ 2.5 ಕೋಟಿ ರೂಪಾಯಿ ದೇಣಿಗೆ ಸಂಗ್ರಹವಾಗಿದೆ ಸರ್ಕಾರ ತಿಳಿಸಿದೆ ಎಂದು ದೂರಿದ್ದಾರೆ.
ರಾಜ್ಯಪಾಲರ ಜೊತೆ ಮಾತುಕತೆ: ಟೀಕಾಪ್ರಹಾರ ನಡೆಸಿರುವ ಗಣಿ ಸಚಿವ ಜನಾರ್ದನ ರೆಡ್ಡಿ ವಿರುದ್ಧ ಬಳಸಲು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಬಳಿ ಸಾಕಷ್ಟು ಮಾಹಿತಿಗಳಿವೆ ಎಂದು ಗೌಡರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ರಾಜ್ಯಪಾಲರೊಂದಿಗೆ 1 ಗಂಟೆಗೂ ಅಧಿಕ ಕಾಲ ಮಾತನಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಬಗ್ಗೆ ಮಾತುಕತೆ ನಡೆಸಿದ್ದೇನೆ. ಅದರಂತೆ ಈ ಬಗ್ಗೆ ರಾಜ್ಯಪಾಲರು ಎಲ್ಲಾ ವಿಚಾರಗಳನ್ನು ತಿಳಿದುಕೊಂಡಿದ್ದಾರೆ ಎಂದು ಹೇಳಿದರು.
ಅಕ್ರಮ ಗಣಿಗಾರಿಕೆ ಬಗ್ಗೆ ನೋಟಿಸ್ ನೀಡಿದ್ದಕ್ಕೆ ರೆಡ್ಡಿ ಟೀಕೆ ಮಾಡಿರುವ ವಿಚಾರವನ್ನು ರಾಜ್ಯಪಾಲರು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಈ ಸಂದರ್ಭದಲ್ಲಿ ವಿವರಿಸಿದರು.
ಈ ನಿಟ್ಟಿನಲ್ಲಿ ಅಕ್ರಮ ಗಣಿಗಾರಿಕೆ ಬಗ್ಗೆ ನಡೆಸುವವರ ವಿರುದ್ಧದ ಪ್ರಕರಣ ಇಲ್ಲಿಗೆ ಮುಗಿಯುತ್ತದೆ ಎಂದು ಭಾವಿಸುವುದು ಬೇಡ ಎಂದ ಅವರು, ರಾಜ್ಯಪಾಲರು ಹಲವು ಕ್ರಮಗಳನ್ನು ಕೈಗೊಳ್ಳಲಿದ್ದಾರೆ. ಇದರಲ್ಲಿ ಮೊದಲನೆಯದು ಕೇಂದ್ರ ಚುನಾವಣಾ ಆಯೋಗಕ್ಕೆ ರೆಡ್ಡಿ ವಿರುದ್ಧ ಶಿಫಾರಸು ಮಾಡಲಿರುವುದಾಗಿ ರಾಜ್ಯಪಾಲರು ತಮಗೆ ಸೂಚ್ಯವಾಗಿ ತಿಳಿಸಿದರು ಎಂದು ಹೇಳಿದ್ದಾರೆ.
Subscribe to:
Post Comments (Atom)
No comments:
Post a Comment