VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 20, 2010

ಆಂಧ್ರ ಕರಾವಳಿಗೆ ಇಂದು ‘ಲೈಲಾ’ ಪ್ರವೇಶ ಸಂಭವ: ಕಟ್ಟೆಚ್ಚರದಲ್ಲಿ ಆಂಧ್ರ ಸರಕಾರ

ಕರ್ನಾಟಕದಲ್ಲೂ ಪರಿಣಾಮ ಸಾಧ್ಯತೆ

ಹೈದರಾಬಾದ್, ಮೇ 19: ಲೈಲಾ ಚಂಡಮಾರುತವು ನಾಳೆ ಮುಂಜಾನೆ ಆಂಧ್ರ ಪ್ರದೇಶ ಕರಾವಳಿಯನ್ನು ದಾಟುವ ನಿರೀಕ್ಷ್ಷೆ ಯಿದ್ದು, ಸಂಪೂರ್ಣ ಆಡಳಿತವು ಕಟ್ಟೆಚ್ಚರ ದಿಂದಿದೆ. ಅಪಾಯ ಸಂಭವಿಸಬಹುದಾದ ಪ್ರದೇಶಗಳಿಂದ ಜನರನ್ನು ತೆರವುಗೊಳಿಸುವ ಕಾರ್ಯವು ಭರದಿಂದ ಸಾಗಿದೆ. ಪರಿಸ್ಥಿತಿಯ ಪರಾಮರ್ಶೆಗಾಗಿ ಉನ್ನತ ಮಟ್ಟದ ಸಭೆಯೊಂದನ್ನು ನಡೆಸಿದ ಮುಖ್ಯಮಂತ್ರಿ ಕೆ. ರೋಸಯ್ಯ, 9 ಕರಾವಳಿ ಜಿಲ್ಲೆಗಳ ಸಚಿವರಿಗೆ ತಮ್ಮ ತಮ್ಮ ಕ್ಷೇತ್ರಗಳಿಗೆ ಧಾವಿಸಿ ರಕ್ಷಣೆ ಹಾಗೂ ಪರಿಹಾರ ಕಾರ್ಯಗಳ ಮೇಲುಸ್ತುವಾರಿ ವಹಿಸುವಂತೆ ನಿರ್ದೇಶನ ನೀಡಿದ್ದಾರೆ.

ಲೈಲಾ ಚಂಡಮಾರುತವು ಪ್ರಕಾಶಂನಿಂದ ವಿಶಾಖಪಟ್ಟಣದ ವರೆಗಿನ ಕರಾವಳಿ ಜಿಲ್ಲೆಗಳಲ್ಲಿ ಹಾವಳಿ ನಡೆಸುವ ಸಂಭವವಿದೆ. ಯಾವುದೇ ಜೀವ ಹಾನಿ ಸಂಭವಿಸದಂತೆ ಖಚಿತಪಡಿಸಲು ಎಲ್ಲರೂ ಕಟ್ಟೆಚ್ಚರದದಿಂದರಬೇಕೆಂದು ರೋಸಯ್ಯ ತನ್ನ ಸಂಪುಟ ಸಹೋದ್ಯೋಗಿಗಳಿಗೆ ಸೂಚಿಸಿದ್ದಾರೆ.
ಅಪಾಯ ಸಂಭವಿಸಬಹುದಾದ ಪ್ರದೇಶಗಳಿಂದ ಜನರನ್ನು ತೆರವುಗೊಳಿಸುವಂತೆ ಅವರು ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಅಗತ್ಯ ಬಿದ್ದಲ್ಲಿ ಸೇನೆಯ ನೆರವು ಪಡೆಯಿರಿ. ಆದರೆ ಗಾಬರಿಗೆ ಅವಕಾಶ ನೀಡಬೇಡಿರೆಂದು ರೋಸಯ್ಯ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.

ಹಿರಿಯ ಐಎಎಸ್ ಅಧಿಕಾರಿಗಳು ಈಗಾಗಲೇ ತೀರ ಜಿಲ್ಲೆಗಳಿಗೆ ಧಾವಿಸಿದ್ದಾರೆ. ಚೆನ್ನೈಯ ಅರಕ್ಕೋಣಂ ಹಾಗೂ ಭುವನೇಶ್ವರಗಳಿಂದ ರಾಷ್ಟೀಯ ವಿಕೋಪ ಪ್ರತಿಕ್ರಿಯಾ ಪಡೆಗಳು ಕೃಷ್ಣಾ ಹಾಗೂ ಪಶ್ಚಿಮ ಗೋದಾವರಿ ಜಿಲ್ಲೆಗಳಿಗೆ ಆಗಮಿ ಸಿದ್ದು, ರಕ್ಷಣಾ ಕಾರ್ಯದಲ್ಲಿ ಕೈ ಜೋಡಿಸಲಿವೆ. ತುರ್ತು ಸಂದರ್ಭಗಳಲ್ಲಿ ಹೆಲಿಕಾಪ್ಟರ್‌ಗಳನ್ನು ಸೇವೆಗೆ ಇಳಿಸಲಾಗುವುದೆಂದು ಮುಖ್ಯಮಂತ್ರಿ ಕಚೇರಿಯ ಮೂಲಗಳು ತಿಳಿಸಿವೆ. ಪುಲಿಕಾಟ್‌ನಿಂದ ಮೀನುಗಾರಿಕೆಗೆ ಹೋಗಿದ್ದ 50ರಷ್ಟು ಬೆಸ್ತರು ದ್ವೀಪವೊಂದರಲ್ಲಿ ಸಿಲುಕಿಕೊಂಡಿದ್ದು, ಅವರನ್ನು ರಕ್ಷಿಸುವ ಪ್ರಯತ್ನ ನಡೆಯುತ್ತಿದೆ.

ತ.ನಾಡಿನಲ್ಲಿ ಇಬ್ಬರು ಬಲಿ-100 ದೋಣಿ ಕಾಣೆ
ರಾಮೇಶ್ವರ (ತ.ನಾ) ಮೇ 19: ‘ ಲೈಲಾ’ ಚಂಡಮಾರುತ ಪ್ರಭಾವಿತ ತೀವ್ರ ಬಿರುಗಾಳಿಯು ತಮಿಳುನಾಡು ತೀರದಲ್ಲಿ ಇಬ್ಬರನ್ನು ಬಲಿ ತೆಗೆದುಕೊಂಡಿದ್ದು, ರಾಮೇಶ್ವರದಿಂದ ಸುಮಾರು 100 ದೋಣಿಗಳಲ್ಲಿ ಮೀನುಗಾರಿಕೆಗೆ ತೆರಳಿದ್ದ ಅನಿರ್ದಿಷ್ಟ ಸಂಖ್ಯೆಯ ಬೆಸ್ತರು ಸೋಮವಾರ ಕಾಣೆಯಾಗಿದ್ದಾರೆಂದು ಅಧಿಕಾರಿಗಳಿಂದು ತಿಳಿಸಿದ್ದಾರೆ. ಪಂಬಸ್, ಉಚಿಪುಲ್ ಹಾಗೂ ನೆರೆಯ ಪ್ರದೇಶಗಳಿಂದ ಮೇ 17ರ ರಾತ್ರಿ ಯಾಂತ್ರಿಕ ದೋಣಿಗಳಲ್ಲಿ ಮೀನುಗಾರಿಕೆಗೆ ಹೋಗಿದ್ದ ಬೆಸ್ತರು ಕಾಣೆಯಾಗಿರುವುದನ್ನು ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಚಂಡಮಾರುತ ಹಾಗೂ ಪ್ರಕ್ಷುಬ್ಧ ಸಾಗರದ ಹೊಡೆತವನ್ನು ತಾಳಿಕೊಳ್ಳಲು ಸಮರ್ಥವಾಗಿರದ ಈ ದೋಣಿಗಳಲ್ಲಿ ಎಷ್ಟು ಮಂದಿ ಮೀನುಗಾರರಿದ್ದರೆಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಚೆನ್ನೈಗೆ 190 ಕಿ.ಮೀ ಈಶಾನ್ಯದಲ್ಲಿ ಬಂಗಾಳಕೊಲ್ಲಿಯಲ್ಲಿ ಕೇಂದ್ರಿತವಾಗಿರುವ ‘ಲೈಲಾ’ ಚಂಡಮಾರುತದ ಪ್ರಭಾವದಿಂದ ತಮಿಳುನಾಡಿನ ಕರಾವಳಿಯಲ್ಲಿ ಮಳೆ ಹಾಗೂ ಸುಂಟರಗಾಳಿ ಹಾವಳಿ ನಡೆಸುತ್ತಿವೆ.

ಚಂಡಮಾರುತವು ನಾಳೆ ಆಂಧ್ರ ಪ್ರದೇಶ ಕರಾವಳಿಯನ್ನು ದಾಟುವ ಭೀತಿಯಿದೆ. ನಿನ್ನೆ ಅಪರಾಹ್ಣ ದೇವಾನಾಂಪಟ್ಟಣಂನಿಂದ ಫೈಬರ್ ದೋಣಿಯಲ್ಲಿ ಸಮುದ್ರದೊಳಕ್ಕೆ ಹೋದ ಮೂವರು ಮೀನುಗಾರರು ಕಾಣೆಯಾಗಿದ್ದು, ಪ್ರದೇಶದಲ್ಲಿ ಉದ್ವಿಗ್ನತೆ ನೆಲೆಸಿದೆಯೆಂದು ಕಡಲೂರಿನಿಂದ ಬಂದ ವರದಿ ತಿಳಿಸಿದೆ. ಭಾರೀ ಅಲೆಗಳು ಹಾಗೂ ಸಾಗರದ ಪ್ರಕ್ಷುಬ್ಧತೆಯ ಕಾರಣದಿಂದಾಗಿ ತಕ್ಷಣಕ್ಕೆ ರಕ್ಷಣಾ ಕಾರ್ಯ ಕೈಗೊಳ್ಳಲು ಸಾಧ್ಯವಾಗಿಲ್ಲವೆಂದು ಅಧಿಕಾರಿಗಳು ಹೇಳಿದ್ದಾರೆ.

ರಾಜ್ಯಕ್ಕೂ ಭೀತಿ
ಬೆಂಗಳೂರು, ಮೇ 19: ಬಂಗಾಳ ಕೊಲ್ಲಿಯಲ್ಲಿ ಎದ್ದಿರುವ ಲೈಲಾ ಚಂಡಮಾರುತ ನಾಳೆ ರಾಜ್ಯಕ್ಕೆ ಅಪ್ಪಳಿಸುವ ಸಾಧ್ಯತೆಯಿದೆ. ನೆರೆಯ ತಮಿಳುನಾಡು, ಆಂಧ್ರಪ್ರದೇಶ, ಪುದುಚೇರಿಗಳಲ್ಲಿ ಈಗಾಗಲೇ ಚಂಡಮಾರುತದ ಪ್ರವೇಶವಾಗಿದ್ದು, ಕರಾವಳಿ ಸೇರಿದಂತೆ ರಾಜ್ಯಕ್ಕೆ ಭೀತಿ ಎದುರಾಗಿದೆ.

ಕೇರಳ, ತಮಿಳುನಾಡು, ಆಂಧ್ರಪ್ರದೇಶಗಳಲ್ಲಿ ಎರಡು ದಿನಗಳ ಕಾಲ ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಹಗುರದಿಂದ ಭಾರಿ ಮಳೆ ಬೀಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿವೆ. ಈ ತಿಂಗಳ ಕೊನೆಯಲ್ಲಿ ಮುಂಗಾರು ರಾಜ್ಯಕ್ಕೆ ಪ್ರವೇಶಿಸ ಬೇಕಿತ್ತು. ಅದರೆ ಅದಕ್ಕೂ ಮುನ್ನವೇ ಲೈಲಾ ಚಂಡಮಾರುತ ಪ್ರವೇಶಿಸುತ್ತಿದೆ. ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆ ಬೀಳುವ ನಿರೀಕ್ಷೆ ಇದೆ. ಈ ಬಾರಿ ಮಳೆ ಬೇಗ ಬರುವ ನಿರೀಕ್ಷೆಯಿಂದ ರೈತ ಸಮುದಾಯ ತನ್ನ ಹೊಲ ಗದ್ದೆಗಳನ್ನು ಬಿತ್ತನೆಗೆ ಸಜ್ಜುಗೊಳಿಸುತ್ತಿದೆ. ಇಂದು ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಬಿಸಿಲಿನ ಬೇಗಯಿಂದ ತತ್ತರಿಸಿದ್ದ ಜನರಿಗೆ ಸ್ವಲ್ಪ ನೆಮ್ಮದಿ ತಂದಿದೆ.

No comments: