
ಮಧ್ಯಮ ಕ್ರಮಾಂಕದ ಆಟಗಾರ ರೋಹಿತ್ ಶರ್ಮಾ (114) ಬಾರಿಸಿದ ಚೊಚ್ಚಲ ಅಂತಾರಾಷ್ಟ್ರೀಯ ಶತಕದ ನೆರವಿನಿಂದ ಪ್ರವಾಸಿ ಭಾರತ ತಂಡವು ಇಲ್ಲಿ ಆತಿಥೇಯ ಜಿಂಬಾಬ್ವೆ ವಿರುದ್ಧ ಆರಂಭವಾದ ತ್ರಿಕೋನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಗೆಲುವಿಗಾಗಿ 286 ರನ್ನುಗಳ ಬೃಹತ್ ಸವಾಲನ್ನೊಡ್ಡಿದೆ.
ಎಡಗೈ ಬ್ಯಾಟ್ಸ್‌ಮನ್ ರವೀಂದ್ರ ಜಡೇಜಾ (61*) ಕೂಡಾ ಅಜೇಯ ಅರ್ಧಶತಕ ಬಾರಿಸುವ ಮೂಲಕ ತಂಡಕ್ಕೆ ನೆರವಾದರು.
ಈ ಮೊದಲು ಟಾಸ್ ಗೆದ್ದ ಭಾರತದ ನಾಯಕ ಸುರೇಶ್ ರೈನಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು.
ಆರಂಭಿಕರಾದ ಮುರಳಿ ವಿಜಯ್ ಮತ್ತು ದಿನೇಶ್ ಕಾರ್ತಿಕ್ ಮೊದಲ ವಿಕೆಟ್‌ಗೆ 56 ರನ್ ಪೇರಿಸುವ ಮೂಲಕ ತಂಡಕ್ಕೆ ಉತ್ತಮ ಆರಂಭವೊದಗಿಸಿದರು.
ಆದರೆ ಧಿಡೀರ್ ಕುಸಿತ ಕಂಡ ಭಾರತವು 61 ರನ್ನುಗಳಿಗೆ ಪ್ರಮುಖ ಮೂರು ವಿಕೆಟುಗಳನ್ನು ಕಳೆದುಕೊಳ್ಳುವ ಹಿನ್ನಡೆ ಅನುಭವಿಸಿತು. ವಿಜಯ್ (11), ಕಾರ್ತಿಕ್ (22) ಮತ್ತು ವಿರಾಟ್ ಕೊಹ್ಲಿ (0) ಬೇಗನೆ ಪೆವಿಲಿಯನ್‌ಗೆ ಸೇರಿಕೊಂಡರು.
ಆದರೆ ನಾಲ್ಕನೇ ವಿಕೆಟ್‌ಗೆ ಜತೆಗೂಡಿದ ನಾಯಕ ರೈನಾ ಮತ್ತು ಶರ್ಮಾ ಅಮೂಲ್ಯ 65 ರನ್ ಜತೆಯಾಟ ನೀಡುವ ಮೂಲಕ ತಂಡವನ್ನು ಮುನ್ನಡೆಸಿದರು. ಈ ಹಂತದಲ್ಲಿ 37 ರನ್ ಗಳಿಸಿದ ರೈನಾ ದೊಡ್ಡ ಹೊಡೆತಕ್ಕೆ ಮುಂದಾಗಿ ತನ್ನ ವಿಕೆಟ್ ಒಪ್ಪಿಸಿದರು.
ನಂತರ ಕ್ರೀಸಿಗಿಳಿದ ರವೀಂದ್ರ ಜಡೇಜಾ ಜೊತೆ ಸೇರಿದ ರೋಹಿತ್ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ದರು. ಆತಿಥೇಯ ಬೌಲರುಗಳನ್ನು ಸಾಕಾಷ್ಟು ದಂಡಿಸಿದ ಈ ಜೋಡಿ ಐದನೇ ವಿಕೆಟ್‌ಗೆ 132 ರನ್ ಒಟ್ಟು ಸೇರಿಸಿದರು.
119 ಎಸೆತಗಳನ್ನು ಎದುರಿಸಿದ ರೋಹಿತ್ ಆರು ಬೌಂಡರಿ ಹಾಗೂ ನಾಲ್ಕು ಸಿಕ್ಸರುಗಳ ನೆರವಿನಿಂದ 114 ರನ್ ಗಳಿಸಿದರು. ಇದು ಅವರ ಚೊಚ್ಚಲ ಅಂತಾರಾಷ್ಟ್ರೀಯ ಶತಕವಾಗಿದೆ.
ಅದೇ ರೀತಿ ರೋಹಿತ್‌ಗೆ ಉತ್ತಮ ಬೆಂಬಲ ನೀಡಿದ ರವೀಂದ್ರ ಜಡೇಜಾ ಕೂಡಾ 61 ರನ್ ಗಳಿಸಿ ಅಜೇಯರಾಗುಳಿದರು. ಅವರ ಈ ಇನ್ನಿಂಗ್ಸ್‌ನಲ್ಲಿ ಐದು ಬೌಂಡರಿಗಳು ಸೇರಿದ್ದವು.
ಕೊನೆಗೆ ಬಂದ ಯೂಸುಫ್ ಪಠಾಣ್ ಕೂಡಾ ತಲಾ ಒಂದು ಸಿಕ್ಸ್ ಹಾಗೂ ಬೌಂಡರಿಯ ನೆರವಿನಿಂದ ಬಿರುಸಿನ 11 ರನ್ ಗಳಿಸುವ ಮೂಲಕ ತಂಡದ ಮೊತ್ತವನ್ನು 280ರ ಗಡಿ ದಾಟಿಸಿದರು.
ಅಂತಿಮವಾಗಿ ಭಾರತ ನಿಗದಿತ 50 ಓವರುಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 285 ರನ್ನುಗಳ ಬೃಹತ್ ಮೊತ್ತ ಪೇರಿಸಿತ್ತು.
ಆರಂಭದಲ್ಲಿ ಮಂಕಾಗಿ ಕಾಣಿಸುತ್ತಿದ್ದ ಭಾರತೀಯ ಬ್ಯಾಟ್ಸ್‌ಮನ್‌ಗಳು ಕೊನೆಯ ಹತ್ತು ಓವರುಗಳಲ್ಲಿ 98ರನ್ ಸೊರೆಗೈದಿದ್ದರು. ಅಲ್ಲದೆ ಇತರೆ ರೂಪದಲ್ಲಿ 29 ರನ್ ಹರಿದು ಬಂದಿದ್ದವು.
ಚಿಗುಂಬುರಾ ಎಸೆದ ಒಂದೇ ಓವರ್‌ನಲ್ಲಿ 26 ರನ್; ಇತರೆ 16
ಭಾರತದ ವಿರುದ್ಧ ನಡೆಯುತ್ತಿರುವ ತ್ರಿಕೋನ ಏಕದಿನ ಸರಣಿಯ ಜಿಂಬಾಬ್ವೆಯ ನಾಯಕ ಎಲ್ಟನ್ ಚಿಗುಂಬುರಾ ಎಸೆದ ಓವರ್‌ವೊಂದರಲ್ಲಿ 26 ರನ್ ಹರಿದು ಬಂದಿದ್ದವು.
ಆದರೆ ಒಂದೇ ಓವರ್‌ನಲ್ಲಿ ಇಷ್ಟು ರನ್ ಸೊರೆಗೈಯಲು ಭಾರತೀಯ ಬ್ಯಾಟ್ಸ್‌ಮನ್‌ಗಳು ಹೆಚ್ಚಿನ ತಾಕತ್ತು ಪ್ರದರ್ಶಿಸಲಿಲ್ಲ. ಬದಲಾಗಿ ಇತರೆ ರೂಪದಲ್ಲಿ 16 ರನ್ ಹರಿದು ಬಂದಿದ್ದವು.
ಪಂದ್ಯದ ನಾಲ್ಕನೇ ಓವರ್ ಪೂರ್ತಿಗೊಳಿಸಲು ಚಿಗುಂಬುರಾ ಒಟ್ಟು 12 ಬಾಲ್‌ಗಳನ್ನು ಎಸೆದಿದ್ದರು. ವೈಡ್‌ನೊಂದಿಗೆ ನೊ ಬಾಲ್ ಕೂಡಾ ಎಸೆದಿದ್ದ ಚಿಗುಂಬರಾ ಈ ಓವರ್ ಮುಗಿಸಲು ಸಾಕಷ್ಟು ಪರದಾಡಿದ್ದರು. ಇದೇ ಓವರ್‌ನಲ್ಲಿ ದಿನೇಶ್ ಕಾರ್ತಿಕ್ ಔಟಾಗಿದ್ದರೂ ಕೂಡಾ ಅದು ಫ್ರಿ-ಹಿಟ್ ಎಸೆತವಾಗಿತ್ತು.
ಚಿಗುಂಬರಾ ಓವರ್ ಗತಿ ಈ ರೀತಿ ಸಾಗಿತ್ತು- 1wd 3wd 0 4 1wd 5wd 5wd 2nb 1 2 1 0
No comments:
Post a Comment