VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 21, 2010

ಆಂಧ್ರಕ್ಕೆ ಅಪ್ಪಳಿಸಿದ ಲೈಲಾ: 40 ಸಾವಿರ ಮಂದಿಯ ಸ್ಥಳಾಂತರ, ಭಾರೀ ಮಳೆಗಾಳಿ, ಬೆಳೆನಾಶ


ಒರಿಸ್ಸಾದತ್ತ ಧಾವಿಸಿದ ಚಂಡಮಾರುತ

ಹೈದರಾಬಾದ್, ಮೇ 20: ಭಾರೀ ಮಳೆ ಹಾಗೂ ಬಿರುಗಾಳಿಯೊಂದಿಗೆ ಗುರುವಾರ ಮಧ್ಯಾಹ್ನ ಆಂಧ್ರಪ್ರದೇಶದ ಕರಾವಳಿಗೆ ಲೈಲಾ ಚಂಡಮಾರುತವು ಅಪ್ಪಳಿಸಿದೆ. ಗುಂಟೂರು ಜಿಲ್ಲೆಯ ಬಾಪಟ್ಲಾ ಪಟ್ಟಣದ ಮೇಲೆ ಅಪ್ಪಳಿ ಸಿದ ಬಳಿಕ ಲೈಲಾ ಚಂಡಮಾರುತವು ತಾಸಿಗೆ 100-110 ಕಿ.ಮೀ. ವೇಗದಲ್ಲಿ ಆಂಧ್ರ ಕರಾವಳಿ ಯನ್ನು ದಾಟಿ ಒರಿಸ್ಸಾದತ್ತ ಸಾಗಿದೆಯೆಂದು ಹವಾಮಾನ ಇಲಾಖೆ ತಿಳಿಸಿದೆ.

ಲೈಲಾ ಚಂಡಮಾರುತದ ಪ್ರಕೋಪಕ್ಕೆ ಆಂಧ್ರದ ನೆಲ್ಲೂರಿನಲ್ಲಿ ಮೂವರು ಹಾಗೂ ತಮಿಳುನಾಡಿನಲ್ಲಿ ಇಬ್ಬರು ಬಲಿಯಾಗಿದ್ದಾರೆ ಮತ್ತು ಐವರು ನಾಪತ್ತೆಯಾಗಿದ್ದಾರೆ. ಆರು ಅಡಿ ಎತ್ತರದ ಅಲೆಗಳು ತೀರಪ್ರದೇಶಗಳಿಗೆ ಅಪ್ಪಳಿಸುವ ಸಾಧ್ಯತೆಯಿದೆಯೆಂದು ಹವಾಮಾನ ಇಲಾಖೆಯು ಮುನ್ನೆಚ್ಚರಿಕೆ ನೀಡಿತ್ತು. ಆಂಧ್ರ ಕರಾವಳಿಗೆ ಅಪ್ಪಳಿಸಿದ ಬಳಿಕ ಲೈಲಾ ಚಂಡಮಾರುತವು ಮತ್ತೆ ಬಂಗಾಳಕೊಲ್ಲಿಯತ್ತ ಧಾವಿಸಿದ್ದು, ದುರ್ಬಲಗೊಳ್ಳುವ ಲಕ್ಷಣಗಳನ್ನು ತೋರುತ್ತಿದೆಯೆಂದು ದಿಲ್ಲಿಯ ಹವಾಮಾನ ಇಲಾಖೆಯ ವರದಿಯು ತಿಳಿಸಿದೆ.

ನೆಲ್ಲೂರು, ಕೃಷ್ಣಾ, ವಿಶಾಖಪಟ್ಟಣಂ ಮತ್ತಿತರ ಆಂಧ್ರಪ್ರದೇಶದ ಜಿಲ್ಲೆಗಳ ಕರಾವಳಿಯಲ್ಲಿ ಭಾರೀ ಗಾತ್ರದ ಕಡಲ ಅಲೆಗಳು ಮತ್ತು ಭಯಂಕರ ಬಿರುಗಾಳಿಯು ಕಂಡುಬಂದ ಹಿನ್ನೆಲೆಯಲ್ಲಿ ಸಾವಿರಾರು ಜನರನ್ನು ತೀರಪ್ರದೇಶಗಳಿಂದ ಸ್ಥಳಾಂತರಗೊಳಿಸಲಾಗಿದೆ.ಈ ಪ್ರದೇಶಗಳಲ್ಲಿ ನೂರಾರು ಮರಗಳು ಧರೆಗುರುಳಿದ್ದು, ಕಾರು ಮತ್ತಿತರ ವಾಹನಗಳು ಜಖಂಗೊಂಡಿವೆ ಮತ್ತು ರಸ್ತೆಗಳು ಹಾನಿಗೀಡಾಗಿವೆ.

ಚಂಡಮಾರುತದ ಹಾವಳಿಯ ಪ್ರದೇಶಗಳಲ್ಲಿ ದೂರವಾಣಿ ಮತ್ತು ವಿದ್ಯುತ್ ಸಂಪರ್ಕಗಳು ಕಡಿದಿವೆ. ವಾಯುಯಾನ ಮತ್ತು ರೈಲು ಸಂಚಾರ ಅಸ್ತವ್ಯಸ್ತಗೊಂಡಿವೆ. ಆದರೆ ಸಂಜೆಯ ವೇಳೆಗೆ ನೆಲ್ಲೂರಿನಲ್ಲಿ ಕಡಲು ಶಾಂತವಾಗ ತೊಡಗಿದೆಯೆಂದು ವರದಿಗಳು ತಿಳಿಸಿವೆ. ಚಂಡಮಾರುತದ ಭೀತಿಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಆಂಧ್ರದಲ್ಲಿ 36 ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ.

ಹಲವೆಡೆ ರೈಲು ಹಳಿಗಳು ನೆರೆನೀರಿನಡಿ ಮುಳುಗಿರುವುದರಿಂದ ಕೆಲವು ರೈಲುಗಳು ವಿಳಂಬವಾಗಿ ಸಂಚರಿಸುತ್ತಿವೆ. ಮಂಗಳವಾರ ರಾತ್ರಿಯಿಂದೀಚೆಗೆ ಭಾರೀ ಮಳೆಗಾಳಿಗೆ ಮತ್ತು ಮನೆಕುಸಿತದ ಘಟನೆಗಳಲ್ಲಿ 14 ಮಂದಿ ಸಾವನ್ನಪ್ಪಿದ್ದಾರೆ ಹಾಗೂ ಕನಿಷ್ಠ 25 ಮಂದಿ ಮೀನುಗಾರರು ನಾಪತ್ತೆಯಾಗಿದ್ದಾರೆ.ಗುಂಟೂರು, ಕೃಷ್ಣಾ ಪಶ್ಚಿಮ ಹಾಗೂ ಪೂರ್ವ ಗೋದಾವರಿ ಜಿಲ್ಲೆಗಳ ಕರಾವಳಿ ಪ್ರದೇಶದಲ್ಲೂ ಹಲವಾರು ಪ್ರದೇಶಗಳು ಜಲಾವೃತಗೊಂಡಿವೆ. ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆಯಲಾದ ಮಾವು, ಬಾಳೆ ಮತ್ತಿತರ ತೋಟಗಾರಿಕಾ ಬೆಳೆಗಳು ನಾಶಗೊಂಡಿವೆ.

ಲೈಲಾ ಚಂಡಮಾರುತದ ಪ್ರಕೋಪವನ್ನು ಎದುರಿಸಲು ಆಂಧ್ರಪ್ರದೇಶ ಮತ್ತು ತಮಿಳುನಾಡು ಸರ್ವ ಸನ್ನದ್ಧವಾಗಿದ್ದವು.
ಆಂಧ್ರ ಕರಾವಳಿಯ ಹಲವಾರು ತಗ್ಗುಪ್ರದೇಶಗಳಿಂದ 40 ಸಾವಿರ ಮಂದಿಯನ್ನು ತೆರವುಗೊಳಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ನಾಗರಿಕ ಆಡಳಿತಕ್ಕೆ ನೆರವು ನೀಡಲು ಸೇನೆ ಕೂಡಾ ಸಜ್ಜಾಗಿದೆ. ಈಗಾಗಲೇ 32 ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ.

ಈ ಮಧ್ಯೆ ಬುಧವಾರ ಭಾರೀ ಮಳೆಗಾಳಿಯಿಂದ ಬಾಧಿತವಾದ ಉತ್ತರ ತಮಿಳುನಾಡಿನ ಕರಾವಳಿ ಜಿಲ್ಲೆಗಳಲ್ಲಿ ಇಂದು ಮಳೆಯ ಪ್ರಕೋಪ ಕೊಂಚ ತಗ್ಗಿದೆ. ಕರಾವಳಿ ಪ್ರದೇಶಗಳಿಂದ ತೆರವುಗೊಳಿಸಲ್ಪಟ್ಟ ಮೀನುಗಾರರು ಇಂದು ತಮ್ಮ ಮನೆಗಳಿಗೆ ಮರಳಿದ್ದಾರೆ. ಆದರೆ ಸಮುದ್ರ ರೌದ್ರಾವತಾರ ತಾಳಿರುವುದರಿಂದ ಅವರು ಮೀನುಗಾರಿಕೆಗೆ ತೆರಳಲಿಲ್ಲ.

ಪ.ಬಂಗಾಳ, ಒರಿಸ್ಸಾದಲ್ಲಿ ಕಟ್ಟೆಚ್ಚರ
ಈ ಮಧ್ಯೆ ಲೈಲಾ ಚಂಡಮಾರುತವು ಒರಿಸ್ಸಾ ಕರಾವಳಿಯತ್ತ ಧಾವಿಸುತ್ತಿರುವುದರಿಂದ ಪಶ್ಚಿಮ ಬಂಗಾಳ ಮತ್ತು ಒರಿಸ್ಸಾಗಳ ಸಮುದ್ರತೀರ ಪ್ರದೇಶಗಳಲ್ಲಿ ರಾಜ್ಯ ಸರಕಾರಗಳು ಕಟ್ಟೆಚ್ಚರವನ್ನು ಘೋಷಿಸಿವೆ ಹಾಗೂ ಮೀನುಗಾರರು ಬಂಗಾಳಕೊಲ್ಲಿಗೆ ಇಳಿಯಕೂಡದೆಂದು ಸೂಚನೆ ನೀಡಿದೆ.

ಲೈಲಾ ಚಂಡಮಾರುತವು ದುರ್ಬಲಗೊಂಡಿದೆಯಾದರೂ, ಅದು ವಾರಾಂತ್ಯದಲ್ಲಿ ಉತ್ತರ ಬಂಗಾಳಕೊಲ್ಲಿಯಲ್ಲಿ ಮತ್ತೆ ಬಲಿಷ್ಠಗೊಳ್ಳುವ ಸಾಧ್ಯತೆಯೆಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

No comments: