
ರಾಂಚಿ,ಮೇ 20: ದಿಢೀರ್ ಬೆಳವಣಿಗೆಯೊಂದರಲ್ಲಿ, ಜಾರ್ಖಂಡ್ ಮುಖ್ಯ ಮಂತ್ರಿ ಶಿಬು ಸೊರೇನ್ ತಾನು ಪದತ್ಯಾಗ ಮಾಡುವುದಿಲ್ಲವೆಂದು ಘೋಷಿಸಿದ್ದಾರೆ ಮತ್ತು ಬಿಜೆಪಿಯ ಜೊತೆಗೆ ಏರ್ಪಟ್ಟಿರುವ ಅಧಿಕಾರ ಹಂಚಿಕೆಯ ಸೂತ್ರ ಸ್ವೀಕಾರಾರ್ಹವಲ್ಲವೆಂದು ಹೇಳಿದ್ದಾರೆ.
ಬೊಕಾರೊದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು ‘‘ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯಲಾರೆ. ಅಧಿಕಾರದ ಹಂಚಿಕೆಯ ಸೂತ್ರಕ್ಕೆ ನಮ್ಮ ಒಪ್ಪಿಗೆಯಿಲ್ಲ. ನಾನು ವಿಧಾನಸಭಾ ಚುನಾವಣೆಯಲ್ಲಿ ಹೋರಾಡುವೆ’’ ಎಂದು ಹೇಳಿದರು.
ಆದರೆ ಯಾವ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲಿರುವೆನೆಂದು ಅವರು ಬಹಿರಂಗಪಡಿಸಲಿಲ್ಲ. ಲೋಕಸಭಾ ಸದಸ್ಯರಾದ ಜೆಎಂಎಂ ನಾಯಕ ಸೊರೇನ್, ತನ್ನ ಮುಖ್ಯಮಂತ್ರಿ ಪಟ್ಟವನ್ನು ಉಳಿಸಿಕೊಳ್ಳಬೇಕಾದರೆ ರಾಜ್ಯ ವಿಧಾನಸಭೆಗೆ ಜೂನ್ 30 ರೊಳಗೆ ಅವರು ಆಯ್ಕೆಯಾಗಬೇಕಾಗಿದೆ. ಬಿಜೆಪಿ ಹಾಗೂ ಜೆಎಂಎಂ ಮಂಗಳವಾರ ಏರ್ಪಡಿಸಿಕೊಂಡ ಒಪ್ಪಂದದ ಪ್ರಕಾರ ಜಾರ್ಖಂಡ್‌ನಲ್ಲಿ ತಲಾ 28 ತಿಂಗಳುಗಳಿಗೆ ಎರಡೂ ಪಕ್ಷಗಳು ಮುಖ್ಯಮಂತ್ರಿ ಹುದ್ದೆಯನ್ನು ಹಂಚಿಕೊಳ್ಳುವುದಾಗಿ ತೀರ್ಮಾನಿಸಲಾಗಿತ್ತು.
No comments:
Post a Comment