
ಬೆಂಗಳೂರು, ಮೇ. 27 : ಮಾನಸ ಸರೋವರ ಪ್ರವಾಸದಲ್ಲಿರುವ ಯಶವಂತಪುರದ ಶಾಸಕಿ ಶೋಭಾ ಕರಂದ್ಲಾಜೆ ಅವರಿಗೆ ಗೃಹ ಖಾತೆ ನೀಡುವುದು ಖಾತ್ರಿಯಾಗಿದೆಯಂತೆ?
ಸಂಪುಟದಲ್ಲಿ ಈಗಾಗಲೇ ಮೂರು ಸ್ಥಾನಗಳು ಖಾಲಿ ಇವೆ. ಗೃಹ ಸಚಿವ ಆಚಾರ್ಯ ಅವರನ್ನು ದೆಹಲಿಗೆ ದಬ್ಬುವ ಕಾರ್ಯ ಶುರುವಾಗಿದೆ. ಈ ಸ್ಥಾನದಲ್ಲಿ ಶೋಭಾ ಕರಂದ್ಲಾಜೆ ಅವರನ್ನು ತರಲು ಮುಖ್ಯಮಂತ್ರಿ ಯಡಿಯೂರಪ್ಪ ಟೊಂಕ ಕಟ್ಟಿ ನಿಂತಿದ್ದಾರೆ ಎನ್ನುವ ಸುದ್ದಿ ವಿಧಾನಸೌಧದ ಮೊಗಸಾಲೆ ಕೇಳಿ ಬರತೊಡಗಿದೆ. ಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ ಎಂದು ಹೇಳುತ್ತಾ ಬಂದಿರುವ ಮುಖ್ಯಮಂತ್ರಿ, ಸದ್ದಿಲ್ಲದೇ ಸಂಪುಟಕ್ಕೆ ಯಾರನ್ನು ತೆಗೆದುಕೊಳ್ಳಬೇಕು ಎಂಬ ಚಿಂತನೆ ನಡೆಸಿದ್ದಾರೆ.
ಸಂಪುಟದಲ್ಲಿ ಒಬ್ಬೇ ಒಬ್ಬ ಮಹಿಳೆಗೆ ಸ್ಥಾನ ಕಲ್ಪಿಸದಿರುವ ಕಾರಣ ಅನೇಕ ಟೀಕೆ ಟಿಪ್ಪಣಿಗಳನ್ನು ಯಡಿಯೂರಪ್ಪ ಎದುರಿಸಬೇಕಾಗಿದೆ. ಇದ್ದೊಬ್ಬ ಸಮರ್ಥ ಮಂತ್ರಿ ಶೋಭಾ ಕರಂದ್ಲಾಜೆ ಅವರಿಂದ ಒಲ್ಲದ ಮನಸ್ಸಿನಿಂದ ಅನಿವಾರ್ಯವಾಗಿ ರಾಜೀನಾಮೆ ಪಡೆದುಕೊಂಡಿದ್ದರು. ಇದೀಗ ಮತ್ತೆ ಸಂಪುಟ ವಿಸ್ತರಣೆಗೆ ಕಾಲ ಕೂಡಿ ಬಂದಿದೆ. ಜೂನ್ ತಿಂಗಳ 15ರೊಳಗೆ ಸಂಪುಟ ವಿಸ್ತರಣೆ ಆಗುವ ಸಾಧ್ಯತೆ ಇದೆ.
ಇದರ ಜೊತೆಗೆ ಸಂಪುಟದಲ್ಲಿ ಕೆಲಸ ಮಾಡದಿರುವ ಸೋಮಾರಿ ಸಚಿವರನ್ನು ಕೈಬಿಡಲು ಸಿಎಂ ಮುಖಂಡರೊಂದಿಗೆ ಚರ್ಚೆ ನಡೆಸಿದ್ದಾರೆ. ಕನಿಷ್ಠ ನಾಲ್ಕಾರು ಮಂದಿಯನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ಕೊಡಬೇಕು ಎನ್ನುವ ಆಲೋಚನೆಯೂ ಯಡಿಯೂರಪ್ಪ ಅವರದಾಗಿದೆ. ಆದರೆ, ರೆಡ್ಡಿಗಳ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಜಗದೀಶ್ ಶೆಟ್ಟರ್ ಕೂಡ ಬಾಯಿ ಬಿಟ್ಟಿಲ್ಲ. ರೇಣುಕಾಚಾರ್ಯ ಬಾಯಿಬಿಡುವ ಛಾನ್ಸೆ ಇಲ್ಲ. ಬೇಳೂರು ಗೋಪಾಲಕೃಷ್ಣ, ಸಿಟಿ ರವಿ, ಆನೇಕಲ್ ನಾರಾಯಣಸ್ವಾಮಿ, ಶಂಕರಲಿಂಗೇಗೌಡ, ಡಿ ಎಚ್ ಶಂಕರಮೂರ್ತಿ, ಕಮಲಾಗೌಡ ಇತರರು ಹೋರಾಟ ಆರಂಭವಾಗಲಿದೆ. ಯಾರು ಏನೇ ಮಾಡಿದರೂ ಶೋಭಾ ಕರಂದ್ಲಾಜೆ ಮಂತ್ರಿಯಾಗಿ ಮತ್ತೊಮ್ಮೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಒಟ್ಟಿನಲ್ಲಿ ಜೂನ್ ತಿಂಗಳಲ್ಲಿ ಸರಕಾರದಲ್ಲಿ ಬಿರುಗಾಳಿ ಏಳುವ ಸಾಧ್ಯತೆ ಇವೆ ಅಂತೀರಾ?
ಯಾತ್ರೆಯಲ್ಲಿರುವ ನಾನು ಬೆಂಗಳೂರಿಗೆ ಮರಳುವುದು ಜೂನ್ 4ಕ್ಕೆ ಎಂದು ಶೋಭಾ ಅವರೇ ಫೇಸ್ ಬುಕ್ ಮತ್ತು ಟ್ವಿಟ್ಟರ್ ಬರೆದುಕೊಂಡಿದ್ದಾರೆ. ಅಲ್ಲಿಯವರೆಗೆ ಸಸ್ಪೆನ್ಸ್ ಮುಂದುವರಿಯಲಿದೆ.
ಸಚಿವ ಸಂಪುಟಕ್ಕೆ ಮತ್ತೆ ಶೋಭಾ ಸೇರ್ಪಡೆ: ಸಿಎಂ ನುಡಿ
ಸದ್ಯಕ್ಕೆ ಸಚಿವ ಸಂಪುಟ ವಿಸ್ತರಣೆ ಇಲ್ಲ ಎಂದು ಹೇಳುತ್ತಲೇ ಬಂದಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದೀಗ ದಿಢೀರನೆ ಸಚಿವ ಸಂಪುಟ ವಿಸ್ತರಣೆ ಕುರಿತು ಮುನ್ಸೂಚನೆ ನೀಡಿದ್ದು, ಶೋಭಾ ಕರಂದ್ಲಾಜೆ ಸೇರ್ಪಡೆ ಬಗ್ಗೆ ಪರಿಶೀಲನೆ ನಡೆಸುವುದಾಗಿ ಗುರುವಾರ ತಿಳಿಸಿದ್ದಾರೆ.
ಬಳ್ಳಾರಿಗೆ ಆಗಮಿಸಿದ್ದ ಮುಖ್ಯಮಂತ್ರಿಗಳು ಸುದ್ದಿಗಾರರೊಂದಿಗೆ ಮಾತನಾಡುತ್ತ, ಸಚಿವ ಸಂಪುಟ ವಿಸ್ತರಣೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಶೀಘ್ರವೇ ಸಂಪುಟದ ವಿಸ್ತರಣೆ ಮಾಡುವುದಾಗಿ ಹೇಳಿದರು. ಅಲ್ಲದೇ ಶೋಭಾ ಕರಂದ್ಲಾಜೆ ಮರು ಸೇರ್ಪಡೆ ಕುರಿತಂತೆ ಚರ್ಚೆ ನಡೆಯುತ್ತಿದೆ ಎಂದರು.
ಬಳ್ಳಾರಿ ಸಚಿವರ ಮೇಲಿದ್ದ ದೂರುಗಳನ್ನು ವಾಪಸ್ ಪಡೆಯುವುದಾಗಿಯೂ ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಹೇಳಿದರು. ವಿಧಾನಪರಿಷತ್, ರಾಜ್ಯಸಭೆಗೆ ಚುನಾವಣೆ ನಡೆದ ಬೆನ್ನಲ್ಲೇ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು. ಯಾರು ಸೇರ್ಪಡೆಯಾಗುತ್ತಾರೆ, ಯಾರನ್ನು ಕೈಬಿಡಬೇಕು ಎಂಬ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಆದರೆ ಶೋಭಾ ಕರಂದ್ಲಾಜೆಯನ್ನು ಸಂಪುಟಕ್ಕೆ ಮತ್ತೆ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದ ಸಂದರ್ಭದಲ್ಲಿ ಸಚಿವ ಕರುಣಾಕರ ರೆಡ್ಡಿ ಕೂಡ ಸಮೀಪದಲ್ಲೇ ಇದ್ದರು ಕೂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲವಾಗಿತ್ತು. ಶೋಭಾ ಸೇರ್ಪಡೆ ಕುರಿತಂತೆ ಮತ್ತೆ ರೆಡ್ಡಿ ಸಹೋದರರು ಯಾವ ನಾಟಕ ಆಡುತ್ತಾರೋ ಎಂಬುದನ್ನು ಕಾದು ನೋಡಬೇಕಾಗಿದೆ.
ಸರ್ಕಾರದ ಆಡಳಿತದಲ್ಲಿ ಶೋಭಾ ಕರಂದ್ಲಾಜೆ ಮೂಗು ತೂರಿಸುವ ಮೂಲಕ ತಮ್ಮ ವ್ಯಾಪ್ತಿ ಮೀರಿ ವರ್ತಿಸುತ್ತಿದ್ದಾರೆಂದು ಆರೋಪಿಸಿ ರೆಡ್ಡಿ ಸಹೋದರರು ಸಹೋದ್ಯೋಗಿ ಶಾಸಕರನ್ನು ಹೈದರಾಬಾದ್, ಗೋವಾ ರೆಸಾರ್ಟ್‌ಗಳಲ್ಲಿ ಇರಿಸಿ, ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸರ್ಕಾರವನ್ನೇ ಇಕ್ಕಟ್ಟಿಗೆ ಸಿಲುಕಿಸಿದ್ದರು. ಅಂತೂ ಕೊನೆಗೂ ಪಕ್ಷದ ಹೈಕಮಾಂಡ್, ಸುಷ್ಮಾ ಸ್ವರಾಜ್ ಅವರ ಮುಂದಾಳತ್ವದಲ್ಲಿ ರಾಜಿ ಸೂತ್ರ ನಡೆದು, ಶೋಭಾ ಕರಂದ್ಲಾಜೆ ತಲೆದಂಡ ತೆಗೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.
No comments:
Post a Comment