
ಬೆಂಗಳೂರು, ಮೇ. 27 : ಕಳೆದ ಒಂದು ವರ್ಷದ ಹಿಂದೆಯೇ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಕೇಂದ್ರ ಮಂತ್ರಿಯಾಗಬೇಕಿತ್ತು. ಆದರೆ, ತೃತೀಯ ರಂಗ ಹಿಡಿದು ಉಯ್ಯಾಲೆಯಾಡಿದ್ದ ಗೌಡರ ಮೇಲೆ ಸೋನಿಯಾ ಮುನಿಸಿಕೊಂಡಿದ್ದರಿಂದ ಅದು ಸಾಧ್ಯವಾಗಿರಲಿಲ್ಲ. ಆದರೆ, ಇದೀಗ ಕಾಲ ಕೂಡಿ ಬಂದಿದ್ದು, ರಾಜ್ಯಸಭಾ ಚುನಾವಣೆ ದೆಸೆಯಿಂದ ಕುಮಾರಣ್ಣ ಕೇಂದ್ರ ಮಂತ್ರಿಯಾಗುವ ಎಲ್ಲ ಲಕ್ಷಣಗಳೂ ಇವೆ.
ಕಾಂಗ್ರೆಸ್ ನಿಂದ ರಾಜ್ಯಸಭೆಗೆ ಇಬ್ಬರ ಆಯ್ಕೆಗೆ ಜೆಡಿಎಸ್ ಗೆ ಬೆಂಬಲ, ಸಹಕಾರ ನೀಡಲಿದ್ದು, ಇದಕ್ಕೆ ಪ್ರತಿಯಾಗಿ ಕುಮಾರಸ್ವಾಮಿಯವರಿಗೆ ಕೇಂದ್ರ ಮಂತ್ರಿ ಮಂಡಲದಲ್ಲಿ ಸ್ಥಾನ ಹಾಗೂ ವಿದಾನ ಪರಿಷತ್ ನಲ್ಲಿ ಜೆಡಿಎಸ್ ಗೆ ಎರಡು ಸ್ಥಾನ ನೀಡುವ ವಿಚಾರದಲ್ಲಿ ಚೌಕಾಶಿ ನಡೆದಿದೆ. ಈ ಸಂಬಂಧ ಕುಮಾರಸ್ವಾಮಿ ಕಾಂಗ್ರೆಸ್ ನ ಕೇಂದ್ರ ನಾಯಕರ ಜೊತೆ ಗಂಭೀರ ಚರ್ಚೆ ನಡೆಸಿದ್ದಾರೆ. ಅಲ್ಲದೇ ರಾಮನಗರದ ಕಬ್ಬಾಳಮ್ಮನ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರಿಗೆ ಆ ಪದವಿ ಸಿಗುವ ಶಕುನವೂ ದೊರೆತಿರುವುದರಿಂದ ಅವರ ಹುಮ್ಮಸ್ಸು ಮತ್ತಷ್ಟು ಹೆಚ್ಚಿದೆ.
ಇದಕ್ಕೆ ದೇವೇಗೌಡರ ಆಶೀರ್ವಾದ ಇದೆ ಎನ್ನಲಾಗಿದ್ದು, ನೈಸ್ ಮತ್ತು ಗಣಿಧಣಿಗಳ ವಿರುದ್ಧ ನಿರಂತರವಾಗಿ ಕುಸ್ತಿ ಹಿಡಿದಿರುವ ಗೌಡರಿಗೆ ಕೇಂದ್ರದ ಸಖ್ಯೆ ಬೆಳೆಸುವುದು ಅವಶ್ಯವಾಗಿದೆ. ಜೊತೆಗೆ ಕುಮಾರಸ್ವಾಮಿ ಮಂತ್ರಿಯಾದರಂತೂ ಯಡಿಯೂರಪ್ಪ, ರೆಡ್ಡಿಗಳು, ಅಶೋಕ್ ಖೇಣಿ ಅವರನ್ನು ಆಟ ಆಡಿಸುವ ಎಂಬ ಲೆಕ್ಕಾಚಾರ ಹಾಕಿರಬಹುದು. ಆದರೆ, ಇದಕ್ಕೆ ಪ್ರತಿಪಕ್ಷದ ನಾಯಕ ಹಾಗೂ ದೇವೇಗೌಡರ ವಿರೋಧಿ ಎಂದೇ ಹೇಳಲಾಗಿರುವ ಸಿದ್ಧರಾಮಯ್ಯ ಅವರ ಪ್ರತಿಕ್ರಿಯೆ ಬಂದಿಲ್ಲ.
No comments:
Post a Comment