
ಸುರೇಶ್ ರೈನಾ ನೇತೃತ್ವದ ಭಾರತದ ಯುವ ತಂಡವು ಶುಕ್ರವಾರದಿಂದ ಆರಂಭವಾಗಲಿರುವ ತ್ರಿಕೋನ ಸರಣಿಯಲ್ಲಿ ಪಾಲ್ಗೊಳ್ಳಲಿದ್ದು, ಮೊದಲ ಪಂದ್ಯದಲ್ಲಿ ಆತಿಥೇಯ ಜಿಂಬಾಬ್ವೆ ತಂಡವನ್ನು ಎದುರಿಸಲಿದೆ.
ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ಮತ್ತೊಂದು ತಂಡ ಶ್ರೀಲಂಕಾ. ಭಾರತದ ಪಾಲಿಗಿದು ಯುವ ಆಟಗಾರರಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಸಿಕ್ಕಿದ ಉತ್ತಮ ವೇದಿಕೆಯೆಂದೇ ಪರಿಗಣಿಸಲಾಗಿದೆ.
ಭಾರತದ ತಂಡದಲ್ಲಿ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಇದರಿಂದಾಗಿ ತಂಡಕ್ಕೆ ಸಾರಥಿಯಗಲಿರುವ ಸುರೇಶ್ ರೈನಾ ಯಾವ ರೀತಿ ಒತ್ತಡದ ಪರಿಸ್ಥಿತಿಯನ್ನು ನಿಭಾಯಿಸುತ್ತಾರೆಂಬುದು ಪ್ರಮುಖ ಅಂಶ.
ಭಾರತ ತನ್ನ ಬ್ಯಾಟಿಂಗ್ ವಿಭಾಗದಲ್ಲಿ ಉಪನಾಯಕ ವಿರಾಟ್ ಕೊಹ್ಲಿ, ಯೂಸುಫ್ ಪಠಾಣ್, ರೋಹಿತ್ ಶರ್ಮಾ, ದಿನೇಶ್ ಕಾರ್ತಿಕ್ ಮತ್ತು ಸ್ವತ: ಸುರೇಶ್ ರೈನಾರನ್ನು ನೆಚ್ಚಿಕೊಂಡಿದೆ.
ವೇಗದ ದಾಳಿಯನ್ನು ಕನ್ನಡಿಗ ವಿನಯ್ ಕುಮಾರ್, ಅಶೋಕ್ ದಿಂಡಾ, ಪಂಕಜ್ ಸಿಂಗ್ ಮತ್ತು ಉಮೇಶ್ ಯಾದವ್ ಮುನ್ನಡೆಸಲಿದ್ದಾರೆ. ಅದೇ ರೀತಿ ಸ್ಪಿನ್ ವಿಭಾಗಕ್ಕೆ ಆರ್. ಆಶ್ವಿನ್, ಪ್ರಗ್ಯಾನ್ ಓಜಾ ಬಲ ತುಂಬಲಿದ್ದಾರೆ.
ಆದರೆ ಈ ಪಂದ್ಯದಲ್ಲಿ ಪ್ರವಾಸಿಗರು ಯಾವ ಯೋಜನೆ ರೂಪಿಸಲಿದ್ದಾರೆಂಬುದು ಪಂದ್ಯ ಆರಂಭವಾದ ನಂತರವಷ್ಟೇ ತಿಳಿಯಬಹುದಾಗಿದೆ.
ವಿಶ್ವ ಕ್ರಿಕೆಟ್‌ನಲ್ಲಿ ಅಷ್ಟು ಪ್ರಬಲವಾಗಿಲ್ಲದಿದ್ದರೂ ಜಿಂಬಾಬ್ವೆಯನ್ನು ಕಡೆಗಣಿಸುವಂತಿಲ್ಲ. ಅನನುಭವಿಯಾಗಿರುವ ಭಾರತವನ್ನು ಮಣಿಸಲು ಎಲ್ಟನ್ ಚಿಗುಂಬುರಾ ಪಡೆ ಪೂರ್ಣ ಸಿದ್ಧತೆ ನಡೆಸಿದೆ.
ಒಟ್ಟಿನಲ್ಲಿ ಭಾರತೀಯ ಯುವ ಆಟಗಾರರು ಜಿಂಬಾಬ್ವೆ ಪರಿಸ್ಥಿತಿಯನ್ನು ಯಾವ ರೀತಿ ಬಳಸಿಕೊಳ್ಳತ್ತಾರೆಂಬುದನ್ನು ಕಾದು ನೋಡಬೇಕಾಗಿದೆ.
ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಭಾರತ ತಂಡ:
ಸುರೇಶ್ ರೈನಾ (ನಾಯಕ), ವಿರಾಟ್ ಕೊಹ್ಲಿ (ಉಪನಾಯಕ), ಮುರಳಿ ವಿಜಯ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ರೋಹಿತ್ ಶರ್ಮಾ, ಯೂಸುಫ್ ಪಠಾಣ್, ರವೀಂದ್ರ ಜಡೇಜಾ, ಆರ್. ಆಶ್ವಿನ್, ಉಮೇಶ್ ಯಾದವ್, ವಿನಯ್ ಕುಮಾರ್, ಅಶೋಕ್ ದಿಂಡಾ, ಪಂಕಜ್ ಸಿಂಗ್, ಅಮಿತ್ ಮಿಶ್ರಾ, ಪ್ರಗ್ಯಾನ್ ಓಜಾ ಮತ್ತು ನಮನ್ ಓಜಾ
ಜಿಂಬಾಬ್ವೆ ತಂಡ:
ಎಲ್ಟನ್ ಚಿಗುಂಬುರಾ (ನಾಯಕ), ಆಂಡಿ ಬ್ಲಿಗ್ನಾಟ್, ಚಾಮು ಚಿಬಾಬಾ, ಚಾರ್ಲ್ಸ್ ಕೊವೆಂಟ್ರಿ, ಗ್ರೇಮ್ ಕ್ರೆಮರ್, ಕ್ರೆಗ್ ಎರ್ವಿನ್, ಗ್ರೇಮ್ ಲಾಂಬ್, ಹಾಮಿಲ್ಟನ್ ಮಸಕಜಾ, ಕ್ರಿಸ್ ಪೊಫು, ರೇ ಪ್ರೈಸ್, ಎಡ್ ರೈನ್ಸ್‌ಫಾರ್ಡ್, ವುಸಿ ಸಿಬಾಂಡಾ, ಟಟೆಂಡಾ ತೈಬು, ಬ್ರೆಂಡನ್ ಟೇಲರ್ ಮತ್ತು ಪ್ರಾಸ್ಪರ್ ಉತ್ಸೇಯ.
'ದಾವಣಗೆರೆ ಎಕ್ಸ್‌ಪ್ರೆಸ್' ವಿನಯ್‌ಗಿದು ಸುವರ್ಣ ಅವಕಾಶ!
ಹೌದು, ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ತ್ರಿಕೋನ ಸರಣಿಗಾಗಿ ಜಿಂಬಾಬ್ವೆ ಪ್ರವಾಸ ಕೈಗೊಂಡಿರುವ ಟೀಮ್ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿ ಆತಿಥೇಯ ತಂಡವನ್ನು ಎದುರಿಸಲಿದೆ.
ತಂಡದಲ್ಲಿ ಕಾಣಿಸಿಕೊಂಡಿರುವ ಏಕಮಾತ್ರ ಕನ್ನಡಿಗನೆಂದರೆ 'ದಾವಣಗೆರೆ ಎಕ್ಸ್‌ಪ್ರೆಸ್' ವಿನಯ್ ಕುಮಾರ್. ಇತ್ತೀಚೇಗಷ್ಟೇ ವೆಸ್ಟ್‌ಇಂಡೀಸ್‌ನಲ್ಲಿ ಅಂತ್ಯಗೊಂಡಿದ್ದ ಟ್ವೆಂಟಿ-20 ವಿಶ್ವಕಪ್‌ಗಾಗಿನ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದ ವಿನಯ್‌ಗೆ ಹೆಚ್ಚಿನ ಅವಕಾಶವೇ ಲಭಿಸಿರಲಿಲ್ಲ.
ಆಡಿದ ಒಂದು ಪಂದ್ಯದಲ್ಲಿ ಎರಡು ವಿಕೆಟ್ ಕಿತ್ತಿದ್ದ ವಿನಯ್ ಬ್ಯಾಟಿಂಗ್ ದಿಗ್ಗಜ ಸನತ್ ಜಯಸೂರ್ಯರ ವಿಕೆಟ್ ಪಡೆದದ್ದು ಶ್ರೇಷ್ಠ ಕ್ಷಣವಾಗಿತ್ತು. ಇದೀಗ ಏಕದಿನಕ್ಕೂ ಪಾದರ್ಪಣೆ ಮಾಡಲು ವಿನಯ್‌ಗೆ ಕಾಲ ಕೂಡಿ ಬಂದಿದೆ ಎಂದೇ ಹೇಳಬಹುದು.
ಜಿಂಬಾಬ್ವೆ ವಿರುದ್ಧ ನಡೆಯಲಿರುವ ಮೊದಲ ಪಂದ್ಯದಲ್ಲಿ ವಿನಯ್ ಆಡುವುದಂತು ಬಹುತೇಕ ಖಚಿತವಾದಂತಾಗಿದೆ. ಅನುಭವಿ ಬೌಲರುಗಳಾದ ಜಹೀರ್ ಖಾನ್ ಮತ್ತು ಆಶಿಶ್ ನೆಹ್ರಾಗೆ ವಿಶ್ರಾಂತಿ ಕಲ್ಪಿಸಿದ್ದರಿಂದ ಯುವ ಬೌಲರುಗಳಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಉತ್ತಮ ಅವಕಾಶ ಲಭಿಸಿದಂತಾಗಿದೆ.
ಜಾಗವಲ್ ಶ್ರೀನಾಥ್ ಮತ್ತು ವೆಂಕೆಟೇಶ್ ಪ್ರಸಾದ್‌ರಂತಹ ಶ್ರೇಷ್ಠ ಬೌಲರುಗಳಿಗೆ ಸಾಲಿಗೆ ಸೇರಲು ವಿನಯ್ ಈ ಸುವರ್ಣಾವಕಾಶವನ್ನು ಚೆನ್ನಾಗಿ ಉಪಯೋಗಿಸಿಕೊಳ್ಳಬೇಕು. ಈ ಮಧ್ಯೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಅಭಿಮನ್ಯು ಮಿಥುನ್ ಒಮ್ಮೆ ಮಿಂಚಿ ಹೋಗಿದ್ದರು. ಆದರೆ ನಿಜ ಹೇಳಬೇಕೆಂದರೆ ಮಿಥುನ್‌ಗೆ ಕೂಡಾ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಉತ್ತಮ ಅವಕಾಶವೇ ದೊರಕಿರಲಿಲ್ಲ.
ಐಪಿಎಲ್ ಭಾರೀ ಯಶಸ್ಸು ಕಂಡಿದ್ದ ರಾಬಿನ್ ಉತ್ತಪ್ಪರನ್ನು ಈ ಸರಣಿಗಾಗಿ ಕಡೆಗಣಿಸಿರುವುದು ಕನ್ನಡಿಗರಲ್ಲಿ ನಿರಾಸೆಯನ್ನುಂಟು ಮಾಡಿದೆ. ಆದರೂ ವಿನಯ್‌ರಿಂದ ಉತ್ತಮ ಪ್ರದರ್ಶನ ಮೂಡಿ ಬರಲಿಯೆಂಬುದು ಕನ್ನಡಿಗರ ನಿರೀಕ್ಷೆ.
No comments:
Post a Comment