VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 22, 2010

ದುರಂತ: ಮದುವೆಗೆ ಆಗಮಿಸಿದ ಕುಟುಂಬ ಮಸಣಕ್ಕೆ

ಏರ್ ಇಂಡಿಯಾ ವಿಮಾನದಲ್ಲಿ ಮದುವೆಗಾಗಿ ಮಂಗಳೂರಿಗೆ ಆಗಮಿಸಿದ್ದ ಗಲ್ಫ್ ನ್ಯೂಸ್‌ ಉದ್ಯೋಗಿ ಹಾಗೂ ಆಕೆಯ ಗಂಡ ಮತ್ತು ಮಗಳು ಸೇರಿದಂತೆ ಇಡೀ ಕುಟುಂಬವೇ ವಿಮಾನ ದುರಂತದಲ್ಲಿ ಸಾವನ್ನಪ್ಪಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.

ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣ ಸಮೀಪ ಸಂಭವಿಸಿದ ಭೀಕರ ವಿಮಾನ ದುರಂತದಲ್ಲಿ 158 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದರು. ಎಂಟು ಮಂದಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು.

ಗಲ್ಫ್‌ನ್ಯೂಸ್‌ನ ಹಣಕಾಸು ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಣಿರೇಖಾ ಪೂಂಜಾ, ಅವರ ಗಂಡ ಶಶಿಕಾಂತ್ ಪೂಂಜಾ ಮತ್ತು 17 ವರ್ಷದ ಮಗಳು ಹರ್ಷಿಣಿ ಪೂಂಜಾ ಸಾವನ್ನಪ್ಪಿರುವ ದುರ್ದೈವಿಗಳು. ಹರ್ಷಿಣಿ ಅವರು ಪತ್ರಿಕೋದ್ಯಮ ವ್ಯಾಸಂಗ ಮಾಡುತ್ತಿದ್ದರು. ಮಣಿರೇಖಾ ಅವರು ಸಂಬಂಧಿಯ ಮದುವೆಗೆಂದು ಮಂಗಳೂರಿಗೆ ಆಗಮಿಸಿದ್ದರು. ಈ ಕುಟುಂಬ ಇತ್ತೀಚೆಗಷ್ಟೇ ವೈವಾಹಿಕ ಜೀವನದ ಬೆಳ್ಳಿಹಬ್ಬವನ್ನು ಆಚರಿಸಿಕೊಂಡಿದ್ದರು ಎಂದು ಪೂಂಜಾ ಕುಟುಂಬದ ಆಪ್ತ ಮೂಲಗಳು ತಿಳಿಸಿವೆ.

ಆದರೆ ವಿಧಿಯ ಕ್ರೂರ ಅಟ್ಟಹಾಸಕ್ಕೆ ಗಂಡ, ಹೆಂಡತಿ ಮತ್ತು ಮಗಳು ಸಾವನ್ನಪ್ಪಿದ್ದಾರೆ ಎಂದು ಪೂಂಜಾ ಕುಟುಂಬದ ಮೂಲಗಳು ತಿಳಿಸಿವೆ. ಸಂಬಂಧಿಯ ಮದುವೆಗಾಗಿ ಅವರು ಶುಕ್ರವಾರ ಏರ್ ಇಂಡಿಯಾ ವಿಮಾನವೇರಿದ್ದರು.ತಾವು ಕೂಡಲೇ ಮನೆಗೆ ಬರುವುದಾಗಿ ವಿಮಾನ ಲ್ಯಾಂಡ್ ಆಗುವ ಮುನ್ನ ಮನೆಯವರಿಗೆ ಮೊಬೈಲ್ ಕರೆ ಮಾಡಿ ತಿಳಿಸಿದ್ದರು. ಆದರೆ ಏಕಾಏಕಿ ಸಂಭವಿಸಿದ ದುರ್ಘಟನೆಯಲ್ಲಿ ಕುಟುಂಬವೇ ಸಾವನ್ನಪ್ಪಿದೆ.

30 ವರ್ಷದ ಹಿಂದಿನ ದುರಂತದಲ್ಲಿ ಪಾರಾಗಿದ್ದ ಮೊಯ್ಲಿ
ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನ ದುರಂತ ಸಂಭವಿಸಿರುವುದು ಇದೇ ಮೊದಲಲ್ಲ. ಎರಡು ದಶಕಗಳ ಹಿಂದೆ ಮುಖ್ಯಮಂತ್ರಿಯಾಗಿದ್ದ ಎಂ.ವೀರಪ್ಪ ಮೊಯ್ಲಿ ಅವರು ಬಜ್ಪೆ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ದುರಂತದಲ್ಲಿ ಕೂದಲೆಳೆ ಅಂತರದಲ್ಲಿ ಪಾರಾಗಿರುವುದು ಇಲ್ಲಿ ಸ್ಮರಣಾರ್ಹ.

ಅದು ನಡೆದದ್ದು 1981ರ ಆಗಸ್ಟ್ 19ರಂದು. ಅವರು ಪ್ರಯಾಣಿಸುತ್ತಿದ್ದ ಏವ್ರೋ ವಿಮಾನವು, ರನ್‌ವೇ ಹಾದಿಯ ಶೇ.25ರಷ್ಟು ಪಥ ಬಾಕಿ ಇರುವ ಅಂತರದಲ್ಲಿ ಭೂಸ್ಪರ್ಶ ಮಾಡಿ, ಮುಂದಕ್ಕೋಡಿತ್ತು.

ಪೈಲಟ್ ಬ್ರೇಕ್ ಚಲಾಯಿಸಿದನಾದ. ಧಾವಿಸಿ ಮುಂದಕ್ಕೋಡುತ್ತಿದ್ದ ವಿಮಾನವು ಇನ್ನೂ ಮುಂದಕ್ಕೆ ಹೋಗಿದ್ದಿದ್ದರೆ ಮುನ್ನೂರಡಿ ಆಳದ ಕಣಿವೆಗೆ ಬೀಳುತ್ತಿತ್ತು. ಆದರೆ ಅದೃಷ್ಟವಶಾತ್, ಮೂರು ಬಂಡೆಗಳು ವಿಮಾನವು ಕೆಳಕ್ಕೆ ಜಿಗಿಯದಂತೆ ತಡೆಯಿತು. ಧಾವಿಸಿ ಬಿದ್ದ ರಭಸಕ್ಕೆ ವಿಮಾನದ ಎಂಜಿನ್‌ಗೆ ಬೆಂಕಿ ಹತ್ತಿಕೊಂಡಿತು. ಆದರೆ ಅಗ್ನಿಶಾಮಕ ಯಂತ್ರಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದವು. ಎಲ್ಲ ಪ್ರಯಾಣಿಕರನ್ನು ರಕ್ಷಿಸಲಾಗಿತ್ತು.

ಮೇ 10ರಂದು ಮಂಗಳೂರು ವಿಮಾನ ನಿಲ್ದಾಣದ ಏಕೀಕೃತ ಟರ್ಮಿನಲ್ ಕಟ್ಟಡ ಉದ್ಘಾಟನೆ ಸಂದರ್ಭದಲ್ಲಿ, ಈಗ ಕೇಂದ್ರ ಕಾನೂನು ಸಚಿವರಾಗಿರುವ ವೀರಪ್ಪ ಮೊಯ್ಲಿ ಅವರೇ ಈ ದುರಂತ ಘಟನೆಯನ್ನು ನೆನಪಿಸಿಕೊಂಡಿದ್ದರು ಕೂಡ. ಎರಡು ವಾರಗಳೊಳಗೆ ವಿಮಾನವೊಂದು ದುರಂತಕ್ಕೀಡಾಗಿದೆ.

No comments: