ನೆರೆ ಸಂತ್ರಸ್ತರ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವ ರಾಜ್ಯ ಸರ್ಕಾರದ ಜನಪ್ರತಿನಿಧಿಗಳಿಗೆ ಒದೆಯಿರಿ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ನೀಡಿದ ಬೆನ್ನಲ್ಲೇ, ನೈಸ್ ವಿಚಾರದಲ್ಲಿ ಮೌನವಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾವಣ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೋಮವಾರ ವಾಗ್ದಾಳಿ ನಡೆಸಿದ್ದಾರೆ.
ಇಂದು ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನೈಸ್ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಕೆಲಸ ಮಾಡುತ್ತಿದ್ದು, ನೈಸ್ ಯೋಜನೆಯ ವಿಷಯದಲ್ಲಿ ರೈತರಿಗೆ ಮತ್ತು ಬಡವರಿಗೆ ಅನ್ಯಾಯ ಮಾಡಬಾರದು ಎಂದು ವಿನಂತಿಸಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವುದಾಗಿ ಹೇಳಿದರು.
ಅಲ್ಲದೇ ನೈಸ್ ವಿಚಾರದಲ್ಲಿ ತಾನು ಒಂದಿಂಚೂ ಹೆಚ್ಚಿನ ಭೂಮಿಯನ್ನು ನೀಡುವುದಿಲ್ಲ ಎಂದು ಮುಖ್ಯಮಂತ್ರಿಗಳು ವಿಧಾನಮಂಡಲದಲ್ಲಿ ಹೇಳಿದ್ದರೂ ಕೂಡ, ಹೆಚ್ಚುವರಿಯಾಗಿ ಮೂರು ಸಾವಿರ ಎಕರೆ ಜಮೀನನ್ನು ನೀಡುತ್ತಿರುವ ಬಗ್ಗೆಯೂ ಪತ್ರದಲ್ಲಿ ಆಕ್ಷೇಪ ವ್ಯಕ್ತಪಡಿಸಿರುವುದಾಗಿ ಹೇಳಿದರು.
ಹಾಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಸೀತೆಯನ್ನು ಅಪಹರಿಸಿದ ರಾವಣ ಎಂದು ಪತ್ರದಲ್ಲಿ ಜರೆದಿರುವುದಾಗಿಯೂ ಹೇಳಿದರು. ಯಾಕೆಂದರೆ ಸೀತೆಯಂದೆರೆ ಭೂಮಿ, ವಸುಂಧರೆಯಾಗಿದ್ದಾಳೆ. ಬಡವರ, ರೈತರ ಭೂಮಿ(ಸೀತೆ)ಯನ್ನು ಅಪಹರಿಸಿದ ರಾವಣ ಎಂದು ಬಣ್ಣಿಸಿರುವುದಾಗಿ ಹೇಳಿದರು.
ಕೇವಲ ರಾಜ್ಯದ ಜನರ ದಿಕ್ಕು ತಪ್ಪಿಸುವ ಹೇಳಿಕೆ ನೀಡುತ್ತಿರುವ ಮುಖ್ಯಮಂತ್ರಿಗಳು, ಸುಳ್ಳು ಆಶ್ವಾಸನೆ, ಘೋಷಣೆಗಳನ್ನೇ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ನೈಸ್ ವಿಚಾರದಲ್ಲಿ ಯಡಿಯೂರಪ್ಪ ಕುಮ್ಮಕ್ಕು ನೀಡುತ್ತಿದ್ದಾರೆ ಎಂದರು. ನೈಸ್ ವಿಚಾರದಲ್ಲಿ ಮಾತಿಗೆ ತಪ್ಪಿ ಹೆಚ್ಚುವರಿಯಾಗಿ ಮೂರು ಸಾವಿರ ಎಕರೆ ಭೂಮಿ ನೀಡುತ್ತಿರುವುದು ಸರಿಯೇ ಎಂದು ಪ್ರಶ್ನಿಸಿದರು.
ಯಾವುದೇ ಕಾರಣಕ್ಕೂ ನೈಸ್ ವಿರುದ್ಧದ ಹೋರಾಟ ಕೈಬಿಡುವುದಿಲ್ಲ ಎಂದು ಗುಡುಗಿರುವ ಗೌಡರು, ಜೂನ್ 7ರಿಂದ ಮತ್ತೆ ನೈಸ್ ವಿರುದ್ಧ ಬೀದಿ ಹೋರಾಟ ಮಾಡುವುದಾಗಿ ತಿಳಿಸಿದರು.
ಕುಮಾರಸ್ವಾಮಿಗೆ ಹುಚ್ಚು ಹಿಡಿದಿದೆ: ಕರುಣಾಕರ ರೆಡ್ಡಿ
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಹುಚ್ಚು ಹಿಡಿದು ಬಿಟ್ಟಿದೆ, ಪಾಪ ಬಿಬಿಎಂಪಿ, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ನೆಲಕಚ್ಚಿದ್ದರಿಂದ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಸಚಿವ ಕರುಣಾಕರ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.
ಅವರು ಇಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತ, ಜವಾಬ್ದಾರಿ ಸ್ಥಾನದಲ್ಲಿದ್ದವರು ಈ ರೀತಿ ಮಾತನಾಡುವುದು ಅವರ ಘನತೆಗೆ ಶೋಭೆ ತರುವುದಿಲ್ಲ ಎಂದರು. ಕುಮಾರಸ್ವಾಮಿ ಮಾತನಾಡುವಾಗ ನಾಲಿಗೆ ಮೇಲೆ ಹಿಡಿತವಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.
ಜೆಡಿಎಸ್ ರಾಜ್ಯದಲ್ಲಿ ಸಂಪೂರ್ಣವಾಗಿ ನೆಲಕಚ್ಚಿದೆ, ಅಲ್ಲದೇ ಬಿಬಿಎಂಪಿ, ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿಯೂ ಜೆಡಿಎಸ್ ಹೆಸರಿಲ್ಲದೆ ಸೋತು ಹೋಗಿದೆ. ಹಾಗಾಗಿ ತಲೆಕೆಟ್ಟವರಂತೆ ಕುಮಾರಸ್ವಾಮಿ ಮಾತನಾಡುತ್ತಿದ್ದಾರೆ. ಅವರಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಕಿಡಿಕಾರಿದರು.
ಉತ್ತರ ಕರ್ನಾಟಕದಲ್ಲಿ ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರಿಸಿದೆ ಎಂದು ಆರೋಪಿಸಿದ್ದ ಕುಮಾರಸ್ವಾಮಿ, ಉತ್ತರ ಕರ್ನಾಟಕದ ಜನತೆ ಮೃದು ಧೋರಣೆ ತಾಳದೆ ಜನಪ್ರತಿನಿಧಿಗಳಿಗೆ ಒದ್ದು ಬುದ್ದಿ ಹೇಳಬೇಕು ಎಂದು ಹೇಳಿಕೆ ನೀಡಿದ್ದರು.
Subscribe to:
Post Comments (Atom)
No comments:
Post a Comment