
ಮಂಗಳೂರು, ಮೇ 15: ಹಣಕ್ಕಾಗಿ ಹಿಂದೂ- ಮುಸಲ್ಮಾನರ ನಡುವೆ ಗಲಾಟೆ ಮಾಡಿಸಲು ಸಿದ್ಧರಿರುವುದಾಗಿ ಹೇಳಿರುವ ಮುತಾಲಿಕ್ ಬಗ್ಗೆ ವೌನವಾಗಿರುವ ಯಡಿಯೂರಪ್ಪ ಸರಕಾರ, ಹಾಲಪ್ಪನವರಿಗೆ ರಕ್ಷಣೆ ನೀಡಿರುವಂತೆಯೇ ಇವರಿಗೂ ರಕ್ಷಣೆ ನೀಡುವುದರಲ್ಲಿ ಸಂಶಯವಿಲ್ಲ. ಒಟ್ಟು ಯಡಿಯೂರಪ್ಪ ಸರಕಾರದಲ್ಲಿ ಆರೋಪಿಗಳಿಗೆ ರಕ್ಷಣೆ ನೀಡಲಾಗುತ್ತಿದೆ ಎಂದು ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಗಂಭೀರ ಆರೋಪ ಮಾಡಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಶ್ರೀರಾಮ ಸೇನೆ ನಡೆಸಿದ ಪಬ್ ದಾಳಿ ಪ್ರಕರಣದ ತನಿಖೆ ತಳಹಿಡಿದಿದೆ. ಆರಂಭದಲ್ಲಿ ರಾಜ್ಯ ಸರಕಾರ ಪ್ರಕರಣದ ಅಮಾಯಕ ಹೆಣ್ಣು ಮಕ್ಕಳಿಗೆ ರಕ್ಷಣೆಯ ಭರವಸೆ ನೀಡಿದ್ದರೆ ಅವರು ಮುಂದೆ ಬಂದು ಪ್ರಕರಣದ ಬಗ್ಗೆ ಸಾಕ್ಷ ನುಡಿಯಲು ಸಹಕಾರಿಯಾಗುತ್ತಿತ್ತು. ಆದರೆ ಸರಕಾರ ಆ ಕಾರ್ಯ ಮಾಡದೆ ಆರೋಪಿಗಳಿಗೇ ಸಹಕಾರ ನೀಡಿದೆ ಎಂದು ದೂರಿದರು.
ಯಡಿಯೂರಪ್ಪ ಸರಕಾರದಲ್ಲಿ ಆರೋಪಿಗಳಿಗೆ ರಕ್ಷಣೆಯ ಜೊತೆಗೆ ರಾಜೋಪಚಾರವನ್ನೂ ನೀಡಲಾಗುತ್ತದೆ ಎಂದು ಹಾಲಪ್ಪನವರಿಗೆ ಒದಗಿಸಲಾಗು ತ್ತಿರುವ ರಕ್ಷಣಾ ವ್ಯವಸ್ಥೆಯನ್ನು ಉಲ್ಲೇಖಿ ಸುತ್ತಾ ನುಡಿದರು. ಅದೇ ಆಸ್ಪತ್ರೆಯಲ್ಲಿ ಜನಸಾಮಾನ್ಯನ ಪಾಡನ್ನು ಕೇಳುವರೇ ಇಲ್ಲ ಎಂದವರು ಹೇಳಿದರು.
ಜನಾರ್ದನ ರೆಡ್ಡಿಗೆ ಕಾನೂನಿನ ಪರಿಜ್ಞಾನವೇ ಇಲ್ಲ
ಗಣಿಗಾರಿಕೆಗೆ ಸಂಬಂಧಿಸಿ ರಾಜ್ಯಪಾ ಲರ ನೋಟಿಸಿನ ಕುರಿತು ಹೇಳಿಕೆಯನ್ನು ನೀಡಿರುವ ಜನಾರ್ದನ ರೆಡ್ಡಿಯವರಿಗೆ ಕೇವಲ ಕಾನೂನಿನ ಬಗ್ಗೆ ಅರಿವಿಲ್ಲದಿರುವುದು ಮಾತ್ರವಲ್ಲ, ಕಾನೂನಿನ ಪರಿಜ್ಞಾನವೇ ಇಲ್ಲ ಎಂದು ರಾಜ್ಯಪಾಲರು ನೋಟಿಸು ನೀಡಿದ ಕ್ರಮವನ್ನು ಪೂಜಾರಿ ಸಮರ್ಥಿಸಿಕೊಂಡರು.
ಹಾಗಾಗಿಯೇ ರಾಜ್ಯಪಾಲರಿಗೆ ನೋಟಿಸು ನೀಡುವ ಅಧಿಕಾರ ಇಲ್ಲ. ಅವರೇನು ಸುಪ್ರೀಂ ಕೋರ್ಟ್ ಅಲ್ಲ ಎಂಬ ಬಾಲಿಶ ಹೇಳಿಕೆಯನ್ನು ಜನಾರ್ದನ ರೆಡ್ಡಿ ನೀಡಿದ್ದಾರೆ. ಆದರೆ ಸಂವಿಧಾನದ ಪ್ರಕಾರ ರಾಜ್ಯಪಾಲರಿಗೆ ವಿಧಾನಸಭೆ ಹಾಗೂ ವಿಧಾನ ಪರಿಷತ್ ಸದಸ್ಯರ ಸದಸ್ಯತ್ವವನ್ನೇ ಅನರ್ಹಗೊಳಿಸುವ ಅಧಿಕಾರವಿದೆ ಎಂಬುದನ್ನು ಜನಾರ್ದನ ರೆಡ್ಡಿ ಅಲ್ಲಗಳೆಯುವಂತಿಲ್ಲ. ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಇನ್ನೂ ತನ್ನ ಅಂತಿಮ ತೀರ್ಪನ್ನು ನೀಡಿಲ್ಲ. ಜನಾರ್ದನ ರೆಡ್ಡಿ ನಿರಪರಾಧಿ ಎಂದು ಇನ್ನೂ ಸಾಬೀತು ಆಗಿಲ್ಲ. ತಮ್ಮ ಕುರ್ಚಿಯನ್ನು ಉಳಿಸಿಕೊಳ್ಳುವ ಸಲುವಾಗಿ ಯಡಿಯೂರಪ್ಪ ಅವರು ಕೂಡಾ ರೆಡ್ಡಿ ಸಹೋದರರ ಜೊತೆ ಶಾಮೀಲಾಗಿದ್ದಾರೆ. ಒಟ್ಟು ರಾಜ್ಯ ಸರಕಾರದಿಂದ ಸರಕಾರಿ ಯಂತ್ರದ ದುರುಪಯೋಗವಾಗುತ್ತಿದೆ ಎಂದು ಪೂಜಾರಿ ಆರೋಪಿಸಿದರು.
ಕೇಂದ್ರ ಸರಕಾರದ ಅನುದಾನ ಶೇ. 25ರಷ್ಟೂ ಖರ್ಚಾಗಿಲ್ಲ
ಪ್ರತಿ ಗಂಟೆಗೊಮ್ಮೆ ವಿದ್ಯುತ್ ಸ್ಥಗಿತ ಗೊಳಿಸಿ ಜನಜೀವನವನ್ನು ದುಸ್ತರಗೊಳಿಸ ಲಾಗುತ್ತಿದ್ದು, ಕರೆಂಟು ನೀಡುತ್ತೇವೆ, ಖರೀದಿಸುತ್ತೇವೆ ಎಂಬ ಭರವಸೆಯನ್ನಷ್ಟೇ ಸರಕಾರ ನೀಡುತ್ತಿದೆ. ಇಂಥ ಸರಕಾರವನ್ನು ಕರ್ನಾಟಕ ರಾಜ್ಯ ಈವರೆಗೆ ಕಂಡಿಲ್ಲ ಎಂದು ಟೀಕಿಸಿದ ಅವರು, ರಾಜ್ಯ ಸರಕಾರಕ್ಕೆ ಕೇಂದ್ರ ನೀಡಿದ ಅನುದಾನದಲ್ಲಿ ಶೇ. 25ರಷ್ಟನ್ನೂ ಸರಿಯಾಗಿ ಖರ್ಚು ಮಾಡಲು ಸಾಧ್ಯವಾಗಿಲ್ಲ ಎಂದು ಟೀಕಿಸಿದರು. ಗಣಿಗಾರಿಕೆ ರಾಷ್ಟ್ರೀಕರಣವಾಗಬೇಕು
ಗಣಿಗಾರಿಕೆ ರಾಷ್ಟ್ರೀಕರಣವಾದರೇ ಉತ್ತಮ ಎಂಬುದು ತಮ್ಮ ಅಭಿಪ್ರಾಯ. ಕೇಂದ್ರ ಸರಕಾರ ಈ ಬಗ್ಗೆ ಗಮನ ಹರಿಸಲಿದೆ ಎಂದು ಪೂಜಾರಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಂಸತ್ತಿನಲ್ಲಿ ಆಸ್ಕರ್, ಹರಿಪ್ರಸಾದ್‌ಗೆ ಬೆಂಬಲ
ಈ ಬಾರಿ ಮತ್ತೆ ಮೇಲ್ಮನೆ ಪ್ರವೇಶಿಸುವ ಸಾಧ್ಯತೆ ಇದೆಯೇ ಎಂಬ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಪ್ರಸ್ತುತ ಅಲ್ಲಿ ಆಸ್ಕರ್‌ರಿದ್ದಾರೆ. ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವರು ಸೇರಿದಂತೆ ಹರಿಪ್ರಸಾದ್‌ರವರಿಗೆ ತಮ್ಮ ಬೆಂಬಲ ಇದೆ ಎಂದು ಪೂಜಾರಿ ನುಡಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕರಾದ ಹರಿಕಷ್ಣ ಬಂಟ್ವಾಳ, ಕಳ್ಳಿಗೆ ತಾರನಾಥ ಶೆಟ್ಟಿ, ಅರುಣ್ ಕುವೆಲ್ಲೋ ಮೊದಲಾದವರು ಉಪಸ್ಥಿತರಿದ್ದರು.
No comments:
Post a Comment