May 19, 2010
ಮೊಯ್ಲಿ ಕುತಂತ್ರದಿಂದ ಸೋಲು : ಪೂಜಾರಿ
ಬೆಂಗಳೂರು, ಮೇ. 19 : ಕಳೆದ ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಒಟ್ಟಿಗೆ ಮತದಾನ ನಡೆದಿದ್ದರೆ ಖಂಡಿತ ನಾನು ಗೆಲ್ಲುತ್ತಿದ್ದೆ. ಈ ಎರಡು ಕ್ಷೇತ್ರಗಳ ಚುನಾವಣೆಗೆ ಒಂದು ವಾರದ ಅಂತರವಿದ್ದ ಕಾರಣ, ನಮ್ಮ ಪಕ್ಷದ ಟಿಕೆಟ್ ನಿಂದ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ವ್ಯಕ್ತಿ ನನ್ನ ವಿರುದ್ದ ಕೆಲಸ ಮಾಡಿದ್ದು ನನ್ನ ಸೋಲಿಗೆ ಪ್ರಮುಖ ಕಾರಣ ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಪರೋಕ್ಷವಾಗಿ ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯ್ಲಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೊಯ್ಲಿ ನನ್ನ ವಿರುದ್ದ ಯಾತಕ್ಕೆ ಕೆಲಸ ಮಾಡಿದರು ಮುಂತಾದ ಎಲ್ಲಾ ವಿವರಗಳನ್ನು ಮಾಧ್ಯಮದ ಮುಂದೆ ಹಂಚಿಕೊಳ್ಳಲಾಗುವುದಿಲ್ಲ. ಅಗತ್ಯ ಬಿದ್ದಾಗ ವರಿಷ್ಠರ ಮುಂದೆ ಸವಿವರವಾಗಿ ಹೇಳುತ್ತೇನೆ ಎಂದರು. ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ನೆಲಕಚ್ಚಿದೆ ಎನ್ನುವ ಆರೋಪ ಸುಳ್ಳು. ಈ ಭಾಗದಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ. ನಮ್ಮ ಪಕ್ಷ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಮುನ್ನಡೆ ಕಾಯ್ದುಕೊಂಡಿದೆ ಎಂದು ಪೂಜಾರಿ ಹೇಳಿಕೆ ನೀಡಿದ್ದಾರೆ.
ಬಿಜೆಪಿ ನಾಯಕ ವೆಂಕಯ್ಯ ನಾಯ್ಡು ರಾಜ್ಯ ಸರಕಾರದ ಏಜೆಂಟ್ ಹಾಗೂ ಅವರಿಗೆ ಸಾಮಾನ್ಯ ಜ್ಞಾನ ಎನ್ನುವುದೇ ಇಲ್ಲ. ಎಲ್ಲರನ್ನೂ ಖರೀದಿಸುವ ಸಂಪ್ರದಾಯ ಹೊಂದಿರುವ ಬಿಜೆಪಿ ಯಾವ ಲೆಕ್ಕಾಚಾರದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಲು ಸಿಎಂ ರಾಜಭವನಕ್ಕೆ ತೆರಳಿದ್ದರೋ ಗೊತ್ತಿಲ್ಲ. ದುಡ್ಡಿನ ಅಹಂಕಾರದಿಂದ ಮೆರೆಯುತ್ತಿರುವ ರೆಡ್ಡಿ ಸಹೋದರರನ್ನು ಯಾವ ಪುರುಷಾರ್ಥಕ್ಕಾಗಿ ಇನ್ನೂ ಸಂಪುಟದಲ್ಲಿ ಯಡಿಯೂರಪ್ಪ ಉಳಿಸಿಕೊಂಡಿದ್ದಾರೋ ತಿಳಿಯುವುದಿಲ್ಲ ಎಂದು ಪೂಜಾರಿ ವ್ಯಂಗ್ಯವಾಡಿದ್ದಾರೆ.
Subscribe to:
Post Comments (Atom)
No comments:
Post a Comment