May 19, 2010
ಸುದ್ದಿವಾಹಿನಿ ವಿರುದ್ಧ ಶ್ರೀರಾಮ ಸೇನೆ ಸಮರ
ಬೆಂಗಳೂರು, ಮೇ.19: ಗಲಭೆ ಸೃಷ್ಟಿಸಲು ಹಣ ಪಡೆದ ಆರೋಪ ಎದುರಿಸುತ್ತಿರುವ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತನ್ನ ವಿರುದ್ಧ ಕುಟುಕು ಕಾರ್ಯಚರಣೆ ನಡೆಸಿದ ಖಾಸಗಿ ಸುದ್ದಿವಾಹಿನಿಗಳ ವಿರುದ್ಧ ನಗರದ 2ನೇ ಎಸಿಎಂಎಂ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ವಿಚಾರಣೆಯನ್ನು ಜೂನ್ 17ಕ್ಕೆ ಮುಂದೂಡಲಾಗಿದೆ.
ಶ್ರೀರಾಮ ಸೇನೆ ನಗರ ಸಂಚಾಲಕ ಟಿ.ಎಸ್. ವಸಂತ್ ಕುಮಾರ್, ಕುಟುಕು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದ ಪುಷ್ಟ್ ಕುಮಾರ್, ತೆಹಲ್ಕಾ ಪತ್ರಿಕೆಯ ಸಂಪಾದಕ ಮತ್ತು ಪ್ರಕಾಶಕ, ಹೆಡ್‌ಲೈನ್ಸ್ ಟುಡೆಯ ರಾಹುಲ್ ಕನ್ವಲ್ ಹಾಗೂ ಆಜ್‌ತಕ್ ಸುದ್ದಿವಾಹಿನಿಯ ಸುದ್ದಿ ನಿರ್ದೇಶಕ ಕ್ಯೂ. ಡಬ್ಲ್ಯೂ. ನಖ್ವಿ ವಿರುದ್ಧ ದೂರು ಅರ್ಜಿ ಸಲ್ಲಿಸಿದ್ದಾರೆ.
'ಲವ್ ಜಿಹಾದ್' ಕುರಿತ ವಸ್ತು ಪ್ರದರ್ಶನ ವಿಷಯ ಪ್ರಸ್ತಾಪಿಸಿ ಪುಷ್ಪ್ ಕುಮಾರ್ ಎನ್ನುವವರು ನನಗೆ ಫೆ. 25 ಕ್ಕೆ ಕರೆ ಮಾಡಿದ್ದರು. ಈ ಬಗ್ಗೆ ಫೆ. 27ಕ್ಕೆ ನಮ್ಮಿಬ್ಬರ ಭೇಟಿ ಆಯಿತು. ಈ ಸಂದರ್ಭದಲ್ಲಿ ನಮ್ಮ ಮಧ್ಯೆ ನಡೆದ ಸಂಭಾಷಣೆ ಯನ್ನು ಧ್ವನಿ ಮುದ್ರಣ ಮಾಡಿಕೊಳ್ಳಲಾಗಿದೆ. ಆದರೆ ತಮಗೆ ಬೇಕಾದ ರೀತಿಯಲ್ಲಿ ಧ್ವನಿ ಮುದ್ರಣವನ್ನು ಮಾರ್ಪಡಿಸಿ ಸುದ್ದಿವಾಹಿನಿಗಳಲ್ಲಿ ಬಿತ್ತರಿಸಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಬಿತ್ತರವಾದ ದೃಶ್ಯಾವಳಿಗಳು ಸಂಪೂರ್ಣ ಮಾರ್ಪಾಟು ಮಾಡಲಾಗಿದ್ದು ಸುದ್ದಿವಾಹಿನಿ ತನಗೆ ಬೇಕಾದ ರೀತಿಯಲ್ಲಿ ತಿದ್ದಿಕೊಂಡಿದೆ. ಇದರಿಂದ ಶ್ರೀರಾಮ ಸೇನೆಯ ಸಂಘಟನೆ ಮತ್ತು ಅದರ ಮುಖ್ಯಸ್ಥರ ಘನತೆಗೆ ಧಕ್ಕೆ ಬಂದಿದೆ. ಈ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ಆಕ್ಷೇಪಿಸಿದರು.
ಸಂಘಟನೆ ಮತ್ತು ಅದರ ಮುಖಂಡರ ವ್ಯಕ್ತಿತ್ವಕ್ಕೆ ಧಕ್ಕೆ ತರುವಂಥ ಈ ಕುಟುಕು ರ್ಯಚರಣೆಯಲ್ಲಿ ಭಾಗಿಯಾದವರು ಮತ್ತು ಅದನ್ನು ಬಿತ್ತರಿಸಿದ ಸುದ್ದಿವಾಹಿನಗಳ ವಿರುದ್ದ ಭಾರತೀಯ ದಂಡ ಸಂಹಿತೆ 120(B), 425, 463, 464, 468,469, 470, 471 ಸೆಕ್ಷನ್ ಪ್ರಕಾರ ಪ್ರಕರಣ ದಾಖಲಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಪೀಠದ ಮೊರೆಹೊಕ್ಕಿದ್ದಾರೆ.
Subscribe to:
Post Comments (Atom)
No comments:
Post a Comment