VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 25, 2010

ಹಣದುಬ್ಬರ ನಿಯಂತ್ರಣಕ್ಕೆ ಆದ್ಯತೆ: ಎರಡನೆ ಅವಧಿಯ ಪ್ರಥಮ ವರ್ಷ ಪೂರೈಸಿದ ಪ್ರಧಾನಿ ಮನಮೋಹನ್ ಸಿಂಗ್ ಭರವಸೆ

*ಬೆಲೆಯೇರಿಕೆ ಪಿಡುಗಿಗೆ ಕಳವಳ *ಶೇ.8.5 ಆರ್ಥಿಕ ಬೆಳವಣಿಗೆ ಸಾಧಿಸುವ ನಿರೀಕ್ಷೆ
*ಜಾತಿ ಆಧಾರಿತ ಜನಗಣತಿ ಬಗ್ಗೆ ಸದ್ಯವೇ ನಿರ್ಧಾರ *ಯೋಜನೆಗಳ ಹಣ ಸೋರಿಕೆ ಒಪ್ಪಿಕೊಂಡ ಪಿಎಂ


ಹೊಸದಿಲ್ಲಿ,ಮೇ 24: ಈ ವರ್ಷಾಂತ್ಯ ದೊಳಗೆ ಹಣದುಬ್ಬರ ದರದಲ್ಲಿ ಶೇ.5 ರಿಂದ 6ರಷ್ಟು ಕುಸಿತವುಂಟಾಗಲಿದೆಯೆಂದು ಪ್ರಧಾನಿ ಮನಮೋಹನ್‌ಸಿಂಗ್ ಭವಿಷ್ಯ ನುಡಿದಿದ್ದಾರೆ ಹಾಗೂ ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶವು ಶೇ. 8.5ರಷ್ಟು ಆರ್ಥಿಕ ಬೆಳವಣಿಗೆಯನ್ನು ಸಾಧಿಸಲಿದೆಯೆಂಬ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ.

ಯುಪಿಎ ಸರಕಾರವು ತನ್ನ ಎರಡನೆ ಅವಧಿಯ ಪ್ರಥಮ ವರ್ಷವನ್ನು ಪೂರೈಸಿದ ಹಿನ್ನೆಲೆಯಲ್ಲಿ ಇಂದು ಹೊಸದಿಲ್ಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಪ್ರಧಾನಿ ಬೆಲೆಯೇರಿಕೆಯು ಸರಕಾರಕ್ಕೆ ಅತ್ಯಂತ ಕಳವಳಕಾರಿ ವಿಷಯವಾಗಿಯೆಂದು ಹೇಳಿದರು. ಜನಸಾಮಾನ್ಯರ ಬವಣೆಯನ್ನು ದೂರ ಮಾಡಲು ಹಣದುಬ್ಬರದ ನಿಯಂತ್ರಣಕ್ಕೆ ಸರಕಾರವು ಅತ್ಯುನ್ನತವಾದ ಆದ್ಯತೆಯನ್ನು ನೀಡುತ್ತದೆ ಎಂದವರು ತಿಳಿಸಿದರು.

ಡಿಸೆಂಬರ್ ತಿಂಗಳೊಳಗೆ ಹಣದುಬ್ಬರ ದರವನ್ನು ಶೇ.6ರಿಂದ 5ರಷ್ಟು ಇಳಿಸಲಾಗುವುದೆಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದರು.ಅಂತಾರಾಷ್ಟ್ರೀಯ ವಿದ್ಯಮಾನಗಳು ಅದರಲ್ಲೂ ವಿಶೇಷವಾಗಿ ಪೆಟ್ರೋಲಿಯಂ ದರ ಏರಿಕೆ, ಜೊತೆಗೆ ದೇಶದಲ್ಲಿ ತಲೆದೋರಿದ ಬರ ಹಾಗೂ ಪ್ರವಾಹ ಪರಿಸ್ಥಿತಿಗಳು, ಬೆಲೆಯೇರಿಕೆಗೆ ಕಾರಣವಾದವೆಂದು ಪ್ರಧಾನಿ ಹೇಳಿದರು. ಸಾಮಾಜಿಕ ಹಾಗೂ ಆರ್ಥಿಕ ಮೂಲ ಸೌಕರ್ಯ ಹಾಗೂ ಕೃಷಿ ಕ್ಷೇತ್ರಗಳಲ್ಲಿ ಹೂಡಿಕೆಯನ್ನು ಹೆಚ್ಚಿಸುವುದಕ್ಕೆ ತನ್ನ ಸರಕಾರ ಪ್ರಾಶಸ್ತ್ಯವನ್ನು ನೀಡುವುದಾಗಿ ತಿಳಿಸಿದ ಸಿಂಗ್, ಭಾರೀ ಒತ್ತಡದ ಹೊರತಾಗಿಯೂ ಹಾಲಿ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕತೆಯು 8.5 ಶೇ.ವಾರ್ಷಿಕ ಬೆಳವಣಿಗೆಯನ್ನು ಕಾಣಲಿದೆಯೆಂದು ತಿಳಿಸಿದರು.

ಕಳೆದ ಎರಡು ವರ್ಷಗಳಲ್ಲಿ ಆರ್ಥಿಕತೆಯ ವಾರ್ಷಿಕ ಬೆಳವಣಿಗೆಯು 7.2 ಶೇ. ಹಾಗೂ 6.7 ಶೇಕಡದಷ್ಟಿದ್ದವೆಂದು ಅವರು ಹೇಳಿದರು.ಆರ್ಥಿಕತೆಯಲ್ಲಿ ಎರಡಂಕಿಯ ಬೆಳವಣಿಗೆಯನ್ನು ಸಾಧಿಸಲು ಉತ್ಪಾದನೆ,ಕೃಷಿ, ಸಾಮಾಜಿಕ ಹಾಗೂ ಆರ್ಥಿಕ ಮೂಲ ಸೌಕರ್ಯ ಕ್ಷೇತ್ರಗಳಿಗೆ ಹೊಸ ಉತ್ತೇಜನ ನೀಡಲಾಗುವುದೆಂದು ಪ್ರಧಾನಿ ತಿಳಿಸಿದರು. ದೇಶವು ಸಮಷ್ಟಿ ಬೆಳವಣಿಗೆಯನ್ನು ಸಾಧಿಸಲು ಜಾಗತಿಕ ಆರ್ಥಿಕ ಬಿಕ್ಕಟ್ಟು ಅಡ್ಡಿಯಾಗಲಿಲ್ಲವೆಂದು ವಿಶ್ವವಿಖ್ಯಾತ ಆರ್ಥಿಕ ತಜ್ಞರೂ ಆದ ಮನಮೋಹನ್‌ಸಿಂಗ್ ಅಭಿಪ್ರಾಯಿಸಿದರು.

ಖಾಸಗಿ ರಂಗದಲ್ಲಿ ಉದ್ಯೋಗ ಮೀಸಲಾತಿಯ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಚಾರದಲ್ಲಿ ಉದ್ಯಮ ಹಾಗೂ ಕೈಗಾರಿಕೆಗಳ ಭಾಗೀದಾರರು ಸರಕಾರಕ್ಕೆ ನೆರವಾಗುವಂತಹ ವಾತಾವರಣವನ್ನು ಸೃಷ್ಟಿಸಬೇಕಾಗಿದೆಯೆಂದು ಅವರು ತಿಳಿಸಿದರು.

ಪ್ರಧಾನಿ ಸಂತಾಪ
ಮಂಗಳೂರು ವಿಮಾನ ದುರಂತದಲ್ಲಿ ಮಡಿದವರ ಕುಟುಂಬಗಳಿಗೆ ಪ್ರಧಾನಿ ಮನಮೋಹನ್ ಸಿಂಗ್ ತಮ್ಮ ಗಾಢ ಸಂತಾಪವನ್ನು ಸೂಚಿಸುವ ಸಂದೇಶವನ್ನು ರವಾನಿಸಿದ್ದಾರೆ ಹಾಗೂ ಯುಪಿಎ ಸರಕಾರದ ಎರಡನೆ ಅವಧಿಯ ಮೊದಲ ವರ್ಷದ ಪ್ರಯುಕ್ತ ಹೊಸದಿಲ್ಲಿಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಗೆ ಮುನ್ನ ಒಂದು ನಿಮಿಷದ ವೌನ ಪ್ರಾರ್ಥನೆಯನ್ನು ನಡೆಸಿ, ಮೃತರಿಗೆ ಶ್ರದ್ಧಾಂಜಲಿ ಅರ್ಪಿಸಿದರು.

ವಿವಿಧ ಯೋಜನೆಗಳ ಹಣ ಸೋರಿಕೆ: ಒಪ್ಪಿಕೊಂಡ ಪ್ರಧಾನಿ
ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಮತ್ತು ಯೋಜನೆಗಳಿಗೆ ಮೀಸಲಾಗಿರುವ ಹಣಕಾಸು ನಿಧಿಗಳಲ್ಲಿ ಸೋರಿಕೆಯಾಗು ತ್ತಿರುವುದನ್ನು ಪ್ರಧಾನಿ ಮನಮೋಹನ್‌ಸಿಂಗ್ ಒಪ್ಪಿಕೊಂಡಿದ್ದು, ಈ ಸಮಸ್ಯೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಸರಕಾರವು ಶ್ರಮಿಸುತ್ತಿದೆಯೆಂದು ಅವರು ಹೇಳಿದರು.

No comments: