VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 31, 2010

ಗುಜರಾತ್‌ನಲ್ಲಿ ಕೋಮು ಭಾವನೆ ಕೆರಳಿಸುವ ಭಿತ್ತಿಚಿತ್ರ ಸರಕಾರದ ವಿವರಣೆ ಕೇಳಿದ ರಾಜ್ಯಪಾಲ

ಅಹ್ಮದಾಬಾದ್, ಮೇ 30: ಕೋಮು ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುವಂತಹ ಕೆಲವೊಂದು ವಿವಾದಾತ್ಮಕ ಭಿತ್ತಿಚಿತ್ರಗಳನ್ನು ರಾಜ್ಯದ ವಿವಿಧ ನಗರಗಳಲ್ಲಿ ಹಾಕಲಾಗಿದೆ ಎಂಬ ವಿಷಯದ ಕುರಿತು ವರದಿ ನೀಡುವಂತೆ ರಾಜ್ಯ ಸರಕಾರಕ್ಕೆ ಗುಜರಾತ್ ರಾಜ್ಯಪಾಲ ಕಮ್ಲಾ ಬೆನಿವಾಲ್ ಆದೇಶಿಸಿದ್ದಾರೆ.

ಅಹ್ಮದಾಬಾದ್‌ನಲ್ಲಿ ಕಳೆದ ಕೆಲವು ದಿನಗಳ ಹಿಂದೆ ನಡೆದಿರುವ ಕೋಮು ಗಲಭೆಯ ಹಿನ್ನೆಲೆಯಲ್ಲಿ ರಾಜ್ಯಪಾಲರು ಸರಕಾರದಿಂದ ಈ ಕುರಿತಾದ ವರದಿ ಕೇಳಿದ್ದಾರೆ. ಈ ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು, ಸುಮಾರು 30 ಮಂದಿ ಗಾಯಗೊಂಡಿರುವ ಬಗ್ಗೆ ವರದಿಯಾಗಿತ್ತು.

ಸಾಧ್ಯವಾದಷ್ಟು ಬೇಗ ವರದಿ ನೀಡುವಂತೆ ರಾಜ್ಯಪಾಲರು, ರಾಜ್ಯ ಗೃಹ ಸಚಿವಾಲಯ ಮತ್ತು ಡಿಜಿಪಿಗೆ ಕಳುಹಿಸಿರುವ ಪತ್ರದಲ್ಲಿ ಸೂಚಿಸಿದ್ದಾರೆ. ಈ ವಿವಾದಾತ್ಮಕ ಭಿತ್ತಿಚಿತ್ರಗಳು ಮೊದಲು ವಡೋದರಾದಲ್ಲಿ ಹಾಕಲಾಗಿದ್ದು, ಬಳಿಕ ಇತರ ನಗರಗಳಲ್ಲಿ ಇವು ಕಾಣಿಸಿಕೊಂಡಿದ್ದವು.

ರಾಜ್ಯ ಪೊಲೀಸರನ್ನು ಜೈಲಿನೊಳಗೆ ತಳ್ಳುವ ಮೂಲಕ ಕಾಂಗ್ರೆಸ್ ಯಾಕೆ ಸೊಹ್ರಾಬುದ್ದೀನ್‌ನಂತಹ ಭಯೋತ್ಪಾದಕರನ್ನು ಬೆಂಬಲಿಸುತ್ತಿದೆ ಎಂದು ಜನರನ್ನು ಪ್ರಶ್ನೆ ಕೇಳುವ ರೀತಿಯ ಭಿತ್ತಿಚಿತ್ರಗಳನ್ನು ನಗರಗಳಲ್ಲಿ ಪ್ರದರ್ಶಿಸಲಾಗಿದೆ ಎಂದು ವರದಿಯಾಗಿದೆ.

ರಾಜ್ಯದ ಜನರನ್ನು ಅವಮಾನಿಸುವುದಕ್ಕಾಗಿ ಮತ್ತು ಗುಜರಾತ್ ಪೊಲೀಸರ ಮೇಲೆ ದೌರ್ಜನ್ಯ ಎಸಗುವುದಕ್ಕಾಗಿ ಕಾಂಗ್ರೆಸ್ ನೇತೃತ್ವದ ಕೇಂದ್ರದ ಯುಪಿಎ ಸರಕಾರವು ಸಿಬಿಐಯನ್ನು ದುರ್ಬಳಕೆ ಮಾಡುತ್ತಿದೆ ಎಂದೂ ಭಿತ್ತಿಚಿತ್ರಗಳಲ್ಲಿ ಆಪಾದಿಸಲಾಗಿದೆ.

ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿ ಉಪ ಪೊಲೀಸ್ ಆಯುಕ್ತ ಅಭಯ್ ಛೂಡಸ್ಮರನ್ನು ಸಿಬಿಐ ಬಂಧಿಸಿದ ತಕ್ಷಣವೇ ರಾಜ್ಯದ ವಿವಿಧ ನಗರಗಳಲ್ಲಿ ಇಂತಹ ಹೋರ್ಡಿಂಗ್ಸ್ ಮತ್ತು ಗೋಡೆ ಬರಹಗಳು ಕಾಣಿಸಿಕೊಂಡಿದ್ದವು. ಆ ಬಳಿಕ ಸಿಬಿಐಯೂ ಬೇರೆ ಯಾವುದೇ ಬಂಧನ ನಡೆಸಿಲ್ಲ.

ಗುಜರಾತ್ ಪೊಲೀಸರ ತೋಜೋವಧೆ ಮಾಡುವ ಮತ್ತು ಅವರ ಮೇಲೆ ದೌರ್ಜನ್ಯ ಎಸಗಲಾಗುತ್ತಿರುವಲ್ಲಿ ಸಿಬಿಐ ಪಾತ್ರವಿದೆ ಎಂದು ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ಪುರುಷೋತ್ತಮ್ ರೂಪಾಲ ಸೇರಿದಂತೆ, ರಾಜ್ಯ ಘಟಕದ ಅಧ್ಯಕ್ಷ ಸಿ.ಕೆ. ಫಾಲ್ದು, ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯ್ ರೂಪಾನಿ ಮುಂತಾದವರು ಆರೋಪಿಸಿದ್ದಾರೆ.

ಇತ್ತೀಚೆಗೆ ನಡೆದ ಕೋಮು ಗಲಭೆಗೆ ಸಂಬಂಧಿಸಿ ಕಾಂಗ್ರೆಸ್ ನಾಯಕರು ರಾಜ್ಯಪಾಲ ರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು. ಈ ವರ್ಷದ ಅಂತ್ಯದಲ್ಲಿ ಅಹ್ಮದಾಬಾದ್ ಮತ್ತು ಪ್ರಮುಖ ನಗರಗಳಲ್ಲಿ ನಡೆಯಲಿರುವ ಪಾಲಿಕೆ ಚುನಾವಣೆಯ ಹಿನ್ನೆಲೆಯಲ್ಲಿ ಮತಬ್ಯಾಂಕ್‌ನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಬಿಜೆಪಿಯು ಕೋಮು ಭಾವನೆಗೆ ಪ್ರಚೋದನೆ ನೀಡುತ್ತಿದೆ.

ಈ ಹಿನ್ನೆಲೆಯಲ್ಲಿ ವಿವಿಧ ನಗರಗಳಲ್ಲಿ ಕೋಮು ಭಾವನೆಯನ್ನು ಕೆರಳಿಸುವಂತಹ ಭಿತ್ತಿಚಿತ್ರಗಳನ್ನು ಅಳವಡಿಸಲಾಗಿದೆ ಎಂದು ಕಾಂಗ್ರೆಸ್ ನಾಯಕರು ಆಪಾದಿಸಿದ್ದಾರೆ. ಆದಾಗ್ಯೂ ಕೋಮು ಗಲಭೆ ಪೀಡಿತ ಪ್ರದೇಶಗಳಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿ ದ್ದರೂ, ನಿಯಂತ್ರಣದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

No comments: