VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 31, 2010

ಭೀಕರ ಬಸ್ ದುರಂತ: 30 ಮಂದಿ ಸಜೀವ ದಹನ :ಮೃತರಲ್ಲಿ ಕಾರ್ಮಿಕರೇ ಅಧಿಕ

ಚಾಲಕನ ನಿರ್ಲಕ್ಷ ದುರಂತಕ್ಕೆ ಕಾರಣ
ಚಿತ್ರದುರ್ಗ, ಮೇ 30: ಮಂಗಳೂರು ವಿಮಾನ ದುರಂತದಲ್ಲಿ 158 ಮಂದಿ ಸಾವನ್ನಪ್ಪಿದ ಘಟನೆ ಜನರ ಮನಸ್ಸಿನಿಂದ ಮಾಸುವ ಮುನ್ನವೇ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನ ಹಟ್ಟಿ ಗ್ರಾಮದಲ್ಲಿ ಭೀಕರ ಬಸ್ ಅಪಘಾತ ಸಂಭವಿಸಿ 30 ಮಂದಿ ಸಾವನ್ನಪ್ಪಿ, ಹಲವರು ಗಂಭೀರವಾಗಿ ಗಾಯಗೊಂಡ ಘಟನೆ ರವಿವಾರ ಮುಂಜಾನೆ ಸಂಭವಿಸಿದೆ.

ಈಶಾನ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸೊಂದು ಇಂದು ಮುಂಜಾನೆ 3 ಗಂಟೆಯ ಸುಮಾರಿಗೆ ನಾಯಕನ ಹಟ್ಟಿ ಗ್ರಾಮದ ಬಳಿ ಬರುತ್ತಿದ್ದ ವೆೀಳೆ ಎದುರಿನಿಂದ ಬಂದ ಟ್ರಕ್ಕೊಂದಕ್ಕೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ರಸ್ತೆ ಬದಿಯ ಚಿಕ್ಕ ಸೇತುವೆಯೊಂದಕ್ಕೆ ಅಪ್ಪಳಿಸಿ, ಹಳ್ಳಕ್ಕೆ ಬಿದ್ದಿದೆ.

ಈ ಸಂದರ್ಭದಲ್ಲಿ ಬಸ್‌ನ ಡಿಸೇಲ್ ಟ್ಯಾಂಕ್‌ನಿಂದ ಡಿಸೇಲ್ ಸೋರಿಕೆ ಉಂಟಾಗಿ, ಬೆಂಕಿ ಹೊತ್ತಿಕೊಂಡು ಬಸ್‌ನಲ್ಲಿದ್ದ ಸುಮಾರು 60 ಮಂದಿ ಪ್ರಯಾಣಿಕರಲ್ಲಿ 30 ಮಂದಿ ಸುಟ್ಟು ಕರಕಲಾದರು ಎಂದು ತಿಳಿದು ಬಂದಿದೆ.
ಯಾದಗಿರಿ ಜಿಲ್ಲೆಯ ಸುರಪುರದಿಂದ ಶನಿವಾರ ಸಂಜೆ 6:30ರ ವೇಳೆಗೆ ಬೆಂಗಳೂರಿಗೆ ಪ್ರಯಾಣ ಆರಂಭಿಸಿದ್ದ ಈ ನತದೃಷ್ಟ ಬಸ್ ಸುಮಾರು 400 ಕಿ.ಮೀ.ಕ್ರಮಿಸಿ ಚಳ್ಳಕೆರೆಯ ಬಳಿ ಬರುವಾಗ ಎದುರಿನಿಂದ ಬಂದ ಲಾರಿಯೊಂದು ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ರಸ್ತೆ ಬದಿಯಲ್ಲಿದ್ದ ಚಿಕ್ಕ ಸೇತುವೆಗೆ ಅಪ್ಪಳಿಸಿರುವುದರಿಂದ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.

ವಿಷಯದ ತಿಳಿದ ಕೂಡಲೇ ಘಟನಾ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿ, ಸ್ಥಳೀಯ ಸಹಕಾರದೊಂದಿಗೆ ರಕ್ಷಣಾ ಕಾರ್ಯ ಕೈಗೊಂಡು ಗಾಯಾಳುಗಳನ್ನು ಚಳ್ಳಕರೆ ಸರಕಾರಿ ಆಸ್ಪತ್ರೆಗೆ ಹಾಗೂ ಮೃತ ದೇಹಗಳನ್ನು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಸಾಗಿಸಿದರು.

ದುರಂತದಲ್ಲಿ ಮೃತಪಟ್ಟವರ ಪೈಕಿ 24 ಮಂದಿ ಸುರಪುರದವರಾಗಿದ್ದಾರೆ. ಹೆಚ್ಚಿನವರು ಕೂಲಿ ಕಾರ್ಮಿಕರಾಗಿದ್ದು, ತುತ್ತು ಅನ್ನ ಸಂಪಾದಿಸಲು ಸುರಪುರದಿಂದ ಬೆಂಗಳೂರಿಗೆ ಗುಳೆ ಹೊರಟ್ಟಿದ್ದರು. ಮೃತರಲ್ಲಿ 10 ಮಕ್ಕಳು, 15 ಮಹಿಳೆಯರು ಸೇರಿದ್ದಾರೆ. ಮಲ್ಲಮ್ಮ, ಮಹೇಶ್, ನಿಂಗಪ್ಪ, ಶಿವಪ್ಪ, ಹನುಮಕ್ಕ, ರೇಣುಕಮ್ಮ, ಬಲಭೀಮ, ಯಲ್ಲವ್ವ, ಮಲ್ಲಮ್ಮ(2), ಹನುಮಂತ, ನಿಂಗಮ್ಮ, ಜ್ಞಾನಪ್ಪ ಕಮತರ(55), ಇವರ ಸೊಸೆ ಲಕ್ಷ್ಮಿ(28), ಮೊಮ್ಮಗಳು ಮಂಜುಳಾ(2), ಅಂಬಿಕಾ(2), ಯಲ್ಲಮ್ಮ(35), ನಾಗಮ್ಮ(22), ಅಂಬಮ್ಮ(30), ಅಯ್ಯಿಳಿ(5), ವೌನೇಶ್(13), ಬಾಲಮ್ಮ(10), ಐದಮ್ಮ(30), ಹನುಮಾಕ್ಷಿ, ಜಾಲಮ್ಮ, ಆಂಜನಮ್ಮ, ಹನುಮವ್ವ, ಆಕಾಶ್ ಸುಣಕಲ್(2) ಸೇರಿದಂತೆ 29 ಮಂದಿಯ ಶವಗಳನ್ನು ಗುರುತಿಸಲಾಗಿದ್ದು, ಓರ್ವ ಮಹಿಳೆಯ ಗುರುತು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಆಸ್ಪತ್ರೆಯ ಆವರಣದಲ್ಲಿ, ಗ್ರಾಮಗಳಲ್ಲಿ ಮೃತರ ಸಂಬಂಧಿಕರ ಆಕ್ರಂದನ ಮನಕಲುಕುವಂತಿತ್ತು.

ಅಪಘಾತದಲ್ಲಿ ಬಸ್ ಸಂಪೂರ್ಣ ಭಸ್ಮವಾಗಿದೆ. ಚಾಲಕರಾದ ಸಿದ್ದಯ್ಯ, ಗುಂಡಪ್ಪ ಶೆಟ್ಟಿ ಹಾಗೂ ನಿರ್ವಾಹಕ ನಂದನಗೌಡ ಪಾಟೀಲರನ್ನು ವಶಕ್ಕೆ ತೆಗೆದುಕೊಂಡಿರುವ ಚಳ್ಳಕೆರೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಕೈಗೊಂಡಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನ ಹಟ್ಟಿ ಗ್ರಾಮದಲ್ಲಿ ರವಿವಾರ ಮುಂಜಾನೆ 30 ಮಂದಿಯನ್ನು ಬಲಿ ತೆಗೆದುಕೊಂಡ ಭೀಕರ ರಸ್ತೆ ದುರಂತದಲ್ಲಿ ಬದುಕುಳಿದವರು... ಚಿತ್ರದುರ್ಗ ಬಳಿಯ ಪಟ್ಟಣದ ಆಸ್ಪತ್ರೆ (ಮೊದಲ ಎರಡು ಚಿತ್ರಗಳು) ಹಾಗೂ ಚಳ್ಳಕೆರೆ ಆಸ್ಪತ್ರೆಯಲ್ಲಿ (ಕೊನೆಯ ಚಿತ್ರ) ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳು.

ಆಸ್ಪತ್ರೆಯಲ್ಲಿ ಗಾಯಾಳುಗಳನ್ನು ವಿಚಾರಿಸುತ್ತಿರುವ ಸಾರಿಗೆ ಸಚಿವ ಆರ್.ಅಶೋಕ್.
ತಮ್ಮವರನ್ನು ಕಳೆದುಕೊಂಡವರ ರೋದನ.

ಸಂಬಂಧಿಕರಿಗೆ ಮೃತ ದೇಹಗಳ ಹಸ್ತಾಂತರ
ಚಳ್ಳಕೆರೆ, ಮೇ 30: ಸರಕಾರಿ ಬಸ್ ದುರುಂತದಲ್ಲಿ ಮೃತಪಟ್ಟವರ ಶವಗಳನ್ನು ಮೂರು ಆಂಬ್ಯುಲೆನ್ಸ್‌ನಗಳ ಮೂಲಕ ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಒಟ್ಟು 30 ಶವಗಳಲ್ಲಿ 28 ಶವಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದ್ದು, ಇನ್ನೂ ಎರಡು ಶವಗಳ ಗುರುತು ಪತ್ತೆಯಲ್ಲಿ ಗೊಂದಲವಿರುವುದರಿಂದ ಅವುಗಳನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ ಎಂದು ತಿಳಿದು ಬಂದಿದೆ.

ಡಿಎನ್‌ಎ ಪರೀಕ್ಷೆಯ ಅಗತ್ಯವಿಲ್ಲ: ಶಾಸಕ ರಾಜು ಗೌಡ
ಚಳ್ಳಕೆರೆ, ಮೇ 30: ಬಸ್ ದುರಂತದಲ್ಲಿ ಮೃತಪಟ್ಟ 30 ಮಂದಿಯಲ್ಲಿ 29 ಮಂದಿಯನ್ನು ಗುರುತಿಸಲಾಗಿದ್ದು, ಓರ್ವಮಹಿಳೆಯ ಗುರುತು ಪತ್ತೆಯಾಗಿಲ್ಲ. ಆದುದರಿಂದ, ಶವಗಳ ಡಿಎನ್‌ಎ ಪರೀಕ್ಷೆ ನಡೆಸುವ ಅಗತ್ಯವಿಲ್ಲ ಎಂದು ಸುರಪುರ ಶಾಸಕ ರಾಜು ಗೌಡ ಅಭಿಪ್ರಾಯಿಸಿದ್ದಾರೆ.

ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶವಗಳ ಗುರುತು ಪತ್ತೆ ಕಾರ್ಯ ಶೇ.90ರಷ್ಟು ಮುಗಿದಿದ್ದು, ಓರ್ವ ಮಹಿಳೆಯ ಗುರುತು ಮಾತ್ರ ಪತ್ತೆಯಾಗಿಲ್ಲ. ಆದುದರಿಂದ, ಎಲ್ಲ ಶವಗಳ ಡಿಎನ್‌ಎ ಪರೀಕ್ಷೆ ನಡೆಸುವ ಅಗತ್ಯವಿಲ್ಲ ಎಂದರು.

No comments: