ಮಂಗಳೂರು, ಮೇ 23: ಕೆಂಜಾರಿನ ವಿಮಾನ ದುರಂತ ನಡೆದ ಪ್ರದೇಶದ ಎದುರುಗಡೆ ಜನ ಸಾಗರವನ್ನು ನಿಯಂತ್ರಿಸಲು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಇಂದು ಸಂಜೆ ವೇಳೆಗೆ ಕುತೂಹಲಿಗರು ದುರಂತ ಸ್ಥಳದ ಮತ್ತೊಂದು ಬದಿಯಿಂದ ಆಗಮಿಸಲು ಯತ್ನಿಸಿದಾಗ ಅಲ್ಲಿ ಗೊಂದಲ ಉಂಟಾದಾಗ ಪೊಲೀಸರು ಲಾಠಿ ಚಾರ್ಜ್ ಮಾಡಿದರು.
ಘಟನಾ ಪ್ರದೇಶದಲ್ಲಿ ಇಂದು ಬೆಳಗ್ಗಿನಿಂದಲೇ ದೆಹಲಿಯ ಡಿಜಿಸಿಎ ತಂಡ ತನಿಖೆ ಆರಂಭಿಸಿದ್ದು, ಬ್ಲಾಕ್ಬಾಕ್ಸ್ಗಾಗಿ ಹುಡುಕಾಟ ನಡೆಸುತ್ತಿದೆ. ಇದರಿಂದಾಗಿ ದುರಂತ ಸ್ಥಳದ ಎದುರುಗಡೆಯ ಪ್ರದೇಶದಲ್ಲಿ ಸಾರ್ವಜನಿಕರು ಪ್ರವೇಶಿಸಿದಂತೆ ಬಂದೋಬಸ್ತ್ ಮಾಡಲಾ ಗಿದೆ. ಈ ಪ್ರದೇಶದಲ್ಲಿ ವಿವಿಧ ಸರಕಾರಿ ರಕ್ಷಣಾ ಸಿಬ್ಬಂದಿ ಮತ್ತು ಮಾಧ್ಯಮ ಪ್ರತಿನಿಧಿಗಳಿಗೆ ಪ್ರವೇಶವನ್ನು ನೀಡಲಾಗಿತ್ತು.
ಹಾಗಾಗಿ ಸ್ಥಳೀಯರು ಘಟನಾ ಪ್ರದೇಶದಲ್ಲಿ ನಡೆಯುತ್ತಿದ್ದ ಪ್ರಕ್ರಿಯೆಗಳನ್ನು ವೀಕ್ಷಿಸಲು ಘಟನಾ ಪ್ರದೇಶದ ಇನ್ನೊಂದು ಭಾಗವಾದ ಮರವೂರು ಕಿನಾರೆಯ ಗದ್ದೆ ಕಡೆಯಿಂದ ಬರುತ್ತಿದ್ದರು.
ಆ ಪ್ರದೇಶದಲ್ಲಿ ಕೇವಲ ಇಬ್ಬರು ಪೊಲೀಸರು ಮಾತ್ರ ಕಾರ್ಯ ನಿರತರಾಗಿದ್ದರು. ಇದರಿಂದಾಗಿ ಜನ ಸಮೂಹವನ್ನು ನಿಯಂತ್ರಿಸಲು ಸಾಧ್ಯವಾಗದ ಕಾರಣ ಅವರು ಲಘು ಲಾಠಿ ಪ್ರಹಾರ ನಡೆಸಿದರು.
ಈ ಘಟನೆ ಸಂಜೆ 7 ಸುಮಾರಿಗೆ ನಡೆದಿದ್ದು, ನಂತರ ಈ ಪ್ರದೇಶದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಜನ ಸಮೂಹವನ್ನು ನಿಯಂತ್ರಿಸಲಾಯಿತು.
ಕಣ್ಣೀರಿನೊಂದಿಗೆ ವಿದಾಯ
ಕಾಸರಗೋಡು, ಮೇ 23: ವಿಮಾನ ದುರಂತದಲ್ಲಿ ಮಡಿದವರಿಗೆ ಕಣ್ಣೀರಿನೊಂದಿಗೆ ವಿದಾಯ ಹೇಳಲಾಯಿತು.
ಸಮಾಜ ಸೇವಕ ಹಾಗೂ ಉದ್ಯಮಿ ತಳಂಗರೆ ಇಬ್ರಾಹೀಂ ಖಲೀಲ್‌ರ ಮೃತದೇಹವನ್ನು ನಿನ್ನೆ ಮಧ್ಯ ರಾತ್ರಿ ಮಾಲಿಕ್ ದಿನಾರ್ ಜುಮಾ ಮಸೀದಿ ಯ ದಫನ ಭೂಮಿಯಲ್ಲಿ ದಫನ ಮಾಡಲಾಯಿತು. ಸಚಿವ ಕಡನ್ನಪಳ್ಳಿ ರಾಮಚಂದ್ರನ್, ಶಾಸಕ ಸಿ.ಟಿ.ಅಹಮ್ಮದಲಿ, ಮುಸ್ಲಿಮ್ ಲೀಗ್ ರಾಜ್ಯಾಧ್ಯಕ್ಷ ಪಾಣಕ್ಕಾಡ್ ಹೈದರಾಲಿ ಶಿಹಾಬ್ ತಂಙಳ್, ಪಿ.ಕೆ.ಕುಂಞಾಲಿಕುಟ್ಟಿ ಸೇರಿದಂತೆ ಹಲವು ಗಣ್ಯರು ಅಂತಿಮ ದರ್ಶನ ಪಡೆದರು.
ಮಂಜೇಶ್ವರ ಮಾಡದ ಅಬ್ದುಲ್ಲಾ, ಆರಿಕ್ಕಾಡಿ ಕಡವತ್ತ್‌ನ ಮುಹಮ್ಮದ್ ರಾಫಿರವರ ಮೃತದೇಹವನ್ನು ರಾತ್ರಿ ಆರಿಕ್ಕಾಡಿ ಜುಮಾ ಮಸೀದಿಯಲ್ಲಿ ದಫನ ಮಾಡಲಾಯಿತು. ಕಾಸರಗೋಡು ಕಡಪ್ಪುರದ ಸೋಮನ್‌ರ ಮೃತದೇಹವನ್ನು ಮನೆಗೆ ತಂದು ಬಳಿಕ ಅಂತ್ಯ ಸಂಸ್ಕಾರ ಮಾಡಲಾಯಿತು. ಮೇಲ್ಪರಂಬದ ಹಸನ್‌ಕುಟ್ಟಿ, ಪೊವ್ವಲ್ ಅಮ್ಮಂಗೋಡಿನ ಮುಹಮ್ಮದ್ ಶಾಫಿ, ಪೆರುಂಬಳದ ಮುಹಮ್ಮದ್ ಹಕೀಂ, ಬೆನೂರಿನ ಅನ್ವರ್‌ಸಾದಾತ್, ಮೊಗ್ರಾಲ್ ಕೊಪ್ಪಳದ ಹಾರಿಸ್, ಮೊಗ್ರಾಲ್ ಪುತ್ತೂರು ಗುಡ್ಡೆಯ ಅಶ್ರಫ್‌ರ ಮೃತದೇಹಗಳ ಅಂತ್ಯ ಸಂಸ್ಕಾರ ನೆರವೇರಿತು.
Subscribe to:
Post Comments (Atom)
No comments:
Post a Comment