ಪುತ್ತೂರು, ಮೇ 18: ಯುವಕ ನೋರ್ವನಿಗೆ ಬೈಕಿನಲ್ಲಿ ಬಂದ ಅಪರಿಚಿತ ಯುವಕರಿಬ್ಬರು ಹಲ್ಲೆ ನಡೆಸಿದ ಘಟನೆ ಇಂದು ಮಧ್ಯಾಹ್ನ ಮೆರಿ ಮೊಗರುವಿನಲ್ಲಿ ನಡೆದಿದೆ.
ಮುಕ್ವೆ ನಿವಾಸಿ ಮುಹಮ್ಮದ್ ಸಿರಾಜ್(26) ಎಂಬವರೇ ಹಲ್ಲೆಗೊಳಗಾದ ವ್ಯಕ್ತಿ. ಸಿರಾಜ್‌ರಿಗೆ ಫರ್ನಿಚರ್ ಅಂಗಡಿಯಿದ್ದು, ಎಂದಿನಂತೆ ತನ್ನ ಅಂಗಡಿಯಲ್ಲಿದ್ದ ಸಂದರ್ಭದಲ್ಲಿ ಬೈಕಿನಲ್ಲಿ ಬಂದ ವ್ಯಕ್ತಿಗಳಿಬ್ಬರು ಫರ್ನಿಚರ್‌ಗೆ ಬೆಲೆ ಕೇಳುವ ನೆಪದಲ್ಲಿ ಅಂಗಡಿಯೊಳಗೆ ಧಾವಿಸಿದರೆನ್ನಲಾಗಿದೆ. ಬಳಿಕ ಸಿರಾಜ್ ಎಂದರೆ ಯಾರು ಎಂದು ವಿಚಾರಿಸಿದ್ದು, ಈ ವೇಳೆ ತಾನೇ ಸಿರಾಜ್ ಎಂದಾಗ ಪಕ್ಕದಲ್ಲಿಯೇ ಇದ್ದ ರೀಪೊಂದರಲ್ಲಿ ತಲೆ ಹಾಗೂ ಇತರ ಭಾಗಗಳಿಗೆ ಹೊಡೆದು ಹಲ್ಲೆ ನಡೆಸಿದರು ಎನ್ನಲಾಗಿದೆ.
ಗಾಯಗೊಂಡ ಸಿರಾಜ್ ಬೊಬ್ಬೆ ಹೊಡೆದಾಗ ಸ್ಥಳೀಯರು ಆಗಮಿಸಿದ್ದು, ಈ ಸಂದರ್ಭದಲ್ಲಿ ಆರೋಪಿಗಳು ಬೈಕ್ ಬಿಟ್ಟು ಪರಾರಿಯಾಗಲು ಯತ್ನಿಸಿದರಾದರೂ ಆ ವೇಳೆ ಓರ್ವ ಆರೋಪಿ ಪರಾರಿಯಾಗಿದ್ದು, ಇನ್ನೋರ್ವನನ್ನು ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿದರು ಎಂದು ತಿಳಿದು ಬಂದಿದೆ.
ಆರೋಪಿಯನ್ನು ಮಂಗಳೂರು ನಿವಾಸಿ ಹರೀಶ್ ಎಂಬವನೆಂದು ಗುರುತಿಸಲಾಗಿದ್ದು, ಇನ್ನೋರ್ವ ಪರಾರಿಯಾದ ಆರೋಪಿ ಬಿ.ಸಿ.ರೋಡ್ ನಿವಾಸಿ ಲಕ್ಷ್ಮಣ ಎಂದು ಹೇಳಲಾಗಿದೆ. ಹಲ್ಲೆಗೊಳಗಾದ ಸಿರಾಜ್ ಇತ್ತೀಚೆಗೆ ನಡೆದ ಗ್ರಾ.ಪಂ.ಚುನಾವಣೆಯಲ್ಲಿ ಎಸ್‌ಡಿಪಿಐ ಬೆಂಬಲದಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ರಾಜಕೀಯ ದ್ವೇಷದಿಂದ ಈ ಹಲ್ಲೆ ನಡೆದಿರಬಹುದೆಂದು ಶಂಕಿಸಲಾಗಿದೆ. ಗಾಯಾಳು ಸಿರಾಜ್ ಪುತ್ತೂರಿನ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
May 19, 2010
Subscribe to:
Post Comments (Atom)
No comments:
Post a Comment