ಬೆಂಗಳೂರು, ಮೇ 16: ರಾಜ್ಯದಲ್ಲಿ ‘ಜಾನುವಾರು ಹತ್ಯೆ ನಿಷೇಧ ಮತ್ತು ಸಂರಕ್ಷಣಾ ಕಾಯ್ದೆ’ ಜಾರಿಯಾದಲ್ಲಿ ಅಪರಾಧಿಗಳ ಸಂಖ್ಯೆ ಹೆಚ್ಚಾಗ ಲಿದೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಯು.ಆರ್.ಅನಂತಮೂರ್ತಿ ಅಭಿಪ್ರಾಯ ಪಟ್ಟಿದ್ದಾರೆ.
ರವಿವಾರ ನಗರದ ಶಾಸಕರ ಭವನದಲ್ಲಿ ಕೋಮು ಸೌಹಾರ್ದ ವೇದಿಕೆ ಆಯೋಜಿ ಸಿದ್ದ ಗೋಹತ್ಯೆ ನಿಷೇಧ ಮಸೂದೆಯ ವಿರುದ್ಧ ವಿಧಾನ ಪರಿಷತ್ ಸದಸ್ಯರು, ಬರಹಗಾರರು, ಸಂಘಟನೆಗಳು ಹಾಗೂ ನಾಡಿನ ಗಣ್ಯರ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಅಪರಾಧಿಗಳ ಸಂಖ್ಯೆ ಕಡಿಮೆ ಮಾಡುವಂತೆ ಕಾಯ್ದೆಗಳನ್ನು ರೂಪಿಸಬೇಕು. ಆದರೆ, ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದ ಸರಕಾರ ಅಪರಾಧಿಗಳ ಸಂಖ್ಯೆಯನ್ನು ಹೆಚ್ಚು ಮಾಡಲು ಜಾನುವಾರು ಹತ್ಯೆ ನಿಷೇಧ ಮಸೂದೆಯನ್ನು ರೂಪಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗೋಹತ್ಯೆ ಪಾಪವೆಂಬ ಭಾವನೆ ಇರುವವರು ಇಟ್ಟು ಕೊಳ್ಳಲಿ. ಬೇರೆಯವರಿಗೆ ಅದೇ ಭಾವನೆ ಹೊಂದಬೇಕೆಂದು ಒತ್ತಾಯಿಸುವುದು ಅಪರಾಧವಾಗುತ್ತದೆ. ಪಾಪ, ಅಪರಾಧಕ್ಕೆ ದಾರಿಯಾಗಬಾರದು ಎಂದು ಅನಂತಮೂರ್ತಿ ಮಾರ್ಮಿಕವಾಗಿ ನುಡಿದರು.
ಹಿಂದೂಗಳಿಗೆ ಗೋವು ಪವಿತ್ರವೆಂಬ ಕಾರಣಕ್ಕೆ ಅದರ ಹತ್ಯೆ ನಿಷೇಧಿಸಿದರೆ, ಮುಸ್ಲಿಮರಿಗೆ ಹಂದಿ ಅಪವಿತ್ರ ಅದನ್ನು ಕೂಡ ನಿಷೇಧಿಸಬೇಕು ಎಂದು ಬಲವಾಗಿ ಒತ್ತಾಯಿ ಸಿದ ಅನಂತಮೂರ್ತಿ, ಭಾರತ ಹಿಂದೂಗಳು ಮಾತ್ರ ವಾಸ ಮಾಡುವ ದೇಶವಲ್ಲ. ಇಲ್ಲಿ ಮುಸ್ಲಿಮರು, ಕ್ರೈಸ್ತರು, ಸಿಕ್ಕರು, ಬೌದ್ಧರು, ಜೈನರು ಸೇರಿದಂತೆ ಎಲ್ಲ ಧರ್ಮದವರು ಇದ್ದಾರೆ ಎಂಬ ಪರಿಜ್ಞಾನ ಆಳುವವರಿಗೆ ಇರಬೇಕಾಗುತ್ತದೆ ಎಂದು ಸಲಹೆ ನೀಡಿದರು.
ರಾಜ್ಯ ಸರಕಾರದ ಜಾನುವಾರು ಹತ್ಯೆ ನಿಷೇಧ ಮಸೂದೆಯ ಹಿಂದೆ ಓಟ್‌ಬ್ಯಾಂಕ್ ರಾಜಕಾರಣವಿದೆ. ಆದರೆ, ಅದರ ವಿರುದ್ಧ ಹೋರಾಟ ಮಾಡುವವರು ಹಿಂದೂಗಳ ವಿರುದ್ಧ ಮುಸ್ಲಿಮರು ಎಂಬಂತೆ ಆಗಬಾರದು ಎಂದು ಅನಂತಮೂರ್ತಿ ಕಿವಿಮಾತು ಹೇಳಿದರು.
ಜಾನುವಾರು ಹತ್ಯೆ ನಿಷೇಧ ಮಸೂದೆ ಯಿಂದ ಮಾಂಸ ತಿನ್ನುವವರಿಗಿಂತ ರೈತರಿಗೆ ಹೆಚ್ಚು ಅನ್ಯಾಯವಾಗಲಿದೆ ಎಂದು ಪ್ರತಿಪಾದಿಸಿ ಅನಂತಮೂರ್ತಿ, ಹಾಲಿಗಾಗಿ ದನ ಸಾಕಿದರೆ ಬರಲಿರುವ ದಿನಗಳಲ್ಲಿ ಮೇವಿನ ಸಮಸ್ಯೆ ತೀವ್ರವಾಗುತ್ತದೆ.
ಅಲ್ಲದೆ ದನಗಳ ಸಂತತಿಯೇ ಸಂಪೂರ್ಣ ನಶಿಸಿ ಹೋದರೂ ಅಚ್ಚರಿಪಡ ಬೇಕಾಗಿಲ್ಲ ಎಂದು ಹೇಳಿದರು.
ಪ್ರಾಣಿ ಹತ್ಯೆ ನಿಷೇಧ ಮಾಡುವುದಾದರೆ ಎಲ್ಲ ಪ್ರಾಣಿಹತ್ಯೆ ನಿಷೇಧಿಸಿ. ಕೇವಲ ಜಾನುವಾರು ಹತ್ಯೆ ನಿಷೇಧದ ಹಿಂದೆ ಸಂಘಪರಿವಾರದ ಹಿಡನ್ ಅಜೆಂಡಾ ಇದೆ.
ಕಾಯ್ದೆ ಜಾರಿಗೆ ಬಂದರೆ ದನ ಸಾಕುವ ಎಲ್ಲ ಕೃಷಿಕರು ಅಪರಾಧಿಗಳಾಗಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ಮಸೂದೆಯ ವಿರುದ್ಧ ಹೋರಾಟ ಮಾಡುವುದು ಕೋಮುವಾದಕ್ಕೆ ದಾರಿಯಾಗಬಾರದು.
ಜಾನುವಾರು ಹತ್ಯೆ ನಿಷೇಧದಿಂದ ರೈತರಿಗಾಗುವ ಆರ್ಥಿಕ ನಷ್ಟದ ಅಂಶಗಳ ಮೇಲೆ ಹೋರಾಟ ರೂಪಿಸಬೇಕು. ರೈತರು ಈ ಚಳವಳಿಯಲ್ಲಿ ಮುಂಚೂಣಿ ನಾಯಕತ್ವ ವಹಿಸಿಕೊಳ್ಳಬೇಕು ಎಂದು ಇದೇ ಸಂದರ್ಭದಲ್ಲಿ ಅವರು ಕರೆ ನೀಡಿದರು.
ಕೋಟ್ಯಂತರ ರೂ.ನಷ್ಟ: ಸಭೆಯಲ್ಲಿ ಪಾಲ್ಗೊಂಡಿದ್ದ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಅಝೀಂ ಮಾತನಾಡಿ, ಜಾನು ವಾರು ಹತ್ಯೆ ನಿಷೇಧ ಮಸೂದೆಯ ವಿರುದ್ಧದ ಹೋರಾಟವು ಸಸ್ಯಹಾರಿಗಳ ವಿರುದ್ಧ ಮಾಂಸಹಾರಿಗಳು ಎಂಬಂತೆ ಆಗುವುದು ಸರಿಯಲ್ಲ. ಮಸೂದೆಯಿಂದ ರೈತರಿಗೆ ಆಗುವ ಆರ್ಥಿಕ ದುಷ್ಪರಿಣಾಮಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು ಎಂದರು.
ರಾಜ್ಯದಲ್ಲಿ ಆರು ಸಾವಿರ ಕಸಾಯಿಖಾನೆ ಗಳಿವೆ. ಪ್ರತಿನಿತ್ಯ ಆರು ಸಾವಿರ ಜಾನುವಾರು ಗಳನ್ನು ಮಾಂಸಕ್ಕಾಗಿ ಕತ್ತರಿಸಲಾಗುತ್ತದೆ. ಮಸೂದೆ ಜಾರಿಯಿಂದ ನಿತ್ಯ ರೈತರಿಗೆ ಬರುತ್ತಿದ್ದ ಕೋಟ್ಯಂತರ ರೂಪಾಯಿಗಳಷ್ಟು ಹಣ ನಷ್ಟವಾಗಲಿದೆ. ಇದನ್ನು ಸರಕಾರ ಭರಿಸಲಿದೆಯೇ ಎಂದು ಅಝೀಂ ತೀಕ್ಷ್ಣವಾಗಿ ಪ್ರಶ್ನಿಸಿದರು.
ಅಧಿಕಾರದ ಅಮಲಿನಲ್ಲಿ ಯಡಿಯೂರಪ್ಪ:
ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ್ದ ವಿಧಾನ ಪರಿಷತ್‌ನ ವಿರೋಧ ಪಕ್ಷದ ಮಾಜಿ ನಾಯಕ ವಿ.ಎಸ್.ಉಗ್ರಪ್ಪ, ರಾಜ್ಯ ಕಂಡ ಅತ್ಯಂತ ಭ್ರಷ್ಟ, ಸಮಯ ಸಾಧಕ ಮುಖ್ಯ ಮಂತ್ರಿ ಯಡಿಯೂರಪ್ಪ. ಒಂದು ಸಾವಿರ ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತದ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ. ಗಣಿ ಅಕ್ರಮ ದಲ್ಲಿ ಯಡಿಯೂರಪ್ಪನವರ ಪಾಲಿದೆ. ಹಣ, ಅಧಿಕಾರದ ಅಮಲಿನಲ್ಲಿ ಯಡಿಯೂರಪ್ಪ ತೇಲಾಡುತ್ತಿದ್ದಾರೆ ಎಂದು ಟೀಕಿಸಿದರು.
ಜಾನುವಾರು ಹತ್ಯೆ ನಿಷೇಧಕ್ಕೆ ಕೃಷಿಕರಿಂದ ಯಾವುದೇ ರೀತಿಯ ಒತ್ತಾಯ ಬಂದಿಲ್ಲ. ಆದರೆ, ರಾಜ್ಯ ಸರಕಾರ ಸಂಘ ಪರಿವಾರದ ಮುಖಂಡರನ್ನು ಮೆಚ್ಚಿಸಲು ರಾಜ್ಯದಲ್ಲಿ ಜಾನುವಾರು ಹತ್ಯೆ ನಿಷೇಧ ಮಸೂದೆಯನ್ನು ಜಾರಿಗೆ ತರಲು ಮುಂದಾಗಿದೆ. ಇದರ ವಿರುದ್ಧ ಉಗ್ರ ಸ್ವರೂಪದ ಹೋರಾಟ ಮಾಡಬೇಕಾ ಗಿದೆ ಎಂದು ಉಗ್ರಪ್ಪ ಸಲಹೆ ಮಾಡಿದರು.
ಸಭೆಯಲ್ಲಿ ಅಧ್ಯಕ್ಷತೆಯನ್ನು ವಿಚಾರವಾದಿ ಎ.ಕೆ.ಸುಬ್ಬಯ್ಯ ವಹಿಸಿದ್ದರು. ಕೋಸೌವೇ ಪ್ರಧಾನ ಕಾರ್ಯದರ್ಶಿ ಕೆ.ಎಲ್.ಅಶೋಕ್, ಸಮತಾ ಸೈನಿಕ ದಳದ ಅಧ್ಯಕ್ಷ ವೆಂಕಟಸ್ವಾಮಿ, ಪಿವಿಸಿ ಅಧ್ಯಕ್ಷ ಪಟಾಪಟ್ ನಾಗರಾಜ್, ಜೆಡಿಎಸ್ ಕಾರ್ಯಾಧ್ಯಕ್ಷ ನಾರಾಯಣಸ್ವಾಮಿ, ಮುಸ್ಲಿಮ್ ಮುಖಂಡ ಸೈಯದ್ ಶಫೀಉಲ್ಲಾ, ಟಿಪ್ಪು ಸುಲ್ತಾನ್ ಸಂಯುಕ್ತ ರಂಗದ ಸರ್ಧಾರ್ ಅಹಮ್ಮದ್ ಖುರೇಶಿ, ಜನಪರ ವೇದಿಕೆಯ ಅಧ್ಯಕ್ಷ ಚಂದ್ರಶೇಖರ್ ತೋರಣಘಟ್ಟ, ಮುಖಂಡರಾದ ಡಾ.ವಾಸು, ಹೈದರ್ ಬೇಗ್, ದಲಿತ ಪ್ಯಾಂಥರ್ಸ್ ಆಫ್ ಇಂಡಿಯಾ ಪ್ರಧಾನ ಕಾರ್ಯ ದರ್ಶಿ ವಿ.ಮೂರ್ತಿ, ದಲಿತ ಕ್ರೈಸ್ತರ ಒಕ್ಕೂಟದ ಸದಸ್ಯ ಫಾದರ್ ಮನೋಹರ್ ಚಂದ್ರಪ್ರಸಾದ್, ಸೌಹಾರ್ದ ವೇದಿಕೆ ಸುರೇಶ್‌ಭಟ್, ಮಲ್ಲಿಗೆ, ಗೌರಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
Subscribe to:
Post Comments (Atom)
No comments:
Post a Comment