ವಕೀಲರು ಹಾಗೂ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಅವಹೇಳನಕಾರಿ ಸಂಭಾಷಣೆ ಬಳಸಲಾಗಿದೆ ಎಂದು ದುನಿಯಾ ವಿಜಯ್ ಅಭಿನಯದ 'ಶಂಕರ್ ಐಪಿಎಸ್' ಚಿತ್ರಕ್ಕೆ ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯ ಶನಿವಾರ (ಮೇ.29)ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಜೂನ್ 5, 2010ರವರೆಗೂ ರಾಜ್ಯದಾದ್ಯಂತ 'ಶಂಕರ್ ಐಪಿಎಸ್' ಚಿತ್ರ ಪ್ರದರ್ಶನಕ್ಕೆ ನ್ಯಾಯಾಲಯ ತಡೆಯೊಡ್ಡಿದೆ.
ಚಿತ್ರದಲ್ಲಿ ವಕೀಲರು ಹಾಗೂ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಅವಹೇಳನಕಾರಿ ಸಂಭಾಷಣೆಗಳಿವೆ. ವಕೀಲರನ್ನು ದಲ್ಲಾಳಿಗಳು, ಬ್ರೋಕರ್ ಗಳು ಹಾಗೂ ನ್ಯಾಯಾಲಗಳನ್ನು ಮಾರುಕಟ್ಟೆಗಳು ಎಂದು ಅಗೌರವಯುತವಾಗಿ ಮಾತನಾಡಲಾಗಿದೆ ಎಂದು ಆರೋಪಿಸಿ ವಕೀಲರ ಸಂಘ ನ್ಯಾಯಾಲಯದಲ್ಲಿ ದಾವಾ ಹೂಡಿತ್ತು.
ಅರ್ಜಿಯನ್ನು ಪುರಸ್ಕರಿಸಿದ ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯ 'ಶಂಕರ್ ಐಪಿಎಸ್' ಚಿತ್ರ ಪ್ರದರ್ಶನಕ್ಕೆ ಜೂನ್.5ರವರೆಗೂ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಜೂನ್.5ರಂದು ನ್ಯಾಯಾಲಯ ನೀಡಲಿರುವ ಮುಂದಿನ ಆದೇಶದವರೆಗೂ 'ಶಂಕರ್ ಐಪಿಎಸ್' ಚಿತ್ರ ಪ್ರದರ್ಶನ ನಡೆಯುವಂತಿಲ್ಲ ಎಂದು ವಕೀಲರ ಸಂಘದ ಪ್ರತಿನಿಧಿ ಶಾಂತಿಭೂಷಣ್ ಅವರು ತಿಳಿಸಿದ್ದಾರೆ.
ವಕೀಲರನ್ನು ದಲ್ಲಾಳಿಗಳು, ಬ್ರೋಕರ್ ಗಳು ಹಾಗೂ ನ್ಯಾಯಾಲಗಳನ್ನು ಮಾರುಕಟ್ಟೆಗಳು ಎಂದಿರುವ ಆರೋಪ
ಚಿತ್ರದಲ್ಲಿ ನ್ಯಾಯಾಂಗ ವ್ಯವಸ್ಥೆಗೆ ಅವಹೇಳನಕಾರಿಯಾಗುವಂತೆ ಸಂಭಾಷಣೆಗಳಿವೆ. ವಕೀಲರು ಕೋರ್ಟ್ ನಲ್ಲಿ ಸಾಕ್ಷಿದಾರರಿಗೆ ಚಂದಮಾಮ ಕಥೆಗಳನ್ನು ಹೇಳುತ್ತಾರೆ ಎಂಬ ಡೈಲಾಗ್ಸ್ ಇವೆ. ನ್ಯಾಯಾಂಗ ವ್ಯವಸ್ಥೆಯ ವಿಶ್ವಾಸಾರ್ಹತೆಗೆ ಧಕ್ಕೆ ತರುವ ಈ ರೀತಿಯ ಸಂಭಾಷಣೆಗಳಿಗೆ ಕತ್ತರಿ ಹಾಕಬೇಕು. ಚಿತ್ರದಲ್ಲಿನ ಕೆಲವೊಂದು ಪದಗಳಿಗೆ ನಿರ್ಬಂಧ ಹೇರಬೇಕು ಎಂದು ವಕೀಲರು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ಕಳೆದ ಶುಕ್ರವಾರವಷ್ಟೆ (ಮೇ.21) ಬಿಡುಗಡೆಯಾಗಿದ್ದ ಶಂಕರ್ ಐಪಿಎಸ್ ಚಿತ್ರವನ್ನು ನ್ಯಾಯಾಲಯ ಮುಂದಿನ ಆದೇಶ ನೀಡುವವರೆಗೂ ಪ್ರದರ್ಶಿಸುವಂತಿಲ್ಲ ಎಂದು ಚಿತ್ರದ ವಿತರಕರಿಗೂ ನೋಟೀಸ್ ಜಾರಿ ಮಾಡದೆ.
ದುನಿಯಾ ವಿಜಯ್ ಪ್ರತಿಕ್ರಿಯೆ
ಶಂಕರ್ ಐಪಿಎಸ್ ಚಿತ್ರ ಸೆನ್ಸಾರ್ ಮಂಡಳಿ ಪ್ರಮಾಣ ಪತ್ರದೊಂದಿಗೆ ಬಿಡುಗಡೆಯಾಗಿದೆ. ಚಿತ್ರದಲ್ಲಿ ಯಾರನ್ನು ಕೀಳಾಗಿ ತೋರಿಸಿಲ್ಲ. ಚಿತ್ರಕ್ಕೆ ನ್ಯಾಯ ಒದಗಿಸಿದ್ದೇವೆ ಅಷ್ಟೆ. ಚಿತ್ರದಲ್ಲಿ ಅವಹೇಳನಕಾರಿ ಹೇಳಿಕೆಗಳನ್ನು ನೀಡಿಲ್ಲ. ಚಿತ್ರದಲ್ಲಿ ಯಾವುದೇ ರೀತಿಯ ಕೆಟ್ಟ ಪದಗಳೂ ಇಲ್ಲ ಎಂದು ಶಂಕರ್ ಐಪಿಎಸ್ ಚಿತ್ರದ ನಾಯಕ ನಟ ವಿಜಯ್ ಪ್ರತಿಕ್ರಿಯಿಸಿದ್ದಾರೆ.
ಚಿತ್ರದ ನಿರ್ಮಾಪಕ ಕೆ ಮಂಜು
ನ್ಯಾಯಾಂಗ ವ್ಯವಸ್ಥೆ ಬಗ್ಗೆ ನಮಗೆ ಅಪಾರ ವಿಶ್ವಾಸವಿದೆ. ಸೆನ್ಸಾರ್ ಮಂಡಳಿ ಮೂಲಕ ನಮ್ಮ ಚಿತ್ರ ಬಿಡುಗಡೆಯಾಗಿದೆ. ಕೋಟ್ಯಾಂತರ ರುಪಾಯಿ ಸಾಲ ಮಾಡಿ ಚಿತ್ರ ತೆಗೆದಿರುತ್ತೇವೆ. ಚಿತ್ರ ಪ್ರದರ್ಶನ ರದ್ದಾದರೆ ನಮಗೆ ಅಪಾರ ನಷ್ಟವಾಗುತ್ತದೆ. ಯಾವ ಕಾರಣಕ್ಕೂ ಚಿತ್ರವನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ಚಿತ್ರದ ನಿರ್ಮಾಪಕ ಕೆ ಮಂಜು ಹೇಳಿದ್ದಾರೆ.
Subscribe to:
Post Comments (Atom)
No comments:
Post a Comment