VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 30, 2010

ವೈದ್ಯ ವೃಂದ ರೋಗಿಗಳನ್ನು ಬಂಧುಗಳಂತೆ ಕಾಣಲಿ

ಬೆಂಗಳೂರು, ಮೇ 29 : ವೈದ್ಯ ವೃಂದ ರೋಗಿಗಳನ್ನು ಪ್ರೀತಿ, ವಿಶ್ವಾಸ ಹಾಗೂ ನಗುಮುಖದೊಂದಿಗೆ ತಮ್ಮ ಬಂಧುಗಳಂತೆ ಕಂಡಲ್ಲಿ ರೋಗಿಗಳ ನೋವು ಅರ್ಧದಷ್ಟು ಕಡಿಮೆಯಾಗುವುದೆಂದು ವೈದ್ಯಕೀಯ ಶಿಕ್ಷಣ ಸಚಿವರಾದ ರಾಮಚಂದ್ರೇಗೌಡ ಅವರು ಅಭಿಪ್ರಾಯಪಟ್ಟಿದ್ದಾರೆ.

ಕಿದ್ವಾಯಿ ಸಂಸ್ಥೆ ಸ್ಮಾರಕ ಗ್ರಂಥಿ ಸಂಸ್ಥೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಬ್ಲಾಕ್‌ನಲ್ಲಿ ಟೆಲಿಮೆಡಿಸನ್ ಘಟಕವನ್ನು ಉದ್ಫಾಟಿಸಿ ಮಾತನಾಡುತ್ತಿದ್ದ ಅವರು ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಹೆಚ್ಚಿಸುವ ಬದಲು ಸಾರ್ವಜನಿಕರು ತಮ್ಮ ದಿನನಿತ್ಯ ಜೀವನವನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋದಲ್ಲಿ ಬಹಳಷ್ಟು ಖಾಯಿಲೆಗಳು ಬರುವುದನ್ನು ತಡೆಗಟ್ಟಬಹುದು ಎಂದು ತಿಳಿಸಿದರು.

ಶ್ರೀ ಕ್ಷೇತ್ರ ನಿರ್ಮಿಸಿರುವ ಈ ಐದು ವಾರ್ಡ್‌ಗಳಿಗೆ ಶ್ರೀ ಮಂಜುನಾಥೇಶ್ವರಸ್ವಾಮಿ, ಕಾರುಣ್ಯ, ವಾತ್ಸಲ್ಯ, ವೈಶಾಲ್ಯ ಹಾಗೂ ಸೌಖ್ಯ ಎಂದು ನಾಮಕರಣ ಮಾಡಲು ತಿಳಿಸಿರುವರೆಂದು ಸಚಿವರು ಈ ಸಂದರ್ಭದಲ್ಲಿ ನುಡಿದರು.

ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಪದ್ಮಭೂಷಣ ಡಾ. ಡಿ ವೀರೇಂದ್ರ ಹೆಗಡೆ ಅವರು ಮಾತನಾಡಿ, ನಮ್ಮ ತಂದೆಯವರು ಕ್ಯಾನ್ಸರ್ ಖಾಯಿಲೆಯಿಂದ ಮರಣ ಹೊಂದಿದರು. ಕ್ಯಾನ್ಸರ್ ರೋಗಿಯ ಮನೆಯವರು ಪಡುವ ಬವಣೆಯನ್ನು ಅರಿತ್ತಿದ್ದೇನೆ. ಹಿಂದೆ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿರುವವರು ಭೂತಪ್ರೇತಗಳಿಂದ ಅಥವಾ ಯಾರೋ ಮಾಟ ಮಾಡಿಸಿರುವರೆಂಬ ಮೂಢ ನಂಬಿಕೆಯಿಂದ ಆಸ್ಪತ್ರೆಗೆ ಹೋಗದೇ ಮರಣ ಹೊಂದುತ್ತಿದ್ದರು. ಈಗ ಕಾಲ ಬದಲಾವಣೆಯಾಗಿದ್ದು ಶೇ.97ರಷ್ಟು ಜನ ಆಸ್ಪತ್ರೆಗೆ ಹೋಗಿ ಔಷಧೋಪಚಾರಗಳನ್ನು ಪಡೆದು ಕ್ಯಾನ್ಸರ್ ಖಾಯಿಲೆಯಿಂದ ಗುಣಮುಖರಾಗುತ್ತಿದ್ದಾರೆ ಎಂದು ಅವರು ತಿಳಿಸಿದರು.

ಪ್ರತಿಯೊಂದು ಕುಟುಂಬ ಆರೋಗ್ಯ ವಿಮೆ ಮಾಡಿಸುವ ಮುಖಾಂತರ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ. ಕ್ಯಾನ್ಸರ್ ಚಿಕಿತ್ಸೆಗಾಗಿ ಬರುವ ರೋಗಿಗಳು ತಾಳ್ಮೆಯನ್ನು ಕಳೆದುಕೊಂಡು ವಿಕಾರವಾಗಿ ವರ್ತಿಸಿದರೂ ವೈದ್ಯ ಸಿಬ್ಬಂದಿ ತಾಳ್ಮೆ ಕಳೆದುಕೊಳ್ಳದೇ ಉತ್ತಮ ಸೇವೆಯನ್ನು ನೀಡಬೇಕೆಂದು ವೈದ್ಯ ಸಿಬ್ಬಂದಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮಕ್ಕೆ ಮೊದಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಬ್ಲಾಕ್ ಅನ್ನು ಲೋಕಾರ್ಪಣೆ ಮಾಡಿದರು. ಸಮಾರಂಭದಲ್ಲಿ ಶಾಸಕ ಡಾ ಹೇಮಚಂದ್ರಸಾಗರ್, ಕೊಳದ ಮಠದ ಶಾಂತವೀರ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಡಾ. ದೊಡ್ಡರಂಗೇಗೌಡ, ಕಿದ್ವಾಯಿ ಸಂಸ್ಥೆಯ ನಿರ್ದೇಶಕ ಡಾಂ ಎಂ. ವಿಜಯಕುಮಾರ್, ವೈದ್ಯಕೀಯ ಅಧ್ಯಕ್ಷ ಡಾ ಎಲ್. ಅಪ್ಪಾಜಿ ಅವರು ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.

No comments: