
ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ದುರಂತದಲ್ಲಿ ಪೈಲಟ್ ಲೋಪ ಇದೆ ಎಂಬುದನ್ನು ಈಗಾಗಲೇ ಹೇಳಲಾಗುವುದಿಲ್ಲ ಎಂದು ತಿಳಿಸಿರುವ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ನೈತಿಕ ಹೊಣೆ ಹೊತ್ತು ರಾಜೀನಾಮೆ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ವಿಮಾನ ದುರಂತದ ಕುರಿತು ಪ್ರಫುಲ್ ಪಟೇಲ್ ಅವರು ಮಂಗಳೂರಿಗೆ ಆಗಮಿಸಿ ಘಟನಾ ಸ್ಥಳವನ್ನು ಪರಿಶೀಲಿಸಿ ಅಧಿಕಾರಿಗಳಿಂದ ವಿವರಣೆ ಪಡೆದಿದ್ದರು. ನಂತರ ದೆಹಲಿಗೆ ವಾಪಸಾದ ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿಯಾಗಿ ಘಟನೆಯ ಪೂರ್ಣ ವಿವರನ್ನು ನೀಡಿದ್ದರು.
ಈ ಸಂದರ್ಭದಲ್ಲಿ ವಿಮಾನ ದುರಂತದಲ್ಲಿ ಪೈಲಟ್ ದೋಷ ಇದೆ ಎಂದು ಹೇಳಲು ಸಾಧ್ಯವಿಲ್ಲ, ನೈತಿಕ ಹೊಣೆ ಹೊತ್ತು ತಾನು ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆನ್ನಲಾಗಿದೆ. ಆದರೆ ಪ್ರಧಾನಿ ಪಟೇಲ್ ರಾಜೀನಾಮೆ ಸ್ವೀಕರಿಸುವುದಿಲ್ಲ ಎಂದು ತಿಳಿಸಿರುವುದಾಗಿ ಮೂಲವೊಂದು ತಿಳಿಸಿದೆ.
ಪ್ರಧಾನಿ ಭೇಟಿ ನಂತರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಫುಲ್ ಪಟೇಲ್, ತನಗೆ ಈ ಘಟನೆಯಿಂದ ತುಂಬಾ ನೋವಾಗಿದೆ. ಪೈಲಟ್ ತಪ್ಪು ಲೆಕ್ಕಚಾರದಿಂದ ಈ ದುರ್ಘಟನೆ ನಡೆದಿದೆ. ಇದೊಂದು ದುರಾದೃಷ್ಟಕರ ಘಟನೆಯಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಘಟನೆ ಬಗ್ಗೆ ತನಿಖೆಗೆ ಆದೇಶ: ಏರ್ ಇಂಡಿಯಾ ವಿಮಾನ ದುರಂತದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದರು. ಡೈರೆಕ್ಟರ್ ಜನರಲ್ ಆಫ್ ಸಿವಿಲ್ ಏವಿಯೇಷನ್ ಈಗಾಗಲೇ ಘಟನೆಯ ಕುರಿತು ತನಿಖೆಗೆ ಆದೇಶ ನೀಡಿದೆ. ದುರಂತದ ಸಂದರ್ಭದಲ್ಲಿ ಕಾಣೆಯಾಗಿರುವ ಬ್ಲ್ಯಾಕ್ ಬಾಕ್ಸ್ ಅನ್ನು ಶೀಘ್ರವೇ ಪತ್ತೆ ಹಚ್ಚುವುದಾಗಿಯೂ ಈ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ವಿಮಾನ ದುರಂತದಲ್ಲಿ ಇಬ್ಬರು ಪೈಲಟ್ ಸೇರಿದಂತೆ ಆರು ಮಂದಿ ಸಿಬ್ಬಂದಿಗಳು ಸಾವನ್ನಪ್ಪಿದ್ದರು. ಅಲ್ಲದೇ 19 ಕಂದಮ್ಮಗಳು ಸೇರಿದಂತೆ ಒಟ್ಟು 158 ಮಂದಿ ಬಲಿಯಾಗಿದ್ದಾರೆ. ಎಂಟು ಮಂದಿ ಪವಾಡಸದೃಶವಾಗಿ ಪಾರಾಗಿದ್ದು, ಮಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 158 ಮಂದಿಯಲ್ಲಿ 105 ಪುರುಷರು, 32ಮಹಿಳೆಯರು, 19 ಮಕ್ಕಳು ಹಾಗೂ ನಾಲ್ಕು ಹಸುಳೆಗಳು ಸೇರಿವೆ.
No comments:
Post a Comment