VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 24, 2010

ಗಗನಸಖಿ ಸುಜಾತಾ ಸುರ್ವಸೆಯ ಕೊನೆಯ ಸಂದೇಶ


‘ನಾನು ವಿದಾಯ ಕೋರುವುದನ್ನು ದ್ವೇಷಿಸುತ್ತೇನೆ’

ಮುಂಬೈ, ಮೇ 23: ಮಂಗಳೂರು ವಿಮಾನ ನಿಲ್ದಾಣದಲ್ಲಿ ನಿನ್ನೆ ಅಪಘಾತಕ್ಕೀಡಾದ ವಿಮಾನದಲ್ಲಿ ಗಗನ ಸಖಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಜಾತಾ ಸುರ್ವಸೆ, ತನ್ನ ಕುಟುಂಬಿಕ ರೊಂದಿಗೆ ಬೆರೆಯಲು ಸಾಧ್ಯವಾಗುತ್ತಿಲ್ಲ ವೆಂದು ಕೆಲವೇ ಸಮಯದೊಳಗೆ ತನ್ನ ಉದ್ಯೋಗವನ್ನು ತೊರೆಯಲು ಬಯಸಿದ್ದರು.

ಭೀಕರ ದುರಂತದಲ್ಲಿ ಆಕೆ ಸಾವನ್ನಪ್ಪುವ ಮೂಲಕ ಆಕೆಯ ಕನಸು ಭಗ್ನಗೊಂಡಿತು. ಮಾತ್ರವಲ್ಲದೆ ಅಂತರ್ಜಾಲದ ಸಾಮಾಜಿಕ ತಾಣವೊಂದರಲ್ಲಿ ಆಕೆ ಬರೆದುಕೊಂಡಿದ್ದ ಸಂದೇಶ, ಮನಮುಟ್ಟುವಂತದ್ದಾಗಿತ್ತು. ‘‘ನಾನು ವಿದಾಯ ಕೋರುವುದನ್ನು ದ್ವೇಷಿಸುತ್ತೇನೆ, ಆದರೆ ಈ ಬಾರಿ ಹಾಗೆ ಆಗುತ್ತದೆ ಎಂದು ನನಗೆ ಅನಿಸುತ್ತಿದೆ’’ ಎಂದು ಸಾಮಾಜಿಕ ತಾಣವೊಂದರಲ್ಲಿ ಸುಜಾತಾ ಬರೆದುಕೊಂಡಿದ್ದರು.

ಮುಂಬೈಯ ಅಂಧೇರಿಯ ಎಂಎಚ್ ಎಡಿಎ ಕಾಲನಿಯ ನಿವಾಸಿಯಾಗಿರುವ ಸುವರ್ಸೆ, ಮೊದಲು ಕಾಲ್‌ಸೆಂಟರ್ ಒಂದರಲ್ಲಿ ಉದ್ಯೋಗಿಯಾಗಿದ್ದರು. ‘‘ತನ್ನ ಕುಟುಂಬಸ್ಥರೊಂದಿಗೆ ಬೆರೆಯಲು ಸಾಧ್ಯವಾಗುತ್ತಿಲ್ಲವಾದ ಕಾರಣ ಸುಜಾತ, ಮುಂಬೈಗೆ ಮರಳಲು ಇಚ್ಛಿಸಿದ್ದಳು.

ಆಕೆ ತನ್ನ ಉದ್ಯೋಗವನ್ನು ತೊರೆಯಲು ನಿರ್ಧರಿಸಿದ್ದಳು. ಉತ್ತಮ ವೇತನ ದೊರೆಯುತ್ತಿದ್ದ ಹಿನ್ನೆಲೆಯಲ್ಲಿ, ಆಕೆ ಮರಳಿ ಕಾಲ್ ಸೆಂಟರ್‌ಗೆ ಸೇರಲು ಚಿಂತಿಸಿದ್ದಳು. ತನ್ನ ಸಹೋದರನ ಹುಟ್ಟುಹಬ್ಬ ಮತ್ತು ಮನೆಯ ಪೂಜೆಯ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ಆಕೆಯನ್ನು, ನಾನು ಮೇ 1ರಂದು ಕೊನೆಯ ಬಾರಿ ಭೇಟಿಯಾಗಿದ್ದೆ’’ ಎಂದು ಸುಜಾತಾಳ ನೆರೆಮನೆ ನಿವಾಸಿ ಸರಿತಾ ಹೇಳುತ್ತಾರೆ.

ತಮ್ಮ ಏಕೈಕ ಮಗಳಿಗೆ ಸುಜಾತಾಳ ಹೆತ್ತವರು ವಿವಾಹ ಮಾಡಲು ವರನನ್ನು ಹುಡುಕುತ್ತಿದ್ದರು. ಮೃತ ಗಗನ ಸಖಿಯು ಇಬ್ಬರು ಅಣ್ಣಂದಿರು ಮತ್ತು ಓರ್ವ ತಮ್ಮನನ್ನು ಅಗಲಿದ್ದಾಳೆ. ವಿಮಾನ ಅಪಘಾತದ ಸುದ್ದಿ ಕೇಳಿ, ಸುಜಾತಾಳ ಕುಟುಂಬಿಕರು, ನೆರೆಮನೆ ನಿವಾಸಿಗಳು, ಸ್ನೇಹಿತರಿಗೆ ಎಲ್ಲಿಲ್ಲದ ಆತಂಕ ಆರಂಭವಾಗಿತ್ತು. ಸುದ್ದಿ ಕೇಳಿದ ತಕ್ಷಣ ಆಕೆಯ ಹೆತ್ತವರು ಮಂಗಳೂರಿಗೆ ತೆರಳಿದ್ದಾರೆ.
ಸುಜಾತಾ ಸುವರ್ಸೆ ತನ್ನ ಅಂತರ್ಜಾಲದ ಸಾಮಾಜಿಕ ತಾಣದಲ್ಲಿ ‘‘ನಾನು ವಿದಾಯ ಕೋರುವುದನ್ನು ದ್ವೇಷಿಸುತ್ತೇನೆ, ಆದರೆ ಈ ಬಾರಿ ಹಾಗೆ ಆಗುತ್ತದೆ ಎಂದು ನನಗೆ ಅನಿಸುತ್ತಿದೆ’’ ಎಂದು ಬರೆದು ಕೊಂಡಿದ್ದಳು.
ಸುಜಾತಾ ಸುವರ್ಸೆ ಅಂಧೇರಿಯ ಭವನ್ಸ್ ಕಾಲೇಜಿನಲ್ಲಿ ತತ್ವಶಾಸ್ತ್ರ ವಿಷಯದಲ್ಲಿ ಬಿಎ ಪದವಿ ಪಡೆದಿದ್ದಳು. ಆಕೆ, ತನ್ನ ಸಾಮಾಜಿಕ ತಾಣದಲ್ಲಿ ತಾನು ಬೌದ್ಧ ತತ್ವಶಾಸ್ತ್ರದಲ್ಲಿ ಹೆಚ್ಚು ನಂಬಿಕೆಯನ್ನು ಹೊಂದಿರುವುದಾಗಿ ಬರೆದುಕೊಂಡಿದ್ದಳು.

ಸುಜಾತಾ ನೃತ್ಯ ಮಾಡುವುದನ್ನು ಬಯುಸುತ್ತಿದ್ದಳು, ಸ್ನೇಹಿತರೊಂದಿಗೆ ಬೆರೆಯುವುದನ್ನು ಇಚ್ಛಿಸುತ್ತಿದ್ದಳು ಆದರೆ ಪುಸ್ತಕವನ್ನು ದ್ವೇಷಿಸುತ್ತಿದ್ದಳು. ಪುಸ್ತಕವನ್ನು ಆಕೆ ‘ಉತ್ತಮ ನಿದ್ರಾ ಮಾತ್ರೆಗಳು’ ಎಂದು ಬಣ್ಣಿಸಿದ್ದಳು.

25ರ ಹರೆಯದ ಸುಜಾತಾ, ಕಳೆದ ಮೂರು ವರ್ಷಗಳಿಂದ ಏರ್ ಇಂಡಿಯಾದಲ್ಲಿ ಗಗನಸಖಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಳು. ಕೊಚ್ಚಿನ್‌ನಲ್ಲಿ ಉದ್ಯೋಗಕ್ಕೆ ಸೇರಿಕೊಂಡಿದ್ದ ಆಕೆ, ಬಳಿಕ ಮಂಗಳೂರಿಗೆ ವರ್ಗಾವಣೆ ಗೊಂಡಿದ್ದಳು. ಮುಂಬೈಗೆ ವರ್ಗಾವಣೆಯಾಗಲು ಆಕೆ ಬಯಸಿದ್ದಳು. ‘‘ನಾನು ಹಾರ ಬಲ್ಲೆ ಎಂದು ನಾನು ನಂಬಿದ್ದೆ ಮತ್ತು ನಾನು ಅದನ್ನು ಸಾಧಿಸಿದೆ’’ ಎಂದು ತನ್ನ ಪ್ರೊಫೈಲ್‌ನಲ್ಲಿ ಸುಜಾತಾ ಹೇಳಿಕೊಂಡಿದ್ದಳು.

ಗಗನ ಸಖಿಯಾಗಲು ಸುಜಾತಾ ತುಂಬಾ ಶ್ರಮಿಸಿದ್ದರು. ಗಗನ ಸಖಿಯಾಗುವ ಮೊದಲು ಆಕೆ ಕಾಲ್ ಸೆಂಟರ್‌ನಲ್ಲಿ ಎರಡು ವರ್ಷಗಳ ಕಾಲ ದುಡಿದಿದ್ದಳು. ಈ ನಡುವೆ ಆಕೆ ತನ್ನ ಗಗನ ಸಖಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಳು ಎಂದು ಸುಜಾತಾಳ ನೆರೆಮನೆ ನಿವಾಸಿ ದಿವ್ಯಾ ಶೆರ್ಪಾ ಹೇಳುತ್ತಾರೆ.

ಕೊಚ್ಚಿನ್‌ನಲ್ಲಿ ಮೊದಲ ಬಾರಿ ಆಕೆಗೆ ನೇಮಕಾತಿಯಾದಾಗ, ಆಕೆ ತುಂಬಾ ಸಂತೋಷ ಪಟ್ಟಿದ್ದಳು. ಆದರೆ ಯಾವಾಗಲೂ ಮನೆಯಿಂದ ದೂರವಿರುತ್ತಿದ್ದ ಹಿನ್ನೆಲೆಯಲ್ಲಿ ಆಕೆಯ ಕುಟುಂಬ ಆಕೆಯನ್ನು ಮುಂಬೈಗೆ ಕರೆಸಿಕೊಳ್ಳಲು ಬಯಸಿತ್ತು.

ಆಕೆಗೆ ಹಲವಾರು ವಿಮಾನಯಾನ ಸಂಸ್ಥೆಗಳಿಂದ ಉದ್ಯೋಗದ ಅವಕಾಶ ಒದಗಿ ಬಂದಿತ್ತು. ಆದರೆ ರಾಷ್ಟ್ರೀಯ ಉದ್ಯಮವಾಗಿರುವ ಹಿನ್ನೆಲೆಯಲ್ಲಿ ಆಕೆ ಏರ್ ಇಂಡಿಯಾವನ್ನು ಆಯ್ದುಕೊಂಡಿದ್ದಳು ಎಂದು ಸುಜಾತಾಳ ಇನ್ನೋರ್ವ ಸ್ನೇಹಿತೆ ಹೇಳುತ್ತಾಳೆ.

No comments: