
ಮಂಗಳೂರು, ಮೇ 22 : ವಿಮಾನ ದುರಂತ ಸಂಭವಿಸಿರುವ ಸ್ಥಳ ಬಜ್ಪೆ ವಿಮಾನ ನಿಲ್ದಾಣದ ಬಗ್ಗೆ ಇಬ್ಬರು ನಾಯಕರು ವಿಭಿನ್ನ ಹೇಳಿಕೆ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಧಾವಿಸಿರುವ ವಿದೇಶಾಂಗ ಸಚಿವ ಎಸ್ಎಂ ಕೃಷ್ಣ ಅವರು ಉದ್ದ ಕಡಿಮೆ ಇರುವ ರನ್ ವೇ ಪೈಲಟ್ ಅವರ ತಾಳ್ಮೆಯನ್ನು ಪರೀಕ್ಷಿಸುತ್ತದೆ ಎಂದು ಹೇಳಿದ್ದರೆ, ರಾಜ್ಯ ಗೃಹ ಸಚಿವ ವಿಎಸ್ ಆಚಾರ್ಯ ಅವರು ಬಜ್ಪೆ ವಿಮಾನ ನಿಲ್ದಾಣ ಅತ್ಯಂತ ಸುರಕ್ಷಿತವಾಗಿದೆ ಎಂದು ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಿಂದ ವಿಮಾನದ ಮುಖಾಂತರ ಬಜ್ಪೆಗೆ ಕೃಷ್ಣ ತಲುಪಿದ್ದಾರೆ. ಆಚಾರ್ಯ ಅವರು ಹೆಲಿಕಾಫ್ಟರ್ ಮುಖಾಂತರ ಹೊರಟಿದ್ದರು. ಆದರೆ ಆಚಾರ್ಯ, ಯಡಿಯೂರಪ್ಪ, ಅಜಯ್ ಕುಮಾರ್ ಸಿಂಗ್ ಅವರನ್ನು ಹೊತ್ತು ತರುತ್ತಿದ್ದ ಹೆಲಿಕಾಪ್ಟರ್ ಮಂಗಳೂರಿನ ವಾತಾವರಣ ಮೋಡಮಯವಾಗಿದ್ದ ಕಾರಣ ಹಾಸನದಲ್ಲಿಳಿದಿದೆ. ಅವರೀಗ ರಸ್ತೆ ಮುಖಾಂತರ ಬಜ್ಪೆಗೆ ತಲುಪುತ್ತಿದ್ದಾರೆ.
ವಿಮಾನಯಾನ ತಜ್ಞರ ಪ್ರಕಾರ ಬಜ್ಪೆ ವಿಮಾನ ನಿಲ್ದಾಣದ ರನ್ ವೇ ಉದ್ದ ತುಂಬಾ ಚಿಕ್ಕದಾಗಿದ್ದು, ಸಣ್ಣ ಮತ್ತು ಪ್ರಾದೇಶಿಕ ವಿಮಾನ ಬಂದಿಳಿಯಲು ಸಹಕಾರಿಯಾಗಿತ್ತು. ಅತಿ ವೇಗದಲ್ಲಿ ಬರುವ ವಿಮಾನ ಇಳಿಯಲು ಕೂಡ ಇದು ಸಹಕಾರಿಯಾಗಿರಲಿಲ್ಲ. ಈಗ ತಿಳಿದಿರುವ ಪ್ರಕಾರ, ಅಪಘಾತ ಸಂಭವಿಸಿದ್ದು ವಿಮಾನ ಅತಿ ವೇಗದಿಂದ ಬಂದು ನಿಯಂತ್ರಣಕ್ಕೆ ಬರಲಾಗದೆ ರನ್ ವೇ ದಾಟಿ ಮುಂದುವರಿದಿದ್ದರಿಂದ.
ಇದೇ ಅಭಿಪ್ರಾಯವನ್ನು ಎಸ್ಎಂ ಕೃಷ್ಣ ವ್ಯಕ್ತಪಡಿಸಿದ್ದಾರೆ. ಬಜ್ಪೆ ವಿಮಾನ ನಿಲ್ದಾಣ ಮತ್ತು ರನ್ ವೇ ಅತ್ಯಂತ ಕ್ಲಿಷ್ಟಕರವಾದದ್ದು ಮತ್ತು ವಿಮಾನ ಇಳಿಯುವಾಗ ಪೈಲಟ್ ನ ತಾಳ್ಮೆಯನ್ನು ಪರೀಕ್ಷಿಸುತ್ತದೆ ಎಂದಿದ್ದಾರೆ. ಕಳೆದೊಂದು ದಶಕದಲ್ಲಿ ಇಂಥ ಭೀಕರ ಘಟನೆ ಸಂಭವಿಸಿರಲಿಲ್ಲ. ಬಂಧುಗಳನ್ನು ಕಳೆದುಕೊಂಡಿರುವ ಕುಟುಂಬಗಳಿಗಾಗಿ ನನ್ನ ಹೃದಯ ಮಿಡಿಯುತ್ತದೆ ಎಂದು ಕಂಬನಿ ಮಿಡಿದಿದ್ದಾರೆ.
ಆದರೆ, ಇದೇ ಜಿಲ್ಲೆಯವರಾದ ವಿಎಸ್ ಆಚಾರ್ಯ ಅವರು ಬಜ್ಪೆ ವಿಮಾನ ನಿಲ್ದಾಣ ಮತ್ತು ರನ್ ವೇ ಅತ್ಯಂತ ಸುರಕ್ಷಿತವಾಗಿದೆ ಎಂದು ಸರ್ಟಿಫಿಕೇಟ್ ನೀಡಿದ್ದಾರೆ.
No comments:
Post a Comment