ಮಂಗಳೂರು, ಮೇ 22 : ಹಚ್ಚಹಸಿರಿನಿಂದ ಆವೃತವಾಗಿರುವ ಬೆಟ್ಟದ ಮೇಲಿನ ಸುಂದರ ಬಜ್ಪೆ ವಿಮಾನ ನಿಲ್ದಾಣದಲ್ಲಿ ಸಂಭವಿಸಿರುವ ದೇಶದ ಮೂರನೇ ಅತಿ ದೊಡ್ಡ ವಿಮಾನ ದುರಂತದಲ್ಲಿ 159 ಜನ ಮೃತಪಟ್ಟು 7 ಜನ ಪವಾಡಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕರಾಳ ಶನಿವಾರದಂದು ಬೆಳಗಿನ ಜಾವ 6.40ಕ್ಕೆ ಸಂಭವಿಸಿದ ವಿಮಾನ ಅಪಘಾತ ಇಡೀ ರಾಜ್ಯದ ಮೇಲೆ ಶೋಕದ ಕಾರ್ಮೋಡ ಕವಿಯುವಂತೆ ಮಾಡಿದೆ. ದುಬೈನಿಂದ ಮಂಗಳೂರಿಗೆ ಆಗಮಿಸಿದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಚಿಕ್ಕದಾದ ರನ್ ವೇ ದಾಟಿ ನಿಯಂತ್ರಣ ತಾಳಲಾರದೆ ಬೆಟ್ಟದ ಮೇಲಿಂದ ತಗ್ಗಿಗೆ ಧುಮುಕಿ ನುಚ್ಚುನೂರಾಗಿದೆ, ಬೆಂಕಿಯ ಉಂಡೆಯಂತಾಗಿ 159 ಭಾರತೀಯರನ್ನು ಆಹುತಿ ತೆಗೆದುಕೊಂಡಿದೆ.
ಬದುಕಿದ ಅದೃಷ್ಟವಂತರು : ನೆಲಕ್ಕೆ ಅಪ್ಪಳಿಸುತ್ತಿದ್ದಂತೆ ಎರಡು ಭಾಗವಾಗಿ ತುಂಡಾದ ದುರ್ದೈವಿ ವಿಮಾನದಿಂದ ಕೆಲವರು ಧುಮುಕಿ ಪಾರಾಗಿದ್ದಾರೆ. ಉಳಿದವರಿಗೆ ಆ ಅದೃಷ್ಟವಿರಲಿಲ್ಲ. ಮರುಜನ್ಮ ಪಡೆದವರ ಹೆಸರುಗಳು ಇಂತಿವೆ : ಇಸ್ಮಾಯಿಲ್ ಅಬ್ದುಲ್ಲಾ ಪುತ್ತೂರು, ಜೋಯೆಲ್ ಪ್ರತಾಪ್ ಡಿಸೋಜಾ, ಜಿಕೆ ಪ್ರದೀಪ್, ಕೃಷ್ಣನ್ ಕೂಲಿಕುಣ್ಣು, ಮಾಯನ್ ಕುಟ್ಟಿ, ಉಮರ್ ಫರೂಕ್ ಮತ್ತು ಡಾ. ಸಬ್ರೀನಾ.
ಕಾಸರಗೋಡು, ಮಂಜೇಶ್ವರ, ಮಡಿಕೇರಿ, ಉಡುಪಿ ಮುಂತಾದ ಪ್ರದೇಶಕ್ಕೆ ಸೇರಿದ ಜನ ಮೃತರಾಗಿದ್ದಾರೆ. ಒಂದಿಬ್ಬರು ಕೆಲ ದಿನಗಳಲ್ಲಿ ಮದುವೆಯಾಗುವವರಿದ್ದರೆ, ಕೆಲವರು ಮದುವೆಗೆಂದು ದುಬೈನಿಂದ ಇಲ್ಲಿಗೆ ಆಗಮಿಸಿದ್ದರು. ವಿಮಾನದಲ್ಲಿದ್ದವರು ಯಾವ ರೀತಿ ಸುಟ್ಟು ಕರಕಲಾಗಿದ್ದರೆಂದರೆ ಗುರುತಿಸುವುದು ಅಸಾಧ್ಯದ ಮಾತಾಗಿತ್ತು. ಪಯಣ ಮಾಡಿದವರ ಪಟ್ಟಿಯಿಂದ ಸತ್ತವರ ಹೆಸರನ್ನು ಗುರುತಿಸಲಾಗಿದೆ. ಬೆಳಗಿನಿಂದ ಆರಂಭವಾಗಿದ್ದ ರಕ್ಷಣಾ ಕಾರ್ಯ ಸಂಜೆವರೆಗೂ ನಡೆಯುತ್ತಲೇ ಇದೆ. ಇಲ್ಲಿಯವರೆಗೆ 148 ಪ್ರಯಾಣಿಕರನ್ನು ವಿಮಾನದಿಂದ ಹೊರತೆಗೆಯಲಾಗಿದೆ. ಇನ್ನೂ ಕೆಲವರು ಸಿಲುಕಿಕೊಂಡಿದ್ದಾರೆ.
ರಾಜಕಾರಣಿಗಳ ದಂಡು : ಘಟನೆ ಸುದ್ದಿ ತಿಳಿಯುತ್ತಿದ್ದಂತೆ ರಾಜಕಾರಣಿಗಳ ದಂಡು ಬಜ್ಪೆಗೆ ಧಾವಿಸಿದೆ. ಕೇಂದ್ರ ನಾಗರಿಕ ವಿಮಾನಯಾನ ಸಚಿವ ಪ್ರಫುಲ್ ಪಟೇಲ್, ವಿದೇಶಾಂಗ ಸಚಿವ ಎಸ್ಎಂ ಕೃಷ್ಣ ಮೊದಲು ಆಗಮಿಸಿದರೆ, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಗೃಹ ಸಚಿವ ವಿಎಸ್ ಆಚಾರ್ಯ, ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಕುಮಾರ್ ಸಿಂಗ್ ನಂತರ ಆಗಮಿಸಿದರು.
ತನಿಖೆ, ಪರಿಹಾರ : ದುರಂತಕ್ಕೆ ಸಂಬಂಧಿಸಿದಂತೆ ಯಾವುದೇ ಊಹಾಪೋಹಗಳಿಗೆ ಕಿವಿಗೊಡದೆ ತನಿಖೆಗೆ ಆದೇಶಿಸಿದ್ದಾರೆ. ಬ್ಲಾಕ್ ಬಾಕ್ಸ್ ದೊರೆತ ನಂತರ ಮತ್ತು ತನಿಖೆ ನಡೆದ ನಂತರ ದುರಂತಕ್ಕೆ ನಿಖರ ಕಾರಣ ತಿಳಿಯಲಿದೆ ಎಂದಿದ್ದಾರೆ. ನಿಲ್ದಾಣ ಸುರಕ್ಷಣಾ ನಿಯಮಗಳನ್ನು ಉಲ್ಲಂಘಿಸಿದೆ ಎಂಬ ಆರೋಪವನ್ನು ಪಟೇಲ್ ತಳ್ಳಿಹಾಕಿದ್ದಾರೆ. ಬಜ್ಪೆ ವಿಮಾನ ನಿಲ್ದಾಣ ಅಂತಾರಾಷ್ಟ್ರೀಯ ಮಟ್ಟದ್ದು ಎಂದಿರುವ ವಿಎಸ್ ಆಚಾರ್ಯ ಕೂಡ ತನಿಖೆಗೆ ಆದೇಶಿಸಿದ್ದಾರೆ. ಅಪಘಾತದ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಘಟನೆಯಲ್ಲಿ ತೀರಿಕೊಂಡ ರಾಜ್ಯದ ಪ್ರಯಾಣಿಕರ ಕುಟುಂಬಕ್ಕೆ 2 ಲಕ್ಷ ರು. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.
ವೈಮಾನಿಕ ಸಮೀಕ್ಷೆ ನಡೆಸಿದ ಎಸ್ಎಂ ಕೃಷ್ಣ ಅವರು ಆಚಾರ್ಯ ನೀಡಿದ ಹೇಳಿಕೆಗೆ ವ್ಯತಿರಿಕ್ತವಾದ ಹೇಳಿಕೆ ನೀಡಿದ್ದಾರೆ. ಬಜ್ಪೆ ವಿಮಾನ ನಿಲ್ದಾಣದ ರನ್ ವೇ ಪೈಲಟ್ ಗಳಿಗೆ ಒಂದು ಸವಾಲೇ ಸರಿ ಎಂದಿದ್ದಾರೆ. ಅವರು ವಿವಿಧ ಆಸ್ಪತ್ರೆಗಳಿಗೆ ತೆರಳಿ ಗಾಯಾಳುಗಳನ್ನು ಸಂದರ್ಶಿಸಿ ಸಾಂತ್ವನ ಹೇಳಿದರು.
ಬಂಧುಗಳ ಆಕ್ರಂದನ : ಅಪಘಾತ ನಡೆದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸಂಬಂಧಿಕರಿಗೆ ಆಘಾತ ಕಾದಿತ್ತು. ಯಾಕೆಂದರೆ, ದೇಹಗಳು ಯಾರೂ ಗುರುತಿಸುವ ಸ್ಥಿತಿಯಲ್ಲಿರಲಿಲ್ಲ. ಸತ್ತವರನ್ನು ಗುಡ್ಡೆ ಹಾಕಿ ನಂತರ ವೆನ್ ಲ್ಯಾಕ್ ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಲ್ಲಿಯೂ ಕೂಡ ನೆರೆದಿದ್ದ ಸತ್ತವರ ಸಂಬಂಧಿಕರನ್ನು ಸಾಂತ್ವನ ಪಡಿಸುವುದು ಅಸಾಧ್ಯ ಮಾತಾಗಿತ್ತು. ರೋದನ, ಆಕ್ರಂದನ ಮುಗಿಲು ಮುಟ್ಟಿತ್ತು.
May 22, 2010
Subscribe to:
Post Comments (Atom)
No comments:
Post a Comment