VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 30, 2010

ಸರ್ಕಾರದ ಸಂಭ್ರಮಕ್ಕೆ ಸೂತಕದ ಛಾಯೆ!

ಚಿತ್ರದುರ್ಗ/ಬೆಂಗಳೂರು, ಮೇ.30: ಇಂದಿಗೆ ಸರಿಯಾಗಿ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಎರಡು ವರ್ಷಗಳು ತುಂಬುತ್ತದೆ. ನವ ಕರ್ನಾಟಕ ನಿರ್ಮಾಣದ ಕನಸು ಹೊತ್ತು ಸರ್ವರಿಗೂ ಸಮಪಾಲು ಎಂದು ಆಡಳಿತ ಚುಕ್ಕಾಣಿ ಹಿಡಿದ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಇಂದು ಬೆಳಗ್ಗೆ ಶುಭಾಶಯ ವಿನಿಮಯ ಮಾಡಿಕೊಳ್ಳುವ ಮೊದಲೇ ಚಳ್ಳಕೆರೆ ದುರಂತದ ಸೂತಕದ ಛಾಯೆ ಆವರಿಸಿತು. "ಎರಡು ವರ್ಷ ಪೂರೈಸಿರುವುದಕ್ಕೆ ಸಹಜವಾಗಿ ಖುಷಿಯಾಗಿದೆ. ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದೇನೆ. ಆದರೆ, ನನ್ನ ಮನಸ್ಸು ವಿಚಲಿತವಾದಾಗಲೆಲ್ಲಾ ನನ್ನ ಆಪ್ತರು ಹಾಗೂ ನಾಡಿನ ಜನತೆ ನನಗೆ ಬೆಂಬಲ ಸೂಚಿಸಿ ಮುನ್ನಡೆಸಿದ್ದಾರೆ. ಸಾಧನೆಯ ಬಗ್ಗೆ ತೃಪ್ತಿಯಿದ್ದರೂ ಸಮಾಧಾನವಿಲ್ಲ. ದುರಂತಗಳನ್ನು ಎದುರಿಸುವ ಶಕ್ತಿ ಆ ಭಗವಂತ ನೀಡಲಿ" ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಎರಡನೇ ವರ್ಷಾಚರಣೆಗೆ ಪ್ರತಿಕ್ರಿಯಿಸಿದರು. ಚಳ್ಳಕೆರೆಗೆ ಧಾವಿಸಿದ ಸರ್ಕಾರ: ಅಪಘಾತದ ಸುದ್ದಿ ತಿಳಿದ ತಕ್ಷಣ ತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ದಂಡೇ ಹರಿದು ಬಂದಿತ್ತು. ಮೊದಲಿಗೆ ಬಂದವರು ಜಿಲ್ಲಾ ಉಸ್ತುವಾರಿ ಹಾಗೂ ಕಂದಾಯ ಸಚಿವ ಜಿ ಕರುಣಾಕರ ರೆಡ್ಡಿ, ನಂತರ ಸಮಾಜ ಕಲ್ಯಾಣ ಸಚಿವ ಡಿ. ಸುಧಾಕರ್ ಬಂದರು. ವಿಶೇಷ ಹೆಲಿಕ್ಯಾಪ್ಟರ್ ನಲ್ಲಿ ಆಗಮಿಸಿದ ಸಾರಿಗೆ ಸಚಿವ ಆರ್ ಅಶೋಕ್ , ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಜಯ್ ಕುಮಾರ್ ಸಿಂಗ್ ಜತೆಗೂಡಿ ಪರಿಹಾರ ಕಾರ್ಯವನ್ನು ವೀಕ್ಷಿಸಿದರು. ಆನಂತರ ಬಂದ ಗೃಹ ಸಚಿವ ವಿಎಸ್ ಆಚಾರ್ಯ ಅವರು ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸಿದರು. ಸಾಧನೆಯ ಬಗ್ಗೆ ತೃಪ್ತಿಯಿದ್ದರೂ ಸಮಾಧಾನವಿಲ್ಲ. ದುರಂತಗಳನ್ನು ಎದುರಿಸುವ ಶಕ್ತಿ ಆ ಭಗವಂತ ನೀಡಲಿ" ಹರಿದು ಬಂದ ಪರಿಹಾರದ ಹೊಳೆ: ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕುಟುಂಬಗಳಿಗೆ ಸರ್ಕಾರದ ವತಿಯಿಂದ 3.50 ಲಕ್ಷ ರು ಪರಿಹಾರ ಸಿಗಲಿದೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 1ಲಕ್ಷ ರು ಹಾಗೂ ರಾಜ್ಯ ರಸ್ತೆ ಸಾರಿಗೆ ಇಲಾಖೆಯಿಂದ 2.50 ಲಕ್ಷ ರು ನೀಡಲಾಗುತ್ತದೆ. ಚಾಲಕನ ನಿರ್ಲಕ್ಷ್ಯ ಕಾರಣ: ಪ್ರಾಥಮಿಕ ವರದಿಗಳ ಪ್ರಕಾರ ಮುಂಜಾನೆ ವೇಳೆ ರಸ್ತೆ ಖಾಲಿ ಇದ್ದದ್ದರಿಂದ ಅತಿ ವೇಗವಾಗಿ ಚಾಲನೆ ಮಾಡುತ್ತಿದ್ದ ಚಾಲಕ, ಮುಂಬರುತ್ತಿದ್ದ ವಾಹನಕ್ಕೆ ಢಿಕ್ಕಿ ಹೊಡ್ಯುವುದನ್ನು ತಪ್ಪಿಸಲು ಹೋಗಿ ಬಸ್ ಆಯತಪ್ಪಿ ಬೀಳಬೇಕಾಯಿತು ಎಂದು ತಿಳಿದು ಬಂದಿದೆ. ಆದರೆ ಸ್ವತಂತ್ರ ಸಂಸ್ಥೆಯಿಂದ ಸಮಗ್ರ ತನಿಖೆ ನಡೆಸಿ, ನಂತರ ಕ್ರಮ ಜರುಗಿಸಲಾಗುವುದು ಎಂದು ಅಶೋಕ್ ಹೇಳಿದರು. ಚಾಲಕರು, ನಿರ್ವಾಹಕ ಪೊಲೀಸ್ ವಶಕ್ಕೆ: ಬಸ್ ನಲ್ಲಿದ್ದ ಅರ್ಧದಷ್ಟು ಜನರು ಹೊರ ಬರಲಾರದೆ ಸಾವನ್ನಪ್ಪಿದರೂ, ನಿರ್ವಾಹಕ ನಂದನಗೌಡ ಪಾಟೀಲ, ಚಾಲಕರಾದ ಗುಂಡಪ್ಪ ಶೆಟ್ಟಿ ಹಾಗೂ ಸಿದ್ದಯ್ಯಸ್ವಾಮಿ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ. ಮೂವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ಸೂಚನೆ: ಎರಡು ವರ್ಷ ಪೂರೈಸಿದ ಬಿಎಸ್ ಯಡಿಯೂರಪ್ಪ ಸರ್ಕಾರದ ಸಂಭ್ರಮಾಚರಣೆ ಜೂನ್18 ರಂದು ಸಾಧನಾ ಸಮಾವೇಶ ಬೆಂಗಳೂರಿನ ಅರಮನೆ ಆವರಣದಲ್ಲಿ ನಡೆಯಲಿದೆ. ಮುಗಿಲು ಮುಟ್ಟಿದ ನೋವಿನ ಆಕ್ರಂದನ ಚಳ್ಳಕೆರೆ, ಮೇ. 30: ಶತ್ರುವಿಗೂ ಇಂತಹ ಸಾವು ಬರೋದು ಬೇಡ ಎಂದು ಚಳ್ಳಕೆರೆಯ ಬಸ್ ದುರಂತದಲ್ಲಿ ಬದುಕುಳಿದವರು ನೋವಿನಿಂದ ಹೇಳುತ್ತಿದ್ದಾರೆ. ನಾಯಕನಹಟ್ಟಿ ದುರಂತ ಬಸ್ ಸುಟ್ಟು ಕರಕಲಾಗುವುದನ್ನು ಕಂಡವರು ಸತ್ತವರಿಗೆ ಸಂತಾಪ ರೂಪದಿ ಕಣ್ಣೀರು ಸುರಿಸುತ್ತಾ ಚಿತ್ರದುರ್ಗ ಹಾಗೂ ಚಳ್ಳಕೆರೆಯ ಆಸ್ಪತ್ರೆಯಲ್ಲಿ ಮಲಗಿದ್ದಾರೆ. ಈ ಬಸ್ ದುರಂತದಲ್ಲಿ ಸತ್ತ 30 ಮಂದಿಯಲ್ಲಿ 24 ಮಂದಿ ಸುರಪುರದ ಕೂಲಿ ಕಾರ್ಮಿಕರು , ಈಗಾಗಲೇ 21 ಮಂದಿಯ ಶವವನ್ನು ಗುರುತಿಸಲಾಗಿದ್ದು, ಚಳ್ಳಕೆರೆಯ ಅಸ್ಪತ್ರೆಯಲ್ಲಿ ಶವಗಳನ್ನು ಇಡಲಾಗಿದೆ. ಡಿಎನ್ ಎ ತಂತ್ರಜ್ಞಾನ ಬಳಸಿ ಉಳಿದ ಶವಗಳ ಗುರುತು ಪತ್ತೆ ಕಾರ್ಯ ಮಾಡಲಾಗುತ್ತದೆ. ಸುರುಪುರದಿಂದ ಮೃತರ ಕುಟುಂಬದವರು ಚಳ್ಳಕೆರೆಗೆ ದಾವಿಸಿಬಂದಿದ್ದಾರೆ. ಬದುಕುಳಿದವರು ಹೇಳಿದ ಕಥೆ ವ್ಯಥೆ: ಮುಂಜಾನೆ ವೇಳೆ ವಾಹನಗಳು ಕಮ್ಮಿಯಿದ್ದ ಕಾರಣ, ದುರಂತಕ್ಕೀಡಾದ ಬಸ್ ಸುಮಾರು 80 ಕಿ.ಮೀ ವೇಗದಲ್ಲಿ ಚಲಿಸುತ್ತಿತ್ತು, ಮುಂದೆ ಬರುತ್ತಿದ್ದ ಲಾರಿಗೆ ಗುದ್ದುವುದನ್ನು ತಪ್ಪಿಸಲು ಹೋಗಿ ರಸ್ತೆ ವಿಭಜಕಕ್ಕೆ ಗುದ್ದಿ ಪಲ್ಟಿ ಹೊಡೆದು ಪಕ್ಕದ ನಾಲ್ಕೈದು ಅಡಿ ಹಳ್ಳಕ್ಕೆ ಬಿತ್ತು ಎಂದು ಪ್ರತ್ಯಕ್ಷ ದರ್ಶಿಯೊಬ್ಬರು ಹೇಳುತ್ತಾರೆ. ಬಸ್ ನ ಬಾಗಿಲು ನೆಲಮುಖವಾಗಿ ಬಿದ್ದಿತ್ತು. ಡೀಸೆಲ್ ಟ್ಯಾಂಕ್ ಗೆ ಬೆಂಕಿ ತಗುಲಿತು. ಆದರೆ, ಬಾಗಿಲು ತೆಗೆದು ಹೊರಬರಲಾಗದೆ 30 ಮಂದಿ ಸಜೀವ ದಹನವಾದರು. ಬಹುತೇಕ ಪ್ರಯಾಣಿಕರು ಮುಂಜಾನೆಯ ಸುಖನಿದ್ರೆಯಲ್ಲಿದ್ದರು. ಬಸ್ ಗೆ ಬೆಂಕಿ ತಗುಲಿದ ತಕ್ಷಣ, ಎಚ್ಚರಗೊಂಡು ಕೈಲಿದ್ದ ಮಗುವನ್ನು ಗಟ್ಟಿಯಾಗಿ ಹಿಡಿದುಕೊಂಡೆ. ಕಿಟಕಿ ಗಾಜು ಹೊಡೆದು ಹೊರಬಿದ್ದೆ .ಆದರೆ, ನನ್ನ ಹೆಂಡತಿಯನ್ನು ಬದುಕಿಸಲಾಗಲಿಲ್ಲ. ಈಗ ನನ್ನ ಮಗುವಿಗೆ ಯಾರು ದಿಕ್ಕು ಎಂದು ಹೆಂಡತಿ ಶವವನ್ನು ಗುರುತಿಸಲು ಹೆಣಗಾಡುತ್ತಿದ್ದ ವ್ಯಕ್ತಿ ನೋವಿನಿಂದ ಹೇಳಿದರು. ಕೂಲಿ ಕಾರ್ಮಿಕರ ಸಾವಿಗೆ ಸರ್ಕಾರವೇ ಹೊಣೆ! ಚಿತ್ರದುರ್ಗ,ಮೇ. 30: ಕೂಲಿ ಕಾರ್ಮಿಕರು ಇತ್ತೀಚೆಗೆ ಇದೇ ರೀತಿ ಅಪಘಾತದಲ್ಲಿ ದುರಂತ ಸಾವನ್ನಪ್ಪಿದ್ದರು. ಇಂದು ನಾಯಕನಹಟ್ಟಿ ಚಳ್ಳಕೆರೆ ಬಸ್ ದುರಂತದಲ್ಲಿ ಸತ್ತವರಲ್ಲಿ ಕೂಲಿ ಆಳುಗಳೇ ಹೆಚ್ಚು. ಬಡವರು ತುತ್ತು ಅನ್ನವನ್ನು ಅರಸಿ ದೂರದ ಊರಿಗೆ ಹೊರಟುವ ಪರಿಸ್ಥಿತಿ ತಂದಿಟ್ಟಿದ್ದು ರಾಜ್ಯ ಸರ್ಕಾರ ಸಾಧನೆ ಎನ್ನಬಹುದು. ಕಳೆದ ಎಂಟು ತಿಂಗಳಿನಿಂದ ಉದ್ಯೋಗ ಖಾತ್ರಿ ಯೋಜನೆ ಜಾರಿ ಮಾಡದೇ ಸರ್ಕಾರ ಉದಾಸೀನ ರೀತಿಯಲ್ಲಿ ವರ್ತಿಸುತ್ತಾ ಬಂದಿದೆ. ಹೀಗಾಗಿ ಉತ್ತರ ಕರ್ನಾಟಕದಿಂದ ಕೂಲಿ ಕಾರ್ಮಿಕರು ಉದ್ಯೋಗ ಅರಸಿ ಬೆಂಗಳೂರು, ದಾವಣಗೆರೆ, ಚಿಕ್ಕಮಗಳೂರು ಮುಂತಾದೆಡೆ ಗುಳೇ ಹೋಗುವುದು ಸಾಮಾನ್ಯವಾಗಿದೆ. ಹೀಗೆ ಗುಳೇ ಹೋಗುವುದು ಹೆಚ್ಚಾಗುತ್ತಿದ್ದು, ಇದನ್ನು ತಪ್ಪಿಸಬೇಕಾದಎರ್ ಉದ್ಯೋಗ ಖಾತ್ರಿ ಯೋಜನೆ ಜಾರಿಕೊಂಡು, ಕೂಲಿ ಆಳುಗಳಿಗೆ ಅವರ ಸ್ಥಳದಲ್ಲೇ ಉದ್ಯೋಗ ದೊರಕಿಸಿಕೊಡಬೇಕು. ಇಲ್ಲದಿದ್ದರೆ ಇಂತಹ ಪ್ರಕರಣಗಳು ಹೆಚ್ಚಿದರೆ ಆಶ್ಚರ್ಯವೇನಿಲ್ಲ. ಸುರಪುರದ ಶಾಸಕ ರಾಜೂಗೌಡ ಅವರು ಇಂದು ಘಟನಾ ಸ್ಥಳಕ್ಕೆ ಭೇಟಿ ನೀಡಿ ನಂತರ ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳ್ಳದ ಕಾರಣ, ಒಂದು ರೀತಿ ಸಾವಿಗೆ ನಾವೂ ಸಹ ಕಾರಣ ಎಂದು ವಿಷಾದಿಸಿದರು

No comments: