VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 22, 2010

ಭಯೋತ್ಪಾದನೆ ಹುಟ್ಟಲು ಆರೆಸ್ಸೆಸ್-ಬಿಜೆಪಿ ಕಾರಣ: ಸಿದ್ದರಾಮಯ್ಯ

ಮೇ 21: ದೇಶದಲ್ಲಿ ಭಯೋತ್ಪಾದನೆ ಹುಟ್ಟಲು ಆರ್ಸೆಸ್ಸೆಸ್ ಮತ್ತು ಬಿಜೆಪಿ ಪಕ್ಷದ ಕೋಮುದ್ವೇಷ ಕಾರಣ. ಇಂದಿಗೂ ದೇಶ ಕೋಮುದ್ವೇಷ ಮತ್ತು ಭಯೋತ್ಪಾದನೆಯಿಂದ ಹೊರಬರಲು ಸಾಧ್ಯವಾಗಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ವಿಷಾದ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 19ನೆ ಪುಣ್ಯತಿಥಿ ಅಂಗವಾಗಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಯೋತ್ಪಾದನೆ ಯಿಂದ ದೇಶದಲ್ಲಿನ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಭಯೋತ್ಪಾದನೆಗೆ ಕಾಂಗ್ರೆಸ್ ಕಾರಣ ಎಂಬ ಬಿಜೆಪಿ ಮುಖಂಡರ ಆರೋಪದಲ್ಲಿ ಹುರುಳಿಲ್ಲ ಎಂದು ತಿರುಗೇಟು ನೀಡಿದರು.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯನ್ನು ಆರೆಸ್ಸೆಸ್‌ನ ನಾಥೂರಾಮ್ ಗೋಡ್ಸೆ ಹತ್ಯೆ ಮಾಡಿದ ದಿನದಿಂದಲೇ ದೇಶದಲ್ಲಿ ಹಿಂಸೆ ಪ್ರಾರಂಭವಾಯಿತು. ಅಂದಿನಿಂದಲೇ ದೇಶದಲ್ಲಿ ಕೋಮು ವಿಷಜ್ವಾಲೆಯನ್ನು ಸಂಘಪರಿವಾರ ಹಬ್ಬಿಸುತ್ತಿದೆ. ಬೆಂಕಿ ಹಚ್ಚಿ ತಮ್ಮ ಮೈ-ಕೈ ಕಾಯಿಸಿಕೊಳ್ಳುವ ಜಾಯಮಾನದವರು ಬಿಜೆಪಿಗರು ಎಂದು ಆಕ್ರೋಶ ವ್ಯಕ್ತಪಡಿಸಿದ ಸಿದ್ದರಾಮಯ್ಯ, ದೇಶ ಮತ್ತು ಜನತೆಯ ಏಳ್ಗೆಗಾಗಿ ಶ್ರಮಿಸಬೇಕು ಎಂಬ ಪರಿಜ್ಞಾನವೇ ಸಂಘ ಪರಿವಾರದ ಮುಖಂಡರುಗಳಿಗೆ ಇಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಭಯೋತ್ಪಾದನೆ ಬೀಜ ಹಾಕಿದ ಬಿಜೆಪಿ ಮತ್ತು ಆರೆಸ್ಸೆಸ್ ಮುಖಂಡರು ತ್ಯಾಗ, ಬಲಿದಾನ ಪದಗಳ ಅರ್ಥವನ್ನೇ ಅರಿಯರು. ಇಂತಹ ಜನ ಕಾಂಗ್ರೆಸ್ ಪಕ್ಷಕ್ಕೆ ಬುದ್ಧಿವಾದ ಹೇಳುವ ನೈತಿಕತೆಯನ್ನೇ ಕಳೆದುಕೊಂಡಿದ್ದಾರೆ.
ದೇಶದಲ್ಲಿ ದ್ವೇಷದ ಕಿಡಿ ಹೊತ್ತಿಸುವ ಜನರಿಂದ ಕಾಂಗ್ರೆಸ್ ಪಾಠ ಕಲಿಯಬೇಕಾದ ಅಗತ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಸಿದ್ಧರಾಮಯ್ಯ, ದೇಶ ಕಂಡ ಅತ್ಯಂತ ದುರ್ಬಲ ಗೃಹ ಮಂತ್ರಿ ಎಲ್.ಕೆ.ಆಡ್ವಾಣಿ ಎಂದು ಟೀಕಿಸಿದರು.

ದೇಶದ ಎಲ್ಲ ವರ್ಗದ ಜನರನ್ನು 21ನೆ ಶತಮಾನದತ್ತ ಕರೆದುಕೊಂಡು ದಿಕ್ಸೂಚಿಯನ್ನು ಹೋಗುವ ರಾಜೀವ್‌ಗಾಂಧಿ ಹೊಂದಿದ್ದರು. ಆಧುನಿಕ ತಾಂತ್ರಿಕತೆಯನ್ನು ದೇಶಕ್ಕೆ ಪರಿಚಯಿಸುವ ಮೂಲಕ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿ ಸಂಭವಿಸಲು ಕಾರಣರಾದರು. ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ಕಲ್ಪಿಸಿದ ಅಗ್ರಗಣ್ಯರು ರಾಜೀವ್‌ಗಾಂಧಿ ಎಂದು ಸಿದ್ಧರಾಮಯ್ಯ ಬಣ್ಣಿಸಿದರು.

ಯಡಿಯೂರಪ್ಪ ಮತ್ತು ಈಶ್ವರಪ್ಪನವರನ್ನು ಹಿಂದುಳಿದ ವರ್ಗಗಳ ಮುಖಂಡರೆಂದು ಸನ್ಮಾನಿಸಲು ಕೆಲ ‘ಗಿರಾಕಿಗಳು’ ಮುಂದಾಗಿದ್ದಾರೆ. ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಮಂಡಲ್ ವರದಿ ಜಾರಿಗೆ ಮುಂದಾದಾಗ ಯುವಕರನ್ನು ಆತ್ಮಹತ್ಯೆಗೆ ಪ್ರೇರಣೆ ನೀಡಿದ ಈ ಆರೆಸ್ಸೆಸ್ ಗಿರಾಕಿಗಳು ಸಾಮಾಜಿಕ ನ್ಯಾಯದ ವಿರೋಧಿಗಳು ಎಂದು ಕಿಡಿಕಾರಿದ ಸಿದ್ಧರಾಮಯ್ಯ, ಆರೆಸ್ಸೆಸ್ ಮತ್ತು ಬಿಜೆಪಿ ಪಕ್ಷದ ಮುಖಂಡರು ಸಾಮಾಜಿಕ ನ್ಯಾಯ, ರೈತರು, ದಲಿತರು ಮತ್ತು ಹಿಂದುಳಿದ ವರ್ಗಗಳ ವಿರೋಧಿಗಳು ಎಂದು ನುಡಿದರು.

ಹಸಿರು ಶಾಲು ಹೊದ್ದು ಅಧಿಕಾರ ಸ್ವೀಕರಿಸಿದ ಯಡಿಯೂರಪ್ಪನವರಿಗೆ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ಗೋಳು ಕೇಳುತ್ತಿಲ್ಲ. ಬಿಸಿಲ ಬೇಗೆ, ವಿದ್ಯುತ್ ಸಮಸ್ಯೆಯ ನಡುವೆ, ಶೌಚಾಲಯ, ಕುಡಿಯುವ ನೀರಿಲ್ಲದೆ ನೆರೆ ಸಂತ್ರಸ್ತರು ಬಳಲುತ್ತಿದ್ದಾರೆ. ಮೊನ್ನೆ ಬಿದ್ದ ಮಳೆಗೆ ಸರಕಾರ ನಿರ್ಮಿಸಿದ್ದ ತಾತ್ಕಾಲಿಕ ಶೆಡ್‌ಗಳ ಮೇಲಿನ ಶೀಟ್‌ಗಳು ಗಾಳಿಯ ಪಾಲಾಗಿವೆ. ಮುಖ್ಯಮಂತ್ರಿಗಳಿಗೆ ಮನುಷ್ಯತ್ವ ಇದೇಯೇ ಎಂದು ಖಾರವಾಗಿ ಪ್ರಶ್ನಿಸಿದ ಅವರು, ಆತ್ಮದ್ರೋಹ ಮಾಡಿಕೊಂಡು ಯಡಿಯೂರಪ್ಪ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ರಾಜೀವ್ ಗಾಂಧಿ ದೇಶದಲ್ಲಿನ ಭ್ರಷ್ಟ್ರಾಚಾರ ತೊಡೆದು ಹಾಕುವ ಇಚ್ಛೆ ಹೊಂದಿದ್ದರು. ಅವರು ಬದುಕಿದಿದ್ದರೆ ಇಂದು ರಾಜ್ಯದಲ್ಲಿ ಅಕ್ರಮ ಗಣಿ ವ್ಯವಹಾರದಲ್ಲಿ ತೊಡಗಿರುವ ರೆಡ್ಡಿ ಸಹೋದರರು ತಲೆ ಎತ್ತಲು ಸಾಧ್ಯವಿರಲಿಲ್ಲ ಎಂದು ತಿಳಿಸಿದ ಸಿದ್ದರಾಮಯ್ಯ, ಸಾಮಾಜಿಕ ನ್ಯಾಯದ ರೂವಾರಿ ರಾಜೀವ್ ಗಾಂಧಿ. ಅವರ ಆದರ್ಶವನ್ನು ಯುವ ಸಮೂಹ ಪಾಲಿಸಬೇಕು ಎಂದು ಇದೇ ಸಂದರ್ಭದಲ್ಲಿ ಕರೆ ನೀಡಿದರು. ರಾಜೀವ್ ಪುಣ್ಯ ತಿಥಿ ಅಂಗವಾಗಿ ಯುವ ಕಾಂಗೈನಿಂದ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷಗಳ ನಾಯಕಿ ಮೋಟಮ್ಮ, ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಭೈರೇಗೌಡ, ಮಾಜಿ ಸಚಿವ ಎಚ್.ಎಂ.ರೇವಣ್ಣ, ಕಾಂಗ್ರೆಸ್ ಮುಖಂಡ ಉಗ್ರಪ್ಪ, ಮಹಿಳಾ ವಿಭಾಗದ ಅಧ್ಯಕ್ಷೆ ಮಂಜುಳಾ ನಾಯ್ಡು, ರಾಣಿ ಸತೀಶ್, ಪ್ರಕಾಶ್ ರಾಥೋಡ್, ರಾಮಚಂದ್ರಪ್ಪ ಸೇರಿದಂತೆ ಮತ್ತಿತರ ಮುಖಂಡರು ಪಾಲ್ಗೊಂಡಿದ್ದರು.

No comments: