VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 29, 2010

ದ.ಕ. ಜಿಲ್ಲೆ: ಅವ್ಯವಸ್ಥೆಯೊಂದಿಗೆ ಶಾಲೆ ಪುನಾರಂಭ!


ಜನಗಣತಿಯಲ್ಲಿ ಮಗ್ನರಾದ ಶಿಕ್ಷಕರ ಗೈರು
ಸಕಾಲಕ್ಕೆ ಪೂರೈಕೆಯಾಗದ ಪಠ್ಯ ಪುಸ್ತಕಗಳು
9.82 ಲಕ್ಷ ಪಠ್ಯಪುಸ್ತಕಗಳ ಬೇಡಿಕೆ
ದೊರೆತಿದ್ದು 8.14 ಲಕ್ಷ ಮಾತ್ರ


2010-11 ಸಾಲಿನಲ್ಲಿ ದ.ಕ. ಜಿಲ್ಲೆಯ ಸರಕಾರಿ ಶಾಲೆಗಳ 1ರಿಂದ 10ನೆ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ವಿತರಿಸಲು ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯು 9,82,022 ಪಠ್ಯಪುಸ್ತಕಗಳ ಬೇಡಿಕೆ ಪಟ್ಟಿ ಸಲ್ಲಿಸಿತ್ತು. ಆದರೆ 8,13,966 ಪಠ್ಯ ಪುಸ್ತಕಗಳನ್ನು ಮಾತ್ರ ಸರಕಾರ ಸಕಾಲಕ್ಕೆ ಪೂರೈಸಿದ್ದು, 1,66,056 ಬಾಕಿ ಇದೆ ಎಂದು ಡಿಡಿಪಿಐ ಚಾಮೇಗೌಡ ತಿಳಿಸಿದ್ದಾರೆ.
ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಿಗೆ ಪುಸ್ತಕ ಮಾರಾಟ ಮಾಡುವ ಜವಾಬ್ದಾರಿ ಕೂಡ ಸಾರ್ವಜನಿಕ ಶಿಕ್ಷಣ ಇಲಾಖೆಯದ್ದಾಗಿದೆ. ಈ ಶಾಲೆಗಳ 1ರಿಂದ 8ನೆ ತರಗತಿಯವರೆಗಿನ ಮಕ್ಕಳಿಗೆ ಉಚಿತ ಪಠ್ಯಪುಸ್ತಕ ವಿತರಣೆ ಮಾಡಲಾಗುತ್ತದೆ. ಪ್ರಸಕ್ತ ವರ್ಷ ಈ ಶಾಲೆಗಳು ಒಟ್ಟು 5,22,272 ಪಠ್ಯ ಪುಸ್ತಕಗಳ ಬೇಡಿಕೆ ಸಲ್ಲಿಸಿದ್ದರೂ 2,80,591 ಪಠ್ಯಪುಸ್ತಕಗಳು ಮಾತ್ರ ಪೂರೈಕೆಯಾಗಿವೆ ಎಂದು ಅವರು ತಿಳಿಸಿದರು.

ಮಂಗಳೂರು, ಮೇ 28: ರಾಜ್ಯಾದ್ಯಂತ 2010-11ನೆ ಸಾಲಿನ ಶೈಕ್ಷಣಿಕ ವರ್ಷ ಇಂದಿನಿಂದ ಆರಂಭವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಶಾಲೆಗಳ ಬಾಗಿಲು ತೆರೆಯಲ್ಪಟ್ಟಿದೆ. ನಿನ್ನೆಯವರೆಗೆ ಅಜ್ಜ- ಅಜ್ಜಿಯ ಮಡಿಲಲ್ಲಿ ಆಟವಾಡುತ್ತಿದ್ದ, ಅಮ್ಮನ ಅಕ್ಕರೆ, ಅಪ್ಪನ ಗದರಿಕೆ, ಸುಡು ಬಿಸಿಲನ್ನೂ ಲೆಕ್ಕಿಸದೆ ಆಟದ ಮೈದಾನ ದಲ್ಲಿ ಕಾಲ ಕಳೆಯುತ್ತಿದ್ದ ಬಹುತೇಕ ಮಕ್ಕಳು ಇಂದು ಹೊಸ ಹುರುಪಿನಿಂದ ಶಾಲೆಯ ಮೆಟ್ಟಲೇರಿದ್ದಾರೆ.
ಮೇ 29, 31, ಜೂನ್ 1... ಹೀಗೆ ಒಂದೊಂದು ದಿನಾಂಕಗಳನ್ನು ತಿಳಿಸಿ ‘ಅಂದು ಶಾಲೆ ಪುನಾರಂಭಗೊಳ್ಳಲಿದೆ’ ಎಂದು ಬೇಸಿಗೆ ರಜೆ ನೀಡುವ ಸಂದರ್ಭ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಹೇಳಲಾಗಿತ್ತು. ಆದರೆ, ರಾಜ್ಯ ಸರಕಾರವು ಶಿಕ್ಷಣ ಇಲಾಖೆಗಳ ಮುಖಾಂತರ ದಿಢೀರ್ ಆಗಿ ಮೇ 28ರಿಂದಲೇ ಶಾಲೆ ಆರಂಭಿಸುವಂತೆ ಸುತ್ತೋಲೆ ಹೊರ ಡಿಸಿತ್ತು. ಇನ್ನೂ 3 ದಿನಗಳ ರಜೆಯಿದೆ ಎಂದು ಭಾವಿಸಿ ಪ್ರವಾಸದಲ್ಲಿದ್ದ, ಅಜ್ಜಿಯ ಮನೆಗೆ ತೆರಳಿದ ಮಕ್ಕಳಿನ್ನೂ ಮನೆ ತಲುಪಿರಲಿಲ್ಲ. ಹಾಗಾಗಿಯೇ ಇಂದು ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ತೀರಾ ಕಡಿಮೆಯಿತ್ತು.

ಜನಗಣತಿಯ ತರಾತುರಿ; ಶಿಕ್ಷಕರ ಗೈರು: ಹೊಸ ಹುಮ್ಮಸ್ಸು, ನಗುಮುಖದಿಂದ ಶಾಲೆಯ ಮೆಟ್ಟಿಲೇರಿದ ಮಕ್ಕಳನ್ನು ಸ್ವಾಗತಿಸಲು ಶಿಕ್ಷಕ-ಶಿಕ್ಷಕಿಯರೇ ಇರ ಲಿಲ್ಲ. ಹೆಚ್ಚಿನ ಶಾಲೆಗಳಲ್ಲಿ ಒಂದಿಬ್ಬರು ಶಿಕ್ಷಕರನ್ನು ಬಿಟ್ಟರೆ ಉಳಿದವರು ಗೈರು ಹಾಜರಾಗಿದ್ದರು. ಇದಕ್ಕೆ ಕಾರಣ ಇನ್ನೂ ಮುಗಿಯದ ಜನಗಣತಿ. ಜಿಲ್ಲೆಯ ಶೇ.75ರಷ್ಟು ಶಿಕ್ಷಕರು ಎಪ್ರಿಲ್ 15ರಿಂದ ಮೇ 31ರ ವರೆಗೆ ನಡೆಯಲಿರವ ಜನಗಣತಿಯಲ್ಲಿ ತಲ್ಲೀನರಾಗಿದ್ದಾರೆ. ಅಲ್ಲಿವರೆಗೆ ಶಾಲಾ ತರಗತಿ ಗಳಲ್ಲಿ ಪಠ್ಯ ಚಟುವಟಿಕೆಗಳು ಆರಂಭಗೊಳ್ಳುವುದಿಲ್ಲ.

ಪಠ್ಯಪುಸ್ತಕಗಳ ಸಮಸ್ಯೆ: 1ರಿಂದ 10ನೆ ತರಗತಿ ವರೆಗೆ ಸರಕಾರವೇ ಪಠ್ಯ ಪುಸ್ತಕ ಹಾಗೂ ಸಮವಸ ವಿತರಿಸುವ ಮಹತ್ವದ ಯೋಜನೆಯನ್ನು ಕೆಲವು ವರ್ಷಗಳ ಹಿಂದೆ ಪ್ರಾರಂಭಿಸಿದೆ. ಇದೊಂದು ಉತ್ತಮ ಯೋಜನೆ ಯಾಗಿದ್ದರೂ ಬೇಡಿಕೆಯಷ್ಟು ಪಠ್ಯ ಸಾಮಗ್ರಿಗಳ ಪೊರೈಕೆಯಾಗುತ್ತಿಲ್ಲ ಎಂಬ ಆರೋಪ ಎಲ್ಲೆಡೆಯಿಂದ ಕೇಳಿ ಬರುತ್ತಿದೆ.

ಕಳೆದ ವರ್ಷ ಖಾಸಗಿ ಅಂಗಡಿಗಳಿಂದ ಪುಸ್ತಕ ಖರೀದಿಸಬಹುದಾಗಿತ್ತು. ಆದರೆ, ಈ ವರ್ಷ ಸರಕಾರ ಹೊಸ ಕಾನೂನು ಜಾರಿಗೊಳಿಸಿದ್ದು ಖಾಸಗಿ ಅಂಗಡಿಯವರು ಪಠ್ಯ ಪುಸ್ತಕಗಳನ್ನು ಮಾರಾಟ ಮಾಡುವಂತಿಲ್ಲ. ಎಲ್ಲರೂ ಸರಕಾರಿ ಮಳಿಗೆಯಿಂದಲೆ ಪುಸ್ತಕ ಪಡೆಯಬೇಕು ಎಂದು ಆದೇಶಿಸಿದೆ. ಆದರೆ, ಸಕಾಲದಲ್ಲಿ ಪುಸ್ತಕ ಸರಬರಾಜು ಮಾಡದಿದ್ದರೆ ಇಂತಹ ನಿಯಮಾವಳಿ ರೂಪಿಸಿ ಏನು ಪ್ರಯೋಜನ? ಎಂದು ಉಳ್ಳಾಲ ಕೋಟೆಪುರ ಶಾಲೆಯ ಮುಖ್ಯ ಶಿಕ್ಷಕ ಕೆ.ಎಂ.ಕೆ. ಮಂಜನಾಡಿ ಆಕ್ರೋಶ ವ್ಯಕ್ತಪಡಿಸುತ್ತಾರೆ.

ಪಠ್ಯಪುಸ್ತಕ ಎಲ್ಲಾ ವಿದ್ಯಾರ್ಥಿಗಳ ಕೈ ಸೇರುವಷ್ಟರಲ್ಲಿ 15 ದಿನ ಕಳೆದಿರುತ್ತದೆ. ಕೆಲವು ಶಾಲೆಗಳಲ್ಲಿನ ಕೊಠಡಿ, ಪೀಠೋಪಕರಣಗಳ ಸಮಸ್ಯೆ ಕೂಡಾ ಸದ್ಯ ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ. ಉಚಿತ ಸೈಕಲ್ ವಿತರಣೆ ಕಾರ್ಯ ಮುಗಿಯುವಷ್ಟರಲ್ಲಿ ಅರ್ಧ ಶೈಕ್ಷಣಿಕ ವರ್ಷವೇ ಮುಗಿದರೂ ಅಚ್ಚರಿ ಇಲ್ಲ. ಒಟ್ಟಿನಲ್ಲಿ ಹೊಸ ಶೈಕ್ಷಣಿಕ ವರ್ಷ ಹಲವು ಸಮಸ್ಯೆಗಳೊಂದಿಗೆ ಆರಂಭಗೊಂಡಿವೆ.

ಜಾತಿ ಮತ್ತು ಆದಾಯ ದೃಢೀಕರಣ ಪತ್ರಕ್ಕಾಗಿ ಅಲೆದಾಟ
ಚಿಕ್ಕಮಗಳೂರು, ಮೇ 28: ಇಂದು ಶಾಲೆಗಳು ಪುನಾರಂಭಗೊಂಡಿದ್ದು, ಜಿಲ್ಲಾದ್ಯಂತ ಶಾಲೆಗಳಲ್ಲಿ, ವಿದ್ಯಾರ್ಥಿ ನಿಲಯಗಳಲ್ಲಿ ಮಕ್ಕಳ ದಾಖಲಾತಿಗಾಗಿ ಪೋಷಕರು ಪರದಾಡುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು.
ಪ್ರತಿ ವರ್ಷದಂತೆ ಪ್ರಸಕ್ತ ಶೈಕ್ಷಣಿಕ ವರ್ಷಾರಂಭದಲ್ಲಿಯೂ ವಿದ್ಯಾರ್ಥಿಗಳು ದಾಖಲಾತಿಗಳಿಗಾಗಿ ಜಾತಿ ಮತ್ತು ಆದಾಯ ದೃಢೀಕರಣ ಪತ್ರ ಪಡೆಯು ವುದಕ್ಕಾಗಿ ಸರಕಾರಿ ಕಚೇರಿಗಳತ್ತ ಅಲೆದಾಡುವುದು ತಪ್ಪಲಿಲ್ಲ. ಖಾಸಗಿ ಶಾಲೆಗಳು ಕಳೆದೊಂದು ತಿಂಗಳಿಂದ ದಾಖಲಾತಿ ಪ್ರಕ್ರಿಯೆ ಪ್ರಾರಂಭಿಸಿದ್ದರೂ ಸರಕಾರಿ ಶಾಲೆಗಳಲ್ಲಿ, ವಿದ್ಯಾರ್ಥಿ ನಿಲಯಗಳಲ್ಲಿ ಮಾತ್ರ ಶಾಲಾರಂಭದ ಬಳಿಕವಷ್ಟೇ ದಾಖಲಾತಿ ಆರಂಭಿಸಲಾಗುತ್ತದೆ.
ಇರಿಂದಾಗಿ ದೃಢೀಕರಣ ಪತ್ರಗಳಿಗಾಗಿ ನೆಮ್ಮದಿ ಕೇಂದ್ರಗಳ ಮುಂದೆ ವಿದ್ಯಾರ್ಥಿಗಳು ಮತ್ತು ಪೋಷಕರು ಸಾಲುಗಟ್ಟಿ ಕಾಯುತ್ತಿದ್ದರು. ಆದರೆ ನೆಮ್ಮದಿ ಕೇಂದ್ರಗಳ ಸಿಬ್ಬಂದಿಗಳು ಮಾತ್ರ ‘15 ದಿನ ಬಿಟ್ಟು ಬನ್ನಿ’ ಎಂಬ ಮಾಮೂಲಿ ಹೇಳಿಕೆಯೊಂದಿಗೆ ಹಿಂದೆ ಕಳುಹಿಸುತ್ತಿದ್ದುದು ಸಾಮಾನ್ಯವಾಗಿತ್ತು. ಆದ್ದರಿಂದ ಈ ಬಗ್ಗೆ ಜಿಲ್ಲಾಧಿಕಾರಿ ಮಧ್ಯೆ ಪ್ರವೇಶಿಸಿ ವಿದ್ಯಾರ್ಥಿಗಳ ಶೀಘ್ರ ದಾಖಲಾತಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

No comments: