ಮಸೀದಿಗಳ ಮೇಲೆ ತಾಲಿಬಾನ್ ದಾಳಿ: 70 ಸಾವು
ಈ ಎರಡೂ ಮಸೀದಿಗಳಲ್ಲಿ ಶುಕ್ರವಾರದ ಸಾಂಪ್ರದಾಯಿಕ ಪ್ರಾರ್ಥನೆಗೆ ಅಹ್ಮದೀಯ ಪಂಥದ ಮುಸ್ಲಿಂ ಅನುಯಾಯಿಗಳು ಕಿಕ್ಕಿರಿದು ಸೇರಿದ್ದರು. ಸ್ಥಳೀಯ ಕಾಲಮಾನ ಮಧ್ಯಾಹ್ನ 1.45ರ ವೇಳೆಗೆ ಎರಡು ತಂಡಗಳಲ್ಲಿ ಉಗ್ರರು ಮಸೀದಿಗಳ ಬಳಿ ಬಂದರು.
ಪಾಕಿಸ್ತಾನದ ಲಾಹೋರ್‌ನಲ್ಲಿ ಮಸೀದಿ ಮೇಲೆ ಉಗ್ರರು ದಾಳಿ ನಡೆಸಿದ ವೇಳೆ ಗಾಯಗೊಂಡ ವ್ಯಕ್ತಿಯನ್ನು ಸಾರ್ವಜನಿಕರು ಆಸ್ಪತ್ರೆಗೆ ಕರೆದುಕೊಂಡು ಹೋದರು.
ಲಾಹೋರ್ (ಪಿಟಿಐ): ಅಲ್ಪಸಂಖ್ಯಾತ ಅಹ್ಮದೀಯ ಮುಸ್ಲಿಂರಿಗೆ ಸೇರಿದ ಇಲ್ಲಿನ ಎರಡು ಮಸೀದಿಗಳ ಮೇಲೆ ಶುಕ್ರವಾರ ತಾಲಿಬಾನ್ ಉಗ್ರರು ಮನಸೋಇಚ್ಛೆ ನಡೆಸಿದ ದಾಳಿಗೆ ಕನಿಷ್ಠ 70 ಜನ ಬಲಿಯಾಗಿದ್ದಾರೆ.
ಇದೇ ವೇಳೆ ಉಗ್ರರು ಮಸೀದಿಗಳನ್ನು ಸಂಪೂರ್ಣವಾಗಿ ತಮ್ಮ ವಶಕ್ಕೆ ತೆಗೆದುಕೊಂಡಿದ್ದು ಒಳಗೆ ಪ್ರಾರ್ಥನೆ ಸಲ್ಲಿಸುತ್ತಿದ್ದ ಮಹಿಳೆಯರೂ ಸೇರಿದಂತೆ ಸುಮಾರು 1,500 ಜನರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದಾರೆ. ಇವರನ್ನೆಲ್ಲಾ ಮಸೀದಿಯೊಳಗಿನ ಕೋಣೆಯಲ್ಲಿ ಕೂಡಿ ಹಾಕಿ ಬೀಗ ಹಾಕಲಾಗಿದೆ ಎಂದು ಪೊಲೀಸರು ಮತ್ತು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಘಟನೆಗೆ ಪಂಜಾಬ್ ಮೂಲದ ತೆಹ್ರಿಕ್ ಎ ತಾಲಿಬಾನ್ ಹೊಣೆ ಹೊತ್ತುಕೊಂಡಿದೆ ಎಂದು ಜಿಯೊ ನ್ಯೂಸ್ ಟಿ.ವಿ.ಚಾನೆಲ್ ವರದಿ ಮಾಡಿದೆ. ಪೊಲೀಸರ ಹೇಳಿಕೆ ಪ್ರಕಾರ ಘಟನೆಯಲ್ಲಿ ಒಬ್ಬ ಉಗ್ರ ಮೃತಪಟ್ಟಿದ್ದು ಮತ್ತಿಬ್ಬರನ್ನು ಸೆರೆಹಿಡಿಯಲಾಗಿದೆ. ಇವರಲ್ಲಿ ಒಬ್ಬ ತನ್ನ ಸೊಂಟಕ್ಕೆ ಕಟ್ಟಿಕೊಂಡಿದ್ದ ಆತ್ಮಹತ್ಯಾ ಬಾಂಬ್ ಅನ್ನು ಕೂಡಲೇ ನಿಷ್ಕ್ರಿಯಗೊಳಿಸಲಾಯಿತು ಎಂದು ಪಂಜಾಬ್‌ನ ಇನ್ಸ್‌ಪೆಕ್ಟರ್ ಜನರಲ್ ತಾರಿಖ್ ಸಲೀಮ್ ದೊಗಾರ್ ತಿಳಿಸಿದ್ದಾರೆ.
ಸ್ಥಳೀಯ ಮೆಯೊ ಆಸ್ಪತ್ರೆಯ ಮುಖ್ಯಸ್ಥ ಸಜ್ಜದ್ ಭುಟ್ಟಾ ಅವರ ಅನುಸಾರ ಸತ್ತವರ ಸಂಖ್ಯೆ ಇನ್ನೂ ಹೆಚ್ಚಿದೆ. ಇವರಲ್ಲಿ ಪಾಕ್ ಸೇನಾಪಡೆಯ ಒಬ್ಬ ನಿವೃತ್ತ ಲೆಫ್ಟಿನೆಂಟ್ ಜನರಲ್ ಹಾಗೂ ಲಾಹೋರ್ ಮೂಲದ ಟಿ.ವಿ.ಚಾನೆಲ್‌ನ ಒಬ್ಬ ಪತ್ರಕರ್ತ ಹಾಗೂ ಹಲವು ಪೊಲೀಸರೂ ಸೇರಿದ್ದಾರೆ. ದಾಳಿಗೆ ಒಳಗಾಗಿರುವ ಒಂದು ಮಸೀದಿಯು ಇಕ್ಕಟ್ಟಾದ ಗಡಿ ಶಾಹು ಪ್ರದೇಶದಲ್ಲಿದ್ದು ಇಲ್ಲಿ 40ಕ್ಕೂ ಹೆಚ್ಚು ಜನರು ಹಾಗೂ ಇಲ್ಲಿಂದ ಮೈಲು ದೂರದಲ್ಲಿನ ವಿಶಾಲವಾದ ಮಾದರಿ ಬಡಾವಣೆ ಮಾಡೆಲ್ ಟೌನ್‌ನಲ್ಲಿನ ಮತ್ತೊಂದು ಮಸೀದಿಯಲ್ಲಿ 20ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಗಾಯಾಳುಗಳ ಸಂಖ್ಯೆ 80ಕ್ಕೂ ಹೆಚ್ಚಿದೆ. ನಾಗರಿಕರು ರಕ್ತದಾನ ಮಾಡಬೇಕು ಎಂದು ಆಸ್ಪತ್ರೆಗಳು ಅಧಿಕಾರಿಗಳು ಒಂದೇ ಸಮನೆ ಮನವಿ ಮಾಡುತ್ತಿರುವುದು ಪರಿಸ್ಥಿತಿಯ ಗಂಭೀರತೆಗೆ ಹಿಡಿದ ಕನ್ನಡಿಯಾಗಿದೆ.
ಈ ಎರಡೂ ಮಸೀದಿಗಳಲ್ಲಿ ಶುಕ್ರವಾರದ ಸಾಂಪ್ರದಾಯಿಕ ಪ್ರಾರ್ಥನೆಗೆ ಅಹ್ಮದೀಯ ಪಂಥದ ಮುಸ್ಲಿಂ ಅನುಯಾಯಿಗಳು ಕಿಕ್ಕಿರಿದು ಸೇರಿದ್ದರು. ಸ್ಥಳೀಯ ಕಾಲಮಾನ ಮಧ್ಯಾಹ್ನ 1.45ರ ವೇಳೆಗೆ ಎರಡು ತಂಡಗಳಲ್ಲಿ ಉಗ್ರರು ಮಸೀದಿಗಳ ಬಳಿ ಬಂದರು. ತಲಾ ಎಂಟರಿಂದ ಹತ್ತು ಜನರಿದ್ದ ಈ ಉಗ್ರರ ತಂಡಗಳು ಸ್ವಯಂ ಚಾಲಿತ ಶಸ್ತ್ರಾಸ್ತ್ರಗಳೊಂದಿಗೆ ಮಸೀದಿಗಳ ಒಳ ನುಗ್ಗಿ ಯದ್ವಾತದ್ವಾ ಗುಂಡು ಹಾಗೂ ಗ್ರೆನೇಡ್‌ಗಳ ದಾಳಿ ನಡೆಸಿತು ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
‘ಇವರಲ್ಲಿ ಮೂವರು ಉಗ್ರರು ಆತ್ಮಹತ್ಯಾ ಬಾಂಬ್‌ಗಳನ್ನು ಕಟ್ಟಿಕೊಂಡು ಗಡಿ ಶಾಹು ಪ್ರದೇಶದ ಮಸೀದಿಯಲ್ಲಿ ಮೊದಲಿಗೆ ತಮ್ಮನ್ನು ತಾವೇ ಸ್ಫೋಟಿಸಿಕೊಂಡರು. ಇವರ ಬೆನ್ನ ಹಿಂದೆಯೇ ಮಸೀದಿಯ ಒಳ ನುಗ್ಗಿದ ಇತರೆ ಉಗ್ರರು ಕಿವಿಗಡಚಿಕ್ಕುವಂತೆ ಗ್ರೆನೇಡ್ ಹಾಗೂ ಗುಂಡಿನ ದಾಳಿ ಆರಂಭಿಸಿದರು’ ಎಂದು ಅವರು ವಿವರಿಸಿದ್ದಾರೆ.
ಭದ್ರತಾ ಪಡೆ ವಶಕ್ಕೆ: ಘಟನೆ ಸಂಭವಿಸುತ್ತಿದ್ದಂತೆಯೇ ಸ್ಥಳಕ್ಕೆ ಅರೆಸೇನಾ ಪಡೆ ಮತ್ತು ಪೊಲೀಸರು ಧಾವಿಸಿ ಇಡೀ ಪ್ರದೇಶವನ್ನು ತಮ್ಮವಶಕ್ಕೆ ತೆಗೆದುಕೊಂಡರು. ಮಸೀದಿಗಳ ಸುತ್ತಮುತ್ತಲಿನ ಮನೆಗಳು ಮತ್ತು ಕಟ್ಟಡಗಳ ಛಾವಣಿ ಮೇಲೆ ಇವರೆಲ್ಲಾ ಸನ್ನದ್ಧ ಸ್ಥಿತಿಯಲ್ಲಿ ನಿಂತರು.
ಗಡಿ ಶಾಹು ಪ್ರದೇಶದಲ್ಲಿನ ಭದ್ರತಾ ಪಡೆಯ ಕಾರ್ಯಾಚರಣೆ ಮಧ್ಯಾಹ್ನ 4 ಗಂಟೆ ವೇಳೆಗೆ ಮುಕ್ತಾಯವಾಯಿತು. ಅಂತೆಯೇ ಮಾಡೆಲ್ ಟೌನ್ ಪ್ರದೇಶದಲ್ಲಿ ಕೆಲ ಗಂಟೆಗಳಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮಸೀದಿಗಳ ಒಳಗಿರುವ ತಮ್ಮವರ ಸ್ಥಿತಿಯನ್ನು ಅರಿಯಲು ಅವರ ಬಂಧು ಬಳಗ ಅಪಾರ ಸಂಖ್ಯೆಯಲ್ಲಿ ಘಟನಾ ಸ್ಥಳದಲ್ಲಿ ಜಮಾಯಿಸಿದ್ದರು. ಮಾಹಿತಿಗಾಗಿ ಆತಂಕದಿಂದ ಕಾಯುತ್ತಿದ್ದರು. ಗಾಯಗೊಂಡ ಬಹುತೇಕರನ್ನು ಸಮೀಪದ ಜಿನ್ನಾ ಆಸ್ಪತ್ರೆ ಮತ್ತು ಸೇವಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಾಕಿಸ್ತಾನದ ಸಾಂಸ್ಕೃತಿಕ ರಾಜಧಾನಿಯಾದ ಲಾಹೋರ್ ಪಂಜಾಬ್ ಪ್ರಾಂತ್ಯದ ರಾಜಧಾನಿಯೂ ಹೌದು. ಇದು ಸುಮಾರು 80 ಲಕ್ಷ ಜನಸಂಖ್ಯೆ ಹೊಂದಿದ ಮಹಾನಗರವಾಗಿದ್ದು ಈಗ ನಗರದಾದ್ಯಂತ ಭಾರಿ ಕಟ್ಟೆಚ್ಚರ ವಹಿಸಲಾಗಿದೆ. ಮಸೀದಿಗಳಿಗೆ ಸೇರುವ ಎಲ್ಲ ಸಂಪರ್ಕ ರಸ್ತೆಗಳನ್ನೂ ಬಂದ್ ಮಾಡಲಾಗಿದೆ.
ಮಾಡೆಲ್ ಟೌನ್‌ನಲ್ಲಿ ವಾಸವಿರುವ ಅಹ್ಮದೀಯ ಮುಸ್ಲಿಂ ಅನುಯಾಯಿಗಳ ಮೇಲೆ ಉಗ್ರರು ದಾಳಿ ನಡೆಸಬಹುದೆಂಬ ಭೀತಿ ಈಗ್ಗೆ ಒಂದು ವರ್ಷದ ಹಿಂದೆಯೇ ಇತ್ತು. ಈ ಬಗ್ಗೆ ಸರ್ಕಾರವನ್ನು ಎಚ್ಚರಿಸಿ ಇವರ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸುವಂತೆಯೂ ಕೋರಲಾಗಿತ್ತು ಎಂಬ ಅಂಶವನ್ನು ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷೆ ಅಸ್ಮಾ ಜಹಾಂಗೀರ್ ಇದೇ ಸಂದರ್ಭದಲ್ಲಿ ನೆನಪಿಸಿದ್ದಾರೆ.
May 29, 2010
Subscribe to:
Post Comments (Atom)
No comments:
Post a Comment