VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

May 24, 2010

ವಿಮಾನ ದುರಂತದ ಸಾವು- ನೋವು

ಉಡುಪಿ ಜಿಲ್ಲೆಯ 33 ಮಂದಿ ಬಲಿ; 28 ಮೃತದೇಹಗಳ ಗುರುತು ಪತ್ತೆ

ಉಡುಪಿ, ಮೇ 23: ಬಜ್ಪೆಯಲ್ಲಿ ನಿನ್ನೆ ಸಂಭವಿಸಿದ ಭೀಕರ ವಿಮಾನ ದುರಂತದಲ್ಲಿ ಮೃತಪಟ್ಟ ಉಡುಪಿ ಜಿಲ್ಲೆಯ 33ಮಂದಿಯಲ್ಲಿ 28 ಮೃತದೇಹಗಳ ಗುರುತು ಪತ್ತೆ ಹಚ್ಚ ಲಾಗಿದ್ದು, ಅವುಗಳಲ್ಲಿ 27 ಮೃತದೇಹಗಳ ಅಂತ್ಯಕ್ರಿಯೆ ನಡೆಸಲಾಗಿದೆ.ಕಾರ್ಕಳ ತಾಲೂಕಿನ ನಾಲ್ವರು, ಕುಂದಾಪುರ ತಾಲೂಕಿನ ಎಂಟು ಮಂದಿ, ಉಡುಪಿ ತಾಲೂಕಿನ 21ಮಂದಿ ಇದರಲ್ಲಿ ಸೇರಿದ್ದಾರೆ. ಇವರಲ್ಲಿ ಉಡುಪಿ ಮಲ್ಪೆಯ ನವೀದ್ ಹಾಗೂ ಗಂಗೊಳ್ಳಿಯ ಅಲ್ತಾಫ್ ಹಾಗೂ ವಳಕಾಡಿನ ಮುಹಮ್ಮದ್ ಜಿಹಾದ್, ಅವರ ಮಕ್ಕಳಾದ ಝುಬೈರ್ ಹಾಗೂ ಝೈನಾಬ್‌ರ ಮೃತದೇಹ ಪತ್ತೆಯಾಗಿಲ್ಲ.

ಉಡುಪಿ ತಾಲೂಕು
ಉಡುಪಿ ವಳಕಾಡಿನ ಒಂದೇ ಕುಟುಂಬದ ನಾಲ್ವರಲ್ಲಿ ಸಬೀನಾರ ಮೃತದೇಹದ ಗುರುತು ಪತ್ತೆಯಾಗಿದ್ದು, ಮುಹಮ್ಮದ್ ಜಿಹಾದ್, ಅವರ ಮಕ್ಕಳಾದ ಝುಬೈರ್ ಹಾಗೂ ಝೈನಾಬ್‌ರ ಮೃತ ದೇಹಗಳು ಮಧ್ಯಾಹ್ನದವರೆಗೆ ಪತ್ತೆಯಾಗಿಲ್ಲ. ಅವರ ಮೃತದೇಹವನ್ನು ಮಂಗಳೂರಿನಲ್ಲಿಯೇ ದಫನ ಮಾಡಲಾಗುವುದು ಎಂದು ಮೃತ ಜಿಹಾದ್‌ರ ಅಣ್ಣ ಮುಹಮ್ಮದ್ ಆರೀಫ್ ತಿಳಿಸಿದ್ದಾರೆ.

ಕಾಪು ಮಲ್ಲಾರಿನ ಖುದ್ದೂಸ್ ಖಾಝಿ ಯವರ ಪತ್ನಿ ಝುಲೈಕಾ ಹಾಗೂ ಮಗ ಸಲಾಂರ ಮೃತದೇಹವನ್ನು ಹಚ್ಚಲಾಗಿದೆ. ಸಾವಿನ ಸುದ್ದಿ ತಿಳಿದು ದುಬೈಯಲ್ಲಿದ್ದ ಝುಲೈಕಾ ಅವರ ಇನ್ನೋರ್ವ ಮಗ ಅಬ್ದುಲ್ ರುಝ್ ಮಂಗಳೂರಿಗೆ ಆಗಮಿ ಸಿದ್ದು, ಅವರನ್ನು ಡಿಎನ್‌ಎ ಪರೀಕ್ಷೆಗೆ ಒಳಪ ಡಿಸಲಾಗಿತ್ತು. ಗುರುತು ಹಚ್ಚಿದ ಇಬ್ಬರ ಮೃತದೇಹವನ್ನು ಮಧ್ಯಾಹ್ನ ಮಲ್ಲಾರಿಗೆ ತಂದು, ಕೋಟೆ ಎಂಬಲ್ಲಿನ ಖಬರ್ ಸ್ತಾನದಲ್ಲಿ ದಫನ ಮಾಡಲಾಯಿತು. ಈ ಸಂದರ್ಭದಲ್ಲಿ ನೂರಾರು ಮಂದಿ ಬಂಧುಮಿತ್ರರು ನೆರೆದಿದ್ದರು. ಕಟಪಾಡಿ ಸಮೀಪದ ಶಂಕರಪುರದ ನಿವಾಸಿ ವಿನ್ಸೆಂಟ್ ಲೋಬೊ ಅವರ ಪತ್ನಿ ಫ್ಲೇವಿಯಾ ಲೋಬೊ, ಅವರ ಮಕ್ಕಳಾದ ವೆನಿಸಾ ಲೋಬೊ, ವಿಶಾಲ್ ಲೋಬೊ ಅವರ ಮೃತದೇಹವನ್ನು ಧಾರ್ಮಿಕ ವಿಧಿವಿಧಾನಗಳಂತೆ ಶಂಕರಪುರದ ಚರ್ಚ್‌ನ ಸ್ಮಶಾನದಲ್ಲಿ ಶವಸಂಸ್ಕಾರ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ದುಬೈಯಿಂದ ಆಗಮಿಸಿದ್ದ ವಿನ್ಸೆಂಟ್ ಲೋಬೊ ಇದ್ದರು.

ಬ್ರಹ್ಮಾವರ ಉಪ್ಪಿನಕೋಟೆ ಸಮೀಪದ ಗಾಳದಕಟ್ಟೆಯ ರಾಮ ಬಂಗೇರರ ಪುತ್ರ ಸುರೇಶ್ ಕುಂದರ್‌ರ ಶವವನ್ನು ಇಂದು ಬೆಳಗ್ಗೆ ಗುರುತು ಹಚ್ಚಿ ಊರಿಗೆ ತರಲಾಗಿದ್ದು, ಸಂಜೆ ವೇಳೆ ಅವರ ಅಂತ್ಯಸಂಸ್ಕಾರ ನೆರವೇರಿಸಲಾಯಿತೆಂದು ತಿಳಿದು ಬಂದಿದೆ. ಅಣ್ಣನ ಮರಣದ ಹಿನ್ನೆಲೆಯಲ್ಲಿ ಇಂದು ನಡೆಯಬೇಕಾಗಿದ್ದ ತಂಗಿ ಮದುವೆಯನ್ನು ರದ್ದುಗೊಳಿಸಲಾಗಿದೆ. ಮರ್ಣೆಯ ಬೋವಿನಹಾಡಿಯ ಚಾರ್ಲ್ಸ್ ಸಿಕ್ವೇರಾರ ಮಗ ಕೇವಿನ್‌ನ ಮೃತ ದೇಹ ಪತ್ತೆ ಹಚ್ಚಲಾಗಿದ್ದು, ನಾಳೆ ಅಂತ್ಯ ಸಂಸ್ಕಾರ ನಡೆಸುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ. ಅದೇ ರೀತಿ ಕಾಪು ಪಾಂಗಾಳದ ಮುಟ್ಟುವಿನ ನವೀನ್ ಕುಮಾರ್‌ರ ಶವವನ್ನು ನಿನ್ನೆ ರಾತ್ರಿಯೇ ಮನೆಗೆ ತಂದು ಅಂತ್ಯಸಂಸ್ಕಾರ ಮಾಡಲಾಗಿದೆ.

ಕೆಮ್ತೂರಿನ ಜಯಪ್ರಕಾಶ್ ಶೇರಿಗಾರ್ ಮೃತದೇಹವನ್ನು ನಿನ್ನೆ ರಾತ್ರಿ ಹಾಗೂ ಕೊರಂಗ್ರಪಾಡಿಯ ಕಿಶೋರ್ ಕುಮಾರ್‌ರ ಮೃತದೇಹವನ್ನು ಇಂದು ಸಂಜೆ ಮನೆಗೆ ತರಲಾಗಿದ್ದು, ಇಬ್ಬರ ಶವಸಂಸ್ಕಾರ ಇಂದು ಸಂಜೆ ನೆರವೇರಿಸಲಾಯಿತು. ಉಚ್ಚಿಲದ ಶಫ್ದರ್ ಅಲಿಯವರ ಮೃತದೇಹವನ್ನು ಮೂಳೂರು ಮಸೀದಿಯ ಖಬರ್‌ಸ್ತಾನದಲ್ಲಿ ದಫನ ಮಾಡಲಾಯಿತು.
ದೊಡ್ಡಣಗುಡ್ಡೆಯ ಶೈಲೇಶ್ ರಾವ್, ಶಿರ್ವ ಮಟ್ಟಾರಿನ ಪ್ರವೀಣ್ ಶೆಟ್ಟಿಗಾರ್, ಮೂಡುಬೆಳ್ಳೆಯ ಇಗ್ನೇಶಿಯಸ್ ಡಿಸೋಜ, ಬಂಟಕಲ್ಲಿನ ರಾಮಕೃಷ್ಣ ನಾಯಕ್‌ರ ಮೃತದೇಹವನ್ನು ಕೂಡ ಅವರ ಮನೆಗೆ ತಂದು ಶವಸಂಸ್ಕಾರ ನೆರವೇರಿಸಲಾಗಿದೆ ಎಂದು ಮೃತರ ಕುಟುಂಬದ ಮೂಲಗಳು ತಿಳಿಸಿವೆ.

ತಡವಾಗಿ ಬೆಳಕಿಗೆ: ಉಡುಪಿಯ ಬೀಡಿನಗುಡ್ಡೆ ನಿವಾಸಿ ಗಣೇಶ್ ಪ್ರಭು ಎಂಬವರು ವಿಮಾನ ದುರಂತದಲ್ಲಿ ಮೃತರಾಗಿರುವ ವಿಚಾರ ತಡವಾಗಿ ತಿಳಿದು ಬಂದಿದೆ. ಅವರ ಪತ್ನಿ ಅನುಪಮಾ ಪ್ರಭು, ಅಕ್ಷಯ್ ಉಡುಪಿಯ ಅಲಂಕಾರ್ ಹಿಂಬದಿಯ ವಸತಿಗೃಹದಲ್ಲಿ ವಾಸಗಿದ್ದಾರೆ.

ಕಾರ್ಕಳ ತಾಲೂಕು
ಕಾರ್ಕಳ, ಮೇ 23: ನಿನ್ನೆ ನಡೆದ ವಿಮಾನ ದುರಂತದಲ್ಲಿ ಕಾರ್ಕಳ ತಾಲೂಕಿನ ಕಣಜಾರು, ನಿಟ್ಟೆ, ಬೋಳ ಗ್ರಾಮದ ಒಟ್ಟು 4 ಜನ ಮೃತಪಟ್ಟಿದ್ದು, ಇವರೆಲ್ಲರೂ ತಮ್ಮ ಮನೆಯಲ್ಲಿ ನಡೆಯಲಿದ್ದ ಶುಭ ಕಾರ್ಯಕ್ಕೆ ಆಗಮಿಸಿದ್ದರು.
ಹೆತ್ತವರ ವಿವಾಹ ಸುವರ್ಣ ಮಹೋತ್ಸವಕ್ಕೆ ಆಗಮಿಸಿದ್ದ ಡೆನ್ನಿಸ್ ಸಲ್ಡಾನ:
ತಾಲೂಕಿನ ನಿಟ್ಟೆ ಗ್ರಾಮದ ಭ್ರಾಮರಿ ಬಳಿಯ ನಿವಾಸಿ ಡೆನ್ನಿಸ್ ಸಲ್ಡಾನ ತನ್ನ ಮಗ ಹೆಸ್ಟನ್ ಸಲ್ಡಾನನೊಂದಿಗೆ ತನ್ನ ಹೆತ್ತವರಾದ ಅಲೆಕ್ಸ್ ಸಲ್ಡಾನ ಹಾಗೂ ಲಿಲ್ಲಿ ಸಲ್ಡಾನರ ವಿವಾಹ ಸುವರ್ಣ ಮಹೋತ್ಸವದಲ್ಲಿ ಪಾಲ್ಗೊಳ್ಳಲು ವಿಮಾನದಲ್ಲಿ ಬರುತ್ತಿದ್ದರೆನ್ನಲಾಗಿದೆ. ಇವರಿಬ್ಬರೂ ವಿಮಾನ ದುರಂತದಲ್ಲಿ ಮೃತ ಪಟ್ಟಿ ದ್ದಾರೆ. ಪುತ್ರನ ನಾಮಕರಣಕ್ಕೆ ಬಂದಿದ್ದ ವಾಮನ ಪ್ರಭು: ತಾಲೂಕಿನ ಬೋಳ ಗ್ರಾಮದ ನಿವಾಸಿಯಾಗಿರುವ ವಾಮನ ಪ್ರಭು ಹಾಗೂ ಸುಚಿತ್ರಾ ಕಾಮತ್ ದಂಪತಿಗೆ ಮದುವೆಯಾಗಿ 10 ವರ್ಷಗಳು ಕಳೆದರೂ ಸಂತಾನ ಪ್ರಾಪ್ತಿಯಾಗಿರಲಿಲ್ಲ. ಇತ್ತೀಚೆಗಷ್ಟೇ ಇವರಿಗೆ ಗಂಡು ಮಗುವೊಂದು ಹುಟ್ಟಿದ್ದು, 23ರಂದು ಮಗುವಿನ ನಾಮಕರಣ ಕಾರ್ಯಕ್ರಮಕ್ಕಾಗಿ ದುಬೈಯಿಂದ ದುರಂತಕ್ಕೀಡಾದ ವಿಮಾನದಲ್ಲಿ ಪ್ರಯಾಣಿಸಿದ್ದರು. ಆದರೆ ಮನೆಗೆ ಬಂದದ್ದು ಮಾತ್ರ ಶವವಾಗಿ.

ಸಹೋದರ ಪ್ರೇಮ ಮರಣದೊಂದಿಗೆ ಅಂತ್ಯ: ತಾಲೂಕಿನ ಕೌಡೂರು ಗ್ರಾಮದ ಕಣಜಾರು ನಿವಾಸಿ ರಘು ಶೆಟ್ಟಿಯವರ ಕೊನೆಯ ಪುತ್ರ ಮಹೇಶ್ ಶೆಟ್ಟಿ. ದುಬೈಯಲ್ಲಿ ಉದ್ಯೋಗಿಯಾಗಿದ್ದ ಈತ, ಮೇ 23ರಂದು ನಡೆಯಲಿದ್ದ ತನ್ನ ಸಹೋದರನ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಸ್ವದೇಶಕ್ಕೆ ಪ್ರಯಾಣ ಬೆಳೆಸಿದ್ದ. ಆದರೆ ಇದೀಗ ಮಹೇಶ್ ಶೆಟ್ಟಿ ಮರಣದೊಂದಿಗೆ ಮದುವೆ ಮನೆಯಲ್ಲಿ ಸೂತಕದ ಛಾಯೆ ಮೂಡಿದೆ.

..........ಕುಂದಾಪುರ ತಾಲೂಕು...
ವಿಮಾನ ದುರಂತದಲ್ಲಿ ಮೃತರಾದ ಕುಂದಾಪುರ ತಾಲೂಕಿನ ಎಂಟು ಮಂದಿ ಯಲ್ಲಿ ಗಂಗೊಳ್ಳಿಯ ಅಲ್ತಾಫ್ ಮುಹಮ್ಮದ್ ರನ್ನು ಹೊರತು ಪಡಿಸಿ ಉಳಿದೆಲ್ಲರ ಮೃತದೇಹದ ಗುರುತು ಪತ್ತೆಯಾಗಿದ್ದು, ಅವರೆಲ್ಲರ ಅಂತ್ಯಸಂಸ್ಕಾರವನ್ನು ನೆರವೇರಿಸ ಲಾಗಿದೆ.ಕಿರಿಮಂಜೇಶ್ವರದ ಇಬ್ರಾಹೀಂ ಖಾಝಿ, ಅವರ ಪತ್ನಿ ಸಮೀನಾ, ಮಕ್ಕಳಾದ ಇಸ್ಸಾಂ ಹಾಗೂ ರಿದಾರ ಮೃತದೇಹವನ್ನು ಪತ್ತೆ ಹಚ್ಚಿ ನಿನ್ನೆ ಮಧ್ಯರಾತ್ರಿಯೇ ಮನೆಗೆ ತರಲಾಗಿತ್ತು. ಬಳಿಕ ಕಿರಿಮಂಜೇಶ್ವರ ಜುಮಾ ಮಸೀದಿಯ ಖಬರ್‌ಸ್ತಾನದಲ್ಲಿ ಅವರ ಅಂತಿಮ ಸಂಸ್ಕಾರವನ್ನು ನೆರವೇರಿಸ ಲಾಯಿತು. ಈ ಸಂದರ್ಭದಲ್ಲಿ ಮಸೀದಿ ಆವರಣದಲ್ಲಿ ಜನಸ್ತೋಮವೇ ನೆರೆದಿತ್ತು.

ಗಂಗೊಳ್ಳಿಯ ನೇಹಾ: ಮೇಲ್ ಗಂಗೊಳ್ಳಿಯ ಇಮ್ತಿಯಾಝ್ ಹಾಗೂ ಪರ್ವಿನ್ ದಂಪತಿಯ ಪುತ್ರಿ ನೇಹಾ(16)ಳ ಮೃತದೇಹದ ಗುರುತು ಪತ್ತೆಯಾಗಿದೆ.ನೇಹಾಳ ಸಾವಿನ ಸುದ್ದಿ ತಿಳಿದು ಆಕೆಯ ತಂದೆ ತಾಯಿ, ಅಣ್ಣ ವಿದೇಶದಿಂದ ಊರಿಗೆ ಬಂದ ಬಳಿಕ ಇಂದು ಬೆಳಗ್ಗೆ ಗಂಗೊಳ್ಳಿ ಜುಮಾ ಮಸೀದಿಯಲ್ಲಿ ನೇಹಾಳ ಮೃತದೇಹವನ್ನು ದಫನ ಮಾಡಲಾಯಿತು.
ನೇಹಾ ದುಬೈಯಲ್ಲಿರುವ ತನ್ನ ತಂದೆ ತಾಯಿಯೊಂದಿಗೆ ರಜೆ ಕಳೆದು ತಮ್ಮ ಸಂಬಂಧಿಕರಾದ ಇಬ್ರಾಹೀಂ ಕುಟುಂಬ ದೊಂದಿಗೆ ಊರಿಗೆ ಮರಳುತ್ತಿದ್ದಳು. ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಯಾಗಿದ್ದ ಈಕೆ, ಮೊದಲು ದುಬೈಯಲ್ಲೇ ಇದ್ದು, ಕಳೆದ ಎರಡು ವರ್ಷಗಳಿಂದ ಮಂಗಳೂರಿನಲ್ಲಿಯೇ ಉಳಿದಿದ್ದಳು.

ಶಾಂತಿ ಒಲಿವೆರ: ಹೆಮ್ಮಾಡಿ ಮೂವತ್ತುಮುಡಿಯ ನಿವಾಸಿ ಮಾರ್ಟಿನ್ ಒಲಿವೆರರ ಪತ್ನಿ ಶಾಂತಿ ಒಲಿವೆರರ ಅಂತಿಮ ಸಂಸ್ಕಾರವನ್ನು ಗಂಗೊಳ್ಳಿ ಚರ್ಚ್ ನಲ್ಲಿ ಇಂದು ಬೆಳಗ್ಗೆ ನೆರವೇರಿಸಲಾಯಿತು. ಶಾಂತಿಯ ಮೃತದೇಹ ಸಂಪೂರ್ಣ ಸುಟ್ಟು ಹೋಗಿದ್ದು, ಅವರು ಧರಿಸಿದ್ದ ಟೀ ಶರ್ಟ್, ಜಿನ್ಸ್ ಹಾಗೂ ಚಿನ್ನದ ಸರದಿಂದ ಮೃತದೇಹದ ಗುರುತು ಪತ್ತೆ ಹಚ್ಚಲಾ ಯಿತು. ಶವವನ್ನು ಆಕೆಯ ಗಂಡನ ಮನೆಗೆ ತರಲಾಯಿತು. ಈಕೆ ಪಡುಕೋಣೆ ನಾಡದ ಚಾರ್ಲಿ ಫೆರ್ನಾಂಡಿಸ್ ಹಾಗೂ ಮಾರ್ಗರೇಟ್ ಫೆರ್ನಾಂಡಿಸ್‌ರ ಪುತ್ರಿ. ಶಾಂತಿಯ ಪತಿ ದುಬೈಯಲ್ಲಿ ಅಕೌಂಟೆಂಟ್ ಆಗಿ ದುಡಿ ಯುತ್ತಿದ್ದಾರೆ.

ಅರುಣ್ ಕುಮಾರ್ ಶೆಟ್ಟಿ: ಪಡು ಕೋಣೆ ಸಂಸಾಡಿಯ ಸೂಲಿಯಣ್ಣ ಶೆಟ್ಟಿ ಹಾಗೂ ಗಿರಿಜಾ ಶೆಡ್ತಿಯ ಪುತ್ರ ಅರುಣ್ ಕುಮಾರ್ ಶೆಟ್ಟಿಯ ಮೃತದೇಹವನ್ನು ಮನೆಗೆ ತರಲಾಗಿದ್ದು, ಇಂದು ಸಂಜೆ ಅಂತಿಮಸಂಸ್ಕಾ ರವನ್ನು ಪಡುಕೋಣೆಯಲ್ಲಿ ನಡೆಸಲಾಯಿತು.ಅರುಣ್‌ನ ಶವವನ್ನು ಪಾಸ್‌ಫೋರ್ಟ್ ನಿಂದಾಗಿ ಗುರುತು ಹಚ್ಚಲಾಗಿದೆ. ಕಳೆದ ಐದು ವರ್ಷಗಳಿಂದ ದುಬೈಯ ಹೊಟೇಲ್ ನಲ್ಲಿ ವೈಟರ್ ಆಗಿ ದುಡಿಯುತ್ತಿದ್ದ ಅರುಣ್, ಜೂ.2ರಂದು ನಿಗದಿಯಾಗಿದ್ದ ತನ್ನ ಮದುವೆ ಗಾಗಿ ಊರಿಗೆ ಹೊರಟ್ಟಿದ್ದನು. ಇದಕ್ಕಾಗಿ ಆಮಂತ್ರಣ ಪತ್ರಿಕೆಯನ್ನು ಕೂಡ ಮುದ್ರಿಸಲಾಗಿದೆ. ಸೂಲಿಯಣ್ಣನ ಮೂವರು ಗಂಡು ಮಕ್ಕಳಲ್ಲಿ ಈತ ಹಿರಿಯವನಾಗಿದ್ದಾನೆ.

ಪತ್ತೆಯಾಗದ ಅಲ್ತಾಫ್‌ರ ಮೃತದೇಹ:
ಗಂಗೊಳ್ಳಿಯ ಜಾಮೀಯ ಮೊಹಲ್ಲಾ ನಿವಾಸಿ ಅಲ್ತಾಫ್‌ರ ಮೃತದೇಹ ಗುರುತು ಪತ್ತೆಯಾಗದ ಹಿನ್ನೆಲೆಯಲ್ಲಿ ದುಬೈಯಿಂದ ಆಗಮಿಸಿರುವ ಅವರ ಮಗ ವೌಲಾನ ಉಮೈನ್‌ರನ್ನು ಮಂಗಳೂರಿನಲ್ಲಿ ಡಿಎನ್‌ಎ ಪರೀಕ್ಷೆಗೆ ಒಳಪಡಿಸಲಾಗಿದೆ. ಅಲ್ತಾಫ್ ಕಳೆದ 20ವರ್ಷಗಳಿಂದ ದುಬೈಯ ಬಟ್ಟೆ ಅಂಗಡಿಯಲ್ಲಿ ಸೇಲ್ಸ್‌ಮೇನ್ ಆಗಿ ದುಡಿಯುತ್ತಿದ್ದರು. ಅಸೌಖ್ಯದ ಹಿನ್ನೆಲೆಯಲ್ಲಿ ಇವರು ವೈದ್ಯರಿಗೆ ತೋರಿಸು ವುದಕ್ಕಾಗಿ 15ದಿನಗಳ ರಜೆಯಲ್ಲಿ ಊರಿಗೆ ಮರಳುತ್ತಿದ್ದರು. ಇವರು ಪತ್ನಿ, ಮೂವರು ಪುತ್ರರನ್ನು ಆಗಲಿದ್ದಾರೆ.

ಪ್ಯಾಂಟಿನಲ್ಲಿದ್ದ ಪರ್ಸ್‌ನಿಂದ ಶವ ಗುರುತು

ಉಡುಪಿಯ ಕಾಡಬೆಟ್ಟು ಪ್ರಗತಿನಗರದ ಸಂಜಯ್ ಮಹಾಬಲ್(42)ರ ಸುಟ್ಟುಹೋಗಿದ್ದ ಶವವನ್ನು ಪರ್ಸ್‌ನ ಸಹಾಯದಿಂದ ಪತ್ತೆಹಚ್ಚಿ, ಇಂದು ಬೆಳಗ್ಗೆ ಮನೆಗೆ ತರಲಾಗಿದೆ. ಇವರ ಅಂತ್ಯಸಂಸ್ಕಾರವನ್ನು ಸಂಜೆ ವೇಳೆ ನೆರವೇರಿಸಲಾಯಿತು.
ಪ್ರಗತಿನಗರದಲ್ಲಿ ನಿರ್ಮಿಸುತ್ತಿರುವ ಹೊಸ ಮನೆಯನ್ನು ನೋಡಲೆಂದು ಮಹಾಬಲ್ ಊರಿಗೆ ಹೊರಟಿದ್ದರು. ದುಬೈಯ ಕೊಡಕ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಇವರು, ಕಳೆದ 15ವರ್ಷಗಳಿಂದ ಪತ್ನಿ ಹಾಗೂ ಓರ್ವ ಮಗನೊಂದಿಗೆ ದುಬೈಯಲ್ಲಿ ವಾಸವಾಗಿದ್ದರು. ಇನ್ನೋರ್ವ ಮಗ ಉಡುಪಿಯ ವಿದ್ಯೋದಯ ಶಾಲೆಯ ವಿದ್ಯಾರ್ಥಿಯಾಗಿದ್ದಾನೆ.

*ವರದಿ: ನಝೀರ್ ಪೊಲ್ಯ

No comments: