ಮಂಗಳೂರು: ಸೆಝ್‌ಗೆ ಸೇರಿದ ಟಿಪ್ಪರೊಂದು ಅಪಘಾತ ನಡೆಸಿ ಓರ್ವನ ಸಾವಿಗೆ ಕಾರಣವಾದ ಹಿನ್ನೆಲೆಯಲ್ಲಿ ಸೆಝ್ ಟಿಪ್ಪರ್ ಸಂಚಾರ ತಡೆಹಿಡಿದಿದ್ದ ಜೋಕಟ್ಟೆ ಗ್ರಾಮಸ್ಥರ ಹಾಗೂ ಎಸ್‌ಡಿಪಿಐ ಕಾರ್ಯಕರ್ತರ ಸಭೆ ನಿನ್ನೆ ಪಣಂಬೂರು ಠಾಣೆಯಲ್ಲಿ ನಡೆದಿದ್ದು, ವಿವಿಧ ಬೇಡಿಕೆಗಾಗಿ ಒತ್ತಾಯ ಕೇಳಿಬಂದಿತ್ತು.
ಜೋಕಟ್ಟೆ ಜನ ಸೆಝ್ ವಿರುದ್ಧ ದಂಗೆ ಎದ್ದು ಎಚ್ಚರಿಕೆ ನೀಡಿದ್ದರಿಂದ ಬಿಸಿ ಮುಟ್ಟಿಸಿಕೊಂಡಿರುವ ಸೆಝ್, ರಾಜಿ ಸಂಧಾನಕ್ಕೆ ಪೊಲೀಸರ ಮೊರೆ ಹೋಗಿದ್ದು, ಪರಿಣಾಮ ನಿನ್ನೆ ಪಣಂಬೂರು ಠಾಣೆಯಲ್ಲಿ ಗ್ರಾಮಸ್ಥರ ಸಭೆ ನಡೆಯಿತು.
ಕಾದರೇನೇ ಕಬ್ಬಿಣ ಬಗ್ಗೋದು ಎಂಬ ಮಾತಿನಂತೆ ಎಸ್‌ಡಿಪಿಐ ಸಂಘಟನೆಯ ನೇತೃತ್ವದ ಪ್ರತಿಭಟನೆ ಸೆಝ್‌ಗೆ ಬಲು ದೊಡ್ಡ ಹೊಡೆತವನ್ನೇ ನೀಡಿತ್ತು. ಹೀಗಾಗಿ ನಿನ್ನೆ ಎಸ್‌ಡಿಪಿಐಯೂ ಮಾತುಕತೆ ವೇಳೆ ಹಾಜರಿತ್ತು.
ಕಳೆದ 15ರಂದು ಸೆಝ್ ಕಾಮಗಾರಿಗಾಗಿ ಅತ್ತಿಂದಿತ್ತ ಓಡಾಟ ನಡೆಸುತ್ತಿದ್ದ ಟಿಪ್ಪರೊಂದು ಮೂರು ಮಂದಿಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಓರ್ವ ಮೃತಪಟ್ಟು ಇಬ್ಬರು ಗಾಯಗೊಂಡಿದ್ದರು. ಇದೀಗ ಮೃತ ವ್ಯಕ್ತಿ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡಬೇಕು. ಗಾಯಗೊಂಡವರಿಗೆ ತಲಾ ಒಂದು ಲಕ್ಷ ಪರಿಹಾರ ನೀಡಬೇಕು. ಇದರ ಜೊತೆಗೆ ಜೋಕಟ್ಟೆ ರಸ್ತೆಯನ್ನು ಸೆಝ್ ದುರಸ್ತಿಗೊಳಿಸಬೇಕು ಮತ್ತು ಇನ್ನು ಮುಂದೆ ಸೆಝ್ ವಾಹನ ಸಂಚಾರಕ್ಕೆ ಪ್ರತ್ಯೇಕ ರಸ್ತೆ ರೂಪಿಸಬೇಕು ಎಂದು ಪ್ರಬಲ ಒತ್ತಾಯ ಗ್ರಾಮಸ್ಥರಿಂದ ಕೇಳಿಬಂದಿತು.
ಈ ಮಾತನ್ನು ಪರಿಗಣಿಸುವ ಬಗ್ಗೆ ಸೆಝ್ ಜೊತೆ ಮಾತಾಡುವ ಭರವಸೆಯನ್ನು ಪಣಂಬೂರು ಎಸ್‌ಐ ನೀಡಿದರು. ಸಭೆಯಲ್ಲಿ ತಾ.ಪಂ. ಸದಸ್ಯ ಟಿ.ಎ. ಖಾದರ್, ಸ್ಥಳೀಯರಾದ ಹುಸೈನ್, ಜೆ.ಎಂ. ಮೊಹಮ್ಮದ್ ಹಾಗೂ ಎಸ್‌ಡಿಪಿಐ ಕಾರ್ಯಕರ್ತರು ಉಪಸ್ಥಿತರಿದ್ದರು.
source: jayakirana
Jan 20, 2010
Subscribe to:
Post Comments (Atom)
No comments:
Post a Comment