VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Jan 13, 2010

ವಾಣಿಜ್ಯ ಕೇಂದ್ರವಾಗಿ ದೇವಾಲಯ...... ಬಿಜೆಪಿ ಶಾಸಕಿ ಮಲ್ಲಿಕಾ ಪ್ರಸಾದ್ ರವರ ಪ್ರಶ್ನೆಗೆ ಸಂಬಂದಿಸಿದ ಲೇಖನ..

ರಾಜ್ಯದಲ್ಲಿರುವ ಮಸೀದಿ, ಚರ್ಚುಗಳಿಂದ ಸರಕಾರಕ್ಕೆ ಎಷ್ಟು ಆದಾಯ ಬರುತ್ತದೆ ಎಂದು ಬಿಜೆಪಿ ಶಾಸಕಿ ಮಲ್ಲಿಕಾ ಪ್ರಸಾದ್ ಭಂಡಾರಿಯವರು ವಿಧಾನಸಭೆಯಲ್ಲಿ ಪ್ರಶ್ನೆ ಕೇಳಿದ ನಂತರ ಬಹಳಷ್ಟು ಜನರು ಮಾಧ್ಯಮಗಳ ಮೂಲಕ, ಹಿಂದೂ ದೇವಸ್ಥಾನಗಳ ಭರ್ಜರಿ ಆದಾಯದ ಬಗ್ಗೆ “ಹೆಮ್ಮೆಯಿಂದ” ಹೇಳಿಕೊಂಡಿದ್ದರಿಂದ ಈ ಪ್ರತಿಕ್ರಿಯೆ.

ಮೊದಲನೆಯದಾಗಿ ದೇವಾಲಯಗಳ ಆದಾಯ ಲೆಕ್ಕ ಹಾಕಿ ಹೋಲಿಸಿ ನೋಡಲು, ದೇವಾಲಯಗಳೇನು ವಾಣಿಜ್ಯ ಸಂಸ್ಥೆಗಳಲ್ಲ, (ಆದರೂ ಹಿಂದೂ ದೇವಸ್ಥಾನಗಳನ್ನು ಧರ್ಮದ ಗುತ್ತೇದಾರರು ವಾಣಿಜ್ಯೀಕರಣಗೊಳಿಸಿ ಬಿಟ್ಟಿದ್ದಾರೆ). ಪೂಜೆ ಪುನಸ್ಕಾರಗಳಿಂದ ದೇವಾಲಯಗಳು ಆದಾಯ ಗಳಿಸುವ ಅಗತ್ಯವಿಲ್ಲವೆಂದೇ ಹಿಂದಿನ ಕಾಲದಲ್ಲಿ ರಾಜರುಗಳು ದೇವಾಲಯಗಳಿಗೆ ಉಂಬಳಿ ನೀಡುತ್ತಿದ್ದರು. ಹಾಗಾಗಿಯೇ ಹೋಟೆಲ್‌ನಲ್ಲಿ ತಿಂಡಿಗಳ ಕ್ರಯದ ಬೋರ್ಡ್ ಹಾಕಿದಂತೆ ದೇವಸ್ಥಾನಗಳಲ್ಲಿ ಪೂಜೆಗಳ ಕ್ರಯದ ಬೋರ್ಡ್ ಹಿಂದಿನ ಕಾಲದಲ್ಲಿ ಹಾಕುತ್ತಿರಲಿಲ್ಲ. ದೇವರಿಗೆ ಒಂದೇ ತರದ ಸಿಂಪಲ್ ಪೂಜೆ ಇಷ್ಟವೆಂದು ಹಿಂದಿನವರು ನಂಬಿದ್ದರು.

ಎರಡನೆಯದಾಗಿ ದೇವರನ್ನು ದುಬಾರಿ ಪೂಜೆಗಳಿಂದ, ವಜ್ರ ಚಿನ್ನದ ಕಾಣಿಕೆಗಳಿಂದ ಪ್ರಭಾವಿತಗೊಳಿಸಿ ದೇವರ ಕೃಪೆ ಗಳಿಸಬಹುದು, ಎಂದು ಭಾವಿಸುವುದು ದೇವರು ಅಂತರ್ದೃಷ್ಟಿಯಿಲ್ಲದ “ಭ್ರಷ್ಟ, ಆಸೆಬುರುಕ” ಎಂದು ಪರೋಕ್ಷವಾಗಿ ಅವಮಾನಿಸಿದಂತೆ. ಪ್ರಸಾದ ಮಾರಿ ಹಣ ಗಳಿಸುವುದು ದೇವರ ಅನುಗ್ರಹವನ್ನೂ ಮಾರಾಟಕ್ಕಿಟ್ಟು ಅವಮಾನಿಸಿದಂತೆ. “ನಾವೂ ದೇವರಿಗೆ ಒಂದು ಕೊಟ್ಟರೆ ಅವನು ನಮಗೆ ಲಕ್ಷ ಮರಳಿಸುತ್ತಾನೆ” ಎನ್ನುವ ನಾಣ್ಣುಡಿಯ ಅರ್ಥ ದೇವರೂ “ಮನಿ ಚೈನ್‌” ನಡೆಸುತ್ತಾನೆ ಎಂದಂತಲ್ಲವೇ?

ಮೂರನೆಯದಾಗಿ ದೇವರ ಬಗ್ಗೆ ವಿಚಿತ್ರ ತರ್ಕವಿಹೀನ ಕಥೆ ಕಟ್ಟಿ ಜನರು ಮಾನಸಿಕವಾಗಿ ತಾವಾಗಿಯೇ ಸುಲಿಗೆಗೆ ಒಡ್ಡಿಕೊಳ್ಳುವಂತೆ ಮಾಡುವುದು. ಸರ್ವಶಕ್ತ ದೇವರೇ ಇನ್ನೊಬ್ಬ ಕ್ಷಲ್ಲಕ ದೇವನಿಂದ ಭಾರೀ ಸಾಲ ಪಡೆದು ಸಾಲ-ಶೂಲೆಗೆ ಸಿಲುಕಿದ್ದು, ಅವನ ಸಾಲ ತೀರಿಸಲು ನಾವು ಯಃಕಶ್ಚಿತ ಮಾನವರು ಸಹಾಯ ಮಾಡಲು ಅವನಿಗೆ ಭಾರಿ ಹಣ-ಕಾಣಿಕೆ ಅರ್ಪಿಸಬೇಕು, ಎಂಬ ಹುಂಬ ಕಾಲ್ಪನಿಕ ಕಥೆ. ಹುಲು ಮಾನವರಂತೆ ದೇವರಿಗೂ ಕಾಮ-ಮೋಹವಿದೆ, ಮದುವೆಯ ಅಗತ್ಯವಿದೆ, ಎಂಬ ಕಥೆಕಟ್ಟಿ ಕಲ್ಯಾಣ ಮಹೋತ್ಸವಕ್ಕೆ ಪ್ರತೀವರ್ಷ ಕೋಟ್ಯಾಂತರ ಕಲೆಕ್ಷನ್ ಮಾಡುವುದು.

ಕೊನೆಯದಾಗಿ ದೇವಸ್ಥಾನದೊಳಗೇ, ದೇವರೆದುರಲ್ಲೇ ಭಕ್ತರಲ್ಲಿ ಧನಿಕ-ಬಡವ ಎಂಬ ತಾರತಮ್ಯಕ್ಕೆ ಅನುಕೂಲ ಮಾಡಿಕೊಡುವುದು ಸಹಾ ಇದೇ ದೇವಸ್ಥಾನಗಳ ಆದಾಯ ಗಳಿಸುವ ಪ್ರಥೆ. ಘಜನಿ ಮಹಮ್ಮದ್‌ನು ಭಾರತದ ಮೇಲೆ ಹಲವಾರು ಭಾರಿ ದಾಳಿ ಮಾಡಿದ್ದೂ ದೇವಸ್ಥಾನಗಳ ಆದಾಯ ನೋಡಿಯೇ ತಾನೆ?

ಹಾಗಿರುವಾಗ, ನಾವು ಆದಾಯ ಲೆಕ್ಕ ಹಾಕಿ ದೇವಾಲಯಗಳನ್ನು ವಾಣಿಜ್ಯ ಕೇಂದ್ರ, ಮಾರುಕಟ್ಟೆ ಮಂಡಿ, ಮದುವೆ ಮಂಟಪಗಳಾಗಿ ಪರಿವರ್ತಿಸಿರುವುದಕ್ಕೆ ಹೆಮ್ಮೆಪಡುವ ಬದಲು ವಿಷಾದಪಡಬೇಕಾಗಿದೆ. ಹಾಗೆಂದು ಇತರ ಧರ್ಮಗಳ ದೇವಾಲಯಗಳೂ ದೇವರನ್ನು ಮಾರಾಟಕ್ಕೆ ಇಟ್ಟು ಅವಮಾನಿಸಬೇಕೇ?

-ಪ್ರವೀಣ್ ಎಸ್. ಶೆಟ್ಟಿ,
ಮಂಗಳೂರು.
Prajavani

1 comment:

mohiyaddin said...

Mr Praveen you are brillient . Finally u understant what is going on inside the temple . Just write a book and distribute among the public and let the whole world know what we are doing in the name of God. Thanks once again May God bless u .