ಬಾಂಗ್ಲಾದೇಶದಲ್ಲಿನ ತ್ರಿಕೋನ ಸರಣಿಯಲ್ಲಿ ಬಹುತೇಕ ಬೌಲರುಗಳನ್ನು ಮುಖ-ಮೂತಿ ನೋಡದೆ ಜಜ್ಜಿರುವ ವಿರಾಟ್ ಕೋಹ್ಲಿ ಎಂಬ ಪ್ರತಿಭಾವಂತ ಬ್ಯಾಟ್ಸ್‌ಮನ್, ಪ್ರಬಲ ತಂಡಗಳ ವಿರುದ್ಧ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಬೇಕಾದ ಅಗತ್ಯವಿದೆ ಎಂದು ಟೀಮ್ ಇಂಡಿಯಾ ಮಾಜಿ ಕಪ್ತಾನ ಸೌರವ್ ಗಂಗೂಲಿ ತಿಳಿಸಿದ್ದಾರೆ.
ಇದುವರೆಗೆ ಅವರು ಅತ್ಯುತ್ತಮ ಪ್ರದರ್ಶನವನ್ನೇ ನೀಡಿದ್ದಾರೆ. ಅದೇ ಹೊತ್ತಿಗೆ ಅವರು ಈಗಷ್ಟೇ ಬೆಳೆಯುತ್ತಿರುವ ಯುವ ಆಟಗಾರ. ಹಾಗಾಗಿ ಈಗಲೇ ಅವರ ಬಗ್ಗೆ ಯಾವುದೇ ತೀರ್ಮಾನಕ್ಕೆ ಬರುವುದು ಅಸಾಧ್ಯ. ನನ್ನ ಪ್ರಕಾರ ಅವರು ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾಗಳಂತಹ ಪ್ರಬಲ ತಂಡಗಳ ವಿರುದ್ಧ ಆಡುವ ಆಟವೇ ಅವರಿಗೆ ನಿಜವಾದ ಸತ್ವ ಪರೀಕ್ಷೆ ಎಂದು ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿ ಕೊಲ್ಕತ್ತಾ ನೈಟ್ ರೈಡರ್ಸ್ ಪೂರ್ವತಯಾರಿ ಶಿಬಿರದಲ್ಲಿ ಪಾಲ್ಗೊಂಡಿದ್ದ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.
ಕಳೆದ ತಿಂಗಳಷ್ಟೇ ಶ್ರೀಲಂಕಾ ವಿರುದ್ಧದ ತಾಯ್ನೆಲ ಸರಣಿಯಲ್ಲಿ ಕೋಹ್ಲಿ ತನ್ನ ಮೊತ್ತ ಮೊದಲ ಅಂತಾರಾಷ್ಟ್ರೀಯ ಏಕದಿನ ಶತಕವನ್ನು ದಾಖಲಿಸಿದ್ದರು. ಬಾಂಗ್ಲಾದಲ್ಲಿನ ತ್ರಿಕೋನ ಸರಣಿಯಲ್ಲಿ 91, 71 ಮತ್ತು ಅಜೇಯ 102 ರನ್ನು ಗಳಿಸಿರುವ ಅವರೀಗ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಅದೇ ಹೊತ್ತಿಗೆ ಬುಧವಾರದ ಶ್ರೀಲಂಕಾ ವಿರುದ್ಧದ ಫೈನಲ್‌ನಲ್ಲಿ ತ್ರಿಕೋನ ಸರಣಿಯನ್ನು ಗೆಲ್ಲುವ ನೆಚ್ಚಿನ ತಂಡ ಭಾರತ ಎಂದು ಕೆಕೆಆರ್ ಕಪ್ತಾನ ಗಂಗೂಲಿ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಭಾರತ ಫೇವರಿಟ್ ಎನ್ನುವುದರಲ್ಲಿ ಯಾವುದೇ ಸಂಶಯಗಳಿಲ್ಲ. ಅದೇ ಹೊತ್ತಿಗೆ ನಾವು ಟೂರ್ನಮೆಂಟ್ ಉದ್ದಕ್ಕೂ ನೋಡಿರುವಂತೆ ಇಲ್ಲಿ ಟಾಸ್ ಕೂಡ ಮಹತ್ವದ ಪಾತ್ರವಹಿಸುತ್ತದೆ ಎಂದು ಬೆಟ್ಟು ಮಾಡಿ ತೋರಿಸಿದ್ದಾರೆ ಒಂದು ಕಾಲದ ಆಕ್ರಮಣಕಾರಿ ಯಶಸ್ವಿ ಕಪ್ತಾನ.
webdunia
Subscribe to:
Post Comments (Atom)
No comments:
Post a Comment